ಮಮತಾ 'ಖೇಲಾ'ಗೆ ಮೋದಿ-ಷಾ ಚೆಕ್‌ಮೇಟ್; ಬಂಗಾಳದ ರಾಜಕೀಯ ದಿಕ್ಕನ್ನೇ ಬದಲಿಸಿದವು ಆ 5 ಸೈಲೆಂಟ್ ಆಪರೇಷನ್‌ಗಳು! | West Bengal Election

 West Bengal Election | ಬಂಗಾಳದ ರಾಜಕೀಯ ದಿಕ್ಕನ್ನೇ ಬದಲಿಸಿದವು ಆ 5 ಸೈಲೆಂಟ್ ಆಪರೇಷನ್‌ಗಳು!
West Bengal Election | ಬಂಗಾಳದ ರಾಜಕೀಯ ದಿಕ್ಕನ್ನೇ ಬದಲಿಸಿದವು ಆ 5 ಸೈಲೆಂಟ್ ಆಪರೇಷನ್‌ಗಳು!
Published on
West Bengal Election: ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಈ ಬಾರಿ ಬಿಜೆಪಿ ಸಾಧಿಸಿರುವ ಗೆಲುವು ಕೇವಲ ಆಡಳಿತ ವಿರೋಧಿ ಅಲೆಯ ಫಲವಲ್ಲ. ಇದರ ಹಿಂದೆ ಮತದಾರರ ಪಟ್ಟಿಯ ಪರಿಷ್ಕರಣೆಯಿಂದ ಹಿಡಿದು, ಸಂಘಟನಾತ್ಮಕ ಸುಧಾರಣೆ ಮತ್ತು ಸೈದ್ಧಾಂತಿಕ ಏಕೀಕರಣದವರೆಗಿನ ಹಲವು ಆಯಾಮಗಳಿವೆ. ಈ ಮಹತ್ವದ ಬದಲಾವಣೆಯ ವಿಶ್ಲೇಷಣಾತ್ಮಕ ಅಂಶಗಳು ಇಲ್ಲಿವೆ.

ಮತದಾರರ ಪಟ್ಟಿ ಪರಿಷ್ಕರಣೆ (SIR)

ಈ ಚುನಾವಣೆಯಲ್ಲಿ ಬಿಜೆಪಿಗೆ ಲಾಭ ತಂದುಕೊಟ್ಟ ಅತ್ಯಂತ ಪ್ರಮುಖ ತಾಂತ್ರಿಕ ಅಂಶವೆಂದರೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ. ಸುಮಾರು 90 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಅಳಿಸಿಹಾಕಿದ್ದು ಚುನಾವಣಾ ಸಮತೋಲನವನ್ನು ಬದಲಿಸಿದೆ. ಈ ಪ್ರಕ್ರಿಯೆಯು ಗಡಿ ಜಿಲ್ಲೆಗಳಲ್ಲಿನ ನಕಲಿ ಮತದಾರರ ಹಾವಳಿಯನ್ನು ತಡೆದಿದೆ ಎಂದು ಬಿಜೆಪಿ ವಾದಿಸಿದರೆ, ಇದು ಟಿಎಂಸಿಯ ಮತದಾರರನ್ನು ಗುರಿಯಾಗಿಸಿದ ಕ್ರಮ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ಹೈಪರ್-ಲೋಕಲ್ ರಾಜಕೀಯವಿರುವ ಬಂಗಾಳದಲ್ಲಿ, ಈ ಕ್ರಮವು ಬಿಜೆಪಿಯ ಗೆಲುವಿನ ಅಂತರವನ್ನು ಹೆಚ್ಚಿಸುವಲ್ಲಿ ಮೌನವಾಗಿಯೆ ಕೆಲಸ ಮಾಡಿದೆ.

ಮೋದಿ-ಶಾ ಟೆಂಪ್ಲೇಟ್ ಮತ್ತು ಸಂಘಟನಾತ್ಮಕ ಬಲ

ಬಂಗಾಳದ ಪೊಲಿಟಿಕಲ್​ ಐಡೆಂಟಿಟಿ ಅಷ್ಟು ಸರಳವಾಗಿ ಎಲ್ಲರಿಗೂ ಅರಿತುಕೊಳ್ಳಲು ಸಾಧ್ಯವಿಲ್ಲ ಎನ್ನುವ ನಂಬಿಕೆಯನ್ನು ಮೋದಿ ಮತ್ತು ಅಮಿತ್ ಷಾ ಜೋಡಿ ಸುಳ್ಳು ಮಾಡಿದೆ.
ಬನ್ಸಾಲ್-ಯಾದವ್ ಜೋಡಿಯ ತಂತ್ರಗಾರಿಕೆ: ಸುನಿಲ್ ಬನ್ಸಾಲ್ ಬೂತ್ ಮಟ್ಟದ ಸಂಘಟನೆಯನ್ನು ಪುನರ್ನಿರ್ಮಿಸಿದರೆ, ಭೂಪೇಂದರ್ ಯಾದವ್ ಗುಂಪುಗಾರಿಕೆಯನ್ನು ನಿಯಂತ್ರಿಸಿ ಸ್ಥಳೀಯವಾಗಿ ವಿಶ್ವಾಸಾರ್ಹ ಮುಖಗಳಿಗೆ ಆದ್ಯತೆ ನೀಡಿದರು.
ಪಕ್ಷಾಂತರಿಗಳ ಮೇಲಿನ ಅವಲಂಬನೆ ಕಡಿಮೆ: ಈ ಬಾರಿ ಬಿಜೆಪಿ ಪಕ್ಷಾಂತರಿಗಳಿಗೆ ಅತಿಯಾದ ಮಹತ್ವ ನೀಡದೆ, ಸೈದ್ಧಾಂತಿಕ ಬದ್ಧತೆ ಇರುವ ಮತ್ತು ಸ್ಥಳೀಯ ಬೇರುಗಳನ್ನು ಹೊಂದಿರುವ ಅಭ್ಯರ್ಥಿಗಳಿಗೆ ಮನ್ನಣೆ ನೀಡಿದ್ದು ಮತದಾರರ ವಿಶ್ವಾಸವನ್ನು ಮರಳಿ ಗಳಿಸಲು ಸಾಧ್ಯವಾಯಿತು.

ಹಿಂದುತ್ವ ಮತ್ತು ರಾಷ್ಟ್ರೀಯ ಭದ್ರತೆಯ ಸಮಾಗಮ

ಬಿಜೆಪಿಯು ಹಿಂದುತ್ವದ ನಿಲುವನ್ನು ಕೇವಲ ಧಾರ್ಮಿಕವಾಗಿ ಬಳಸದೆ, ಅದನ್ನು ಭದ್ರತೆ ಮತ್ತು ಅಸ್ಮಿತೆಯೊಂದಿಗೆ ಜೋಡಿಸಿತು. ಮಮತಾ ಸರ್ಕಾರದ ಅಲ್ಪಸಂಖ್ಯಾತ ಓಲೈಕೆಯನ್ನು ಪ್ರಬಲವಾಗಿ ಬಿಂಬಿಸುವುದು ಮತ್ತು ಬಾಂಗ್ಲಾದೇಶದ ಅಕ್ರಮ ಒಳನುಸುಳುವಿಕೆಯನ್ನು ಭದ್ರತಾ ಆತಂಕವಾಗಿ ಪ್ರಸ್ತುತಪಡಿಸಿದ್ದು ಹಿಂದೂ ಮತಗಳ ಕ್ರೋಢೀಕರಣಕ್ಕೆ ನೆರವಾಯಿತು. ವಿಶೇಷವಾಗಿ ಉತ್ತರ ಬಂಗಾಳ ಮತ್ತು ಗಡಿ ಜಿಲ್ಲೆಗಳಲ್ಲಿ ಇದು ಬಿಜೆಪಿಗೆ ಭರ್ಜರಿ ಲಾಭ ತಂದುಕೊಟ್ಟಿದೆ.

ಎಡದಿಂದ ಬಲಕ್ಕೆ...

2019 ರಿಂದ ಆರಂಭವಾದ ಎಡಪಂಥೀಯ ಮತಗಳ ಧ್ರುವೀಕರಣ ಈ ಚುನಾವಣೆಯಲ್ಲಿ ಮಿತಿ ಮೀರಿದೆ ಎನ್ನುವುದು ಈ ಚುನಾವಣೆಯಿಂದ ಸ್ಪಷ್ಟವಾಗಿದೆ. ಮಮತಾ ಬ್ಯಾನರ್ಜಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎನ್ನುವ ಏಕೈಕ ಉದ್ದೇಶದಿಂದ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದರೂ ಎಡಪಂಥೀಯ ಮತದಾರರು ಬಿಜೆಪಿಯನ್ನು ಬೆಂಬಲಿಸಿದ್ದು ಚುನಾವಣೆಯ ಚಿತ್ರಣವನ್ನೇ ಬದಲಿಸಿತು.

ಭ್ರಷ್ಟಾಚಾರ ಮತ್ತು ಮಹಿಳಾ ಸುರಕ್ಷತೆಯ ಆಕ್ರೋಶ

ನೇಮಕಾತಿ ಹಗರಣಗಳು: ಶಾಲಾ ಉದ್ಯೋಗ ಹಗರಣವು ಯುವಜನರಲ್ಲಿ ಟಿಎಂಸಿ ವಿರುದ್ಧ ಭ್ರಷ್ಟಾಚಾರದ ಆಕ್ರೋಶ ಮೂಡಿಸಿತು.
ಆರ್‌.ಜಿ. ಕರ್ ಮತ್ತು ಸಂದೇಶಖಾಲಿ: ಮಹಿಳಾ ಸುರಕ್ಷತೆಯ ವೈಫಲ್ಯದ ಸಂಕೇತವಾಗಿ ಈ ಘಟನೆಗಳು ಹೊರಹೊಮ್ಮಿದವು. ಮೃತ ವೈದ್ಯೆಯ ತಾಯಿಯನ್ನು ಕಣಕ್ಕಿಳಿಸಿದ್ದು ಬಿಜೆಪಿಯ ಒಂದು ಭಾವನಾತ್ಮಕ ಮತ್ತು ರಾಜಕೀಯ ಮಾಸ್ಟರ್ ಸ್ಟ್ರೋಕ್ ಆಗಿತ್ತು.
ಆರ್ಥಿಕ ಭದ್ರತೆ: ಕೇವಲ ಮಾಸಿಕ ಭತ್ಯೆಯ ಬದಲಿಗೆ, ವಲಸೆ ಹೋದ ಪುರುಷ ಸದಸ್ಯರಿಗೆ ರಾಜ್ಯದಲ್ಲೇ ಉದ್ಯೋಗದ ಭರವಸೆ ನೀಡಿದ್ದು ಮಹಿಳಾ ಮತದಾರರಲ್ಲಿ ಹೊಸ ನಿರೀಕ್ಷೆ ಮೂಡಿಸಿತು.

ರಾಷ್ಟ್ರೀಯ ರಾಜಕಾರಣದ ಮೇಲೆ ಇದರ ಪರಿಣಾಮವೇನು..?

ಈ ಜಯವು ಕೇವಲ ಒಂದು ರಾಜ್ಯದ ಅಧಿಕಾರ ಬದಲಾವಣೆಯಲ್ಲ. ರಾಷ್ಟ್ರೀಯ ಮಟ್ಟದಲ್ಲಿ ವಿರೋಧ ಪಕ್ಷಗಳ ಒಕ್ಕೂಟದ ಪ್ರಮುಖ ಮುಖವಾಗಿದ್ದ ಮಮತಾ ಬ್ಯಾನರ್ಜಿ ಅವರ ಸೋಲು ಮತ್ತು ಇಂಡಿಯಾ ಮೈತ್ರಿಕೂಟದ ಶಕ್ತಿಯನ್ನು ಕುಂದಿಸಿದೆ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಈ ಫಲಿತಾಂಶ 2029 ರ ಸಾರ್ವತ್ರಿಕ ಚುನಾವಣೆಗೆ ಬಿಜೆಪಿಗೆ ಭದ್ರ ಬುನಾದಿ ಹಾಕಿಕೊಟ್ಟಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net