RCB ಅಭಿಮಾನಿಗಳಿಗೆ BCCI ಬಿಗ್ ಶಾಕ್: ಚಿನ್ನಸ್ವಾಮಿಯಿಂದ ಅಹಮದಾಬಾದ್‌ಗೆ ಶಿಫ್ಟ್ ಆಯ್ತು ಐಪಿಎಲ್ 2026 ಫೈನಲ್! IPL Final 2026

RCB ಅಭಿಮಾನಿಗಳಿಗೆ BCCI ಬಿಗ್ ಶಾಕ್: ಚಿನ್ನಸ್ವಾಮಿಯಿಂದ ಅಹಮದಾಬಾದ್‌ಗೆ ಶಿಫ್ಟ್ ಆಯ್ತು ಐಪಿಎಲ್ 2026 ಫೈನಲ್!
RCB ಅಭಿಮಾನಿಗಳಿಗೆ BCCI ಬಿಗ್ ಶಾಕ್: ಚಿನ್ನಸ್ವಾಮಿಯಿಂದ ಅಹಮದಾಬಾದ್‌ಗೆ ಶಿಫ್ಟ್ ಆಯ್ತು ಐಪಿಎಲ್ 2026 ಫೈನಲ್!
Published on

ಪ್ರಮುಖ ಮುಖ್ಯಾಂಶಗಳು

  • ಅಹಮದಾಬಾದ್‌ಗೆ ಫೈನಲ್: ಮೇ 31ರಂದು ವಿಶ್ವದ ಅತಿದೊಡ್ಡ ಸ್ಟೇಡಿಯಂನಲ್ಲಿ ಐಪಿಎಲ್ 2026ರ ಕ್ಲೈಮ್ಯಾಕ್ಸ್.
  • ಬೆಂಗಳೂರಿಗೆ ಕೈಕೊಟ್ಟ ಅದೃಷ್ಟ: ಸ್ಥಳೀಯ ಅಧಿಕಾರಿಗಳ 'ಬೇಡಿಕೆ'ಗಳಿಗೆ ಬಲಿಯಾದ ಚಿನ್ನಸ್ವಾಮಿ ಕ್ರೀಡಾಂಗಣ
  • ಧರ್ಮಶಾಲಾ ಮತ್ತು ಚಂಡೀಗಢದಲ್ಲಿ ನಡೆಯಲಿವೆ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯಗಳು.
  • ಬಿಸಿಸಿಐ ಸ್ಪಷ್ಟನೆ: ಪ್ರೋಟೋಕಾಲ್ ಮೀರಿದ ಬೇಡಿಕೆಗಳಿದ್ದ ಕಾರಣವೇ ಸ್ಥಳಾಂತರದ ನಿರ್ಧಾರ.
ಬೆಂಗಳೂರು: ಕ್ರಿಕೆಟ್ ಲೋಕದ ಹಬ್ಬ ಐಪಿಎಲ್ 2026 ಈಗ ತನ್ನ ಅಂತಿಮ ಘಟ್ಟಕ್ಕೆ ತಲುಪಿದೆ. ಆದರೆ, ಈ ಹೊತ್ತಲ್ಲೇ ಕರ್ನಾಟಕದ ಕ್ರಿಕೆಟ್ ಪ್ರೇಮಿಗಳಿಗೆ (IPL Final 2026) BCCI ಬರಸಿಡಿಲಿನಂತಹ ಸುದ್ದಿಯೊಂದನ್ನು ನೀಡಿದೆ. ಮೇ 31 ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಫೈನಲ್ ಪಂದ್ಯವನ್ನು ಈಗ ಅನಿವಾರ್ಯವಾಗಿ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದೆ.

ಸಂಪ್ರದಾಯ ಮುರಿದ ಬಿಸಿಸಿಐ: ಆರ್‌ಸಿಬಿಗೆ ಅನ್ಯಾಯ..?

ಐಪಿಎಲ್ ಇತಿಹಾಸದ ಪ್ರಕಾರ, ಹಿಂದಿನ ವರ್ಷದ ಚಾಂಪಿಯನ್ ತಂಡದ ತವರು ಮೈದಾನದಲ್ಲಿ ಫೈನಲ್ ಪಂದ್ಯ ನಡೆಯುವುದು ವಾಡಿಕೆಯಾಗಿದೆ. 2025ರ ಐಪಿಎಲ್‌ನಲ್ಲಿ ಆರ್‌ಸಿಬಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದರಿಂದ, ಈ ಬಾರಿ ಬೆಂಗಳೂರು ಫೈನಲ್ ಪಂದ್ಯಕ್ಕೆ ಆತಿಥ್ಯ ವಹಿಸಬೇಕಿತ್ತು. ಆದರೆ, ಬುಧವಾರ ಹೊರಬಿದ್ದ ಪ್ಲೇ-ಆಫ್ ವೇಳಾಪಟ್ಟಿಯಲ್ಲಿ ಬೆಂಗಳೂರಿನ ಹೆಸರೇ ಮಾಯವಾಗಿದೆ. ಸತತ ಎರಡನೇ ಬಾರಿಗೆ ಅಹಮದಾಬಾದ್ ಫೈನಲ್ ಆತಿಥ್ಯ ಪಡೆಯುವಲ್ಲಿ ಯಶಸ್ವಿಯಾಗಿದೆ.

ಪ್ಲೇ-ಆಫ್ ಹಂತದ ಸಂಪೂರ್ಣ ವೇಳಾಪಟ್ಟಿ ಹೀಗಿದೆ

ಕ್ವಾಲಿಫೈಯರ್ 1: ಮೇ 26 - ಎಚ್‌ಪಿಸಿಎ ಸ್ಟೇಡಿಯಂ, ಧರ್ಮಶಾಲಾ.
ಎಲಿಮಿನೇಟರ್: ಮೇ 27- ಹೊಸ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ಹೊಸ ಚಂಡೀಗಢ (ಮುಲ್ಲನ್‌ಪುರ).
ಕ್ವಾಲಿಫೈಯರ್ 2: ಮೇ 29- ಹೊಸ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ಹೊಸ ಚಂಡೀಗಢ.
ಗ್ರ್ಯಾಂಡ್ ಫೈನಲ್: ಮೇ 31- ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್.

ಸ್ಥಳಾಂತರಕ್ಕೆ ಅಸಲಿ ಕಾರಣವೇನು? ಬಿಸಿಸಿಐ ಹೇಳುವುದೇನು?

ಬೆಂಗಳೂರಿನಿಂದ ಫೈನಲ್ ಪಂದ್ಯವನ್ನು ಕಿತ್ತುಕೊಳ್ಳಲು ಬಿಸಿಸಿಐ ನೀಡಿರುವ ಕಾರಣಗಳು ಕುತೂಹಲಕಾರಿಯಾಗಿವೆ. ಕೆಲವು ಕಾರ್ಯಾಚರಣೆ ಮತ್ತು ಲಾಜಿಸ್ಟಿಕಲ್ ಕಾರಣಗಳಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬೆಂಗಳೂರು ಮೂಲತಃ ಫೈನಲ್‌ಗೆ ನಿಗದಿಯಾಗಿತ್ತು. ಆದರೆ ಸ್ಥಳೀಯ ಸಂಸ್ಥೆಗಳು ಮತ್ತು ಅಧಿಕಾರಿಗಳ ಕೆಲವು ಬೇಡಿಕೆಗಳು ಬಿಸಿಸಿಐನ ಮಾರ್ಗಸೂಚಿ ಮತ್ತು ಪ್ರೋಟೋಕಾಲ್‌ಗಳ ವ್ಯಾಪ್ತಿಯನ್ನು ಮೀರಿವೆ. ಹೀಗಾಗಿ ಸ್ಥಳ ಬದಲಾವಣೆ ಅನಿವಾರ್ಯವಾಯಿತು ಎಂದು ಬಿಸಿಸಿಐ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಆದರೆ, ತೆರೆಮರೆಯಲ್ಲಿ ನಡೆಯುತ್ತಿರುವ ಚರ್ಚೆಗಳ ಪ್ರಕಾರ, ಕರ್ನಾಟಕದ ಶಾಸಕರು ಮತ್ತು ಅಧಿಕಾರಿಗಳು ಕೇಳಿದ ವಿಪರೀತ ಉಚಿತ ಟಿಕೆಟ್ ಬೇಡಿಕೆಗಳೇ ಇದಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ. ಬಿಸಿಸಿಐನ ಕಟ್ಟುನಿಟ್ಟಿನ ನಿಯಮಗಳಿಗೆ ಸ್ಥಳೀಯ ಆಡಳಿತದ ಒತ್ತಡಗಳು ಅಡ್ಡಿಯಾಗಿದ್ದರಿಂದ, ಬೇಸತ್ತ ಬಿಸಿಸಿಐ ಪಂದ್ಯವನ್ನೇ ಸ್ಥಳಾಂತರಿಸಲು ನಿರ್ಧರಿಸಿದೆ.

ಚಂಡೀಗಢ ಮತ್ತು ಧರ್ಮಶಾಲಾಗೆ ಲಕ್ಕಿ ಚಾನ್ಸ್!

2025ರ ರನ್ನರ್ ಅಪ್ ಪಂಜಾಬ್ ಕಿಂಗ್ಸ್ ತಂಡದ ತವರು ಮೈದಾನಗಳಾದ ಧರ್ಮಶಾಲಾ ಮತ್ತು ಹೊಸ ಚಂಡೀಗಢಕ್ಕೆ ಈ ಬಾರಿ ಲಾಟರಿ ಹೊಡೆದಿದೆ. ಮೂರು ಪ್ರಮುಖ ಪ್ಲೇ-ಆಫ್ ಪಂದ್ಯಗಳು ಈ ಮೈದಾನಗಳಲ್ಲಿ ನಡೆಯಲಿವೆ. ಉತ್ತರ ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಇದು ಸಂಭ್ರಮದ ವಿಷಯವಾದರೂ, ದಕ್ಷಿಣ ಭಾರತದ, ವಿಶೇಷವಾಗಿ ಕರ್ನಾಟಕದ ಅಭಿಮಾನಿಗಳಿಗೆ ಇದು ಅತೀವ ನಿರಾಸೆ ಮೂಡಿಸಿದೆ.

ಬೆಂಗಳೂರು ಅಭಿಮಾನಿಗಳ ಆಕ್ರೋಶ

ನಮ್ಮ ತಂಡ ಚಾಂಪಿಯನ್ ಆಗಿದ್ದರೂ ನಮಗೆ ಫೈನಲ್ ಪಂದ್ಯ ನೋಡುವ ಭಾಗ್ಯವಿಲ್ಲವೇ ಎಂದು ಆರ್‌ಸಿಬಿ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಕಿಡಿಕಾರುತ್ತಿದ್ದಾರೆ. ಅಹಮದಾಬಾದ್ ವಿಶ್ವದ ದೊಡ್ಡ ಕ್ರೀಡಾಂಗಣ ಎಂಬ ಕಾರಣಕ್ಕೆ ಪದೇಪದೆ ಅಲ್ಲಿಗೇ ಫೈನಲ್ ನೀಡಲಾಗುತ್ತಿದೆ ಎಂಬ ಆರೋಪಗಳೂ ಕೇಳಿಬರುತ್ತಿವೆ. 
ಕ್ರೀಡೆಗಿಂತ ಮಿಗಿಲಾಗಿ ಸವಲತ್ತು ಮತ್ತು ಪ್ರಭಾವದ ರಾಜಕೀಯ ಇಲ್ಲಿ ಕೆಲಸ ಮಾಡಿದೆಯೇ ಎಂಬ ಅನುಮಾನ ಈಗ ದಟ್ಟವಾಗಿದೆ. ಏನೇ ಇರಲಿ, ಈ ಬಾರಿಯ ಐಪಿಎಲ್ ಕಿಂಗ್ ಯಾರು ಎಂಬುದು ಅಹಮದಾಬಾದ್‌ನ ಮಣ್ಣಿನಲ್ಲಿ ನಿರ್ಧಾರವಾಗಲಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net