Bihar Election | ಉಪಮುಖ್ಯಮಂತ್ರಿ ಸಿನ್ಹಾ ಮೇಲೆ ಕಲ್ಲು, ಚಪ್ಪಲಿ ತೂರಾಟ; ಇದು ಆರ್​ಜೆಡಿ ಗೂಂಡಾಗಳ ಕೈವಾಡ ಎಂದು ಬಿಜೆಪಿ ಆರೋಪ

Bihar Election | ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ
Bihar Election | ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ
Published on
ಪಾಟ್ನಾ: ಬಿಹಾರದ ಲಖಿಸರಾಯ್ ಜಿಲ್ಲೆಯಲ್ಲಿ ಮತದಾನದ ದಿನದಂದು ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ ಬೆಂಗಾವಲು ಪಡೆಯ ಮೇಲೆ ಕೆಲವು ವ್ಯಕ್ತಿಗಳು ಕಲ್ಲು ಮತ್ತು ಚಪ್ಪಲಿಗಳನ್ನು ಎಸೆದಿದ್ದಾರೆ ಎಂದು ವರದಿಯಾಗಿದ್ದು, ಈ ದಾಳಿಯ ಹಿಂದೆ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿದೆ.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಲಖಿಸರಾಯ್ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಸಿನ್ಹಾ, ಖೋರಿಯಾರಿ ಗ್ರಾಮಕ್ಕೆ ಭೇಟಿ ನೀಡಲು ತೆರಳುತ್ತಿದ್ದ ವೇಳೆ ಅವರನ್ನು ತಡೆಯಲು ಯತ್ನಿಸಿದ ಆರ್‌ಜೆಡಿ ಬೆಂಬಲಿಗರು ಈ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಈ ಘಟನೆಯ ಕುರಿತಾದ ದೃಶ್ಯಗಳು ವೈರಲ್​ ಆಗಿದ್ದು, ಅದರಲ್ಲಿ ಸಿನ್ಹಾರ ವಾಹನವನ್ನು ಸುತ್ತುವರೆದಿದ್ದ ಜನರ ಗುಂಪು, ಘೋಷಣೆಗಳನ್ನು ಕೂಗುತ್ತಾ ಬೆಂಗಾವಲು ಪಡೆಯನ್ನು ಮುಂದೆ ಸಾಗದಂತೆ ತಡೆಯುತ್ತಿರುವುದು ಕಂಡುಬಂದಿದೆ. ಘಟನೆಯ ಕುರಿತಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿನ್ಹಾ, ಇದರ ಹಿಂದೆ ಆರ್‌ಜೆಡಿಯ ಗೂಂಡಾಗಳಿದ್ದು, ಎನ್‌ಡಿಎ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಬರುತ್ತದೆ, ಅವರ ಎದೆಯ ಮೇಲೆ ಬುಲ್ಡೋಜರ್‌ಗಳನ್ನು ಓಡಿಸುತ್ತೇವೆ ಎಂದು ತಿಳಿದ ಬಳಿಕ, ಈ ರೀತಿಯ ದಬ್ಬಾಳಿಕೆ ನಡೆಸುತ್ತಿದ್ದಾರೆ, ಅವರು ನನ್ನ ಮತಗಟ್ಟೆ ಏಜೆಂಟ್​ರನ್ನು ಸಹ ವಾಪಸ್​ ಕಳುಹಿಸಿದ್ದಾರೆ, ಅವರಿಗೆ ಮತ ಚಲಾಯಿಸಲು ಬಿಡಲಿಲ್ಲ. ಇದು ಖೋರಿಯಾರಿಯ 404 ಮತ್ತು 405 ಬೂತ್‌ಗಳಲ್ಲಿ ನಡೆದಿದೆ ಎಂದು ಆರೋಪಿಸಿದರು.
ಜಿಲ್ಲಾ ಪೊಲೀಸರನ್ನು ದುರ್ಬಲರು ಎಂದು ಕರೆದ ಡಿಸಿಎಂ ಸಿನ್ಹಾ, ಕೇಂದ್ರ ಪಡೆಗಳನ್ನು ನಿಯೋಜಿಸುವಂತೆ ಮನವಿ ಸಲ್ಲಿಸಿ, ಗ್ರಾಮದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.
ಘಟನೆಯ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪೊಲೀಸ್​ ಮುಖ್ಯಸ್ಥ ಅಜಯ್ ಕುಮಾರ್, ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಜಿಲ್ಲೆಯಲ್ಲಿ ಮತದಾನ ಶಾಂತಿಯುತವಾಗಿ ನಡೆಯುತ್ತಿದೆ, ಮತಗಟ್ಟೆ ವಶಪಡಿಸಿಕೊಳ್ಳುವ ಸುದ್ದಿಗಳ ವದಂತಿ ಇದೆ, ನಾವು ಗ್ರಾಮಕ್ಕೆ ಬಂದ ಬಳಿಕ ಮತದಾನ ಶಾಂತಿಯುತವಾಗಿ ನಡೆಯುತ್ತಿದೆ, ಈ ವಿಷಯವಾಗಿ ಯಾವುದಾದರು ದೂರುಗಳು ಬಂದರೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net