ಬಿರಿಯಾನಿ ಘಮದ ಹಿಂದೆ ಅಡಗಿದೆ ₹70,000 ಕೋಟಿಯ ರೋಚಕ ರಹಸ್ಯ! ಐಟಿ ಇಲಾಖೆ ಬಿಚ್ಚಿಟ್ಟ ಆ ಒಂದು ಡಿಜಿಟಲ್ ಗುಟ್ಟೇನು..? Biryani Scam

ಬಿರಿಯಾನಿ ಘಮದ ಹಿಂದೆ ಅಡಗಿದೆ ₹70,000 ಕೋಟಿಯ ರೋಚಕ ರಹಸ್ಯ! ಐಟಿ ಇಲಾಖೆ ಬಿಚ್ಚಿಟ್ಟ ಆ ಒಂದು ಡಿಜಿಟಲ್ ಗುಟ್ಟೇನು..?
ಬಿರಿಯಾನಿ ಘಮದ ಹಿಂದೆ ಅಡಗಿದೆ ₹70,000 ಕೋಟಿಯ ರೋಚಕ ರಹಸ್ಯ! ಐಟಿ ಇಲಾಖೆ ಬಿಚ್ಚಿಟ್ಟ ಆ ಒಂದು ಡಿಜಿಟಲ್ ಗುಟ್ಟೇನು..?
Published on
ಹೈದರಾಬಾದ್: ಹೈದರಾಬಾದ್‌ನ ವಿಶ್ವವಿಖ್ಯಾತ ಬಿರಿಯಾನಿ ಹೋಟೆಲ್‌ಗಳು(Biryani Scam) ಕೇವಲ ರುಚಿಗಷ್ಟೇ ಅಲ್ಲ, ತೆರಿಗೆ ವಂಚನೆಯಲ್ಲೂ ಹೊಸ ರೆಕಾರ್ಡ್ ಬರೆದಿವೆ. ಆದಾಯ ತೆರಿಗೆ (IT) ಇಲಾಖೆಯ ಹೈದರಾಬಾದ್ ತನಿಖಾ ಘಟಕವು ನಡೆಸಿದ ಬೃಹತ್ ಕಾರ್ಯಾಚರಣೆಯಲ್ಲಿ, ದೇಶಾದ್ಯಂತ ಇರುವ ಹೋಟೆಲ್ ಉದ್ಯಮದಲ್ಲಿ ನಡೆದಿರುವ ಅಂದಾಜು ₹70,000 ಕೋಟಿ ಮೊತ್ತದ ಬೃಹತ್ ತೆರಿಗೆ ವಂಚನೆಯ ಹಗರಣವನ್ನು ಭೇದಿಸಿದೆ.

ಹೇಗೆ ಬಯಲಾಯಿತು ಈ ಮಹಾ ವಂಚನೆ..?

ಸಾದಾ ದಾಳಿಗಳಿಗಿಂತ ಭಿನ್ನವಾಗಿ, ಈ ಬಾರಿ ಐಟಿ ಇಲಾಖೆಯು ಕೃತಕ ಬುದ್ಧಿಮತ್ತೆ ಮತ್ತು ಜನರೇಟಿವ್ AI ತಂತ್ರಜ್ಞಾನವನ್ನು ಅಸ್ತ್ರವಾಗಿ ಬಳಸಿಕೊಂಡಿದೆ.
ಡೇಟಾ ವಿಶ್ಲೇಷಣೆ: ಸುಮಾರು ಒಂದು ಲಕ್ಷಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳು ಬಳಸುವ ಬಿಲ್ಲಿಂಗ್ ಸಾಫ್ಟ್‌ವೇರ್‌ನ 60 TB ಡೇಟಾವನ್ನು ಅಧಿಕಾರಿಗಳು ಜಾಲಾಡಿದ್ದಾರೆ.
ಸ್ಯಾಂಪಲ್ ರಿಸಲ್ಟ್: 2019-20ನೇ ಸಾಲಿನಿಂದ ಈವರೆಗೆ ಸುಮಾರು 1.77 ಲಕ್ಷ ರೆಸ್ಟೋರೆಂಟ್ ಐಡಿಗಳನ್ನು ಪರಿಶೀಲಿಸಿದಾಗ, ಶೇ. 27ರಷ್ಟು ಆದಾಯವನ್ನು ಮುಚ್ಚಿಟ್ಟಿರುವುದು ಪತ್ತೆಯಾಗಿದೆ.

ವಂಚನೆಯ ಮಾಸ್ಟರ್ ಪ್ಲಾನ್: ಡಿಲೀಟ್ ಬಟನ್ ಕರಾಮತ್ತು!

ಹೋಟೆಲ್ ಮಾಲೀಕರು ತೆರಿಗೆಯಿಂದ ತಪ್ಪಿಸಿಕೊಳ್ಳಲು ಅನುಸರಿಸುತ್ತಿದ್ದ ಕಿಲಾಡಿ ಬುದ್ಧಿಯ ವಿವರ ಇಲ್ಲಿದೆ.
ಕ್ಯಾಶ್ ಬಿಲ್ ಡಿಲೀಟ್: ಯುಪಿಐ ಮತ್ತು ಕಾರ್ಡ್ ಪಾವತಿಗಳನ್ನು ಲೆಕ್ಕ ತೋರಿಸಿ, ನಗದು ರೂಪದಲ್ಲಿ ನಡೆದ ಸಾವಿರಾರು ರೂಪಾಯಿಗಳ ಬಿಲ್‌ಗಳನ್ನು ಸಾಫ್ಟ್‌ವೇರ್‌ನಿಂದಲೇ ಶಾಶ್ವತವಾಗಿ ಡಿಲೀಟ್ ಮಾಡುತ್ತಿದ್ದರು.
ಬಲ್ಕ್ ಡಿಲೀಷನ್: ಕೆಲವು ಹೋಟೆಲ್‌ಗಳಂತೂ ಒಂದು ಹೆಜ್ಜೆ ಮುಂದೆ ಹೋಗಿ, ಇಡೀ ತಿಂಗಳ ಬಿಲ್ಲಿಂಗ್ ಡೇಟಾವನ್ನೇ ಸಾಫ್ಟ್‌ವೇರ್‌ನಿಂದ ಅಳಿಸಿ ಹಾಕಿ, ಕೇವಲ ಅಲ್ಪ ಆದಾಯವನ್ನು ಮಾತ್ರ ಐಟಿ ರಿಟರ್ನ್ಸ್‌ನಲ್ಲಿ ತೋರಿಸುತ್ತಿದ್ದರು.
ಬಿಲ್ ಎಡಿಟಿಂಗ್: ₹2,784 ಮೊತ್ತದ ಬಿಲ್ ಅನ್ನು ಕೇವಲ ₹27 ಎಂದು ತಿದ್ದಿರುವುದು ಕೂಡ ಅಧಿಕಾರಿಗಳ ಗಮನಕ್ಕೆ ಬಂದಿದೆ.

ಕರ್ನಾಟಕವೇ ನಂಬರ್ 1..!

ಈ ತೆರಿಗೆ ವಂಚನೆಯ ಪಟ್ಟಿಯಲ್ಲಿ ದಕ್ಷಿಣ ಭಾರತದ ರಾಜ್ಯಗಳೇ ಮುಂಚೂಣಿಯಲ್ಲಿವೆ.
ಕರ್ನಾಟಕ: ₹2,000 ಕೋಟಿಗೂ ಅಧಿಕ ಮೊತ್ತದ ಬಿಲ್‌ಗಳನ್ನು ಡಿಲೀಟ್ ಮಾಡುವ ಮೂಲಕ ಮೊದಲ ಸ್ಥಾನದಲ್ಲಿದೆ.
ತೆಲಂಗಾಣ: ₹1,500 ಕೋಟಿ ವಂಚನೆಯೊಂದಿಗೆ ಎರಡನೇ ಸ್ಥಾನದಲ್ಲಿದೆ.
ತಮಿಳುನಾಡು: ₹1,200 ಕೋಟಿ ತೆರಿಗೆ ಕಳ್ಳಾಟ ನಡೆಸಿದೆ. ಮಹಾರಾಷ್ಟ್ರ ಮತ್ತು ಗುಜರಾತ್ ನಂತರದ ಸ್ಥಾನಗಳಲ್ಲಿವೆ.

ಮುಂದಿನ ಕ್ರಮ ಏನು..?

ಇದು ಕೇವಲ ಮಂಜುಗಡ್ಡೆಯ ತುದಿ ಮಾತ್ರ ಇನ್ನೂ ಹಲವು ಬಿಲ್ಲಿಂಗ್ ಸಾಫ್ಟ್‌ವೇರ್‌ಗಳು ಇಂತಹದ್ದೇ ವಂಚನೆಗೆ ಸಹಕರಿಸುತ್ತಿರುವ ಶಂಕೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಂಚನೆ ಮಾಡಿದ ಹೋಟೆಲ್‌ಗಳಿಗೆ ಭಾರಿ ಮೊತ್ತದ ದಂಡದ ಜೊತೆಗೆ ಜೈಲು ಶಿಕ್ಷೆಯ ಎಚ್ಚರಿಕೆಯನ್ನು ನೀಡಲಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net