ಆಯ್ಕೆ ಸಮಿತಿ ಮಾತು ಕೇಳಿ ಬೆಚ್ಚಿಬಿದ್ದಿದ್ದರಂತೆ ಕ್ರಿಕೆಟ್​ ದೇವ್ರು!.. ಮಾಸ್ಟರ್ ಬ್ಲಾಸ್ಟರ್ ವೃತ್ತಿಜೀವನದ ಅಂತಿಮ ದಿನಗಳ ಕಹಿ ಸತ್ಯ ಈಗ ಬಯಲು | Sachin Tendulkar

Sachin Tendulkar | ಸಚಿನ್ ತೆಂಡೂಲ್ಕರ್ ಮತ್ತು  ಮಾಜಿ ಮುಖ್ಯ ಆಯ್ಕೆದಾರ ಸಂದೀಪ್ ಪಾಟೀಲ್
Sachin Tendulkar | ಸಚಿನ್ ತೆಂಡೂಲ್ಕರ್ ಮತ್ತು ಮಾಜಿ ಮುಖ್ಯ ಆಯ್ಕೆದಾರ ಸಂದೀಪ್ ಪಾಟೀಲ್
Published on
ಮುಂಬೈ: ಕ್ರಿಕೆಟ್ ದೇವರು ಎಂದೇ ಖ್ಯಾತರಾದ ಸಚಿನ್ ತೆಂಡೂಲ್ಕರ್ ( Sachin Tendulkar) ನಿವೃತ್ತಿಯ ವಿಷಯದಲ್ಲಿ ದಶಕದ ನಂತರ ಸ್ಪೋಟಕ ಮಾಹಿತಿಯೊಂದು ಹೊರಬಿದ್ದಿದ್ದು, 2013ರಲ್ಲಿ ಸಚಿನ್ ಸ್ವಯಂಪ್ರೇರಿತರಾಗಿ ನಿವೃತ್ತಿ ಘೋಷಿಸಿದರು ಎನ್ನುವುದನ್ನು ಜಗತ್ತು ನಂಬಿದೆ, ಆದರೆ ಅದರ ಒಂದು ವರ್ಷದ ಮೊದಲೇ ಬಿಸಿಸಿಐ ಅವರ ಬದಲಿಗೆ ಬೇರೆ ಆಟಗಾರನನ್ನು ಹುಡುಕಲು ಆರಂಭಿಸಿತ್ತು ಎಂಬ ವಿಷಯವನ್ನು ಮಾಜಿ ಮುಖ್ಯ ಆಯ್ಕೆದಾರ ಸಂದೀಪ್ ಪಾಟೀಲ್ ಬಹಿರಂಗಪಡಿಸಿದ್ದಾರೆ.

ಸಚಿನ್‌ಗೆ ಆಘಾತ ತಂದಿದ್ದ ಆ ಒಂದು ಕರೆ!

2012ರಲ್ಲಿ ಸಚಿನ್ ಬ್ಯಾಟಿಂಗ್ ಫಾರ್ಮ್ ಕುಸಿದಿತ್ತು. 9 ಟೆಸ್ಟ್ ಪಂದ್ಯಗಳಲ್ಲಿ ಅವರು ಕೇವಲ 23.80 ಸರಾಸರಿ ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಆಯ್ಕೆ ಸಮಿತಿ ಕಠಿಣ ನಿರ್ಧಾರಕ್ಕೆ ಮುಂದಾಗಿತ್ತು.
ಸಂದರ್ಶನವೊಂದರಲ್ಲಿ ಮಾತನಾಡಿದ ಸಂದೀಪ್ ಪಾಟೀಲ್, ನಾನು ಸಚಿನ್‌ಗೆ ಕರೆ ಮಾಡಿ ನಿಮ್ಮ ಮುಂದಿನ ಯೋಜನೆಯೇನು ಎಂದು ಕೇಳಿದೆ. ಅವರು ಯಾಕೆ ಎಂದು ಮರುಪ್ರಶ್ನೆ ಹಾಕಿದರು. ಸಮಿತಿಯು ನಿಮ್ಮ ಬದಲಿಗೆ ಬೇರೆ ಆಟಗಾರನನ್ನು ಹುಡುಕುತ್ತಿದೆ ಎಂದು ಹೇಳಿದಾಗ ಸಚಿನ್ ಸಂಪೂರ್ಣವಾಗಿ ಆಘಾತಕ್ಕೊಳಗಾದರು. ನೀವು ಗಂಭೀರವಾಗಿ ಹೇಳುತ್ತಿದ್ದೀರಾ ಎಂದು ಅವರು ಮತ್ತೆ ಕರೆ ಮಾಡಿ ಕೇಳಿದ್ದರು ಎಂದು ಆ ದಿನದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಆಯ್ಕೆದಾರರ ಅಧಿಕಾರ ಮತ್ತು ಸಚಿನ್ ನಿರ್ಧಾರ

ಒಬ್ಬ ಆಟಗಾರನನ್ನು ತಂಡದಿಂದ ಕೈಬಿಡುವ ಅಧಿಕಾರ ಆಯ್ಕೆದಾರರಿಗೆ ಇರುತ್ತದೆ, ಆದರೆ ನಿವೃತ್ತಿ ಹೊಂದುವಂತೆ ಒತ್ತಾಯಿಸುವ ಅಧಿಕಾರ ನಮಗಿಲ್ಲ. ನಾವು ಕೇವಲ ಅವರ ಭವಿಷ್ಯದ ಯೋಜನೆಯನ್ನು ಕೇಳಿದ್ದೆವು. ಆರಂಭದಲ್ಲಿ ಅವರು ಮುಂದುವರಿಯಲು ಬಯಸಿದ್ದರು, ಆದರೆ ನಂತರ ಅವರೇ ಕರೆ ಮಾಡಿ ನಿವೃತ್ತಿಯ ನಿರ್ಧಾರ ತಿಳಿಸಿದರು ಎಂದು ಪಾಟೀಲ್ ಹೇಳಿದ್ದಾರೆ.

ಜನರು ನಮ್ಮನ್ನು ಗುರುತಿಸುವುದೇ ಬೇರೆ ರೀತಿ..

ತಮ್ಮ ಅಧಿಕಾರಾವಧಿಯಲ್ಲಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ರವೀಂದ್ರ ಜಡೇಜಾರಂತಹ ದಿಗ್ಗಜರನ್ನು ತಂಡಕ್ಕೆ ತಂದಿದ್ದರೂ, ಜನರು ಕೇವಲ ಸಚಿನ್ ಅವರನ್ನು ತಂಡದಿಂದ ಕೈಬಿಟ್ಟವರು ಎಂದೇ ತಮ್ಮನ್ನು ಗುರುತಿಸುತ್ತಾರೆ ಎಂದು ಪಾಟೀಲ್ ಬೇಸರ ವ್ಯಕ್ತಪಡಿಸಿದ್ದಾರೆ. ಸಚಿನ್ ಅಂತಿಮವಾಗಿ 2013 ರ ನವೆಂಬರ್​​ನಲ್ಲಿ ವಾಂಖೆಡೆ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಕೊನೆಯ ಪಂದ್ಯವನ್ನಾಡಿದ್ದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net