ಪೊಲೀಸ್ ಠಾಣೆಯಲ್ಲಿ ಹುಟ್ಟುಹಬ್ಬ ಆಚರಿಸಬೇಕು ಎಂದ 5ನೇ ತರಗತಿ ಬಾಲಕ: ಆಸೆಗೆ ಸ್ಪಂದಿಸಿ ಮಾದರಿಯಾದ ಖಾಕಿ ಪಡೆ! Delhi Police

 Delhi Police (ಚಿತ್ರ X)
Delhi Police (ಚಿತ್ರ X)
Published on

ನವದೆಹಲಿ: ಚಿಕ್ಕ ಮಕ್ಕಳು ಸಿನಿಮಾಗಳಲ್ಲಿ ಅಥವಾ ಟೆಲಿವಿಷನ್ ಶೋಗಳಲ್ಲಿ ನೋಡುವ ಸ್ಥಳಗಳ ಬಗ್ಗೆ ತೀವ್ರವಾದ ಕುತೂಹಲ ಬೆಳೆಸಿಕೊಳ್ಳುವುದು ಸಹಜ. ಆದರೆ, ನಿಜ ಜೀವನದಲ್ಲಿ ಅಂತಹ ಜಾಗಗಳಿಗೆ ಭೇಟಿ ನೀಡುವ ಅವಕಾಶ ಸಿಗುವುದು ಬಹಳ ವಿರಳ. ಇಂತಹ ಕುತೂಹಲಕಾರಿ ಸ್ಥಳಗಳಲ್ಲಿ ಪೊಲೀಸ್ (Delhi Police) ಠಾಣೆಗಳೂ ಕೂಡಾ ಒಂದು.

ಪೊಲೀಸ್ ಠಾಣೆಯಲ್ಲಿ ಏನೆಲ್ಲಾ ನಡೆಯುತ್ತದೆ? ಎಂಬ ಅರಿಯದ ವಿಸ್ಮಯವೇ ನವದೆಹಲಿಯ ಬಂಕರ್​ ಕಾಲೋನಿಯ 9 ವರ್ಷದ ಬಾಲಕನ ಅಪರೂಪದ ಆಸೆಗೆ ಕಾರಣವಾಗಿತ್ತು. ತನ್ನ ಹುಟ್ಟುಹಬ್ಬವನ್ನು ಕಡ್ಡಾಯವಾಗಿ ಪೊಲೀಸ್ ಠಾಣೆಯಲ್ಲೇ ಆಚರಿಸಿಕೊಳ್ಳಬೇಕು ಎಂಬುದು ಈ ಹುಡುಗನ ಆಸೆಯಾಗಿತ್ತು.
ಆದಾಗ್ಯೂ, ಬಾಲಕನ ಈ ವಿಶಿಷ್ಟ ಕನಸನ್ನು ಗೌರವಿಸಿದ ನವದೆಹಲಿಯ 'ಭಾರತ್ ನಗರ ಪೊಲೀಸ್ ಠಾಣೆ'ಯ ಸಿಬ್ಬಂದಿ, ಆತನ ವಿಶೇಷ ದಿನವನ್ನು ನಿಜಕ್ಕೂ ನೆನಪಿನಲ್ಲಿ ಉಳಿಯುವಂತೆ ಸಂಭ್ರಮದಿಂದ ಆಚರಿಸಿದ್ದು, ಇದೀಗ ಸಾರ್ವಜನಿಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಖಾಕಿ ಪಡೆಯ ನಡುವೆ ಹಸನ್ಮುಖಿ ಬಾಲಕ

ಠಾಣೆಯಲ್ಲಿ ಸಮವಸ್ತ್ರ ಧರಿಸಿದ ಪೊಲೀಸ್​ ಅಧಿಕಾರಿಗಳು ಮತ್ತು ಸಿಬ್ಬಂದಿಯ ನಡುವೆ ನಿಂತು ಕೇಕ್​ ಕತ್ತರಿಸಿದ ಆಯುಷ್, ಸೀಮಿತ ಗಡಿಗಳನ್ನು ಮರೆತು ಖುಷಿ ಮತ್ತು ಅತಿಯಾದ ಉತ್ಸಾಹದಿಂದ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡನು. ದಿನವಿಡೀ ಅಪರಾಧ, ತನಿಖೆ ಮತ್ತು ಕರ್ತವ್ಯದ ಒತ್ತಡದಲ್ಲೇ ಕಾಲ ಕಳೆಯುವ ಪೊಲೀಸರು, ಮಗುವಿನ ಸಣ್ಣ ಆಸೆಯನ್ನು ಈಡೇರಿಸಲು ಒಂದಾಗಿ ನಿಂತಿದ್ದು, ಈ ನಡೆ ಪೊಲೀಸ್​ ಇಲಾಖೆಯ ಅತ್ಯಂತ ಮಾನವೀಯ, ಮಕ್ಕಳ ಸ್ನೇಹಿ ಹಾಗೂ ಕಾಳಜಿಯುಕ್ತ ಮುಖವನ್ನು ಎತ್ತಿ ತೋರಿಸಿದೆ.

ಸಾಮಾನ್ಯವಾಗಿ ಸಾರ್ವಜನಿಕರು ಮತ್ತು ಮಕ್ಕಳು ತಲುಪಲು ಹಿಂಜರಿಯುವ ಪೊಲೀಸ್ ಠಾಣೆಯು ಅಂದು ಆಯುಷ್‌ಗೆ ಅತ್ಯಂತ ಸಂತಸ ಮತ್ತು ಭದ್ರತೆ ನೀಡಿದ ಸ್ಥಳವಾಗಿ ಮಾರ್ಪಟ್ಟಿತ್ತು. ಪೊಲೀಸರು ಮತ್ತು ಮಕ್ಕಳ ನಡುವಿನ ನಂಬಿಕೆ, ಭಯಮುಕ್ತ ವಾತಾವರಣ ಹಾಗೂ ಆತ್ಮೀಯತೆಯ ಬಂಧವನ್ನು ಬಲಪಡಿಸಿದ ಈ ಅಪರೂಪದ ಘಟನೆ, ಬಾಲಕ ಆಯುಷ್‌ಗೆ ತನ್ನ ಜೀವನಪೂರ್ತಿ ನೆನಪಿನಲ್ಲಿ ಇಟ್ಟುಕೊಳ್ಳುವಂತಹ ಸುಂದರ ಸಿಹಿ ನೆನಪನ್ನು ಕಟ್ಟಿಕೊಟ್ಟಿದೆ. ದೆಹಲಿ ಪೊಲೀಸರ ಈ ಭಾವನಾತ್ಮಕ ಹಾಗೂ ಸ್ನೇಹಪರ ಕಾರ್ಯಕ್ಕೆ ಜಾಲತಾಣಗಳಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ (

​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net