ಗೆಳತಿಯ 26ನೇ ಹುಟ್ಟುಹಬ್ಬಕ್ಕೆ 26 ಕಿ.ಮೀ ಓಡಿದ ಬೆಂಗಳೂರು ಯುವಕ: ವೈರಲ್ ವೀಡಿಯೋ ನೋಡಿ ನೆಟ್ಟಿಗರು ಫಿದಾ!

Girlfriend 26th Birthday
Girlfriend 26th Birthday
Published on
ಬೆಂಗಳೂರು: ಪ್ರೀತಿಯಲ್ಲಿರುವವರು ತಮ್ಮ ಸಂಗಾತಿಯನ್ನು ಖುಷಿಪಡಿಸಲು ಉಡುಗೊರೆಗಳನ್ನು ನೀಡುವುದು ಅಥವಾ ಪಾರ್ಟಿ ಮಾಡುವುದು ಸಾಮಾನ್ಯ. ಆದರೆ, ಬೆಂಗಳೂರಿನ ಯುವಕನೊಬ್ಬ ತನ್ನ ಗೆಳತಿಯ 26ನೇ ಹುಟ್ಟುಹಬ್ಬಕ್ಕೆ ತಾನೇ 26 ಕಿಲೋಮೀಟರ್ ಓಡುವ ಮೂಲಕ ವಿನೂತನವಾಗಿ ಶುಭಾಶಯ ಕೋರಿದ್ದಾನೆ.
ಹೌದು, ಅವಿಕ್ ಭಟ್ಟಾಚಾರ್ಯ ಎಂಬ ವ್ಯಕ್ತಿ ಇತ್ತೀಚೆಗೆ ತನ್ನ ಗೆಳತಿಯ 26 ನೇ ಹುಟ್ಟುಹಬ್ಬವನ್ನು ಆಚರಿಸಲು 26 ಕಿಲೋಮೀಟರ್ ಓಡುವ ಹೃದಯಸ್ಪರ್ಶಿ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ನಂತರ ವೈರಲ್ ಆಗಿದೆ. ಭಟ್ಟಾಚಾರ್ಯ ಅವರು ತಮ್ಮ ಮತ್ತು ತಮ್ಮ ಗೆಳತಿ ಸಿಮ್ರಾನ್ ಅವರ ಜಂಟಿ ಇನ್‌ಸ್ಟಾಗ್ರಾಮ್ ಖಾತೆಯಾದ @simranxavik ಮೂಲಕ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈತನ ಶ್ರಮ ಮತ್ತು ಪ್ರೀತಿಯನ್ನು ಕಂಡು ನೆಟ್ಟಿಗರು "ಇವನಪ್ಪಾ ಅಸಲಿ ಪ್ರೇಮಿ, ಹೊಸ ಸ್ಟ್ಯಾಂಡರ್ಡ್ ಸೆಟ್ ಮಾಡಿದ್ದಾನೆ" ಎಂದು ಹೊಗಳುತ್ತಿದ್ದಾರೆ.
ಇನ್ನು ಈ ಯುವಕ ತನ್ನ ಗೆಳತಿಯ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಲು ನಿರ್ಧರಿಸಿದ್ದನು. ಇದಕ್ಕಾಗಿ ಆತ ನಗರದ ರಸ್ತೆಗಳಲ್ಲಿ ಸತತವಾಗಿ 26 ಕಿಲೋಮೀಟರ್ ಓಡಿದ್ದಾನೆ. ತನ್ನ ಓಟದ ಹಾದಿಯನ್ನು ದಾಖಲಿಸಲು ಆತ ಫಿಟ್‌ನೆಸ್ ಟ್ರ್ಯಾಕಿಂಗ್ ಆ್ಯಪ್ ಬಳಸಿದ್ದು, ಆ ಮ್ಯಾಪ್‌ನಲ್ಲಿ ಓಡಿದ ಹಾದಿಯು ಒಂದು ಸುಂದರವಾದ ಸ್ಮರಣಿಕೆಯಂತೆ ಮೂಡಿಬಂದಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್

ಯುವಕ ಈ ಓಟದ ವೀಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿದೆ. ವೀಡಿಯೋದಲ್ಲಿ ಯುವಕ ದಣಿದಿದ್ದರೂ, ಗೆಳತಿಯ ಮೇಲಿನ ಪ್ರೀತಿಗಾಗಿ ನಗುಮುಖದಿಂದಲೇ ಓಟ ಮುಗಿಸುವುದನ್ನು ಕಾಣಬಹುದು. ಈ ವೀಡಿಯೋಗೆ ಹರಿದುಬಂದಿರುವ ಕಾಮೆಂಟ್‌ಗಳು ಕುತೂಹಲಕಾರಿಯಾಗಿವೆ.
ಕೆಲವರು ಹುಡುಗರು ಪ್ರೀತಿಗಾಗಿ ಏನನ್ನು ಬೇಕಾದರೂ ಮಾಡುತ್ತಾರೆ ಎಂಬುದಕ್ಕೆ ಇದೇ ಸಾಕ್ಷಿ ಎಂದು ಹೇಳುತ್ತಿದ್ದಾರೆ. ಇದು ಹೊಸ ರೀತಿಯ 'ರಿಲೇಷನ್‌ಶಿಪ್ ಗೋಲ್ಸ್' (Relationship Goals) ಮತ್ತು ಜಿಮ್‌ಗೆ ಹೋಗದ ನಮಗೆ ಇದು ನಿಜಕ್ಕೂ ಸ್ಫೂರ್ತಿ," ಎಂದು ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.

ಫಿಟ್‌ನೆಸ್ ಜೊತೆಗೆ ಪ್ರೀತಿ

ಕೇವಲ ಕೇಕ್ ಕತ್ತರಿಸಿ ಸಂಭ್ರಮಿಸುವ ಬದಲು, ತನ್ನ ದೈಹಿಕ ಸಾಮರ್ಥ್ಯವನ್ನು ಪ್ರದರ್ಶಿಸಿ ಗೆಳತಿಗೆ ಶುಭಾಶಯ ತಿಳಿಸಿದ ಈ ಕ್ರಮವು ಅನೇಕರ ಗಮನ ಸೆಳೆದಿದೆ. ಬೆಂಗಳೂರಿನ ಟ್ರಾಫಿಕ್ ನಡುವೆಯೂ ಆತ ಈ ಸಾಧನೆ ಮಾಡಿರುವುದು ವಿಶೇಷ. ಗೆಳತಿಯ ಮೇಲಿನ ಈ ಅಪಾರ ಪ್ರೀತಿಗೆ ನೆಟ್ಟಿಗರು ಮಾತ್ರವಲ್ಲದೆ, ಆತನ ಗೆಳತಿ ಕೂಡಾ ಭಾವುಕವಾಗಿ ಧನ್ಯವಾದ ತಿಳಿಸಿದ್ದಾಳೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net