ಆರ್ ಜಿ ಕರ್ ಪ್ರಕರಣದ ಸಂತ್ರಸ್ತೆಗೆ ನ್ಯಾಯ ಕೊಡಿಸಿಯೇ ಸಿದ್ಧ ಎಂದ ಸುವೇಂದು; ಸಿಎಂ ಮಾತು ಕೇಳಿ ಕಣ್ಣೀರು ಹಾಕಿದ ವೈದ್ಯೆಯ ತಾಯಿ! | RG Kar Case

RG Kar Case | ಆರ್ ಜಿ ಕರ್ ಪ್ರಕರಣದ ಸಂತ್ರಸ್ತೆಗೆ ನ್ಯಾಯ ಕೊಡಿಸಿಯೇ ಸಿದ್ಧ ಎಂದ ಸುವೇಂದು
RG Kar Case | ಆರ್ ಜಿ ಕರ್ ಪ್ರಕರಣದ ಸಂತ್ರಸ್ತೆಗೆ ನ್ಯಾಯ ಕೊಡಿಸಿಯೇ ಸಿದ್ಧ ಎಂದ ಸುವೇಂದು
Published on
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆರ್‌.ಜಿ. ಕರ್ (RG Kar Case) ವೈದ್ಯಕೀಯ ಕಾಲೇಜು ಆಸ್ಪತ್ರೆಯ ಪ್ರಶಿಕ್ಷಣಾರ್ಥಿ ವೈದ್ಯೆಯ ಮೇಲಿನ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸುವೇಂದು ಅಧಿಕಾರಿ ವಿಧಾನಸಭೆಯಲ್ಲಿ ಮಹತ್ವದ ಹೇಳಿಕೆ ನೀಡಿದ್ದಾರೆ. ಮಂಗಳವಾರ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯ ವೇಳೆ ಮಾತನಾಡಿದ ಸಿಎಂ, ಈ ಘೋರ ಅಪರಾಧದಲ್ಲಿ ಖಂಡಿತವಾಗಿಯೂ ನ್ಯಾಯ ಸಿಗಲಿದೆ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ಧ ತಮ್ಮ ಸರ್ಕಾರ ಶೂನ್ಯ ಸಹಿಷ್ಣುತೆ ನೀತಿಯನ್ನು ಹೊಂದಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಆರ್.ಜಿ. ಕರ್ ಪ್ರಕರಣದಲ್ಲಿ ಸಂತ್ರಸ್ತೆಗೆ ನ್ಯಾಯ ಸಿಗಲಿದೆ. ಸಂತ್ರಸ್ತೆಗೆ ನ್ಯಾಯ ಸಿಗಬೇಕು ಎಂದೇ ಬಂಗಾಳದ ಜನತೆ ಮತ ಚಲಾಯಿಸಿದ್ದಾರೆ ಎಂದು ಸಿಎಂ ಅಧಿಕಾರಿ ಸದನದಲ್ಲಿ ತಿಳಿಸಿದರು. 2024 ರ ಆಗಸ್ಟ್ 9 ರಂದು ಅಂದಿನ ತೃಣಮೂಲ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 31 ವರ್ಷದ ಸ್ನಾತಕೋತ್ತರ ತರಬೇತಿ ವೈದ್ಯೆಯ ಮೇಲೆ ಆಸ್ಪತ್ರೆಯ ಒಳಗೇ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿತ್ತು.
ಮುಖ್ಯಮಂತ್ರಿಗಳ ಈ ಭರವಸೆಯ ಮಾತುಗಳನ್ನು ಕೇಳುತ್ತಿದ್ದಂತೆ, ಸದನದಲ್ಲಿ ಉಪಸ್ಥಿತರಿದ್ದ ಸಂತ್ರಸ್ತ ವೈದ್ಯೆಯ ತಾಯಿ ಹಾಗೂ ಬಿಜೆಪಿ ಶಾಸಕಿ ರತ್ನ ದೇವನಾಥ್ ಅವರು ಭಾವುಕರಾಗಿ ಕಣ್ಣೀರು ಹಾಕಿದರು. ಈ ವೇಳೆ ಪಕ್ಕದಲ್ಲಿದ್ದ ಮತ್ತೊಬ್ಬ ಶಾಸಕಿ ಅವರಿಗೆ ಸಾಂತ್ವನ ಹೇಳಿದರು. ನಂತರ ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡಿದ ರತ್ನ ದೇವನಾಥ್, ನನ್ನ ಮಗಳಿಗೆ ನ್ಯಾಯ ಸಿಗುತ್ತದೆ ಎಂಬ ಭರವಸೆ ನನಗಿದೆ. ನಾನು ಇಲ್ಲಿಗೆ (ವಿಧಾನಸಭೆಗೆ) ಬಂದಿರುವುದು ಅಧಿಕಾರಕ್ಕಾಗಿ ಅಲ್ಲ, ನನ್ನ ಮಗಳ ನ್ಯಾಯಕ್ಕಾಗಿ ಎಂದು ಭಾವುಕರಾಗಿ ಹೇಳಿದರು.
ಮೂವರು ಐಪಿಎಸ್ ಅಧಿಕಾರಿಗಳ ಅಮಾನತು
ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದ ಸುವೇಂದು ಅಧಿಕಾರಿ, ಪ್ರಕರಣದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಈಗಾಗಲೇ ಮೂವರು ಐಪಿಎಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಘಟನೆ ನಡೆದಾಗ ಆಸ್ಪತ್ರೆಯ ಪ್ರಾಂಶುಪಾಲರಾಗಿದ್ದ ಡಾ. ಸಂದೀಪ್ ಘೋಷ್ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ. ನಾವು ಎಲ್ಲವನ್ನೂ ಪಾರದರ್ಶಕವಾಗಿ ತನಿಖೆ ನಡೆಸಲಿದ್ದೇವೆ ಎಂದರು. ಕೋಲ್ಕತ್ತಾದ ಮಾಜಿ ಪೊಲೀಸ್ ಕಮಿಷನರ್ ವಿನೀತ್ ಗೋಯಲ್ ಮತ್ತು ಮಾಜಿ ಉಪ ಕಮಿಷನರ್‌ಗಳಾದ ಇಂದಿರಾ ಮುಖರ್ಜಿ ಹಾಗೂ ಅಭಿಷೇಕ್ ಗುಪ್ತಾ ಅವರನ್ನು ಪ್ರಕರಣಕ್ಕೆ ಸಂಬಂಧಿಸಿದ ಲೋಪಗಳ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ. ಈ ಪ್ರಕರಣದ ಮುಖ್ಯ ಆರೋಪಿ, ಕೊಲ್ಕತ್ತಾ ಪೊಲೀಸರ ಸಿವಿಕ್ ವಾಲಂಟಿಯರ್ ಸಂಜಯ್ ರಾಯ್‌ಗೆ ಈಗಾಗಲೇ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಸಿಬಿಐ (CBI) ಇದರ ಮರುತನಿಖೆಯನ್ನು ಆರಂಭಿಸಿದೆ.

ಮಹಿಳಾ ಸುರಕ್ಷತೆಗೆ ಶೂನ್ಯ ಸಹಿಷ್ಣುತೆ

ರಾಜ್ಯದ ಹಳೆಯ ಮತ್ತು ಇತ್ತೀಚಿನ ಹಲವು ಅಪರಾಧ ಪ್ರಕರಣಗಳನ್ನು ಉಲ್ಲೇಖಿಸಿದ ಸಿಎಂ, ಹಂಸ್ಖಾಲಿ, ಕಾಮ್ದುನಿ, ಕಸ್ಬಾ ಲಾ ಕಾಲೇಜು ಮತ್ತು ಧುಪ್ಗುರಿ ಘಟನೆಗಳಲ್ಲೂ ಸರ್ಕಾರ ಕಠಿಣ ನಿಲುವು ತಳೆದಿದೆ ಎಂದರು. ಇದೇ ವೇಳೆ, ಕಳೆದ ವರ್ಷ ಜೂನ್ 23 ರಂದು ನಾದಿಯಾ ಜಿಲ್ಲೆಯ ಕಾಲಿಗಂಜ್‌ನಲ್ಲಿ ಟಿಎಂಸಿ ವಿಜಯೋತ್ಸವದ ರ‍್ಯಾಲಿ ವೇಳೆ ಸಂಭವಿಸಿದ ಬಾಂಬ್ ದಾಳಿಗೆ ಬಲಿಯಾಗಿದ್ದ ಸಿಪಿಐ(ಎಂ) ಕಾರ್ಯಕರ್ತನ 13 ವರ್ಷದ ಪುತ್ರಿ ತಮನ್ನಾ ಖಾತುನ್ ಸಾವಿನ ಪ್ರಕರಣವನ್ನೂ ಸಿಎಂ ಪ್ರಸ್ತಾಪಿಸಿದರು. ಈ ವೇಳೆ ಟಿಎಂಸಿ ಶಾಸಕಿ ಅಲಿಫಾ ಅಹಮದ್ ಭಾಷಣ ಮಾಡುತ್ತಿದ್ದಾಗ, ಬಿಜೆಪಿ ಶಾಸಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ತಮನ್ನಾ ಕೊಲೆಗಡುಕರು, ಕಳ್ಳರು ನೀವು ಎಂದು ಘೋಷಣೆ ಕೂಗಿದರು. ಬಳಿಕ ಮಾತನಾಡಿದ ಸುವೇಂದು ಅಧಿಕಾರಿ, ನೀವು ಚುನಾವಣೆಯಲ್ಲಿ ಗೆದ್ದ ಬೆನ್ನಲ್ಲೇ ತಮನ್ನಾಳನ್ನು ಕೊಲ್ಲಲಾಯಿತು. ನಿಮ್ಮಿಂದ ನಾನು ಪ್ರಜಾಪ್ರಭುತ್ವದ ಪಾಠ ಕೇಳಬೇಕಾಗಿಲ್ಲ ಎಂದು ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದರು(ಏಜೆನ್ಸೀಸ್​​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net