ಇದು ಬಲು ಅಪರೂಪ....ಮರದ ಕೊಂಬೆ ಬಿದ್ದು ಗಾಯಗೊಂಡ ಬಿಜೆಪಿಗನ ನೆರವಿಗೆ ಧಾವಿಸಿದ ಟಿಎಂಸಿ ಕಾರ್ಯಕರ್ತ! | Humanity In Politics

West Bengal Elections | ಗಾಯಾಳು ಬಿಜೆಪಿ ಕಾರ್ಯಕರ್ತನನ್ನು ಕಾಪಾಡಿ ಮಾನವೀಯತೆ ಮೆರೆದ ಟಿಎಂಸಿ ಕಾರ್ಯಕರ್ತ
West Bengal Elections | ಗಾಯಾಳು ಬಿಜೆಪಿ ಕಾರ್ಯಕರ್ತನನ್ನು ಕಾಪಾಡಿ ಮಾನವೀಯತೆ ಮೆರೆದ ಟಿಎಂಸಿ ಕಾರ್ಯಕರ್ತ
Published on
West Bengal Elections: ಪಶ್ಚಿಮ ಬಂಗಾಳದಲ್ಲಿ ಪ್ರಸ್ತುತ ಉದ್ವಿಗ್ನ ರಾಜಕೀಯ ವಾತಾವರಣವಿದ್ದರೂ, ಬಿರ್ಭುಮ್ ಜಿಲ್ಲೆಯಲ್ಲಿ ನಡೆದ ಒಂದು ಘಟನೆಯು ಮಾನವೀಯತೆಗೆ ಸಾಕ್ಷಿಯಾಗಿದೆ. ಗುರುವಾರ ನಡೆದ ಮೊದಲ ಹಂತದ ಮತದಾನದ ಸಂದರ್ಭದಲ್ಲಿ ಸೂರಿ ವಿಧಾನಸಭಾ ಕ್ಷೇತ್ರದ ಮತಗಟ್ಟೆಯ ಬಳಿ ಮರದ ಕೊಂಬೆ ಬಿದ್ದು ಬಿಜೆಪಿ ಕಾರ್ಯಕರ್ತರೊಬ್ಬರು ಗಾಯಗೊಂಡರು. ಈ ವೇಳೆ ಪ್ರತಿಸ್ಪರ್ಧಿ ಟಿಎಂಸಿ ಕಾರ್ಯಕರ್ತರು ರಾಜಕೀಯ ದ್ವೇಷ ಪಕ್ಕಕ್ಕಿಟ್ಟು ರಕ್ಷಕರಾಗಿ ಧಾವಿಸಿದ್ದಾರೆ.
ಜಿಕೊ ಚಟ್ಟೋರಾಜ್ ಎಂದು ಗುರುತಿಸಲಾದ ಬಿಜೆಪಿ ಕಾರ್ಯಕರ್ತ 135 ಮತ್ತು 136 ಸಂಖ್ಯೆಯ ಬೂತ್‌ಗಳ ಬಳಿ ನಿಂತಿದ್ದಾಗ ಈ ಅನಿರೀಕ್ಷಿತ ಘಟನೆ ಸಂಭವಿಸಿದೆ. ಹಠಾತ್ತನೆ ಮರದ ದೊಡ್ಡ ಕೊಂಬೆಯೊಂದು ಮುರಿದು ಬಿದ್ದಿದ್ದರಿಂದ ಚಟ್ಟೋರಾಜ್ ಅದರ ಕೆಳಗೆ ಸಿಲುಕಿಕೊಂಡು ಗಾಯಗೊಂಡರು ಎನ್ನಲಾಗಿದೆ.

ಪ್ರತಿಸ್ಪರ್ಧಿಗಳೇ ರಕ್ಷಕರಾದರು..

ಮತಗಟ್ಟೆಯಲ್ಲಿ ಈ ಘಟನೆಯಿಂದ ಭೀತಿ ಹರಡುತ್ತಿದ್ದಂತೆ, ಅಲ್ಲಿಯೇ ಇದ್ದ ಟಿಎಂಸಿ ಕಾರ್ಯಕರ್ತರು ತಕ್ಷಣವೇ ಚಟ್ಟೋರಾಜ್ ಸಹಾಯಕ್ಕೆ ಧಾವಿಸಿದರು. ಎಬಿಪಿ ವರದಿಯ ಪ್ರಕಾರ, ಟಿಎಂಸಿ ಕಾರ್ಯಕರ್ತರು ಅತ್ಯಂತ ವೇಗವಾಗಿ ಕಾರ್ಯಪ್ರವೃತ್ತರಾಗಿ ಅವರನ್ನು ಮರದ ಕೊಂಬೆಯ ಅಡಿಯಿಂದ ಹೊರತೆಗೆದರು. ಬಳಿಕ ವಿಳಂಬ ಮಾಡದೆ ಮೋಟಾರ್ ಸೈಕಲ್‌ನಲ್ಲಿ ಹತ್ತಿರದ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದರು. ರಾಜ್ಯದ ಬೇರೆಡೆಗಳಲ್ಲಿ ಉಭಯ ಪಕ್ಷಗಳ ನಡುವೆ ಘರ್ಷಣೆ ನಡೆಯುತ್ತಿರುವ ವರದಿಗಳ ನಡುವೆ, ಬಿರ್ಭುಮ್‌ನ ಈ ಘಟನೆಯು ಮಾನವೀಯ ಮೌಲ್ಯಗಳನ್ನು ನೆನಪಿಸಿದೆ.

ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು..?

ಪರಿಸ್ಥಿತಿಯ ಕುರಿತಂತೆ ಮಾತನಾಡಿರುವ ಟಿಎಂಸಿ ಕಾರ್ಯಕರ್ತ ಮಾಣಿಕ್ ಕರ್ಮಾಕರ್, ಆ ಸಮಯದಲ್ಲಿ ಅನೇಕ ಮತದಾರರು ಸ್ಥಳದಲ್ಲಿದ್ದರು, ತಕ್ಷಣದ ಕ್ರಮವು ದೊಡ್ಡ ದುರಂತವನ್ನು ತಪ್ಪಿಸಲು ಸಹಾಯ ಮಾಡಿತು. ನಾವು ವಿದ್ಯುತ್ ಇಲಾಖೆಗೆ ಮಾಹಿತಿ ನೀಡಿ ಪರಿಸ್ಥಿತಿಯನ್ನು ನಿಯಂತ್ರಿಸಿದೆವು ಎಂದಿದ್ದಾರೆ. ಇತ್ತ ಬಿಜೆಪಿ ಕಾರ್ಯಕರ್ತ ರಾಧಾವಲ್ಲಭ್ ರಾಯ್ ಕೂಡ ಪ್ರತಿಕ್ರಿಯೆ ನೀಡಿದ್ದು, ಮರದ ಕೊಂಬೆ ಬೀಳುವ ಮೊದಲು ಜೋರಾಗಿ ಬಿರುಕು ಬಿಡುವ ಶಬ್ದ ಕೇಳಿಸಿತು. ಕೆಲವರು ಸುರಕ್ಷಿತವಾಗಿ ಓಡಿಹೋದರು, ಆದರೆ ಚಟ್ಟೋರಾಜ್ ಕೆಳಗೆ ಸಿಲುಕಿಕೊಂಡರು ಎಂದು ಆ ಆತಂಕದ ಕ್ಷಣವನ್ನು ವಿವರಿಸಿದ್ದಾರೆ. ಗಾಯಗೊಂಡ ಕಾರ್ಯಕರ್ತ ಚಟ್ಟೋರಾಜ್ ಪ್ರಸ್ತುತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದೇ ವೇಳೆ ಪಶ್ಚಿಮ ಬಂಗಾಳದ ಮೊದಲ ಹಂತದ ಮತದಾನವು ದಾಖಲೆ ಬರೆದಿದ್ದು, ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ ಶೇಕಡಾ 92.52 ರಷ್ಟು ಮತದಾನವಾಗಿದೆ. ಸಂಜೆ 6 ಗಂಟೆಯ ಬಳಿಕವೂ 5,000 ಕ್ಕೂ ಹೆಚ್ಚು ಬೂತ್‌ಗಳಲ್ಲಿ ಮತದಾನ ಮುಂದುವರಿದಿತ್ತು. ಜಿಲ್ಲಾವಾರು ಅಂಕಿಅಂಶಗಳನ್ನು ಗಮನಿಸಿದರೆ, ದಕ್ಷಿಣ ದಿನಾಜ್‌ಪುರದಲ್ಲಿ ಗರಿಷ್ಠ ಶೇ. 94.85 ರಷ್ಟು ಮತದಾನವಾಗಿದ್ದರೆ, ಕೂಚ್ ಬೆಹಾರ್‌ನಲ್ಲಿ ಶೇ. 94.54, ಬಿರ್ಭುಮ್‌ನಲ್ಲಿ ಶೇ. 93.70, ಜಲಪೈಗುರಿಯಲ್ಲಿ ಶೇ. 93.23 ಮತ್ತು ಮುರ್ಷಿದಾಬಾದ್‌ನಲ್ಲಿ ಶೇ. 92.93 ರಷ್ಟು ಮತದಾನವಾಗಿದೆ.
ಬಂಗಾಳದ ಬಹುತೇಕ ಜಿಲ್ಲೆಗಳಲ್ಲಿ ಶೇ. 90 ಕ್ಕಿಂತ ಹೆಚ್ಚು ಮತದಾನವಾಗಿರುವುದು ಸ್ಥಿರ ಪ್ರವೃತ್ತಿಯನ್ನು ತೋರಿಸುತ್ತದೆ. ಅದೇ ರೀತಿ ತಮಿಳುನಾಡಿನಲ್ಲಿ ಕರೂರು ಶೇ. 92.48 ಮತದಾನದೊಂದಿಗೆ ಮುಂಚೂಣಿಯಲ್ಲಿದ್ದರೆ, ಸೇಲಂ, ಧರ್ಮಪುರಿ, ಈರೋಡ್ ಮತ್ತು ನಾಮಕ್ಕಲ್ ಜಿಲ್ಲೆಗಳಲ್ಲಿ ಕೂಡ ಶೇ. 90 ರ ಹತ್ತಿರದಷ್ಟು ಮತದಾನ ದಾಖಲಾಗಿದೆ. ಇದೇ ವೇಳೆ ನಡೆದ ಉಪಚುನಾವಣೆಗಳಲ್ಲಿ ಗುಜರಾತ್‌ನ ಉಮ್ರೆತ್‌ನಲ್ಲಿ ಶೇ. 59.04, ಮಹಾರಾಷ್ಟ್ರದ ರಾಹುರಿಯಲ್ಲಿ ಶೇ. 55.70 ಮತ್ತು ಬಾರಾಮತಿಯಲ್ಲಿ ಶೇ. 57.77 ರಷ್ಟು ಮತದಾನವಾಗಿದೆ.

ಸಿಬ್ಬಂದಿ ಅಮಾನತು!..

ಈ ಮಟ್ಟದ ಮತದಾನದ ನಡುವೆ ಕೆಲ ಅಹಿತಕರ ಘಟನೆಗಳು ಕೂಡ ವರದಿಯಾಗಿದ್ದು, ಪಶ್ಚಿಮ ಮೇದಿನಿಪುರ ಜಿಲ್ಲೆಯ ಪಿಂಗ್ಲಾ ವಿಭಾಗದ ಒಂದು ಮತಗಟ್ಟೆಯಲ್ಲಿ ಮತದಾನ ನಡೆಯುತ್ತಿದ್ದ ಸಮಯದಲ್ಲಿಯೇ ಮತಗಟ್ಟೆಯನ್ನು ಗಮನಿಸದೆ ಬಿಟ್ಟು ಹೋಗಿದ್ದಕ್ಕಾಗಿ ಅಲ್ಲಿನ ಎಲ್ಲಾ ಚುನಾವಣಾ ಸಿಬ್ಬಂದಿಯನ್ನು ಆಯೋಗವು ಅಮಾನತುಗೊಳಿಸಿದೆ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದ್ದು, ಜಿಲ್ಲಾ ಚುನಾವಣಾ ಅಧಿಕಾರಿಯಿಂದ ವರದಿ ಕೇಳಲಾಗಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net