ಗೂಂಡಾಗಳಿಗೆ ಜೈಲಲ್ಲ, ನೇರ ಯಮಲೋಕ!...ಬಂಗಾಳದಲ್ಲಿ ಯೋಗಿ ಮಾಡೆಲ್; ಪೊಲೀಸರಿಗೆ ಸಿಕ್ಕ ಆ ಪವರ್‌ಫುಲ್ ಸಿಗ್ನಲ್ ಏನು ಗೊತ್ತಾ..? | Yogi Model In Bengal

Yogi Model In Bengal | ಬಂಗಾಳದಲ್ಲಿ ಯೋಗಿ ಮಾಡೆಲ್
Yogi Model In Bengal | ಬಂಗಾಳದಲ್ಲಿ ಯೋಗಿ ಮಾಡೆಲ್
Published on
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬರುಯಿಪುರದಲ್ಲಿ 12 ವರ್ಷದ ಬಾಲಕಿಯ ಮೇಲೆ ನಡೆದ ಗ್ಯಾಂಗ್‌ರೇಪ್ ಮತ್ತು ಕೊಲೆ ಪ್ರಕರಣದ ಮುಖ್ಯ ಆರೋಪಿ ಪ್ರಭಾಸ್ ಮೊಂಡಲ್‌ನನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿದ್ದಾರೆ. ಜನಾಕ್ರೋಶಕ್ಕೆ ಕಾರಣವಾಗಿದ್ದ ಈ ಘಟನೆಯ ತನಿಖೆಯ ಭಾಗವಾಗಿ ಘಟನಾ ಸ್ಥಳದ ಮರುಸೃಷ್ಟಿ ಮಾಡಲು ಕರೆತಂದಾಗ, ಆರೋಪಿ ಮೊಂಡಲ್ ಪೊಲೀಸರ ರೈಫಲ್ ಕಸಿದುಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ನಡೆಸಿದ ಆತ್ಮರಕ್ಷಣೆಯ ದಾಳಿಯಲ್ಲಿ ಅವನು ಹತನಾಗಿದ್ದಾನೆ ಎನ್ನಲಾಗಿದೆ.
ಮಮತಾ ಬ್ಯಾನರ್ಜಿ ಆಡಳಿತಾವಧಿಯಲ್ಲಿ ಬಂಗಾಳದಲ್ಲಿ ಗೂಂಡಾರಾಜ್ ಆಳವಾಗಿ ಬೇರೂರಿತ್ತು ಮತ್ತು ಅಪರಾಧಿಗಳಿಗೆ ರಾಜಕೀಯ ರಕ್ಷಣೆ ಸಿಗುತ್ತಿತ್ತು ಎಂಬ ಆರೋಪಗಳಿದ್ದವು. ಆರ್‌ಜಿ ಕರ್ ಆಸ್ಪತ್ರೆ ಪ್ರಕರಣವೇ ಇದಕ್ಕೆ ಸಾಕ್ಷಿ ಆದರೆ ಈಗಿನ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಮಾದರಿಯನ್ನು ಅನುಸರಿಸುತ್ತಿದ್ದಾರೆ. ಪೊಲೀಸರಿಗೆ ಮುಕ್ತ ಅವಕಾಶ ನೀಡಲಾಗಿದ್ದು, ಅಪರಾಧಿಗಳಲ್ಲಿ ಕಾನೂನಿನ ಭಯ ಹುಟ್ಟಿಸುವ ಪ್ರಕ್ರಿಯೆ ಆರಂಭವಾಗಿದೆ. ಅಪರಾಧ ಮುಕ್ತ ರಾಜ್ಯವಾಗದ ಹೊರತು ಯಾವುದೇ ಹೂಡಿಕೆದಾರರು ಬಂಗಾಳಕ್ಕೆ ಬರುವುದಿಲ್ಲ ಎಂಬ ಕಟು ಸತ್ಯವನ್ನು ಹೊಸ ಸರ್ಕಾರ ಅರಿತಂತಿದೆ.

ಟಿಎಂಸಿಯ ವಿಚಿತ್ರ ನಿಲುವು ಮತ್ತು ಜನಾಕ್ರೋಶ

ಅಚ್ಚರಿಯೆಂದರೆ, ಈ ಎನ್‌ಕೌಂಟರ್ ಅನ್ನು ತೃಣಮೂಲ ಕಾಂಗ್ರೆಸ್ ನಾಯಕರು ಕಟುವಾಗಿ ಟೀಕಿಸಿದ್ದಾರೆ. ಸಂಸದೆ ಮಹುವಾ ಮೊಯಿತ್ರಾ ಇದನ್ನು ಜಂಗಲ್ ರಾಜ್ ಮತ್ತು ಬಂಗಾಳವು ಉತ್ತರ ಪ್ರದೇಶ 2.0 ಆಗುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಆದರೆ, ಟಿಎಂಸಿಯ ಈ ನಿಲುವು ಸಾರ್ವಜನಿಕರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ. ಇದಕ್ಕೆ ಸಾಕ್ಷಿ ಎಂಬಂತೆ, ಕೋಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದಾಗ ಸಾರ್ವಜನಿಕರು ಅವರ ಮೇಲೆಯೇ ಮೊಟ್ಟೆ ಎಸೆದು ಚೋರ್, ಚೋರ್ ಘೋಷಣೆ ಕೂಗಿದ್ದಾರೆ. ಸ್ವತಃ ಎನ್‌ಕೌಂಟರ್ ಆದ ಅಪರಾಧಿಯ ತಾಯಿಯೇ, ಅವನು ಕುಟುಂಬಕ್ಕೆ ಮಸಿ ಬಳಿದಿದ್ದಾನೆ ಎಂದು ಶವವನ್ನು ಪಡೆಯಲು ನಿರಾಕರಿಸಿರುವುದು ಜನಾಕ್ರೋಶದ ತೀವ್ರತೆಯನ್ನು ತೋರಿಸುತ್ತದೆ.
ಬರುಯಿಪುರ ಎನ್‌ಕೌಂಟರ್ ಮತ್ತು ಅದರ ಬೆನ್ನಲ್ಲೇ ಸೃಷ್ಟಿಯಾಗಿರುವ ರಾಜಕೀಯ ತಲ್ಲಣಗಳು ಪಶ್ಚಿಮ ಬಂಗಾಳದ ಸಾರ್ವಜನಿಕ ಚಿಂತನೆಯಲ್ಲಿ ಮೂಡಿರುವ ದೊಡ್ಡ ಬದಲಾವಣೆಯನ್ನು ಸ್ಪಷ್ಟಪಡಿಸುತ್ತವೆ. ಒಂದು ಕಾಲದಲ್ಲಿ ಅಪರಾಧಿಗಳಿಗೆ ರಾಜಕೀಯ ಆಶ್ರಯ ಸಿಗುತ್ತಿತ್ತು ಎಂಬ ಆರೋಪ ಎದುರಿಸುತ್ತಿದ್ದ ಬಂಗಾಳದಲ್ಲಿ, ಈಗಿನ ಸುವೇಂದು ಅಧಿಕಾರಿ ನೇತೃತ್ವದ ಸರ್ಕಾರ ಕೈಗೊಂಡಿರುವ ಕಠಿಣ ನಿಲುವು ಮತ್ತು ಯೋಗಿ ಮಾಡೆಲ್ ಶೈಲಿಯ ಕಾನೂನು ಸುವ್ಯವಸ್ಥೆ ಜನಸಾಮಾನ್ಯರಲ್ಲಿ ಹೊಸ ಭರವಸೆ ಮೂಡಿಸಿದೆ.
ಅತ್ಯಾಚಾರ ಮತ್ತು ಕೊಲೆಯಂತಹ ಹೀನಾಯ ಕೃತ್ಯ ಎಸಗಿದ ಸ್ವಂತ ಮಗನ ಶವವನ್ನು ಪಡೆಯಲು ನಿರಾಕರಿಸಿದ ಆ ತಾಯಿಯ ನಡೆ ಮತ್ತು ಎನ್‌ಕೌಂಟರ್ ಅನ್ನು ಪ್ರಶ್ನಿಸಿದ ಟಿಎಂಸಿ ನಾಯಕರ ವಿರುದ್ಧ ಸಾರ್ವಜನಿಕರು ರಸ್ತೆಯಲ್ಲೇ ಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಿರುವುದು ಒಂದು ಕಟು ಸತ್ಯವನ್ನು ಸಾರುತ್ತದೆ. ಜನರಿಗೆ ಈಗ ರಾಜಕೀಯ ವಾದಗಳಿಗಿಂತ ತ್ವರಿತ ನ್ಯಾಯ ಮತ್ತು ಅಪರಾಧಿಗಳಲ್ಲಿ ಭಯ ಮೂಡುವುದು ಮುಖ್ಯವಾಗಿದೆ. ಮಾನವ ಹಕ್ಕುಗಳ ಹೆಸರಿನಲ್ಲಿ ಕ್ರಿಮಿನಲ್‌ಗಳನ್ನು ಸಮರ್ಥಿಸಿಕೊಳ್ಳುವ ರಾಜಕಾರಣವನ್ನು ಬಂಗಾಳದ ಜನತೆ ಸಂಪೂರ್ಣವಾಗಿ ತಿರಸ್ಕರಿಸುತ್ತಿದ್ದಾರೆ ಎಂಬುದಕ್ಕೆ ಕೋಲ್ಕತ್ತಾದ ಬೀದಿಗಳಲ್ಲಿ ಮೊಳಗಿದ ಜನಾಕ್ರೋಶವೇ ಸಾಕ್ಷಿ. ರಾಜ್ಯದ ಆರ್ಥಿಕ ಪ್ರಗತಿ ಮತ್ತು ಹೂಡಿಕೆಗೆ ಶಾಂತಿ ಸುವ್ಯವಸ್ಥೆಯೇ ಮೊದಲ ಆದ್ಯತೆ ಎಂಬುದನ್ನು ಪ್ರಸ್ತುತ ಬೆಳವಣಿಗೆಗಳು ಸಾಬೀತುಪಡಿಸಿವೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net