ವಿಶ್ವನಾಯಕರಿಗೆ ಸ್ಪೂರ್ತಿ ಭಗವದ್ಗೀತೆ

ಭಗವದ್ಗೀತೆ
ಭಗವದ್ಗೀತೆ
Published on
ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವ ದಾರ್ಶನಿಕ ಗ್ರಂಥ "ಭಗವದ್ಗೀತೆ'. ವೇದವ್ಯಾಸ ಮುನಿಗಳಿಂದ ರಚಿತವಾದ ಮಹಾನ್​ ಗ್ರಂಥ "ಮಹಾಭಾರತ'. ಇದರಲ್ಲಿ ಭೀಷ್ಮಪರ್ವವು ಪಾಂಡವ ಮತ್ತು ಕೌರವರ ಮೊದಲ ಹತ್ತು ದಿನಗಳ ಯುದ್ಧವನ್ನು ವರ್ಣಿಸುತ್ತದೆ. ಅದರ ಒಂದು ಭಾಗವೇ (25ರಿಂದ 42ನೇ ಅಧ್ಯಾಯದವರೆಗೆ& 18 ಅಧ್ಯಾಯಗಳು) "ಭಗವದ್ಗೀತೆ'. ಇದು ಪ್ರಮುಖವಾಗಿ ಶ್ರೀಕೃಷ್ಣ ಮತ್ತು ಅರ್ಜುನರ ಸಂವಾದವಾಗಿದ್ದು, ಯುದ್ಧವು ಏಕೆ ಮತ್ತು ಯಾವಾಗ ಅವಶ್ಯ ಎಂಬುದರ ಜೊತೆಗೆ ಧರ್ಮ (ಕರ್ತವ್ಯ), ಕರ್ಮ (ಕ್ರಿಯೆ) ಹಾಗೂ ಮೋಕ್ಷ ಪಥಗಳನ್ನು ವಿವರಿಸಿದೆ. ಆ ಪಥದಲ್ಲಿ ಸಾಗಬೇಕಾದ ಪರಿಯನ್ನೂ ತಿಳಿಸಿಕೊಟ್ಟಿದೆ. ಭಗವದ್ಗೀತೆಯು ಭಾರತೀಯರಿಗೆ ಮಾತ್ರವಲ್ಲ, ವಿಶ್ವದ ಅನೇಕ ಮಹಾನ್​ ನಾಯಕರಿಗೂ ಆಳವಾದ ಪ್ರೇರಣೆಯಾಗಿದೆ. ಇದರ ಕರ್ಮಯೋಗ, ಧೈರ್ಯ, ನಿಷ್ಕಾಮ ಕರ್ಮ, ಸ್ಥಿತಪ್ರಜ್ಞೆ ಮತ್ತು ಆತ್ಮಸಂಯಮದ ಸಂದೇಶಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ನಾಯಕರನ್ನು ಪ್ರಭಾವಿತಗೊಳಿಸಿವೆ.

ಮಹಾತ್ಮ ಗಾಂಧಿ- ಭಾರತ

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ ಮಹಾತ್ಮ ಗಾಂಧೀಜಿಯವರು ಗೀತೆಯನ್ನು ತಮ್ಮ ಆಧ್ಯಾತ್ಮಿಕ ಮಾರ್ಗದರ್ಶಿ ಎಂದು ಕರೆದಿದ್ದರು. ಅಹಿಂಸೆ, ಸತ್ಯಾಗ್ರಹ ಮತ್ತು ನಿಷ್ಕಾಮ ಕರ್ಮದ ತತ್ತ್ವಗಳನ್ನು ಗೀತೆಯಿಂದಲೇ ರೂಪಿಸಿಕೊಂಡಿದ್ದರು. ವಿಶೇಷವಾಗಿ 2ನೇ ಅಧ್ಯಾಯದ ಸಾಂಖ್ಯ ಯೋಗ ಮತ್ತು 3ನೇ ಅಧ್ಯಾಯದ ಕರ್ಮಯೋಗದಿಂದ.

ನೆಲ್ಸನ್​ ಮಂಡೇಲಾ - ದಕ್ಷಿಣ ಆಫ್ರಿಕಾ

ದಕ್ಷಿಣ ಆಫ್ರಿಕಾದ ಮೊದಲ ಅಧ್ಯಕ್ಷ ಹಾಗೂ ನೊಬೆಲ್​ ಶಾಂತಿ ಪ್ರಶಸ್ತಿ ಪುರಸ್ಕೃತ ನೆಲ್ಸನ್​ ಮಂಡೇಲಾ ಅವರದ್ದು ಹೋರಾಟದ ಬದುಕು. ವರ್ಣಭೇದ ನೀತಿಯನ್ನು ವಿರೋಧಿಸಿ 27 ವರ್ಷಗಳ ಸುದೀರ್ಘ ಜೈಲುವಾಸ ಅನುಭಾವಿಸಿದರೂ, ಹೋರಾಟದ ಕಿಚ್ಚು ಮತ್ತು ಆತ್ಮಸ್ಥೈರ್ಯವನ್ನು ಕಳೆದುಕೊಳ್ಳಲಿಲ್ಲ. ಇಂಥದ್ದೊಂದು ಪ್ರಬಲ ಇಚ್ಛಾಶಕ್ತಿ ಮಂಡೇಲಾ ಅವರು ರೂಪಿಸಿಕೊಂಡಿದ್ದು ಭಗವದ್ಗೀತೆಯ ಅಧ್ಯಯನದಿಂದ. ರಾಬೆನ್​ ದ್ವೀಪದ ಜೈಲಿನಲ್ಲಿ 27 ವರ್ಷಗಳ ಕಾಲ ಸೆರೆಯಲ್ಲಿದ್ದಾಗ ಗೀತೆಯನ್ನು ಓದುತ್ತಿದ್ದರು. "ನೀನು ನಿನ್ನ ಕರ್ಮವನ್ನು ಮಾತ್ರ ಮಾಡು, ಫಲವನ್ನು ನಿರೀಕ್ಷೆಬೇಡ' ಎಂಬ ಗೀತೆಯ ಸಂದೇಶ ಅವರ ದೀರ್ಘ ಹೋರಾಟದಲ್ಲಿ ಮಾನಸಿಕ ಸ್ಥೈರ್ಯ ತುಂಬಿತು.

ಮಾರ್ಟಿನ್​ ಲೂಥರ್​ ಕಿಂಗ್​ ಜೂನಿಯರ್- ಅಮೆರಿಕ​

ವರ್ಣಭೇದ ನೀತಿಯ ವಿರುದ್ಧ ಪ್ರಬಲವಾಗಿ ಹೋರಾಡಿದ ನೊಬೆಲ್​ ಶಾಂತಿ ಪ್ರಶಸ್ತಿ ಪುರಸ್ಕೃತ ಮಾರ್ಟಿನ್​ ಲೂಥರ್​ ಕಿಂಗ್​ ಜೂನಿಯರ್​ ಭಾರತೀಯ ಸಂಸ್ಕೃತಿಯಿಂದ ಗಾಢವಾಗಿ ಪ್ರಭಾವಿತಗೊಂಡಿದ್ದರು. ಗಾಂಧೀಜಿ ಮೂಲಕ ಭಗವದ್ಗೀತೆಯ ಪರಿಚಯವಾಯಿತು. ನಾಗರಿಕ ಹಕ್ಕುಗಳ ಅಹಿಂಸಾತ್ಮಕ ಚಳವಳಿಯಲ್ಲಿ ಗೀತೆಯ ಸಮತ್ವ ಮತ್ತು ಧರ್ಮದ ಸಂದೇಶಗಳು ಅವರಿಗೆ ಪ್ರೇರಣೆಯಾದವು.

ಆಲ್ಬರ್ಟ್​ ಐನ್​ಸ್ಟೆನ್- ಜರ್ಮನಿ​

ಕ್ವಾಂಟಮ್​ ಸಿದ್ದಾಂತ ಪ್ರತಿಪಾದಿಸಿದ ನೊಬೆಲ್​ ಪ್ರಶಸ್ತಿ ಪುರಸ್ಕೃತ ಖ್ಯಾತ ವಿಜ್ಞಾನಿ ಆಲ್ಬರ್ಟ್​ ಐನ್​ಸ್ಟೆನ್​ ಗೀತೆಯನ್ನು ವಿಶ್ವದ ಅತ್ಯಂತ ಮಹತ್ವದ ಧಾರ್ಮಿಕ&ತಾತ್ವಿಕ ಗ್ರಂಥಗಳಲ್ಲಿ ಒಂದೆಂದು ಪರಿಗಣಿಸಿದ್ದರು. "ಭಗವದ್ಗೀತೆಯನ್ನು ಓದಿದ ಮೇಲೆ, ದೇವರು ಈ ಜಗತ್ತನ್ನು ಹೇಗೆ ಸೃಷ್ಟಿಸಿದ್ದಾನೆ ಎಂಬುದು ತಿಳಿಯುತು. ಅದರ ಮುಂದೆ ಎಲ್ಲ ಸಂಗತಿಗಳು ನಿರರ್ಥಕ ಎನಿಸಿದವು' ಎಂದು ಐನ್​ಸ್ಟೆ$ನ್​ ಹೇಳಿಕೊಂಡಿದ್ದಾರೆ.

ಹೆನ್ರಿ ಡೇವಿಡ್​ ಥೋರೋ -ಅಮೆರಿಕ

ಪರಿಸರ ಪ್ರೀತಿ ಮತ್ತು ಸರಳ ಜೀವನವನ್ನು ಪ್ರತಿಪಾದಿಸಿದ ಅಮೆರಿಕದ ಖ್ಯಾತ ಲೇಖಕ, ತತ್ತ್ವಜ್ಞಾನಿ ಹೆನ್ರಿ ಡೇವಿಡ್​ ಥೋರೋ 1840ರ ದಶಕದಲ್ಲೆ ಭಗವದ್ಗೀತೆಯ ಇಂಗ್ಲಿಷ್​ ಅನುವಾದ ಓದಿ ಅದರಿಂದ ಬಹುವಾಗಿ ಪ್ರಭಾವಿತರಾದರು. ಅವರು ತಮ್ಮ "ವಾಲ್ಡೆನ್​' ಪುಸ್ತಕದಲ್ಲಿ ಗೀತೆಯ ಬೋಧನೆಗಳಾದ ಅನಂತತೆ, ಸಾರ್ವತ್ರಿಕತೆ ಮತ್ತು ಸರಳ ಜೀವನದ ಕುರಿತು ಬರೆದಿದ್ದಾರೆ. ಗೀತೆಯ ತತ್ತ್ವ ಶಾಸ್ತ್ರವು ಥೋರೋ ಅವರ ಬರವಣಿಗೆಗಳು ಮತ್ತು ಚಿಂತನೆಯ ಮೇಲೆ ಆಳವಾದ ಪ್ರಭಾವ ಬೀರಿದವು. "ಪ್ರತಿ ಬೆಳಗ್ಗೆ ನನ್ನ ಜ್ಞಾನವನ್ನು ಅಪ್ರತಿಮ ಭಗವದ್ಗೀತೆಯ ದರ್ಶನದ ಮೂಲಕ, ಅಧ್ಯಯನದ ಮೂಲಕ ಉನ್ನತಿಕರಿಸಿಕೊಳ್ಳುತ್ತೇನೆ. ಇದರ ತುಲನೆಯಲ್ಲಿ ನಮ್ಮ ಇಂದಿನ ಸಾಹಿತ್ಯ ಹಾಗೂ ದರ್ಶನದ ಗ್ರಹಿಕೆ ಏನೇನೂ ಅಲ್ಲ' ಎಂದಿದ್ದರು.

ರಾರ್ಬಟ್​ ಓಪನ್​ಹೈಮರ್​-ಅಮೆರಿಕ

ಅಣುಬಾಂಬ್​ ಪಿತಾಮಹ ರಾರ್ಬಟ್​ ಓಪನ್​ಹೈಮರ್​ ಸಂಸತ ಭಾಷೆಯನ್ನು ಆಸಕ್ತಿಯಿಂದ ಕಲಿತಿದ್ದರು. ಅವರು ಗೀತೆಯನ್ನು ಸಂಸತ ಭಾಷೆಯಲ್ಲೆ ಓದಿದ್ದರು. "ಭಗವದ್ಗೀತೆಯಿಂದ ತುಂಬ ಸ್ಫೂರ್ತಿ ಪಡೆದುಕೊಂಡಿರುವೆ' ಎಂದು ಹೇಳಿದ್ದರು. ಅವರ ಜೀವಾನಾಧಾರಿತ ಚಿತ್ರ "ಓಪನ್​ ಹೈಮರ್​'ನಲ್ಲೂ ಗೀತೆಯಿಂದ ಇವರು ಹೇಗೆ ಪ್ರೇರಣೆ ಪಡೆದಿದ್ದರು ಎಂಬುದನ್ನು ವಿವರಿಸಲಾಗಿದೆ.

ಅಲ್ಡಸ್​ ಹಕ್ಸ್ಲಿ

ಬ್ರಿಟನಿನ ಖ್ಯಾತ ಸಾಹಿತಿ ಹಾಗೂ ತತ್ವಜ್ಞಾನಿ ಅಲ್ಡಸ್​ ಹಕ್ಸ್ಲಿ
ಗೀತೆಯ ಸಂದೇಶಗಳಿಂದ ಸ್ಫೂರ್ತಿ ಪಡೆದು 1944ರಲ್ಲಿ, The Song of God ಎಂಬ ಗೀತಾಸಾರವನ್ನು ಬರೆದರು. ಎರಡನೇ ಮಹಾಯುದ್ಧದ ಸಂಕಷ್ಟದ ಸಮಯದಲ್ಲಿ ಬರೆದ ಈ ಕೃತಿಯಲ್ಲಿ, ಯುದ್ಧದಿಂದಾಗಿ ಎದುರಾಗಿದ್ದ ಸ್ವ&ವಿನಾಶವನ್ನು ತಪ್ಪಿಸಿಕೊಳ್ಳಲು ಗೀತೆಯು ಒಂದು ಮಾರ್ಗವನ್ನು ತೋರಿಸುತ್ತದೆ ಎಂದು ಹಕ್ಸ್ಲಿಒತ್ತಿ ಹೇಳಿದರು. ಮಾತ್ರವಲ್ಲ, ಗೀತೆಯಲ್ಲಿ ಬೋಧಿಸಲಾದ ತತ್ವಶಾಸ್ತ್ರವನ್ನು ಗಾಢವಾಗಿ ಅಭ್ಯಸಿಸಿ, ಕೆಲ ಸಂಗತಿಗಳನ್ನು ತಮ್ಮ ಬದುಕಿನಲ್ಲಿ ಅನುಷ್ಠಾನಿಸಿದರು.

ಸುನೀತಾ ವಿಲಿಯಮ್ಸ್​

ಭಾರತೀಯ ಮೂಲದ ಸುನೀತಾ ವಿಲಯಮ್ಸ್​ ನಾಸಾ ವಿಜ್ಞಾನಿ ಮತ್ತು ಗಗನಯಾತ್ರಿ. ಒಂಬತ್ತು ತಿಂಗಳುಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಇದ್ದು, ಇದೇ ವರ್ಷದ ಮಾರ್ಚ್​ನಲ್ಲಿ ಭೂಮಿಗೆ ಸುರತವಾಗಿ ಮರಳಿದರು. ಅವರು ಬಾಹ್ಯಾಕಾಶಕ್ಕೆ ಹೋದಾಗ ಭಗವದ್ಗೀತೆ ಮತ್ತು ಗಣೇಶನ ವಿಗ್ರಹವನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದರು. ಬಾಹ್ಯಾಕಾಶ ಯಾನದ ಸವಾಲುಗಳನ್ನು ಎದುರಿಸಲು ಭಗವದ್ಗೀತೆ, ವೇದಗಳು ಮತ್ತು ಉಪನಿಷತ್ತುಗಳ ಜ್ಞಾನ ಸಹಾಯಕವಾಯಿತು ಎಂದು ಹೇಳಿದರು. ಬಾಹ್ಯಾಕಾಶ ಕೇಂದ್ರದಿಂದ ಅವರು ನೀಡಿದ ಸಂದೇಶದಲ್ಲಿ, "ಆಧ್ಯಾತ್ಮಿಕ ಸಂಗತಿಗಳು ನಿಮ್ಮ ಬದುಕಿನಲ್ಲಿ ಗಾಢ ಪ್ರಭಾವವನ್ನು ಬೀರುತ್ತವೆ. ಆಗ ನೀವು ನೋಡುವ ದೃಷ್ಟಿಕೋನ ಬದಲಾಗುತ್ತದೆ. ಮತ್ತು ಇದನ್ನು ನಾನು ಶ್ರೇಷ್ಠ ಮತ್ತು ಸಾರ್ಥಕ ಎಂದು ಭಾವಿಸುತ್ತೇನೆ' ಎಂದಿದ್ದರು.

ಸ್ಟೀವ್​ ಜಾಬ್ಸ್​

ಪ್ರಖ್ಯಾತ ಕಂಪನಿ ಆ್ಯಪಲ್​ನ ಸಹ ಸಂಸ್ಥಾಪಕ, ಖ್ಯಾತ ಉದ್ಯಮಿ ಸ್ಟೀವ್​ ಜಾಬ್ಸ್​ ಆಧ್ಯಾತ್ಮಿಕ ಅನ್ವೇಷಣೆಯ ನಿಮಿತ್ತ ಭಾರತಕ್ಕೆ ಬಂದು ಆಧ್ಯಾತ್ಮಿಕ ಯಾತ್ರೆ ಮಾಡಿದ್ದರು. ಈ ಸಂದರ್ಭದಲ್ಲಿ ಅವರು ನೀಮ್​ ಕರೋಲಿ ಬಾಬಾ ಆಶ್ರಮಕ್ಕೆ ಭೇಟಿ ನೀಡಿದ್ದರು. ಮತ್ತು ಭಗವದ್ಗೀತೆಯ ಬಗ್ಗೆ, ಅದರ ಮಹತ್ವದ ಬಗ್ಗೆ ತಿಳಿದುಕೊಂಡು, ಅಧ್ಯಯನ ಮಾಡಿದರು. ಗೀತೆಯ ಕರ್ಮಸಿದ್ಧಾಂತದ ಸಂದೇಶಗಳು ಅವರನ್ನು ಬಹುವಾಗಿ ಪ್ರಭಾವಿಸಿದವು.

ಮುಖ್ಯಾಂಶಗಳು

  • ವಿಶ್ವದ ಅತ್ಯಂತ ಹೆಚ್ಚು ಅನುವಾದಿತ ಅಧ್ಯಯನ ಮಾಡಲ್ಪಟ್ಟ ಗ್ರಂಥಗಳಲ್ಲಿ ಭಗವದ್ಗೀತೆ ಒಂದು. ಗೀತೆಯನ್ನು 75ಕ್ಕೂ ಹೆಚ್ಚು ಭಾಷೆಗಳಲ್ಲಿ ಅನುವಾದಿಸಲಾಗಿದೆ (ಸಂಸ್ಕೃತದ ನಂತರ ಅತಿ ಹೆಚ್ಚು ಅನುವಾದಗಳಿರುವ ಗ್ರಂಥ).
  • ಜಾಗತಿಕ ನಾಯಕತ್ವ ಶಿಕ್ಷಣದಲ್ಲಿ ಭಗವದ್ಗೀತೆಯ ಪಾತ್ರ ಪ್ರಮುಖ. ಹಾರ್ವರ್ಡ್​, ಸ್ಟ್ಯಾನ್​ಫಾರ್ಡ್, NSEAD, IIMಗಳು ತಮ್ಮ MBA Executive Leadershipಕೋರ್ಸ್​ಗಳಲ್ಲಿ ಗೀತೆಯನ್ನು ಪಠ್ಯವಾಗಿ ಅನ್ವಯಿಸಿವೆ.
  • ಗೀತೆಯ ಕರ್ಮಯೋಗ, ಸ್ಥಿತಪ್ರಜ್ಞೆ, ನಿರ್ಣಯಶಕ್ತಿ, ಧೈರ್ಯ ಇವೆಲ್ಲವೂ ಆಧುನಿಕ ನಾಯಕತ್ವ ತರಬೇತಿಯಲ್ಲಿ ಮಾದರಿಯಾಗಿವೆ.
  • ಒತ್ತಡ, ಖಿನ್ನತೆ ನಿವಾರಣೆ ಹಾಗೂ Cognitive Behavioral Therapy ತರಬೇತಿಗಳಲ್ಲಿ ಗೀತೆಯ ಶ್ಲೋಕಗಳನ್ನು ಉಲ್ಲೆಖಿಸಲಾಗುತ್ತದೆ.
  • ಅಷ್ಟಾಂಗ ಯೋಗ, ಭಕ್ತಿಯೋಗ, ಜ್ಞಾನಯೋಗ, ಕರ್ಮಯೋಗಗಳ ಸಮಗ್ರ ವಿವರಣೆ ನೀಡಿದ ಮೊದಲ ಗ್ರಂಥ ಭಗವದ್ಗೀತೆ.
  • ಸ್ವಾಮಿ ವಿವೇಕಾನಂದರು 1893ರಲ್ಲಿ ಷಿಕಾಗೋ ಧರ್ಮ ಸಮ್ಮೇಳನದಲ್ಲಿ ಗೀತೆಯನ್ನು ಉಲ್ಲೆಖಿಸಿ ಭಾರತದ ಆಧ್ಯಾತ್ಮಿಕ ಶಕ್ತಿಯನ್ನು ವಿಶ್ವಕ್ಕೆ ಪರಿಚಯಿಸಿದರು. ಅಲ್ಲಿಂದ ಯೋಗದ ಜಾಗತಿಕ ಪ್ರಸಾರ ಆರಂಭವಾಯಿತು.
  • ಹರಿಯಾಣದ ಕುರುಕ್ಷೇತ್ರದಲ್ಲಿ 100 ಅಡಿ ಎತ್ತರದ ಕೃಷ್ಣ&ಅರ್ಜುನ ರಥದ ಪ್ರತಿಮೆ (ವಿಶ್ವದ ಅತಿ ಎತ್ತರದ ಕೃಷ್ಣ ಪ್ರತಿಮೆಗಳಲ್ಲಿ ಒಂದು) ಸ್ಥಾಪಿಸಲಾಗಿದೆ.
  • ಅಮೆರಿಕದ ನ್ಯೂಜೆರ್ಸಿಯಲ್ಲಿ ಭಗವದ್ಗೀತಾ ಪಾರ್ಕ್​ ಹಾಗೂ ಲಂಡನ್​ನಲ್ಲಿ ಗೀತಾ ಮಂದಿರಗಳು ಇವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net