ಬಂಗಾಳದ ಫಾಲ್ಟಾ ಮರುಚುನಾವಣೆ! ಸ್ವಂತ ಬೂತ್‌ನಲ್ಲೇ ವೋಟ್ ಹಾಕದ ಪುಷ್ಪ ಖ್ಯಾತಿಯ ಟಿಎಂಸಿ ನಾಯಕ ಜಹಾಂಗೀರ್ ಖಾನ್! Jahangir Khan

ಬಂಗಾಳದ ಫಾಲ್ಟಾ ಮರುಚುನಾವಣೆ! ಸ್ವಂತ ಬೂತ್‌ನಲ್ಲೇ ವೋಟ್ ಹಾಕದ ಪುಷ್ಪ ಖ್ಯಾತಿಯ ಟಿಎಂಸಿ ನಾಯಕ ಜಹಾಂಗೀರ್ ಖಾನ್!
ಬಂಗಾಳದ ಫಾಲ್ಟಾ ಮರುಚುನಾವಣೆ! ಸ್ವಂತ ಬೂತ್‌ನಲ್ಲೇ ವೋಟ್ ಹಾಕದ ಪುಷ್ಪ ಖ್ಯಾತಿಯ ಟಿಎಂಸಿ ನಾಯಕ ಜಹಾಂಗೀರ್ ಖಾನ್!
Published on
ಫಾಲ್ಟಾ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಫಾಲ್ಟಾ ವಿಧಾನಸಭಾ ಮರುಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಮುಕ್ತಾಯಗೊಂಡಿದೆ. ಆದರೆ, ಇಡೀ ಕ್ಷೇತ್ರದ ಗಮನ ಸೆಳೆದಿದ್ದ ಮತಗಟ್ಟೆ ಸಂಖ್ಯೆ 190 ರಲ್ಲಿ ಮತದಾನ ಮುಗಿದ ನಂತರ ಚುನಾವಣಾ ಪ್ರಿಸೈಡಿಂಗ್ ಆಫೀಸರ್ ಹೊರಹಾಕಿರುವ ಆಘಾತಕಾರಿ ಮಾಹಿತಿ ಈಗ ಬಂಗಾಳ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಈ ಮತಗಟ್ಟೆಯ ವ್ಯಾಪ್ತಿಯಲ್ಲೇ ಬರುವ ಪ್ರಭಾವಿ ತೃಣಮೂಲ ಕಾಂಗ್ರೆಸ್ ನಾಯಕ ಜಹಾಂಗೀರ್ ಖಾನ್(Jahangir Khan) ಅವರು ತಮ್ಮ ಮತವನ್ನೇ ಚಲಾಯಿಸಿಲ್ಲ ಎಂದು ಚುನಾವಣಾ ಅಧಿಕಾರಿ ಅಧಿಕೃತವಾಗಿ ಘೋಷಿಸಿದ್ದಾರೆ.
ಕ್ಷೇತ್ರದಾದ್ಯಂತ ಶೇ.86 ಕ್ಕೂ ಹೆಚ್ಚು ಭಾರಿ ಮತದಾನ ದಾಖಲಾಗಿದ್ದರೂ, ಸ್ವತಃ ಟಿಎಂಸಿ ಅಭ್ಯರ್ಥಿಯಾಗಿದ್ದ ನಾಯಕನೇ ಮತದಾನದಿಂದ ದೂರ ಉಳಿದಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಹಾಗೂ ಹತ್ತಾರು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ಮತದಾನ ಮುಕ್ತಾಯ: ಅಧಿಕಾರಿಗಳ ಅಧಿಕೃತ ಹೇಳಿಕೆ

ಫಾಲ್ಟಾ ಕ್ಷೇತ್ರದ ಪಾರ್ಟ್ ನಂಬರ್ 190ರ ಮತಗಟ್ಟೆಯಲ್ಲಿ ಸಂಜೆ ನಿಗದಿತ ಸಮಯಕ್ಕೆ ಮತದಾನ ಪ್ರಕ್ರಿಯೆ ಪೂರ್ಣಗೊಂಡಿತು. ನಿಯಮಾವಳಿಗಳ ಪ್ರಕಾರ ಮತದಾರರ ಪಟ್ಟಿಯನ್ನು ಪರಿಶೀಲಿಸಿದ ಪ್ರಿಸೈಡಿಂಗ್ ಆಫೀಸರ್, ಈ ಬೂತ್‌ನಲ್ಲಿ ಮತದಾರರಾಗಿ ನೋಂದಾಯಿಸಿಕೊಂಡಿದ್ದ ಟಿಎಂಸಿ ನಾಯಕ ಜಹಾಂಗೀರ್ ಖಾನ್ (ಮತದಾರರ ಪಟ್ಟಿಯ ಸರಣಿ ಸಂಖ್ಯೆ 264) ಮತಗಟ್ಟೆಗೆ ಆಗಮಿಸಿಯೇ ಇಲ್ಲ ಮತ್ತು ತಮ್ಮ ವೋಟ್ ಚಲಾಯಿಸಿಲ್ಲ ಎಂಬುದನ್ನು ಖಚಿತಪಡಿಸಿದ್ದಾರೆ. ಈ ಸುದ್ದಿ ಹರಡುತ್ತಿದ್ದಂತೆಯೇ ಇತ್ತೀಚೆಗಷ್ಟೇ ರಾಜ್ಯದಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿ ನಾಯಕರು ಟಿಎಂಸಿ ವಿರುದ್ಧ ಲೇವಡಿ ಮಾಡಲು ಆರಂಭಿಸಿದ್ದಾರೆ.

ಚುನಾವಣಾ ರೇಸ್‌ನಿಂದ ಕೊನೆ ಕ್ಷಣದಲ್ಲಿ ಹಿಂದೆ ಸರಿದಿದ್ದ 'ಪುಷ್ಪ'!

ಏಪ್ರಿಲ್ 29 ರಂದು ನಡೆದಿದ್ದ ಮೊದಲ ಹಂತದ ಮತದಾನದ ವೇಳೆ ಫಾಲ್ಟಾ ಕ್ಷೇತ್ರದಲ್ಲಿ ಇವಿಎಂ ಯಂತ್ರಗಳಿಗೆ ಕಪ್ಪು ಟೇಪ್ ಅಂಟಿಸಿದ್ದು ಹಾಗೂ ವ್ಯಾಪಕ ಅಕ್ರಮ ನಡೆದ ಆರೋಪದ ಹಿನ್ನೆಲೆಯಲ್ಲಿ ಇಡೀ ಕ್ಷೇತ್ರದ ಚುನಾವಣೆಯನ್ನು ಚುನಾವಣಾ ಆಯೋಗ ರದ್ದುಗೊಳಿಸಿ ಮೇ 21 ಕ್ಕೆ ಮರುಚುನಾವಣೆ ಘೋಷಿಸಿತ್ತು. ಆದರೆ, ಮತದಾನಕ್ಕೆ ಕೇವಲ ಎರಡು ದಿನಗಳ ಮುನ್ನ (ಮೇ.19) ಪ್ರಚಾರದ ಕೊನೆಯ ದಿನದಂದು ಟಿಎಂಸಿ ಅಭ್ಯರ್ಥಿ ಜಹಾಂಗೀರ್ ಖಾನ್ ಅಚ್ಚರಿಯ ರೀತಿಯಲ್ಲಿ ಚುನಾವಣಾ ರೇಸ್‌ನಿಂದಲೇ ಹಿಂದೆ ಸರಿಯುತ್ತಿರುವುದಾಗಿ ಘೋಷಿಸಿದ್ದರು.
ನಾನು ಫಾಲ್ಟಾ ಕ್ಷೇತ್ರದ ಶಾಂತಿ ಮತ್ತು ಅಭಿವೃದ್ಧಿಗಾಗಿ ಈ ನಿರ್ಧಾರ ಕೈಗೊಂಡಿದ್ದೇನೆ. ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಫಾಲ್ಟಾ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಿಸಿರುವುದರಿಂದ ನಾನು ಸ್ಪರ್ಧೆಯಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಜಹಾಂಗೀರ್ ಖಾನ್ ಹೇಳಿದ್ದಾರೆ.
ಈ ಹಿಂದೆ ಉತ್ತರ ಪ್ರದೇಶದ ಸಿಂಗಂ ಖ್ಯಾತಿಯ ಐಪಿಎಸ್ ಅಧಿಕಾರಿ ಅಜಯ್ ಪಾಲ್ ಶರ್ಮಾ ಅವರು ಫಾಲ್ಟಾಕ್ಕೆ ವಿಶೇಷ ವೀಕ್ಷಕರಾಗಿ ಬಂದಾಗ, ಜಹಾಂಗೀರ್ ಖಾನ್ ಸಿನಿಮಾ ಶೈಲಿಯಲ್ಲಿ ಅವರು ಸಿಂಗಂ ಆದರೆ ನಾನು ಪುಷ್ಪ ಬಾಗುವುದಿಲ್ಲ ಎಂದು ಸವಾಲು ಹಾಕಿದ್ದರು. ಆದರೆ ಈಗ ಅವರೇ ಚುನಾವಣೆಯಿಂದ ಹಿಂದೆ ಸರಿದು, ಮತದಾನವನ್ನೂ ಮಾಡದೆ ಇರುವುದಕ್ಕೆ ಸಿಎಂ ಸುವೇಂದು ಅಧಿಕಾರಿ, ಪುಷ್ಪ ಬಾಗುವುದಿಲ್ಲ ಎಂದಿದ್ದ, ಆದರೆ ಈಗ ಪುಷ್ಪ ಎಲ್ಲೂ ಕಾಣಿಸುತ್ತಲೇ ಇಲ್ಲ ಎಂದು ಭೀಕರ ತಿರುಗೇಟು ನೀಡಿದ್ದಾರೆ.

ಒತ್ತಡಕ್ಕೆ ಮಣಿದರೇ..? ಹೈಕಮಾಂಡ್ ಜಟಾಪಟಿ!

ಜಹಾಂಗೀರ್ ಖಾನ್ ಅವರ ಈ ನಿಗೂಢ ನಡೆಗೆ ಟಿಎಂಸಿ ಹೈಕಮಾಂಡ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪಕ್ಷದ ಪ್ರಕಟಣೆಯ ಪ್ರಕಾರ, ಖಾನ್ ಅವರ ನಿರ್ಧಾರ ವೈಯಕ್ತಿಕವಾಗಿದ್ದು, ಪಕ್ಷಕ್ಕೂ ಅದಕ್ಕೂ ಸಂಬಂಧವಿಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಾಗಿನಿಂದ ಫಾಲ್ಟಾ ಒಂದರಲ್ಲೇ 100 ಕ್ಕೂ ಹೆಚ್ಚು ಟಿಎಂಸಿ ಕಾರ್ಯಕರ್ತರನ್ನು ದ್ವೇಷ ರಾಜಕಾರಣದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ. ಕೆಲವರು ಆಡಳಿತ ವ್ಯವಸ್ಥೆಯ ಇಂತಹ ಭೀಕರ ಒತ್ತಡಕ್ಕೆ ಮಣಿದು ಕಣದಿಂದ ಹಿಂದೆ ಸರಿಯುತ್ತಿದ್ದಾರೆ ಎಂದು ಆರೋಪಿಸಿದೆ. ಆದರೆ, ಕನಿಷ್ಠ ಪಕ್ಷ ಮತ ಚಲಾಯಿಸದ ಜಹಾಂಗೀರ್ ಖಾನ್ ಅವರ ನಡೆ ಮಾತ್ರ ಬಂಗಾಳದ ಚುನಾವಣಾ ಇತಿಹಾಸದಲ್ಲೇ ಒಂದು ವಿಚಿತ್ರ ವಿದ್ಯಮಾನವಾಗಿ ಉಳಿದುಕೊಂಡಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net