ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ ವಿವಾದಕ್ಕೆ ಬಿಗ್ ಟ್ವಿಸ್ಟ್! ಸೇನೆಯನ್ನು ರಾಜಕೀಯಕ್ಕೆ ಎಳೆಯಬೇಡಿ: ರಾಹುಲ್ ಸಂಸತ್ತಿನ ನಡವಳಿಕೆಗೆ ಮಾಜಿ ಸೇನಾ ಮುಖ್ಯಸ್ಥರ ತಿರುಗೇಟು! MM Naravane

ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ ವಿವಾದಕ್ಕೆ ಬಿಗ್ ಟ್ವಿಸ್ಟ್! ಸೇನೆಯನ್ನು ರಾಜಕೀಯಕ್ಕೆ ಎಳೆಯಬೇಡಿ: ರಾಹುಲ್ ಸಂಸತ್ತಿನ ನಡವಳಿಕೆಗೆ ಮಾಜಿ ಸೇನಾ ಮುಖ್ಯಸ್ಥರ ತಿರುಗೇಟು!
ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ ವಿವಾದಕ್ಕೆ ಬಿಗ್ ಟ್ವಿಸ್ಟ್! ಸೇನೆಯನ್ನು ರಾಜಕೀಯಕ್ಕೆ ಎಳೆಯಬೇಡಿ: ರಾಹುಲ್ ಸಂಸತ್ತಿನ ನಡವಳಿಕೆಗೆ ಮಾಜಿ ಸೇನಾ ಮುಖ್ಯಸ್ಥರ ತಿರುಗೇಟು!
Published on
ನವದೆಹಲಿ: ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ(MM Naravane) (ನಿವೃತ್ತ) ಅವರು ಗುರುವಾರ ಮಾಧ್ಯಮವೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಂಸತ್ತಿನಲ್ಲಿ ರಾಜಕೀಯ ಲಾಭಕ್ಕಾಗಿ ಪ್ರಕಟವಾಗದ ಪುಸ್ತಕವನ್ನು ಬಳಸಿ ಸೇನೆಯನ್ನು ವಿವಾದಕ್ಕೆ ಎಳೆದಿರುವುದು ಅತ್ಯಂತ ಅನ್ಯಾಯದ ನಡೆ ಎಂದು ಬಣ್ಣಿಸಿದ್ದಾರೆ.
ತಮ್ಮ ಹೊಸ ಪುಸ್ತಕ "The Curious and the Classified: Unearthing Military Myths and Mysteries" ಬಿಡುಗಡೆಯ ಸಂದರ್ಭದಲ್ಲಿ ಅವರು ಈ ಮಹತ್ವದ ಹೇಳಿಕೆಗಳನ್ನು ನೀಡಿದ್ದಾರೆ.

ಸಂಸತ್ತಿನಲ್ಲಿ ನಡೆದಿದ್ದೇನು? ರಾಹುಲ್ ಗಾಂಧಿ ನಡೆಗೆ ಆಕ್ಷೇಪ

ಕೆಲವು ತಿಂಗಳ ಹಿಂದೆ ಲೋಕಸಭೆಯಲ್ಲಿ ರಾಹುಲ್ ಗಾಂಧಿ ಅವರು ಜನರಲ್ ನರವಾಣೆ ಅವರ ಪ್ರಕಟವಾಗದ ಆತ್ಮಚರಿತ್ರೆ ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ ಪ್ರತಿಯನ್ನು ಪ್ರದರ್ಶಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ನರವಾಣೆ, ಪ್ರಕಟವಾಗದ ಹಸ್ತಪ್ರತಿಯನ್ನು ರಾಜಕೀಯ ಅಸ್ತ್ರವಾಗಿ ಬಳಸಿ ನನ್ನನ್ನು ಮತ್ತು ಸಶಸ್ತ್ರ ಪಡೆಗಳನ್ನು ರಾಜಕೀಯಕ್ಕೆ ಎಳೆಯುವುದು ಸರಿಯಲ್ಲ. ಇದು ಶಿಷ್ಟಾಚಾರದ ಉಲ್ಲಂಘನೆ ಎಂದು ನರವಾಣೆ ಬೇಸರ ವ್ಯಕ್ತಪಡಿಸಿದ್ದಾರೆ.
ಆತ್ಮಚರಿತ್ರೆಯ ಬಿಡುಗಡೆ ವಿಳಂಬವಾಗುತ್ತಿರುವುದು ಕೇವಲ ರಕ್ಷಣಾ ಸಚಿವಾಲಯದ ಆಡಳಿತಾತ್ಮಕ ಪ್ರಕ್ರಿಯೆಯೇ ಹೊರತು, ಸರ್ಕಾರ ನನ್ನನ್ನು ಕೈಬಿಟ್ಟಿದೆ ಎಂಬ ವಾದದಲ್ಲಿ ಸತ್ಯವಿಲ್ಲ ಎಂದು ನರವಣೆ ಸ್ಪಷ್ಟಪಡಿಸಿದ್ದಾರೆ. ಸರ್ಕಾರವು ಈ ಘಟನೆಯ ನಂತರ ನನ್ನ ಬೆಂಬಲಕ್ಕೆ ದೃಢವಾಗಿ ನಿಂತಿದೆ ಎಂದು ತಿಳಿಸಿದ್ದಾರೆ.

ಗಡಿ ವಿವಾದ: ಚೀನಾಕ್ಕೆ ನರವಾಣೆ ನೇರ ಸವಾಲು

ಭಾರತ ಮತ್ತು ಚೀನಾ ಗಡಿ ವಿವಾದ ಹಾಗೂ ಭಾರತ ತನ್ನ ಭೂಭಾಗವನ್ನು ಕಳೆದುಕೊಂಡಿದೆ ಎಂಬ ರಾಜಕೀಯ ಟೀಕೆಗಳಿಗೆ ಜನರಲ್ ನರವಾಣೆ ನೇರ ಮತ್ತು ಖಡಕ್ ಉತ್ತರ ನೀಡಿದ್ದಾರೆ. ಭಾರತವು ಭೂಮಿಯನ್ನು ಕಳೆದುಕೊಂಡಿದೆಯೇ ಎಂಬ ಬಗ್ಗೆ ಸಂಶಯವಿರುವವರು ನೇರವಾಗಿ ಚೀನಾನ್ನೇ ಕೇಳಲಿ. ಇತ್ತೀಚಿನ ದಿನಗಳಲ್ಲಿ ಚೀನಾ ಭಾರತದ ಒಂದಿಂಚು ಭೂಮಿಯನ್ನಾದರೂ ವಶಪಡಿಸಿಕೊಂಡಿದೆಯೇ ಎಂದು ಅವರನ್ನೇ ಕೇಳಿ ನೋಡಿ, ಆಗ ನಿಮಗೆ ಸತ್ಯ ತಿಳಿಯುತ್ತದೆ ಎಂದು ಸವಾಲು ಹಾಕಿದ್ದಾರೆ. ಗಡಿಯಲ್ಲಿನ ಕಾರ್ಯಾಚರಣೆಯ ನಿರ್ಧಾರಗಳನ್ನು ಸೈನಿಕರು ಅತ್ಯಂತ ಸಮರ್ಥವಾಗಿ ತೆಗೆದುಕೊಳ್ಳುತ್ತಿದ್ದಾರೆ ಎಂದು ನರವಣೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದುಬೈ ಏರ್‌ಶೋ ದುರಂತ ಮತ್ತು ರಷ್ಯಾದ ಗೌರವ

2025ರ ನವೆಂಬರ್‌ನಲ್ಲಿ ದುಬೈ ಏರ್‌ಶೋ ವೇಳೆ ನಡೆದ ತೇಜಸ್ ಎಂಕೆ-1 (Tejas MK-1) ವಿಮಾನ ಅಪಘಾತದಲ್ಲಿ ಹುತಾತ್ಮರಾದ ವಿಂಗ್ ಕಮಾಂಡರ್ ನಮನ್ಶ್ ಸಿಯಾಲ್ ಅವರಿಗೆ ರಷ್ಯಾ ನೀಡಿದ ಗೌರವವನ್ನು ಜನರಲ್ ಸ್ಮರಿಸಿದರು. ರಷ್ಯಾದ 'ನೈಟ್ಸ್ ಏರೋಬ್ಯಾಟಿಕ್' ತಂಡವು ತಮ್ಮ ಪ್ರದರ್ಶನವನ್ನು ಮರಳಿ ಬಾರದ ನಮ್ಮ ಭಾರತೀಯ ಸಹೋದರರಿಗಾಗಿ ಎಂದು ಅರ್ಪಿಸಿದ್ದು, ಸೈನಿಕರ ನಡುವಿನ ಅಂತಾರಾಷ್ಟ್ರೀಯ ಬಾಂಧವ್ಯಕ್ಕೆ ಸಾಕ್ಷಿ ಎಂದು ಮಾಜಿ ಸೇನಾ ಮುಖ್ಯಸ್ಥ ಭಾವನಾತ್ಮಕವಾಗಿ ನುಡಿದಿದ್ದಾರೆ.

ಹೊಸ ಪುಸ್ತಕ: ಸೈನಿಕರ ಅಜ್ಞಾತ ಲೋಕದ ಅನಾವರಣ

ಜನರಲ್ ನರವಾಣೆ ಅವರ ಹೊಸ ಪುಸ್ತಕವು ಯುದ್ಧತಂತ್ರಗಳಿಗಿಂತ ಹೆಚ್ಚಾಗಿ ಭಾರತೀಯ ಸೇನೆಯ ಸಂಸ್ಕೃತಿ, ಅಲ್ಲಿನ ವಿಶಿಷ್ಟ ಸಂಪ್ರದಾಯಗಳು, ಜಾನಪದ ಕಥೆಗಳು ಮತ್ತು ಸೈನಿಕರ ಮಾನವೀಯ ಮುಖದ ಮೇಲೆ ಬೆಳಕು ಚೆಲ್ಲುತ್ತದೆ. ಶಶಿ ತರೂರ್ ಅವರ ಪುಸ್ತಕದಿಂದ ಪ್ರೇರಿತರಾಗಿ ಈ ಕೃತಿಯನ್ನು ರಚಿಸಿರುವುದಾಗಿ ಮಾಜಿ ಸೇನಾ ಮುಖ್ಯಸ್ಥ ತಿಳಿಸಿದ್ದಾರೆ.
ಜನರಲ್ ನರವಾಣೆ ಅವರು ತಮ್ಮ ವೃತ್ತಿಜೀವನದ ಘನತೆ ಮತ್ತು ಸೇನೆಯ ತಟಸ್ಥತೆಯನ್ನು ಕಾಪಾಡಿಕೊಳ್ಳುವಂತೆ ರಾಜಕಾರಣಿಗಳಿಗೆ ಕಿವಿಮಾತು ಹೇಳಿದ್ದಾರೆ. ಗಡಿ ವಿಚಾರದಲ್ಲಿ ಸರ್ಕಾರದ ಮತ್ತು ಸೇನೆಯ ನಿಲುವನ್ನು ಅವರು ಬೆಂಬಲಿಸಿದ್ದು, ದೇಶದ ಭದ್ರತೆಯ ವಿಷಯದಲ್ಲಿ ರಾಜಕೀಯ ಮಾಡಬಾರದು ಎಂಬ ಸಂದೇಶ ರವಾನಿಸಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net