Submit Vacancies Report | ಬಿಹಾರದ ಯುವಕರಿಗೆ ಗುಡ್​ ನ್ಯೂಸ್​; ಖಾಲಿ ಹುದ್ದೆಗಳ ವರದಿ ಸಲ್ಲಿಸುವಂತೆ ಇಲಾಖೆಗಳಿಗೆ ಸೂಚನೆ ನೀಡಿದ ರಾಜ್ಯ ಸರ್ಕಾರ

 Submit Vacancies Report | ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್
Submit Vacancies Report | ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್
Published on

ಪ್ರಮುಖ ಮುಖ್ಯಾಂಶಗಳು

  • ಡಿಸೆಂಬರ್ 31 ರೊಳಗೆ ಎಲ್ಲಾ ಖಾಲಿ ಹುದ್ದೆಗಳ ವರದಿ ಸಲ್ಲಿಸುವಂತೆ ಇಲಾಖೆಗಳಿಗೆ ನಿರ್ದೇಶನ ನೀಡಿದ ಬಿಹಾರ ಸರ್ಕಾರ
  • ಒಂದು ಕೋಟಿ ಯುವಜನರಿಗೆ ಉದ್ಯೋಗ ಒದಗಿಸುವ ಚುನಾವಣಾ ಪೂರ್ವ ಭರವಸೆ
  • ಇಲಾಖೆಗಳಲ್ಲಿ ದೊಡ್ಡ ಪ್ರಮಾಣದ ಪರಿಶೀಲನೆ ಮತ್ತು ಸಮನ್ವಯ ಪ್ರಕ್ರಿಯೆಗೆ ಚಾಲನೆ ನೀಡಿದೆ
ಪಟನಾ: ಮುಂದಿನ ಐದು ವರ್ಷಗಳಲ್ಲಿ ಬಿಹಾರದಲ್ಲಿ ಒಂದು ಕೋಟಿ ಯುವಜನರಿಗೆ ಉದ್ಯೋಗ ಒದಗಿಸುವ ತನ್ನ ಚುನಾವಣಾ ಪೂರ್ವ ಭರವಸೆಯನ್ನು ಈಡೇರಿಸುವತ್ತ ಮಹತ್ವದ ಹೆಜ್ಜೆ ಇಟ್ಟಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಸರ್ಕಾರ, ಡಿಸೆಂಬರ್ 31 ರೊಳಗೆ ಎಲ್ಲಾ ಖಾಲಿ ಹುದ್ದೆಗಳ ವರದಿ ಸಲ್ಲಿಸುವಂತೆ ಇಲಾಖೆಗಳಿಗೆ ನಿರ್ದೇಶನ ನೀಡಿರುವುದಾಗಿ ವರದಿಯಾಗಿದೆ.
ನೇಮಕಾತಿಯನ್ನು ತ್ವರಿತಗೊಳಿಸಲು ಮತ್ತು ಖಾಲಿ ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡುವ ಆಲೋಚನೆಯಲ್ಲಿರುವ ಸರ್ಕಾರ, ಇಲಾಖೆಗಳಲ್ಲಿ ದೊಡ್ಡ ಪ್ರಮಾಣದ ಪರಿಶೀಲನೆ ಮತ್ತು ಸಮನ್ವಯ ಪ್ರಕ್ರಿಯೆಗೆ ಚಾಲನೆ ನೀಡಿದೆ. ಉದ್ಯೋಗ ಅಭಿಯಾನವನ್ನು ಮುಂದಕ್ಕೆ ತೆಗೆದುಕೊಂಡು ಹೋಗಲು ನಿರ್ಧರಿಸಿರುವ ರಾಜ್ಯ ಸರ್ಕಾರ, ಎಲ್ಲಾ ಆಡಳಿತ ಇಲಾಖೆಗಳು, ವಿಭಾಗೀಯ ಆಯುಕ್ತರು, ಪೊಲೀಸ್ ಪ್ರಧಾನ ಕಚೇರಿಯ ಅಡಿಯಲ್ಲಿರುವ ಕಚೇರಿಗಳು ಮತ್ತು ಪ್ರತಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳಿಗೆ ವಿವರವಾದ ಸೂಚನೆಗಳನ್ನು ನೀಡಿದೆ.
ನೇಮಕಾತಿ ಪ್ರಕ್ರಿಯೆ ತ್ವರಿತವಾಗಿ ಪ್ರಾರಂಭವಾಗುವಂತೆ ಖಾಲಿ ಹುದ್ದೆಗಳನ್ನು ಗುರುತಿಸುವ, ಪರಿಶೀಲಿಸುವ ಮತ್ತು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗುವ ಕಾರ್ಯವನ್ನು ಸುಗಮಗೊಳಿಸುವುದು ಸರ್ಕಾರದ ಗುರಿಯಾಗಿದೆ ಎನ್ನುವುದು ಮೂಲಗಳ ವರದಿ.
ಈ ವರ್ಷದ ಅಂತ್ಯದೊಳಗೆ ಎಲ್ಲಾ ಖಾಲಿ ಹುದ್ದೆಗಳ ವಿವರಗಳನ್ನು ಸಾಮಾನ್ಯ ಆಡಳಿತ ಇಲಾಖೆಗೆ ಸಲ್ಲಿಸುವಂತೆ ಸರ್ಕಾರ ಪ್ರತಿಯೊಂದು ಇಲಾಖೆಗೆ ಆದೇಶ ನೀಡಿದ್ದು, ಆಡಳಿತಾತ್ಮಕ ವಿಳಂಬದಿಂದಾಗಿ ಯಾವುದೇ ಪೋಸ್ಟ್ ವರದಿಯಾಗದೆ ಅಥವಾ ಬಾಕಿ ಉಳಿಯದಂತೆ ಖಚಿತಪಡಿಸಿಕೊಳ್ಳಲು ಈ ಗಡುವು ನೀಡಿದೆ. ಸಾಮಾನ್ಯ ಆಡಳಿತವು ಖಾಲಿ ಹುದ್ದೆಗಳ ಪಟ್ಟಿಗಳನ್ನು ಸ್ವೀಕರಿಸಿದ ಬಳಿಕ, ಅದು ಪ್ರತಿಯೊಂದು ಹುದ್ದೆಯನ್ನು ಪರಿಶೀಲಿಸಿ ತಕ್ಷಣದ ಕ್ರಮಕ್ಕಾಗಿ ಸಂಬಂಧಿತ ನೇಮಕಾತಿ ಆಯೋಗಗಳಿಗೆ ಕಳುಹಿಸುತ್ತದೆ ಎನ್ನಲಾಗಿದೆ.

ಜನವರಿ 2026 ರಲ್ಲಿ ಪೂರ್ಣ ವರ್ಷದ ನೇಮಕಾತಿ ಕ್ಯಾಲೆಂಡರ್

ಪ್ರಮುಖ ಕಾರ್ಯವಿಧಾನ ಸುಧಾರಣೆಯೊಂದರಲ್ಲಿ ಎಲ್ಲಾ ನೇಮಕಾತಿ ಆಯೋಗಗಳು ಮತ್ತು ಆಯ್ಕೆ ಸಂಸ್ಥೆಗಳಿಗೆ 2026 ರ ಜನೆವರಿಯಲ್ಲಿ ಪೂರ್ಣ ವರ್ಷದ ನೇಮಕಾತಿ ಕ್ಯಾಲೆಂಡರ್ ಬಿಡುಗಡೆ ಮಾಡುವಂತೆ ಸೂಚನೆ ನೀಡಲಾಗಿದೆ. ಈ ಕ್ಯಾಲೆಂಡರ್ ಪ್ರತಿ ಜಾಹೀರಾತಿನ ಪ್ರಕಟಣೆಯ ದಿನಾಂಕ, ನೇಮಕಾತಿ ಪರೀಕ್ಷೆಗಳನ್ನು ನಡೆಸಲು ನಿರೀಕ್ಷಿತ ಕಾಲಮಿತಿ ಮತ್ತು ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ವೇಳಾಪಟ್ಟಿಯನ್ನು ಒಳಗೊಂಡಿರುತ್ತದೆ.
ಅಭ್ಯರ್ಥಿಗಳು ದೀರ್ಘಕಾಲದವರೆಗೆ ಕಾಯಬೇಕಾಗಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಲು, ಜಾಹೀರಾತು ದಿನಾಂಕದಿಂದ ಒಂದು ವರ್ಷದೊಳಗೆ ಅಂತಿಮ ನೇಮಕಾತಿ ಫಲಿತಾಂಶಗಳನ್ನು ಪ್ರಕಟಿಸಬೇಕು ಎನ್ನುವುದು ಹೊಸ ವ್ಯವಸ್ಥೆಯ ಉದ್ದೇಶವಾಗಿದೆ.

ಖಾಲಿ ಹುದ್ದೆಗಳ ಭರ್ತಿಗೆ ಆದ್ಯತೆ ನೀಡಲು ಇಲಾಖೆಗಳಿಗೆ ಸೂಚನೆ

ಪ್ರತಿಯೊಂದು ಇಲಾಖೆ ಖಾಲಿ ಹುದ್ದೆಗಳ ಭರ್ತಿಗೆ ಆದ್ಯತೆ ನೀಡಲು ಮತ್ತು ಸಾಮಾನ್ಯ ಆಡಳಿತ ಇಲಾಖೆಯೊಂದಿಗೆ ನಿಕಟ ಸಂವಹನದಲ್ಲಿ ತೊಡಗಿಸಿಕೊಳ್ಳುವಂತೆ ತಿಳಿಸಿದ್ದು, ಖಾಲಿ ಹುದ್ದೆಗಳನ್ನು ಸಾಧ್ಯವಾದಷ್ಟು ಬೇಗ ಭರ್ತಿ ಮಾಡುವುದು ಈಗ ಸರ್ಕಾರದ ಮೊದಲ ಆದ್ಯತೆಯಾಗಿದೆ ಎನ್ನುವುದು ಈ ಎಲ್ಲ ನಡೆಗಳಿಂದ ಸ್ಪಷ್ಟವಾಗಿದೆ.
ಮುಂಬರುವ ದಿನಗಳಲ್ಲಿ ಬಿಹಾರದ ಉದ್ಯೋಗ ಪ್ರಚಾರವು ಬಲವಾದ ವೇಗ ಪಡೆಯುವ ನಿರೀಕ್ಷೆ ಇದ್ದು, 2026 ರ ಜನೆವರಿಯಲ್ಲಿ ನೇಮಕಾತಿ ಕ್ಯಾಲೆಂಡರ್ ಬಿಡುಗಡೆಯಾದ ಬಳಿಕ, ನೇಮಕಾತಿ ಪ್ರಕ್ರಿಯೆಯಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ಮುಂದಿನ ಹಂತಗಳ ಬಗ್ಗೆ ಉದ್ಯೋಗಾಕಾಂಕ್ಷಿ ಯುವಕರಿಗೆ ಸ್ಪಷ್ಟತೆ ಸಿಗುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net