ಕಾಂಗ್ರೆಸ್‌ಗೆ ಬಿಗ್ ಶಾಕ್; ತಮಿಳುನಾಡಿನಲ್ಲಿ ಪವರ್ ಶೇರಿಂಗ್ ವರ್ಕ್ ಆಗಲ್ಲ ಎಂದ ಸಿಎಂ ಸ್ಟಾಲಿನ್ | CM Stalin

ಕಾಂಗ್ರೆಸ್‌ಗೆ ಬಿಗ್ ಶಾಕ್; ತಮಿಳುನಾಡಿನಲ್ಲಿ ಪವರ್ ಶೇರಿಂಗ್ ವರ್ಕ್ ಆಗಲ್ಲ ಎಂದ ಸಿಎಂ ಸ್ಟಾಲಿನ್
ಕಾಂಗ್ರೆಸ್‌ಗೆ ಬಿಗ್ ಶಾಕ್; ತಮಿಳುನಾಡಿನಲ್ಲಿ ಪವರ್ ಶೇರಿಂಗ್ ವರ್ಕ್ ಆಗಲ್ಲ ಎಂದ ಸಿಎಂ ಸ್ಟಾಲಿನ್
Published on
ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆಗೆ ಕೇವಲ ಕೆಲವೇ ತಿಂಗಳುಗಳು ಬಾಕಿ ಇರುವಂತೆ, ಆಡಳಿತಾರೂಢ ಡಿಎಂಕೆ ಮತ್ತು ಕಾಂಗ್ರೆಸ್ ಮೈತ್ರಿಕೂಟದ ನಡುವೆ ಅಧಿಕಾರ ಹಂಚಿಕೆ ವಿಚಾರ ಕಿಚ್ಚು ಹಚ್ಚಿದೆ. ಮೈತ್ರಿಕೂಟದ ಬಿರುಕಿನ ವದಂತಿಗಳ ನಡುವೆಯೇ ಬುಧವಾರ(ಫೆ.11) ಮೌನ ಮುರಿದಿರುವ ತಮಿಳುನಾಡು ಮುಖ್ಯಮಂತ್ರಿ ಹಾಗೂ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್,(CM Stalin) ಮೈತ್ರಿ ಭದ್ರವಾಗಿದೆ. ಆದರೆ ಸಚಿವ ಸಂಪುಟದಲ್ಲಿ ಮಿತ್ರಪಕ್ಷಗಳಿಗೆ ಸ್ಥಾನವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕ್ಯಾಬಿನೆಟ್‌ನಲ್ಲಿ ಸ್ಥಾನವಿಲ್ಲ: ಸ್ಟಾಲಿನ್ ಖಡಕ್ ನಿರ್ಧಾರ

ಕಳೆದ ಕೆಲವು ತಿಂಗಳುಗಳಿಂದ ಕಾಂಗ್ರೆಸ್ ಪಕ್ಷವು ತಮಿಳುನಾಡು ಸರ್ಕಾರದಲ್ಲಿ ಪಾಲನ್ನು ಕೇಳುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಈ ಬಗ್ಗೆ ಮಾತನಾಡಿದ ಸ್ಟಾಲಿನ್, ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಮಿತ್ರಪಕ್ಷಗಳೊಂದಿಗೆ ಅಧಿಕಾರ ಹಂಚಿಕೊಳ್ಳುವ ಸಂಪ್ರದಾಯವಿಲ್ಲ. ಇದು ಇಲ್ಲಿ ವರ್ಕ್ ಆಗುವುದಿಲ್ಲ ಎಂಬುದು ನಮಗೂ ಗೊತ್ತು, ಕಾಂಗ್ರೆಸ್‌ಗೂ ಗೊತ್ತು ಎನ್ನುವ ಮೂಲಕ ಕಾಂಗ್ರೆಸ್‌ನ ಆಸೆಗೆ ತಣ್ಣೀರೆರಚಿದ್ದಾರೆ. 1967 ರಿಂದ ದ್ರಾವಿಡ ಪಕ್ಷಗಳೇ ಆಳುತ್ತಿರುವ ತಮಿಳುನಾಡಿನಲ್ಲಿ ಈ ಪವರ್ ಶೇರಿಂಗ್ ಪರಿಕಲ್ಪನೆಯೇ ಅನ್ಯ ಎಂದು ಬಣ್ಣಿಸಿದ್ದಾರೆ.

ರಾಹುಲ್ ಗಾಂಧಿ ನನ್ನ ಸಹೋದರ: ವದಂತಿಗಳಿಗೆ ಬ್ರೇಕ್

ಮೈತ್ರಿಕೂಟದಲ್ಲಿ ಗೊಂದಲವಿದೆ ಎಂಬ ವರದಿಗಳನ್ನು ತಳ್ಳಿಹಾಕಿದ ಸಿಎಂ ಸ್ಟಾಲಿನ್, ಕೆಲವರು ಉದ್ದೇಶಪೂರ್ವಕವಾಗಿ ಮೈತ್ರಿಯಲ್ಲಿ ಬಿರುಕು ಮೂಡಿಸಲು ಸಂಚು ರೂಪಿಸುತ್ತಿದ್ದಾರೆ. ರಾಜಕೀಯವನ್ನು ಮೀರಿ ನಾನು ರಾಹುಲ್ ಗಾಂಧಿಯವರನ್ನು ಒಬ್ಬ ಸಹೋದರನಂತೆ ನೋಡುತ್ತೇನೆ. ನಮ್ಮ ನಡುವೆ ಯಾವುದೇ ಗೊಂದಲವಿಲ್ಲ, ಅವರೂ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಹೇಳಿದ್ದಾರೆ. ಮಾಧ್ಯಮಗಳ ಒಂದು ವರ್ಗವು ಮೈತ್ರಿ ಮುರಿಯಲಿದೆ ಎಂದು ಹರಡುತ್ತಿರುವ ಸುದ್ದಿಗಳು ಕೇವಲ ವದಂತಿಗಳಷ್ಟೇ ಎಂದು ಸ್ಪಷ್ಟಪಡಿಸಿದರು.

ವಿರೋಧ ಪಕ್ಷಗಳ ಸಂಚು

ಡಿಎಂಕೆ-ಕಾಂಗ್ರೆಸ್ ಮೈತ್ರಿಯಲ್ಲಿ ಬಿರುಕು ಮೂಡಿಸಲು ಕೆಲವು ಶಕ್ತಿಗಳು ಉದ್ದೇಶಪೂರ್ವಕವಾಗಿ ಸಂಚು ರೂಪಿಸುತ್ತಿವೆ. ಆದರೆ ಅವರ ನಿರೀಕ್ಷೆಗಳು ಸುಳ್ಳಾಗಲಿವೆ ಎಂದು ಸ್ಟಾಲಿನ್​ ವಿರೋಧ ಪಕ್ಷಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ

ಕೇಂದ್ರದ ಎನ್‌ಡಿಎ ಸರ್ಕಾರವು ತಮಿಳುನಾಡಿಗೆ ಅನುದಾನ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದ ಸ್ಟಾಲಿನ್​, ಕೇಂದ್ರ ಸರ್ಕಾರವನ್ನು ಡಬ್ಬಾ ಎಂಜಿನ್ ಎಂದು ವ್ಯಂಗ್ಯವಾಡಿದ್ದಾರೆ.

ಸಂಘರ್ಷಕ್ಕೆ ಕಾರಣವಾದ ಸೀಟು ಹಂಚಿಕೆ

ಕಾಂಗ್ರೆಸ್ ಸಂಸದರಾದ ಮಾಣಿಕ್ಕಂ ಟ್ಯಾಗೋರ್, ಜ್ಯೋತಿಮಣಿ ಮತ್ತು ಮಧುರೈ ಡಿಎಂಕೆ ನಾಯಕ ಜಿ. ದಳಪತಿ ನಡುವಿನ ವಾಕ್ಸಮರವು ಮೈತ್ರಿಕೂಟದ ಒಳಜಗಳವನ್ನು ಬೀದಿಗೆ ತಂದಿತ್ತು. ಕಳೆದ 2021ರ ಚುನಾವಣೆಯಲ್ಲಿ ಕಾಂಗ್ರೆಸ್ 25 ಸ್ಥಾನಗಳಲ್ಲಿ ಸ್ಪರ್ಧಿಸಿ 18 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈ ಬಾರಿ ಹೆಚ್ಚಿನ ಸೀಟುಗಳು ಮತ್ತು ಸರ್ಕಾರದಲ್ಲಿ ಪಾಲು ಬೇಕು ಎಂಬ ಕಾಂಗ್ರೆಸ್ ಪಟ್ಟು ಈಗ ಡಿಎಂಕೆಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.

ಮುಂದಿರುವ ಸವಾಲುಗಳು

ಈ ವರ್ಷದ ಮಧ್ಯಭಾಗದಲ್ಲಿ ತಮಿಳುನಾಡು ಜೊತೆಗೆ ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿವೆ. ಸೀಟು ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ಅಸಮಾಧಾನಗೊಂಡಿರುವುದು ಸ್ಪಷ್ಟವಾಗಿ ಕಾಣಿಸುತ್ತಿದ್ದರೂ, ಸ್ಟಾಲಿನ್ ಅವರು ಮೈತ್ರಿಯನ್ನು ಉಳಿಸಿಕೊಳ್ಳುವ ಭರವಸೆ ವ್ಯಕ್ತಪಡಿಸಿದ್ದಾರೆ. ಆದರೆ, ಅಧಿಕಾರ ಹಂಚಿಕೆಗೆ ನಿರಾಕರಿಸಿರುವುದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸುವ ಸಾಧ್ಯತೆಯಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net