ಮಾರುಕಟ್ಟೆಯಲ್ಲಿ ಕರಡಿ ಅಬ್ಬರ: 1,000 ಪಾಯಿಂಟ್ಸ್ ಕುಸಿದ ಸೆನ್ಸೆಕ್ಸ್, ಹೂಡಿಕೆದಾರರ 4 ಲಕ್ಷ ಕೋಟಿ ಧೂಳಿಪಟ..! Stock Market Crash

ಮಾರುಕಟ್ಟೆಯಲ್ಲಿ ಕರಡಿ ಅಬ್ಬರ: 1,000 ಪಾಯಿಂಟ್ಸ್ ಕುಸಿದ ಸೆನ್ಸೆಕ್ಸ್, ಹೂಡಿಕೆದಾರರ 4 ಲಕ್ಷ ಕೋಟಿ ಧೂಳಿಪಟ..!
ಮಾರುಕಟ್ಟೆಯಲ್ಲಿ ಕರಡಿ ಅಬ್ಬರ: 1,000 ಪಾಯಿಂಟ್ಸ್ ಕುಸಿದ ಸೆನ್ಸೆಕ್ಸ್, ಹೂಡಿಕೆದಾರರ 4 ಲಕ್ಷ ಕೋಟಿ ಧೂಳಿಪಟ..!
Published on
ಮುಂಬೈ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಮಂಗಳವಾರ ಅಕ್ಷರಶಃ ರಕ್ತಪಾತ ಸಂಭವಿಸಿದೆ. ಜಾಗತಿಕ ಮಾರುಕಟ್ಟೆಯ(Stock Market Crash) ನಕಾರಾತ್ಮಕ ಅಂಶಗಳು ಮತ್ತು ಐಟಿ ವಲಯದ ಷೇರುಗಳ ಭಾರಿ ಮಾರಾಟದ ಒತ್ತಡದಿಂದಾಗಿ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ನೆಲಕಚ್ಚಿವೆ. ದಿನದಂತ್ಯಕ್ಕೆ ಬಿಎಸ್‌ಇ ಸೆನ್ಸೆಕ್ಸ್ 1,068 ಪಾಯಿಂಟ್ಸ್ ಕುಸಿದು 82,225 ಮಟ್ಟಕ್ಕೆ ತಲುಪಿದರೆ, ನಿಫ್ಟಿ50 ಸೂಚ್ಯಂಕ 288 ಪಾಯಿಂಟ್ಸ್ ಕಳೆದುಕೊಂಡು 25,425ಕ್ಕೆ ಸ್ಥಿರವಾಯಿತು.

ಮಾರುಕಟ್ಟೆ ಕುಸಿತಕ್ಕೆ ಪ್ರಮುಖ 5 ಕಾರಣಗಳು

1. ಐಟಿ ವಲಯದಲ್ಲಿ ಭಾರಿ ಮಾರಾಟ

ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಹೊಸ ಆವಿಷ್ಕಾರಗಳು ಸಾಂಪ್ರದಾಯಿಕ ಐಟಿ ಸೇವೆಗಳಿಗೆ ಧಕ್ಕೆ ತರಲಿವೆ ಎಂಬ ಆತಂಕ ಹೂಡಿಕೆದಾರರಲ್ಲಿ ಮನೆಮಾಡಿದೆ. ಅಂಥ್ರೋಪಿಕ್ ಸಂಸ್ಥೆಯ ಹೊಸ Claude Code ಬಿಡುಗಡೆಯು ಇನ್ಫೋಸಿಸ್, ಟಿಸಿಎಸ್​ ಮತ್ತು ಎಚ್‌ಸಿಎಲ್ ಟೆಕ್‌ನಂತಹ ದೈತ್ಯ ಕಂಪನಿಗಳ ಷೇರು ಮೌಲ್ಯವನ್ನು ಶೇ. 4 ರಿಂದ 6ರಷ್ಟು ಕುಸಿಯುವಂತೆ ಮಾಡಿದೆ.

2. ಟ್ರಂಪ್ ಅವರ ಟಾರಿಫ್ ಎಚ್ಚರಿಕೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಫ್ತು ಮತ್ತು ಆಮದು ಸುಂಕದ ಬಗ್ಗೆ ನೀಡಿರುವ ಹೊಸ ಎಚ್ಚರಿಕೆಗಳು ಜಾಗತಿಕ ವಾಣಿಜ್ಯ ವಲಯದಲ್ಲಿ ಆತಂಕ ಮೂಡಿಸಿವೆ. ಇದು ಭಾರತದ ರಫ್ತು ಆಧಾರಿತ ಕಂಪನಿಗಳ ಮೇಲೆ ನೇರ ಪರಿಣಾಮ ಬೀರಿದೆ.

3. ಎಫ್ ಅಂಡ್ ಓ ಎಕ್ಸ್‌ಪೈರಿ ದಿನ

ಮಾಸಿಕ ಫ್ಯೂಚರ್ಸ್ ಮತ್ತು ಆಪ್ಶನ್ಸ್ (F&O) ಒಪ್ಪಂದಗಳ ಮುಕ್ತಾಯದ ದಿನವಾಗಿದ್ದರಿಂದ ಮಾರುಕಟ್ಟೆಯಲ್ಲಿ ವಿಪರೀತ ಏರಿಳಿತ ಕಂಡುಬಂದಿದೆ. ಟ್ರೇಡರ್‌ಗಳು ತಮ್ಮ ಪೊಸಿಷನ್‌ಗಳನ್ನು ಕ್ಲೋಸ್ ಮಾಡುವ ಅವಸರದಲ್ಲಿದ್ದರಿಂದ ಮಾರಾಟದ ಒತ್ತಡ ಹೆಚ್ಚಾಯಿತು.

4. ಜಿಯೋಪೊಲಿಟಿಕಲ್ ಟೆನ್ಷನ್

ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವುದು ಮತ್ತು ಕಚ್ಚಾ ತೈಲ ಬೆಲೆಯಲ್ಲಿನ ಅನಿಶ್ಚಿತತೆ ಹೂಡಿಕೆದಾರರನ್ನು ಸುರಕ್ಷಿತ ಹೂಡಿಕೆಯತ್ತ ಮುಖಮಾಡುವಂತೆ ಮಾಡಿದೆ.

5. ರೂಪಾಯಿ ಮೌಲ್ಯ ಕುಸಿತ

ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು ಗರಿಷ್ಠ ಕುಸಿತ ಕಂಡು 90.95 ಮಟ್ಟಕ್ಕೆ ತಲುಪಿದೆ. ಇದು ವಿದೇಶಿ ಬಂಡವಾಳ ಹೂಡಿಕೆದಾರರು (FII) ಮಾರುಕಟ್ಟೆಯಿಂದ ಹಣವನ್ನು ಹಿಂತೆಗೆದುಕೊಳ್ಳಲು ಪ್ರಮುಖ ಕಾರಣವಾಯಿತು.

ಹೂಡಿಕೆದಾರರಿಗೆ ಭಾರಿ ನಷ್ಟ

ಇಂದಿನ ಒಂದೇ ದಿನದ ವಹಿವಾಟಿನಲ್ಲಿ ಹೂಡಿಕೆದಾರರ ಸುಮಾರು 4 ಲಕ್ಷ ಕೋಟಿ ರೂಪಾಯಿ ಸಂಪತ್ತು ನಾಶವಾಗಿದೆ. ಟೆಕ್ ಮಹೀಂದ್ರಾ, ಎಚ್‌ಸಿಎಲ್ ಟೆಕ್ ಮತ್ತು ಇನ್ಫೋಸಿಸ್ ಇಂದಿನ ಟಾಪ್ ಲೂಸರ್ಸ್ ಎನಿಸಿಕೊಂಡವು. ಆದರೆ, ಸನ್ ಫಾರ್ಮಾ ಮತ್ತು ಎನ್‌ಟಿಪಿಸಿ ಷೇರುಗಳು ಮಾತ್ರ ಸ್ವಲ್ಪ ಮಟ್ಟಿನ ಚೇತರಿಕೆ ಕಂಡವು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net