Bihar Elections | ಎನ್‌ಡಿಎ ಐತಿಹಾಸಿಕ ಗೆಲುವು; ಮಹಿಳೆಯರ ಸುರಕ್ಷತೆ, ಉತ್ತಮ ಆಡಳಿತಕ್ಕಾಗಿ ಸಿಕ್ಕ ವಿಜಯ ಎಂದ ಅಮಿತ್ ಷಾ

ಕೇಂದ್ರ ಗೃಹ ಸಚಿವ ಅಮಿತ್ ಷಾ
ಕೇಂದ್ರ ಗೃಹ ಸಚಿವ ಅಮಿತ್ ಷಾ
Published on
ಪಾಟ್ನಾ: ಬಿಹಾರ ಚುನಾವಣೆಯಲ್ಲಿ (Bihar Elections) ಎನ್‌ಡಿಎ ಭರ್ಜರಿ ಗೆಲುವಿನತ್ತ ಸಾಗುತ್ತಿದೆ. ನಾವು ರಾಜ್ಯದ ಜನರಿಗೆ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಶುಕ್ರವಾರ (ನ.14) ಹೇಳಿದ್ದಾರೆ. ಅಲ್ಲದೆ, ಈ ಗೆಲುವು ಮಹಿಳೆಯರ ಸುರಕ್ಷತೆ, ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣಕ್ಕಾಗಿ ದೊರೆತ ಜನಾದೇಶವಾಗಿದೆ ಎಂದಿದ್ದಾರೆ.
ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಷಾ, ಬಿಹಾರದ ಜನರಿಗೆ, ವಿಶೇಷವಾಗಿ ನಮ್ಮ ತಾಯಂದಿರು ಮತ್ತು ಸಹೋದರಿಯರಿಗೆ, ನೀವು ಎನ್‌ಡಿಎಗೆ ನೀಡಿದ ಭರವಸೆ ಮತ್ತು ವಿಶ್ವಾಸದೊಂದಿಗೆ, ಮೋದಿಯವರ ನೇತೃತ್ವದಲ್ಲಿ, ಎನ್‌ಡಿಎ ಸರ್ಕಾರವು ಇನ್ನೂ ಹೆಚ್ಚಿನ ಸಮರ್ಪಣೆಯೊಂದಿಗೆ ಎಲ್ಲ ಸೇವೆಯನ್ನು ಪೂರೈಸುತ್ತದೆ ಎಂದು ನಾನು ಭರವಸೆ ನೀಡುತ್ತೇನೆ ಎಂದು ತಿಳಿಸಿದ್ದಾರೆ.
ಒಳನುಸುಳುಕೋರರನ್ನು ರಕ್ಷಿಸುವವರಿಗೆ ತಕ್ಕ ಉತ್ತರ ನೀಡಿದ್ದಾರೆ: ಷಾ
ಭಾರತದ ಭದ್ರತೆ ಮತ್ತು ಸಂಪನ್ಮೂಲಗಳೊಂದಿಗೆ ಆಟವಾಡುವ ಒಳನುಸುಳುಕೋರರು ಮತ್ತು ಅವರ ಮೇಲೆ ಸಹಾನುಭೂತಿ ಹೊಂದಿರುವವರ ವಿರುದ್ಧ ಮೋದಿ ಸರ್ಕಾರದ ನೀತಿಯನ್ನು ಜನರು ಪ್ರತಿಯೊಂದು ಮತದ ಮೂಲಕ ಉತ್ತರಿಸಿದ್ದಾರೆ. ಅಲ್ಲದೆ, ಮತ ಬ್ಯಾಂಕ್‌ ಸಲುವಾಗಿ ನುಸುಳುಕೋರರನ್ನು ರಕ್ಷಿಸುವವರಿಗೆ ಸಾರ್ವಜನಿಕರು ಸೂಕ್ತ ಉತ್ತರ ನೀಡಿದ್ದಾರೆ. ಮತದಾರರ ಪಟ್ಟಿಯ ಶುದ್ಧೀಕರಣ ಕಡ್ಡಾಯ ಮತ್ತು ಇದರ ವಿರುದ್ಧ ರಾಜಕೀಯ ಮಾಡಲು ಬಿಡುವುದಿಲ್ಲ ಎಂದು ಇಡೀ ದೇಶದ ಮನಸ್ಥಿತಿಯನ್ನು ಬಿಹಾರದ ಜನರು ತಿಳಿಸಿದ್ದಾರೆ. ಇದಕ್ಕಾಗಿಯೇ ರಾಹುಲ್ ಗಾಂಧಿಯ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷ ಇಂದು ಬಿಹಾರದಲ್ಲಿ ಕೊನೆಯ ಸ್ಥಾನವನ್ನು ತಲುಪಿದೆ ಎಂದು ಗೃಹ ಸಚಿವರು ವ್ಯಂಗ್ಯವಾಡಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಭರ್ಜರಿ ಗೆಲುವು

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ 243 ಸ್ಥಾನಗಳಲ್ಲಿ 200 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ ಸುಮಾರು ಶೇ. 95 ರಷ್ಟು ಸ್ಟ್ರೈಕ್ ರೇಟ್‌ನೊಂದಿಗೆ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಅತ್ಯಂತ ಸೂಕ್ಷ್ಮ ರಾಜಕೀಯ ರಾಜ್ಯದಲ್ಲಿ ಆಡಳಿತ ಮೈತ್ರಿಕೂಟದ ಮುಖವಾಗಿದ್ದ ಪ್ರಧಾನಿ ನರೇಂದ್ರ ಮೋದಿಯ ಜನಪ್ರಿಯತೆ ಮತ್ತು ಪ್ರಚಾರದ ಪ್ರಭಾವ ಇನ್ನು ಉಳಿದುಕೊಂಡಿದೆ ಎಂದು ಸಾಬೀತಗಿದೆ.
ವಿಪಕ್ಷಗಳಾದ ಆರ್‌ಜೆಡಿ, ಕಾಂಗ್ರೆಸ್ ಮತ್ತು ಮೂರು ಎಡ ಪಕ್ಷಗಳನ್ನು ಒಳಗೊಂಡ ಮಹಾಘಟಬಂಧನ್ ಹೀನಾಯ ಸೋಲು ಕಾಣುತ್ತಿದೆ. ಅಲ್ಲದೆ, ವಿರೋಧ ಪಕ್ಷಗಳ ಮೈತ್ರಿಕೂಟ 35 ಸ್ಥಾನಗಳ ಗಡಿ ದಾಟಲು ಹೆಣಗಾಡುತ್ತಿದೆ.
101 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿಯ 95 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ದೇಶದಲ್ಲಿ ಅತ್ಯಂತ ಪ್ರಬಲ ರಾಜಕೀಯ ಶಕ್ತಿಯಾಗಿ ತನ್ನ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದೆ. ದೆಹಲಿ, ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಬಿಜೆಪಿ ಸತತ ಎರಡು ಸ್ಥಾನಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಬಿಹಾರದಲ್ಲಿ ಎನ್‌ಡಿಎಯ ಸಂಖ್ಯೆ ಹೆಚ್ಚಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net