ಒಳನುಸುಳುಕೋರನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಕ್ಕೆ ಗಡಿಯಲ್ಲಿ ಭಾರತೀಯ ರೈತನನ್ನು ಅಪಹರಿಸಿದ ಬಾಂಗ್ಲಾ ಪ್ರಜೆಗಳು | Indian farmer

ದೀಪಂಕರ್ ಗೋಪೆ
ದೀಪಂಕರ್ ಗೋಪೆ
Published on
ಕೋಲ್ಕತ್ತಾ: ಎರಡು ದಿನಗಳ ಹಿಂದೆ ಒಳನುಸುಳಿದ ಓರ್ವನನ್ನು ಹಿಡಿದು ಗಡಿ ಭದ್ರತಾ ಪಡೆಗೆ(ಬಿಎಸ್​ಎಫ್​) ಒಪ್ಪಿಸಿದ್ದಕ್ಕೆ ಪ್ರತೀಕಾರವಾಗಿ ಪಶ್ಚಿಮ ಬಂಗಾಳದ ಜಲ್‌ಪೈಗುರಿಯ 35 ವರ್ಷದ ಚಹಾ ರೈತನನ್ನು(Indian farmer) ಬಾಂಗ್ಲಾದೇಶದ ಪ್ರಜೆಗಳು ಅಪಹರಿಸಿದ್ದಾರೆ ಎಂದು ಸೋಮವಾರ(ಆ. 10) ವರದಿಯಾಗಿದೆ.
ಬಿಎಸ್‌ಎಫ್‌ನ ಚೌಲ್ಹತಿ ಹೊರಠಾಣೆಯ ಗಡಿ ಬೇಲಿಯಿಂದ 150 ಗಜಗಳ ದೂರದಲ್ಲಿರುವ ತಸರ್ ಪಾರಾ ಗ್ರಾಮದಲ್ಲಿ ದೀಪಂಕರ್ ಗೋಪೆ ಎಂಬ ರೈತ ತಮ್ಮ ಚಹಾ ತೋಟವನ್ನು ನೋಡಿಕೊಳ್ಳುತ್ತಿದ್ದಾಗ ಸುಮಾರು 20 ಜನರ ಬಾಂಗ್ಲಾ ಗುಂಪು ಅವರನ್ನು ಒತ್ತೆಯಾಳಾಗಿ ಇರಿಸಿಕೊಂಡಿದೆ ಎಂದು ಆರೋಪಿಸಲಾಗಿದೆ.
ಬಳಿಕ ಆ ಗುಂಪು ಗೋಪೆ ಅವರನ್ನು ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಬಾಂಗ್ಲಾದೇಶದ ಪಂಚಗಢ ಜಿಲ್ಲೆಗೆ ಕರೆದೊಯ್ದು ಬಾಂಗ್ಲಾದೇಶದ ಗಡಿ ಕಾವಲು ಪಡೆಯ (ಬಿಜಿಬಿ) ವಶಕ್ಕೆ ನೀಡಿದೆ ಎನ್ನಲಾಗಿದೆ. ಮತ್ತು ಈ ಘಟನೆಯಿಂದ ಭಾರತ-ಬಾಂಗ್ಲಾ ಗಡಿ ಪ್ರದೇಶದಲ್ಲಿ ಉದ್ವಿಗ್ನತೆ ಉಂಟಾಗಿದೆ.
ಕಳೆದ ಗುರುವಾರ ಚೌಲ್ಹತಿ ಗಡಿಯಲ್ಲಿ ಮುಳ್ಳುತಂತಿ ಬೇಲಿಯನ್ನು ಕತ್ತರಿಸಿ ಭಾರತಕ್ಕೆ ನುಸುಳಲು ಯತ್ನಿಸುತ್ತಿದ್ದ ಬಾಂಗ್ಲಾದೇಶದ ವ್ಯಕ್ತಿಯೊಬ್ಬನನ್ನು ದೀಪಂಕರ್ ಗೋಪೆ ಹಿಡಿದು ಬಿಎಸ್‌ಎಫ್​​ಗೆ ಮಾಹಿತಿ ನೀಡಿದ ನಂತರ ಈ ಘಟನೆ ನಡೆದಿದೆ.

ಅಪಹರಣದ ವಿಡಿಯೋ ಬಿಡುಗಡೆ

ಒಳನುಸುಳುಕೋರನನ್ನು ಹಿಡಿದ ಪ್ರತೀಕಾರವಾಗಿ ಗೋಪೆ ಅವರನ್ನು ಅಪಹರಿಸಲಾಗಿದೆ ಎಂದು ಅವರ ಕುಟುಂಬ ಆರೋಪಿಸಿದೆ. ಇನ್ನೂ ಬಿಎಸ್‌ಎಫ್ ಬಂಧಿಸಿದ ಬಾಂಗ್ಲಾದೇಶದ ಒಳನುಗ್ಗುವವ ತಮೀಜ್ ಉದ್ದೀನ್‌ನನ್ನು ಭಾರತ ಬಿಡುಗಡೆ ಮಾಡಿದರೆ ತನ್ನನ್ನು ಸೆರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ಗೋಪ್ ಹೇಳುತ್ತಿರುವ ವೀಡಿಯೊ ಬಿಡುಗಡೆಯಾಗಿದೆ.
ಇನ್ನೂ ಗೋಪ್ ಬಿಜಿಬಿಯ ವಶದಲ್ಲಿದ್ದಾರೆ ಎನ್ನಲಾಗಿದೆ. ಘಟನೆಯ ಬಳಿಕ ಬಿಎಸ್ಎಫ್ ಅವರ ಬಿಡುಗಡೆಗೆ ಶ್ರಮಿಸಿತು. ಮತ್ತು ಶನಿವಾರ ಸಂಜೆ ಬಿಜಿಬಿಯೊಂದಿಗೆ ಧ್ವಜ ಸಭೆ ನಡೆಸಿತು. ಆದಾಗ್ಯೂ, ರೈತನನ್ನು ಶನಿವಾರ ರಾತ್ರಿಯವರೆಗೆ ಬಿಡುಗಡೆ ಮಾಡಲಾಗಿಲ್ಲ. ಈಗಲೂ ರೈತ ಬಿಜಿಬಿ ಕಸ್ಟಡಿಯಲ್ಲಿದ್ದಾರೆ ಎಂದು ವರದಿಯಾಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net