ಉದ್ಧವ್​ಗೆ ಬಿಗ್ ಶಾಕ್: ಮರುಕಳಿಸಿದ 2022ರ ಇತಿಹಾಸ; ಸಂಪೂರ್ಣ ಪತನದ ಹಾದಿಯಲ್ಲಿ ಶಿವಸೇನೆ ಯುಬಿಟಿ..? Shiv Sena UBT Crisis

ಉದ್ಧವ್​ಗೆ ಬಿಗ್ ಶಾಕ್: ಮರುಕಳಿಸಿದ 2022ರ ಇತಿಹಾಸ; ಸಂಪೂರ್ಣ ಪತನದ ಹಾದಿಯಲ್ಲಿ ಶಿವಸೇನೆ ಯುಬಿಟಿ..?
ಉದ್ಧವ್​ಗೆ ಬಿಗ್ ಶಾಕ್: ಮರುಕಳಿಸಿದ 2022ರ ಇತಿಹಾಸ; ಸಂಪೂರ್ಣ ಪತನದ ಹಾದಿಯಲ್ಲಿ ಶಿವಸೇನೆ ಯುಬಿಟಿ..?
Published on
ಮುಂಬೈ: ಮಹಾರಾಷ್ಟ್ರ ರಾಜಕಾರಣದಲ್ಲಿ ಶಿವಸೇನೆ (Shiv Sena UBT Crisis) ಪಕ್ಷದ ಆಂತರಿಕ ಬಿಕ್ಕಟ್ಟು ಮತ್ತೊಮ್ಮೆ ತಾರಕಕ್ಕೇರಿದೆ. ಉದ್ಧವ್ ಠಾಕ್ರೆ ಅವರ ಅತ್ಯಂತ ಆಪ್ತ ಹಾಗೂ ಹಿರಿಯ ನಾಯಕ ಸಚಿನ್ ಅಹೀರ್ ಮಂಗಳವಾರ ಡಿಸಿಎಂ ಏಕನಾಥ್ ಶಿಂದೆ ನೇತೃತ್ವದ ಶಿವಸೇನೆಗೆ ಸೇರ್ಪಡೆಯಾಗುವ ಮೂಲಕ ಠಾಕ್ರೆ ಬಣಕ್ಕೆ ಚೇತರಿಸಿಕೊಳ್ಳಲಾಗದ ದೊಡ್ಡ ಆಘಾತ ನೀಡಿದ್ದಾರೆ. ಸತತವಾಗಿ ನಡೆಯುತ್ತಿರುವ ನಾಯಕರ ವಲಸೆಯು ಉದ್ಧವ್ ಬಣವನ್ನು ಸಂಪೂರ್ಣ ರಾಜಕೀಯ ಪತನದ ಅಂಚಿಗೆ ತಂದು ನಿಲ್ಲಿಸಿದೆ.
ಮಂಗಳವಾರ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ, ವಿಧಾನ ಪರಿಷತ್ ಸದಸ್ಯರಾಗಿರುವ ಸಚಿನ್ ಅಹೀರ್ ಅವರು ಶಿಂದೆ ಬಣಕ್ಕೆ ಸೇರ್ಪಡೆಯಾದ ತಕ್ಷಣವೇ ಮಹಾರಾಷ್ಟ್ರ ವಿಧಾನ ಪರಿಷತ್ತಿನ ಉಪಸಭಾಪತಿ ಹುದ್ದೆಗೆ ಶಿವಸೇನೆ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಈ ವೇಳೆ ಮೂಡಿಬಂದ ರಾಜಕೀಯ ದೃಶ್ಯ ಇಡೀ ಮಹಾರಾಷ್ಟ್ರದ ಗಮನ ಸೆಳೆದಿದೆ. ಅಹೀರ್ ನಾಮಪತ್ರ ಸಲ್ಲಿಸುವಾಗ ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂದೆ, ಸಿಎಂ ದೇವೇಂದ್ರ ಫಡ್ನವೀಸ್ ಮತ್ತು ಸುನೇತ್ರಾ ಪವಾರ್ ಅವರ ಜೊತೆಯಲ್ಲಿ ನಿಂತಿದ್ದರು. ಇದು ಕೇವಲ ಒಬ್ಬ ನಾಯಕನ ಸೇರ್ಪಡೆಯಲ್ಲ, ಬದಲಿಗೆ ರಾಜ್ಯ ರಾಜಕಾರಣದಲ್ಲಿ ಆಡಳಿತಾರೂಢ ಮಹಾಯುತಿ ಮೈತ್ರಿಕೂಟ ಪ್ರದರ್ಶಿಸಿದ ಬೃಹತ್ ಶಕ್ತಿ ಪ್ರದರ್ಶನ ಎಂದೇ ವಿಶ್ಲೇಷಿಸಲಾಗುತ್ತಿದೆ.

'ಆಪರೇಷನ್ ಟೈಗರ್' ಯಶಸ್ಸು: ಉದ್ಧವ್ ಮೈತ್ರಿಕೂಟ ಛಿದ್ರ ಛಿದ್ರ

ಉದ್ಧವ್ ಠಾಕ್ರೆ ಅವರಿಗೆ ಇಂತಹ ಬಂಡಾಯಗಳು ಹೊಸದೇನಲ್ಲವಾದರೂ, ಪ್ರಸ್ತುತ ನಡೆಯುತ್ತಿರುವ ಸರಣಿ ರಾಜೀನಾಮೆಗಳು ಪಕ್ಷದ ಅಸ್ತಿತ್ವಕ್ಕೇ ಕಂಟಕ ತಂದಿವೆ. 2022 ರಲ್ಲಿ ಏಕನಾಥ್ ಶಿಂದೆ ನಡೆಸಿದ ಮೊದಲ ಬಂಡಾಯದ ವೇಳೆಯೇ ಉದ್ಧವ್ ಅವರು ಮೂಲ ಶಿವಸೇನೆ ಪಕ್ಷ, ಅದರ ಅಧಿಕೃತ ಬಿಲ್ಲು ಮತ್ತು ಬಾಣ ಚಿಹ್ನೆ ಹಾಗೂ ಬಹುತೇಕ ಶಾಸಕರ ಬೆಂಬಲವನ್ನು ಕಳೆದುಕೊಂಡಿದ್ದರು.
ಅದರ ನಂತರ ಬಹಳ ಕಷ್ಟಪಟ್ಟು ಠಾಕ್ರೆ ಪರಂಪರೆಯ ಹೆಸರಿನಲ್ಲಿ ಪಕ್ಷವನ್ನು ಮರುಸಂಘಟಿಸಿ, ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಲು ಉದ್ಧವ್ ಪ್ರಯತ್ನಿಸಿದ್ದರು. ಆದರೆ ಕಳೆದ ವಾರವಷ್ಟೇ ಶಿವಸೇನೆ (ಯುಬಿಟಿ) ಬಣದ ಆರು ಪ್ರಮುಖ ಲೋಕಸಭಾ ಸಂಸದರಾದ ಸಂಜಯ್ ಹರಿಭಾವು ಜಾಧವ್, ಸಾಹೇಬ್ ರಾಜಾರಾಮ್ ವಕ್ಚೌರೆ, ಓಂಪ್ರಕಾಶ್ ಭೂಪಾಲ್‌ಸಿಂಗ್ ನಿಂಬಾಳ್ಕರ್, ಸಂಜಯ್ ದಿನಾ ಪಾಟೀಲ್, ಸಂಜಯ್ ಉತ್ತಮರಾವ್ ದೇಶ್‌ಮುಖ್ ಮತ್ತು ನಾಗೇಶ್ ಬಾಪುರಾವ್ ಪಾಟೀಲ್ ಅಷ್ಟೀಕರ್ ಅವರು ಶಿಂದೆ ಬಣಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಿದ್ದರು. ಈ ಆಪರೇಷನ್ ಟೈಗರ್ ಯಶಸ್ಸಿನ ಬೆನ್ನಲ್ಲೇ ಈಗ ಸಚಿನ್ ಅಹೀರ್ ಕೂಡ ಕೈಕೊಟ್ಟಿರುವುದು ಉದ್ಧವ್ ಬಣದ ನಾಯಕರ ನೈತಿಕ ಸ್ಥೈರ್ಯವನ್ನು ಸಂಪೂರ್ಣವಾಗಿ ಕುಗ್ಗಿಸಿದೆ.
ಸದ್ಯಕ್ಕೆ ಉದ್ಧವ್ ಕೇವಲ ಚುನಾವಣೆ ಗೆಲ್ಲುವುದು ಮಾತ್ರವಲ್ಲ, ಬಾಳಾಸಾಹೇಬ್ ಠಾಕ್ರೆ ಅವರ ರಾಜಕೀಯ ಪರಂಪರೆಯನ್ನು ಉಳಿಸಿಕೊಂಡು, ಪಕ್ಷದ ಸಾಂಸ್ಥಿಕ ಚೌಕಟ್ಟನ್ನು ಕಾಪಾಡಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಇತ್ತ ಏಕನಾಥ್ ಶಿಂದೆ ಅವರು ತಾವೇ ಬಾಳಾಸಾಹೇಬ್ ಅವರ ನಿಜವಾದ ರಾಜಕೀಯ ಉತ್ತರಾಧಿಕಾರಿ ಮತ್ತು ತಮ್ಮದೇ 'ಅಸಲಿ ಶಿವಸೇನೆ' ಎಂಬುದನ್ನು ದೃಢವಾಗಿ ಸಾಬೀತುಪಡಿಸುತ್ತಿದ್ದಾರೆ.

ಬಂಗಾಳದಲ್ಲೂ ಮರುಕಳಿಸಿದ ಮಹಾರಾಷ್ಟ್ರ ಮಾದರಿ: ಟಿಎಂಸಿ ಇಬ್ಬಾಗ!

ಮಹಾರಾಷ್ಟ್ರದ ಶಿವಸೇನೆ ಬಿಕ್ಕಟ್ಟಿನ ನೆರಳು ಈಗ ಪಶ್ಚಿಮ ಬಂಗಾಳದ ಟಿಎಂಸಿ ಮೇಲೂ ಬಿದ್ದಿದೆ. ಇತ್ತೀಚೆಗೆ ಮುಕ್ತಾಯಗೊಂಡ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಮಮತಾ ನೇತೃತ್ವದ ಟಿಎಂಸಿ ಪರಾಭವಗೊಂಡ ಬೆನ್ನಲ್ಲೇ, ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಸೀಳಿದ ಮಾದರಿಯಲ್ಲೇ ಈಗ ಟಿಎಂಸಿಯಲ್ಲೂ ಡಜನ್‌ಗಟ್ಟಲೆ ಶಾಸಕರು ಮತ್ತು 20 ಸಂಸದರು ಪಕ್ಷದ ಹೈಕಮಾಂಡ್ ವಿರುದ್ಧ ದಂಗೆ ಎದ್ದಿದ್ದಾರೆ.
ಪಕ್ಷದ ಸಂಘಟನಾತ್ಮಕ ನಿಯಂತ್ರಣ ಮತ್ತು ನಾಯಕತ್ವದ ವಿಚಾರವಾಗಿ ಮಮತಾ ಬಣ ಹಾಗೂ ಬಂಡಾಯಗಾರರ ನಡುವೆ ತೀವ್ರ ಪೈಪೋಟಿ ಆರಂಭವಾಗಿದೆ. ಪಕ್ಷದಿಂದ ಉಚ್ಚಾಟಿತಗೊಂಡಿರುವ ಶಾಸಕ ರಿತಬ್ರತಾ ಬ್ಯಾನರ್ಜಿ ಅವರು ತಮಗೆ ಪ್ರತಿಪಕ್ಷ ನಾಯಕನ ಸ್ಥಾನ ಸಿಗಬೇಕು ಎಂದು ಹಕ್ಕು ಮಂಡಿಸಿದಾಗ, ಟಿಎಂಸಿಯ 80 ಶಾಸಕರ ಪೈಕಿ 58 ಶಾಸಕರು ಅವರಿಗೆ ಬಹಿರಂಗ ಬೆಂಬಲ ಘೋಷಿಸಿದರು. ಈ ಮೂಲಕ ದೀದಿ ಸೂಚಿಸಿದ್ದ ಹಿರಿಯ ಶಾಸಕ ಶೋವಂದೇಬ್ ಚಟರ್ಜಿ ಅವರ ನಾಯಕತ್ವವನ್ನು ರೆಬೆಲ್ ಶಾಸಕರು ತಿರಸ್ಕರಿಸಿದ್ದಾರೆ. ಸದ್ಯ ಈ ಬಂಡಾಯ ಬಣಕ್ಕೆ 65 ಶಾಸಕರ ಬೆಂಬಲವಿದೆ ಎನ್ನಲಾಗುತ್ತಿದೆ.
ಸಂಸತ್ ಮಟ್ಟದಲ್ಲೂ ಮಮತಾಗೆ ಭಾರಿ ಆಘಾತ ಎದುರಾಗಿದ್ದು, ಟಿಎಂಸಿಯ 28 ಲೋಕಸಭಾ ಸಂಸದರ ಪೈಕಿ 20 ಸಂಸದರು ದೀದಿಗೆ ಕೈಕೊಟ್ಟು ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (NCPI) ಜೊತೆ ವಿಲೀನಗೊಂಡಿದ್ದಾರೆ. ಅಲ್ಲದೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ NDA ಮೈತ್ರಿಕೂಟಕ್ಕೆ ಬೆಂಬಲ ಘೋಷಿಸಿದ್ದಾರೆ. ರಾಜ್ಯಸಭೆಯಲ್ಲೂ ಹಿರಿಯ ನಾಯಕ ಸುಖೇಂದು ಶೇಖರ್ ರಾಯ್ ಸೇರಿದಂತೆ ಹಲವರು ರಾಜೀನಾಮೆ ನೀಡಿದ್ದಾರೆ.
ಅಭಿಷೇಕ್ ಬ್ಯಾನರ್ಜಿ ಅವರಿಗೆ ಪಕ್ಷದಲ್ಲಿ ಉನ್ನತ ಸ್ಥಾನ ನೀಡಿದ ನಂತರವೇ ಈ ಆಂತರಿಕ ಅಸಮಾಧಾನ ತಾರಕಕ್ಕೇರಿತು ಎನ್ನಲಾಗಿದೆ. ಮಮತಾ ಪಕ್ಷದ ಮೇಲಿನ ಹಿಡಿತಕ್ಕಾಗಿ ಹೋರಾಡುತ್ತಿದ್ದರೆ, ಬಂಡಾಯ ನಾಯಕರು ತಾವೇ ಅಸಲಿ ಟಿಎಂಸಿ ಎಂದು ವಾದಿಸುತ್ತಿದ್ದಾರೆ.

'ಇಂಡಿಯಾ' ಮೈತ್ರಿಕೂಟಕ್ಕೆ ಎದುರಾದ ದೊಡ್ಡ ಸವಾಲು

ಶಿವಸೇನೆ (ಯುಬಿಟಿ) ಮತ್ತು ತೃಣಮೂಲ ಕಾಂಗ್ರೆಸ್‌ನಲ್ಲಿ ಉಂಟಾಗಿರುವ ಈ ಆಂತರಿಕ ಬಿಕ್ಕಟ್ಟುಗಳು ವಿಪಕ್ಷಗಳ ಇಂಡಿಯಾ ಮೈತ್ರಿಕೂಟಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿವೆ. ಕೇಂದ್ರದ ಬಲಿಷ್ಠ ಬಿಜೆಪಿಯನ್ನು ಎದುರಿಸಲು ಮೈತ್ರಿಕೂಟವು ಒಗ್ಗಟ್ಟ ಪ್ರದರ್ಶಿಸಲು ಯತ್ನಿಸುತ್ತಿರುವಾಗಲೇ, ಪ್ರಾದೇಶಿಕ ಪಕ್ಷಗಳು ಸಾಂಸ್ಥಿಕವಾಗಿ ವಿಭಜನೆಯಾಗುತ್ತಿರುವುದು ವಿಪಕ್ಷಗಳ ಶಕ್ತಿಯನ್ನು ಕುಂದಿಸುತ್ತಿದೆ. ಚುನಾವಣಾ ಸೋಲನ್ನು ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳಬಹುದು, ಆದರೆ ಪಕ್ಷದ ಸಂಘಟನೆಯೇ ಹೀಗೆ ತಳಮಟ್ಟದಿಂದ ಸೀಳಿ ಹೋದರೆ ಅದನ್ನು ಮತ್ತೆ ಕಟ್ಟುವುದು ಅಸಾಧ್ಯದ ಮಾತು. ಉದ್ಧವ್ ಠಾಕ್ರೆ ಮತ್ತು ಮಮತಾ ಬ್ಯಾನರ್ಜಿ ಸದ್ಯ ಇಂತಹದ್ದೇ ಒಂದು ಗಂಭೀರ ರಾಜಕೀಯ ಅಗ್ನಿಪರೀಕ್ಷೆಯನ್ನು ಎದುರಿಸುತ್ತಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net