

ಚೆನ್ನೈ: ತಮಿಳುನಾಡಿನ ಸರ್ಕಾರಿ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಆಹಾರದ ಮೆನುವಿಗೆ ಸಂಬಂಧಿಸಿದಂತೆ ಹೊಸ ಪ್ರಸ್ತಾವನೆಯೊಂದು ಮುನ್ನೆಲೆಗೆ ಬಂದಿದೆ. ಸೈದಾಪೇಟೆಯಲ್ಲಿರುವ ಎಂ.ಸಿ. ರಾಜಾ ಸಾಮಾಜಿಕ ನ್ಯಾಯ ವಸತಿ ನಿಲಯದ ಸೌಲಭ್ಯಗಳನ್ನು ಪರಿಶೀಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಾಮಾಜಿಕ ನ್ಯಾಯ ಸಚಿವ ವಣ್ಣಿ ಅರಸು, ಕೆಲವು ವಿದ್ಯಾರ್ಥಿಗಳು ಮೆನುವಿನಲ್ಲಿ ಗೋಮಾಂಸವನ್ನು ಸೇರಿಸುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ನಂತರವೇ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಹಾಸ್ಟೆಲ್‌ನಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳ ಅಭಿಪ್ರಾಯಗಳು ವಿಭಿನ್ನವಾಗಿವೆ. ಪ್ರಸ್ತುತ ವಸತಿ ನಿಲಯಗಳ ಮೆನುವಿನಲ್ಲಿ ಮಟನ್ ಮತ್ತು ಚಿಕನ್‌ನಂತಹ ಮಾಂಸಾಹಾರಿ ಪದಾರ್ಥಗಳೊಂದಿಗೆ ವಾರಕ್ಕೊಮ್ಮೆ ಬಿರಿಯಾನಿ ಸೇವೆಯನ್ನು ಜಾರಿಗೆ ತರಲಾಗಿದೆ. ಆದರೆ, ಗ್ರಾಮೀಣ ಹಿನ್ನೆಲೆಯಿಂದ ಬರುವ ಕೆಲವು ವಿದ್ಯಾರ್ಥಿಗಳು ತಮ್ಮ ಊರುಗಳಲ್ಲಿ ಮಟನ್ ತುಸು ದುಬಾರಿಯಾಗಿರುವುದರಿಂದ ಅದನ್ನು ತಾವು ಹೆಚ್ಚಾಗಿ ಸೇವಿಸಿರುವುದಿಲ್ಲ ಎಂದು ತಿಳಿಸಿದ್ದಾರೆ. ಈ ಕಾರಣದಿಂದಾಗಿ ಸಾಂಪ್ರದಾಯಿಕ ಮಾಂಸಾಹಾರಿ ಆಯ್ಕೆಗಳ ಜೊತೆಗೆ ಗೋಮಾಂಸವನ್ನೂ ಮೆನುವಿಗೆ ಸೇರಿಸಬೇಕೆಂದು ಮನವಿ ಮಾಡಿದ್ದಾರೆ ಎಂದು ತಿಳಿಸಿದರು.
ವಿದ್ಯಾರ್ಥಿಗಳ ಪ್ರತಿಕ್ರಿಯೆ ಮತ್ತು ಅಭಿಪ್ರಾಯಗಳನ್ನು ಆಧರಿಸಿ ಸಮಾಜ ಕಲ್ಯಾಣ ಇಲಾಖೆಯು ಹಾಸ್ಟೆಲ್ ಮೆನುವಿನಲ್ಲಿ ಹಂತ ಹಂತವಾಗಿ ಸಕಾರಾತ್ಮಕ ಸುಧಾರಣೆಗಳನ್ನು ತರುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ. ವಿದ್ಯಾರ್ಥಿಗಳಿಗೆ ಹಿಡಿಸದ ಅಥವಾ ಅವರು ಇಷ್ಟಪಡದ ಕೆಲವು ಉಪಾಹಾರಗಳಾದ ಉಪ್ಮಾ ಮತ್ತು ಸೇಮಿಯಾ ಕಿಚಡಿಯನ್ನು ಈಗಾಗಲೇ ಮೆನುವಿನಿಂದ ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಅವುಗಳ ಬದಲಿಗೆ ವಿದ್ಯಾರ್ಥಿಗಳು ಮೆಚ್ಚುವ ಹಾಗೂ ಹೆಚ್ಚು ಪೌಷ್ಟಿಕಾಂಶಯುಕ್ತವಾದ ಇಡ್ಲಿ ಮತ್ತು ದೋಸೆಯಂತಹ ಉಪಾಹಾರ ಪದಾರ್ಥಗಳನ್ನು ಹೊಸದಾಗಿ ಸೇರ್ಪಡೆಗೊಳಿಸಲಾಗಿದೆ ಎಂದು ಸಚಿವ ವಣ್ಣಿ ಅರಸು ವಿವರಿಸಿದ್ದಾರೆ.
ಹಾಸ್ಟೆಲ್‌ನಲ್ಲಿರುವ ಎಲ್ಲಾ ವಿದ್ಯಾರ್ಥಿಗಳಲ್ಲಿ ಒಂದೇ ರೀತಿಯ ಅಭಿಪ್ರಾಯವಿಲ್ಲದೆ, ಭಿನ್ನಾಭಿಪ್ರಾಯಗಳು ವ್ಯಕ್ತವಾಗಿವೆ. ಕೆಲವರು ಬದಲಾವಣೆಯನ್ನು ಬಯಸಿದರೆ, ಇನ್ನುಳಿದವರು ಬೇರೆ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಗೋಮಾಂಸ ಸೇರ್ಪಡೆ ಮಾಡುವ ನಿರ್ಧಾರವನ್ನು ಆತುರಾತುರವಾಗಿ ಕೈಗೊಳ್ಳದೆ ಸಂಬಂಧಪಟ್ಟ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕವಷ್ಟೇ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಚಿವ ವಣ್ಣಿ ಅರಸು ಪುನರುಚ್ಚರಿಸಿದ್ದಾರೆ.
ಸರ್ಕಾರಿ ವಸತಿ ನಿಲಯಗಳ ಮೆನುವಿನಲ್ಲಿ ಗೋಮಾಂಸವನ್ನು ಸೇರಿಸುವ ಸಾಧ್ಯತೆಯಿದೆ ಎಂಬ ಸಚಿವರ ಹೇಳಿಕೆಗೆ ರಾಜಕೀಯ ವಲಯದಿಂದಲೂ ತೀವ್ರ ವಿರೋಧ ವ್ಯಕ್ತವಾಗಿದೆ. 'ಪುತಿಯ ತಮಿಳಗಂ' ಪಕ್ಷದ ಸಂಸ್ಥಾಪಕ ಹಾಗೂ ಅಧ್ಯಕ್ಷರಾದ ಡಾ. ಕೆ. ಕೃಷ್ಣಸ್ವಾಮಿ ಅವರು ಈ ಪ್ರಸ್ತಾವನೆಯನ್ನು ಬಲವಾಗಿ ವಿರೋಧಿಸಿದ್ದು, ಸರ್ಕಾರದ ಈ ನಿರ್ಧಾರವು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಪ್ರೊಟೀನ್ ಹಾಗೂ ಅಗತ್ಯ ಜೀವಸತ್ವಗಳನ್ನೊಳಗೊಂಡ ಸಮತೋಲಿತ ಮತ್ತು ಆರೋಗ್ಯಕರ ಪೌಷ್ಟಿಕ ಆಹಾರದ ಅವಶ್ಯಕತೆಯಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಚಿವರ ಈ ಪ್ರಸ್ತಾವನೆಯು ಸಾರ್ವಜನಿಕವಾಗಿ ಮತ್ತು ರಾಜಕೀಯವಾಗಿ ಚರ್ಚೆಗೆ ಗ್ರಾಸವಾಗಿದ್ದು, ಇದನ್ನು ಸಂಪೂರ್ಣವಾಗಿ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಡಾ. ಕೆ. ಕೃಷ್ಣಸ್ವಾಮಿ ಆಗ್ರಹಿಸಿದ್ದಾರೆ. ಅಲ್ಲದೆ, ಈ ವಿವಾದಾತ್ಮಕ ಹೇಳಿಕೆಯನ್ನು ಕೂಡಲೇ ವಾಪಸ್ ಪಡೆಯಬೇಕೆಂದು ಅವರು ಕರಾರು ಹಾಕಿದ್ದಾರೆ. ವಿದ್ಯಾರ್ಥಿಗಳಿಂದ ಬಂದಿರುವ ಈ ಬೇಡಿಕೆ ಹಾಗೂ ಪ್ರತಿಪಕ್ಷಗಳಿಂದ ವ್ಯಕ್ತವಾಗುತ್ತಿರುವ ವಿರೋಧದ ಹಿನ್ನೆಲೆಯಲ್ಲಿ, ಸರ್ಕಾರವು ಅಧಿಕಾರಿಗಳ ಜೊತೆ ನಡೆಸಲಿರುವ ಸಭೆಯಲ್ಲಿ ಯಾವ ರೀತಿಯ ನಿರ್ಧಾರ ಕೈಗೊಳ್ಳಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ, (ಏಜೆನ್ಸೀಸ್).