Bihar Election | ಪಚ್ಚೀಸ್​ ಸೆ ತೀಸ್​, ಫಿರ್ ಸೆ ನಿತೀಶ್ ; ಮುಂದಿನ ಸಿಎಂ ನಿತೀಶ್ ಎಂಬ ಪೋಸ್ಟ್​ ಡಿಲೀಟ್​ ಮಾಡಿದ ಜೆಡಿಯು!

 Bihar Election | ಚುನಾವಣಾ ಪ್ರಚಾರದಲ್ಲಿ ಸಿಎಂ ನಿತೀಶ್​ ಕುಮಾರ್​, ಡಿಸಿಎಂ ಚೌಧರಿ
Bihar Election | ಚುನಾವಣಾ ಪ್ರಚಾರದಲ್ಲಿ ಸಿಎಂ ನಿತೀಶ್​ ಕುಮಾರ್​, ಡಿಸಿಎಂ ಚೌಧರಿ
Published on
ಪಟನಾ: ಬಿಹಾರ ವಿಧಾನಸಭೆ ಚುನಾವಣೆಯ ಕುರಿತಾಗಿ ಸ್ಪಷ್ಟನೆ ಸಿಕ್ಕಿದ್ದು, ಆಡಳಿತರೂಢ ಎನ್​ಡಿಎ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುವುದು ಪಕ್ಕಾ ಆಗಿದೆ. ಇತ್ತ ಜೆಡಿಯು ಪಕ್ಷ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್​ವೊಂದು ಸದ್ಯ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಏನದು ಪೋಸ್ಟ್​...?
ಬಿಹಾರದ ಮುಂದಿನ ಮುಖ್ಯಮಂತ್ರಿ ನಿತೀಶ್ ಕುಮಾರ್ ಎಂದು ಬರೆದಿರುವ 'ಎಕ್ಸ್' ಪೋಸ್ಟ್​ನ್ನು ಈಗ ಡಿಲೀಟ್ ಮಾಡಲಾಗಿದ್ದು, ಚುನಾವಣೆಯ ಗೆಲುವಿನ ಬಳಿಕ ನಿತೀಶ್​ ಸ್ಥಾನದ ಕುರಿತಾಗಿ ಚರ್ಚೆಗಳು ಆರಂಭವಾಗಿದೆ. ನಿತೀಶ್ ನೇತೃತ್ವದಲ್ಲಿಯೇ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಬಿಜೆಪಿ ಹೇಳಿಕೊಂಡಿದ್ದರೂ, ದಾಖಲೆಯ 10 ನೇ ಅವಧಿಗೆ ಅಧಿಕಾರ ಹಿಡಿಯುವ ಜೆಡಿಯು ನಾಯಕನ ಕನಸ್ಸು ನನಸಾಗುವುದೇ ಎಂಬುದನ್ನು ಕಾದು ನೋಡಬೇಕು.
"ಅಭೂತಪೂರ್ವ ಮತ್ತು ಅಸಮಾನ. ನಿತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿಯಾಗಿದ್ದರು ಮತ್ತು ಮುಂದುವರಿಯುತ್ತಾರೆ ಎಂದು ಜೆಡಿಯು ಶುಕ್ರವಾರ ( ನ 14) ಟ್ವೀಟ್ ಮಾಡಿದೆ. ಇದಾದ ಕೆಲವೇ ನಿಮಿಷಗಳ ಬಳಿಕ, ಪೋಸ್ಟ್ ಡಿಲೀಟ್​ ಮಾಡಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ಊಹಾಪೋಹಗಳಿಗೆ ನಾಂದಿ ಹಾಡಿತು.
ಶುಕ್ರವಾರ ಪಾಟ್ನಾದಾದ್ಯಂತ "ಪಚ್ಚೀಸ್​ ಸೆ ತೀಸ್​, ಫಿರ್ ಸೆ ನಿತೀಶ್" ಎಂಬ ಘೋಷಣೆಯ ಪೋಸ್ಟರ್‌ಗಳು ಮತ್ತು ಜಾಹೀರಾತು ಫಲಕಗಳು ಸಹ ರಾಜ್ಯದ ಅನೇಕ ಕಡೆಗಳಲ್ಲಿ ಕಂಡುಬಂದಿವೆ.

ಯಾರಾಗಲಿದ್ದಾರೆ ಬಿಹಾರದ ಮುಖ್ಯಮಂತ್ರಿ..?

ಮಹಾರಾಷ್ಟ್ರದಲ್ಲಿ ಏಕನಾಥ್​ ಶಿಂಧೆಯನ್ನು ಅಧಿಕಾರದಿಂದ ಕೆಳಗಿಳಿಸಿದ ಬಿಜೆಪಿ, ತನ್ನ ನಾಯರನ್ನು ಆ ಕುರ್ಚಿಗೆ ತಂದು ಕೂಡಿಸಿತು. ಅದೇ ಬೆಳವಣಿಗೆ ಇಲ್ಲಿಯೂ ನಡೆಯಬಹುದಾ ಎನ್ನುವುದು ರಾಜಕೀಯ ವಲಯದಲ್ಲಿ ಹಬ್ಬಿರುವ ವದಂತಿ. 2024 ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆಯ ಏಕನಾಥ್ ಶಿಂಧೆ ಮುಖ್ಯಮಂತ್ರಿಯಾಗಿ ಬಿಜೆಪಿ ಚುನಾವಣೆಗೆ ಹೋದರು, ಚುನಾವಣೆಯಲ್ಲಿ ಕಮಲ ಪಕ್ಷದ ಕಮಾಲ್​ ಬಳಿಕ ಸಿಎಂ ಹುದ್ದೆ ದೇವೇಂದ್ರ ಫಡ್ನವೀಸ್ ಅವರಿಗೆ ಒಲಿಯಿತು.
ಬಿಹಾರದಲ್ಲಿಯೂ ಇದು ಪುನರಾವರ್ತನೆಯಾಗಲಿದೆ ಎನ್ನುವ ಗುಸುಗುಸು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ. ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಮುಖ್ಯಮಂತ್ರಿ ಹುದ್ದೆಗೆ ಪ್ರಬಲ ಪ್ರತಿಸ್ಪರ್ಧಿಯಾಗಿದ್ದು, ಬಿಹಾರದಲ್ಲಿ ತಮ್ಮದೇ ಆದ ಸಂಘಟನಾ ಕೌಶಲ್ಯ ಹೊಂದಿದ್ದಾರೆ. ಸುಮಾರು 20 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿರುವ ನಿತೀಶ್, ತಾವು ಇನ್ನೂ ಆಡಳಿತ ನಡೆಸಲು ಸಮರ್ಥ ಎನ್ನುವುದನ್ನು ಸಮಯ ಸಿಕ್ಕಾಗಲೆಲ್ಲಾ ಸಾಬೀತುಪಡಿಸುತ್ತಲೇ ಬಂದಿದ್ದಾರೆ. ಈ ದೊಡ್ಡ ಗೆಲುವಿನಲ್ಲಿ ನಿತೀಶ್​ ಕೊಡುಗೆ ದೊಡ್ಡದಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net