ಬಿಹಾರ ಚುನಾವಣೆ ಎಫೆಕ್ಟ್​​; ಮಾಜಿ ಕೇಂದ್ರ ಸಚಿವ ಆರ್.ಕೆ.ಸಿಂಗ್​ರನ್ನು ಪಕ್ಷದಿಂದ ಅಮಾನತುಗೊಳಿಸಿದ ಬಿಜೆಪಿ| R K Singh

ಮಾಜಿ ಸಂಸದ ಆರ್​.ಕೆ.ಸಿಂಗ್
ಮಾಜಿ ಸಂಸದ ಆರ್​.ಕೆ.ಸಿಂಗ್
Published on
ಪಾಟ್ನಾ: ಬಿಹಾರ ಚುನಾವಣೆಯಲ್ಲಿ ಎನ್​ಡಿಎ ಭರ್ಜರಿ ಗೆಲುವು ಸಾಧಿಸಿದ್ದು, ಈ ಹಿಂದೆ ಬಿಜೆಪಿ ಮತ್ತು ಜೆಡಿಯು ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದ ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ಸಂಸದ ಆರ್​.ಕೆ.ಸಿಂಗ್(R K Singh)​ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಆರೋಪದ ಬಿಜೆಪಿ ಆರು ವರ್ಷಗಳ ಕಾಲ ಅಮಾನತು ಮಾಡಿದೆ.
ಬಿಜೆಪಿ ಬಿಹಾರ ಘಟಕ ಹೊರಡಿಸಿದ ಆದೇಶದಲ್ಲಿ, ಅಮಾನತುಗೊಳಿಸುವುದರ ಜೊತೆಗೆ ಪಕ್ಷವು, ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಸರ್ಕಾರದ ವಿರುದ್ಧ ಮಾಡಿದ ಆರೋಪ ಮತ್ತು ನೀಡಿದ ಹೇಳಿಕೆಗಳ ಬಗ್ಗೆ ಒಂದು ವಾರದೊಳಗೆ ಉತ್ತರಿಸುವಂತೆ ಹೇಳಿದೆ. ಶೋಕಾಸ್ ನೋಟಿಸ್​ ಉತ್ತರ ನೀಡಿದ ಬಳಿಕ ಅಂತಿಮ ಉಚ್ಚಾಟನೆಯನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದೆ.
ಬಿಹಾರದ ಅರ್ರಾಹ್‌ನ ಮಾಜಿ ಸಂಸದರಾಗಿರುವ ಸಿಂಗ್, 2024ರ ಚುನಾವಣೆಯಲ್ಲಿ ಸೋತಾಗಿನಿಂದ ಬಿಜೆಪಿ ಮತ್ತು ಜೆಡಿಯು ಸರ್ಕಾರವನ್ನು ಟೀಕಿಸುತ್ತಿದ್ದರು. ಎನ್‌ಡಿಎ ನಾಯಕತ್ವವನ್ನು ಪ್ರಶ್ನಿಶಿ, ಬಿಹಾರ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು.
ಆರ್.ಕೆ.ಸಿಂಗ್ ಬಿಜೆಪಿ-ಜೆಡಿಯು ಸರ್ಕಾರದ ವಿರುದ್ಧ 62,000 ಕೋಟಿ ರೂಪಾಯಿಯ ವಿದ್ಯುತ್ ಹಗರಣದ ಬಗ್ಗೆ ಆರೋಪ ಮಾಡಿದ್ದರು. ಜೊತೆಗೆ ಚುನಾವಣೆಯಲ್ಲಿ ಬಿಜೆಪಿ ಕ್ರಿಮಿನಲ್​ಗೆ ಟಿಕೆಟ್ ನೀಡುತ್ತಿದೆ ಎಂದಿದ್ದರು. ಈ ಹಿನ್ನೆಲೆ ಅವರನ್ನು ಬಿಹಾರ ಚುನಾವಣಾ ಪ್ರಚಾರ ಮತ್ತು ಪ್ರಣಾಳಿಕೆ ಸಮಿತಿಗಳಿಂದ ಹೊರಗಿಡಲಾಗಿತ್ತು. ಅಂತಿಮವಾಗಿ ಚುನಾವಣೆ ಬಳಿಕ ಪಕ್ಷವೂ ಅವರನ್ನು ಹೊರ ಹಾಕಿ ಶಿಸ್ತು ಕ್ರಮಕೈಗೊಂಡಿದೆ ಎನ್ನಲಾಗಿದೆ.
ಮನಮೋಹನ್ ಸಿಂಗ್ ಅವರ ಅಧಿಕಾರಾವಧಿಯಲ್ಲಿ ಗೃಹ ಕಾರ್ಯದರ್ಶಿಯಾಗಿದ್ದ ಆರ್​.ಕೆ.ಸಿಂಗ್ ರಾಜತಾಂತ್ರಿಕರಾಗಿ ಕೆಲಸ ಮಾಡಿದ್ದರು. 2013ರಲ್ಲಿ ಬಿಜೆಪಿ ಸೇರಿದ್ದ ಅವರು 2014 ಮತ್ತು 2019ರಲ್ಲಿ ಎರಡು ಬಾರಿ ಅರ್ರಾದಿಂದ ಸಂಸದರಾಗಿದ್ದರು. 2017ರಲ್ಲಿ ಅವರನ್ನು ಮೋದಿ 1.0 ಸಂಪುಟದಲ್ಲಿ ವಿದ್ಯುತ್ ಸಚಿವರನ್ನಾಗಿ ನೇಮಿಸಲಾಗಿತ್ತು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net