ಬಾಂಗ್ಲಾದೇಶ ಹಿಂದೂಗಳು ರಾಜಕೀಯವಾಗಿಯೂ ಅಂತ್ಯ!

Bangladesh
Bangladesh
Published on
ಬಾಂಗ್ಲಾದೇಶದಲ್ಲಿ ಫೆಬ್ರವರಿ 16ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಹಿಂದೂಗಳ ಕೊಲೆ, ಮಹಿಳೆಯರ ಮೇಲೆ ಅತ್ಯಾಚಾರದಂಥ ಅಮಾನವೀಯ ಹಾಗೂ ಹೇಯ ಕೃತ್ಯಗಳು ಮುಂದುವರಿದಿವೆ. ಅಷ್ಟೇ ಅಲ್ಲ, ಹಿಂದೂಗಳನ್ನು ರಾಜಕೀಯವಾಗಿ ಮುಗಿಸುವ ಷಡ್ಯಂತ್ರವೂ ನಡೆದಿದೆ. ಚುನಾವಣೆಗೆ ಸ್ಪರ್ಧಿಸಲು ಯಾವುದೇ ಪಕ್ಷ ಹಿಂದೂಗಳಿಗೆ ಟಿಕೆಟ್ ನೀಡುತ್ತಿಲ್ಲ. ಕೆಲ ಅಭ್ಯರ್ಥಿಗಳು ಧೈರ್ಯ ಮಾಡಿ, ಪಕ್ಷೇತರರಾಗಿ ಸ್ಪರ್ಧಿಸಲು ಮುಂದಾದರೂ, ಅಂಥವರ ನಾಮಪತ್ರವನ್ನು ಸಕಾರಣ ನೀಡದೆ ತಿರಸ್ಕರಿಸಲಾಗಿದೆ. ಹಿಂದೂಗಳ ದನಿಗೆ, ಬೇಡಿಕೆಗೆ ಯಾವುದೇ ಮನ್ನಣೆ ಸಿಗುತ್ತಿಲ್ಲ. ಪಾಕಿಸ್ತಾನದಲ್ಲೂ ಇದೇ ರೀತಿ ಹಿಂದೂಗಳ ರಾಜಕೀಯ ಅಧಿಕಾರವನ್ನು ಕೊನೆಗೊಳಿಸಲಾಗಿತ್ತು. ಅದೇ ನೀತಿ ಬಾಂಗ್ಲಾದೇಶದಲ್ಲಿ ಮರುಕಳಿಸುತ್ತಿದೆ.
ಸಂಸತ್ತಿನಲ್ಲಿ ಹಿಂದೂಗಳ ದನಿ ಮೊಳಗಿದರೆ ತಾನೇ ಹಿಂದೂಗಳಿಗೆ ನ್ಯಾಯ ಸಿಗಲು ಸಾಧ್ಯ? ಹಾಗಾಗಿ, ಹಿಂದೂಗಳು ಸಂಸತ್ತಿಗೆ ತಲುಪದಂತೆ ಬಾಂಗ್ಲಾದೇಶದ ರಾಜಕೀಯ ಪಕ್ಷಗಳು ತಂತ್ರಗಾರಿಕೆ ಹೆಣೆದಿವೆ. ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್​ಪಿ) ಸೇರಿದಂತೆ ಯಾವುದೇ ರಾಜಕೀಯ ಪಕ್ಷ ಹಿಂದೂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲು ಮುಂದಾಗುತ್ತಿಲ್ಲ. ಬಾಂಗ್ಲಾದೇಶವೂ ಪಾಕಿಸ್ತಾನದಂತೆ ಮೂಲಭೂತವಾದಿಗಳ ದೇಶವಾಗಿ ಬದಲಾಗಿದ್ದು, ಹಿಂದೂ ವಿರೋಧಿ ಭಾವನೆ ಎಲ್ಲ ಕಡೆ ಕಂಡುಬರುತ್ತಿದೆ. ಪಕ್ಷೇತರರಾಗಿ ಸ್ಪರ್ಧೆಗೆ ಇಳಿಯೋಣವೆಂದರೂ, ಅಂಥವರ ನಾಮಪತ್ರಗಳನ್ನೇ ತಿರಸ್ಕೃತಗೊಳಿಸಲಾಗುತ್ತಿದೆ. ರಾಜಕೀಯವಾಗಿ ಹಿಂದೂಗಳ ದನಿಯನ್ನು ಇಲ್ಲವಾಗಿಸಿದರೆ, ಮೂಲಭೂತವಾದಿ ವಿಚಾರಧಾರೆ ಹಾಗೂ ಮೂಲಭೂತವಾದಿಗಳ ಆಡಳಿತಕ್ಕೆ ಯಾವುದೇ ಅಡ್ಡಿ ಬರುವುದಿಲ್ಲ ಎಂಬ ಷಡ್ಯಂತ್ರ ಹೆಣೆಯಲಾಗಿದೆ. ಈ ಕುರಿತಂತೆ ಹಂತ-ಹಂತವಾಗಿ ವಿವಿಧ ಬೆಳವಣಿಗೆಗಳು ಬಯಲಿಗೆ ಬರುತ್ತಿವೆ.
ಗೋವಿಂದಚಂದ್ರ ಪ್ರಮಾಣಿಕ್ ವೃತ್ತಿಯಲ್ಲಿ ಖ್ಯಾತ ವಕೀಲರು ಮತ್ತು ಬಾಂಗ್ಲಾದೇಶ ಜಾತೀಯ ಹಿಂದೂ ಮಹಾಜೋತ್​ನ ನಾಯಕರು, ಪ್ರಧಾನ ಕಾರ್ಯದರ್ಶಿಗಳು. ರಾಜಧಾನಿ ಢಾಕಾದ ಗೋಪಾಲ್​ಗಂಜ್ ಕ್ಷೇತ್ರದಿಂದ ಮಾಜಿ ಪ್ರಧಾನಿ ಶೇಖ್ ಹಸೀನಾ ಚುನಾವಣೆಗೆ ಸ್ಪರ್ಧಿಸುತ್ತಿದ್ದರು. ಇದೇ ಗೋಪಾಲ್​ಗಂಜ್ ಕ್ಷೇತ್ರದಿಂದ ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಗೋವಿಂದಚಂದ್ರ ನಾಮಪತ್ರ ಸಲ್ಲಿಸಿದ್ದರು. ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವವರು ತಮ್ಮ ಕ್ಷೇತ್ರದ ಮತದಾರರ ಸಂಖ್ಯೆಯ ಶೇಕಡ 1ರಷ್ಟು ಮತದಾರರ ಸಹಿಯನ್ನು ಪಡೆದು, ಅದನ್ನು ನಾಮಪತ್ರದ ಜತೆ ದಾಖಲು ಮಾಡಬೇಕು ಎನ್ನುವುದು ಚುನಾವಣಾ ಆಯೋಗದ ನಿಯಮ. ಅದರಂತೆ ಗೋವಿಂದಚಂದ್ರ ಮೂರು ಸಾವಿರ ಮತದಾರರ ಸಹಿಯೊಂದಿಗೆ ನಾಮಪತ್ರವನ್ನು ದಾಖಲು ಮಾಡಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಕ್ಷದ (ಬಿಎನ್​ಪಿ) ಕಾರ್ಯಕರ್ತರು ಗೋಪಾಲ್​ಗಂಜ್ ಕ್ಷೇತ್ರದ ಮತದಾರರಿಗೆ ಬಂಧನದ ಬೆದರಿಕೆ ಹಾಕಿದ್ದಾರೆ, ನಾಮಪತ್ರ ಹಿಂಪಡೆಯುವಂತೆ ಗೋವಿಂದಚಂದ್ರ ಅವರ ಮೇಲೂ ಒತ್ತಡ ಹೇರಿದ್ದಾರೆ. ಚುನಾವಣಾ ಆಯೋಗದ ಅಧಿಕಾರಿಗಳು ಢಾಕಾದ ಗೋಪಾಲ್​ಗಂಜ್ ಕ್ಷೇತ್ರಕ್ಕೆ ಭೇಟಿ ನೀಡಿ ಮತದಾರರನ್ನು ಪ್ರಶ್ನಿಸಿದಾಗ, ಬಿಎನ್​ಪಿ ಬೆದರಿಕೆಯಿಂದ ಹೆದರಿದ್ದ ಅವರು, ‘ಸಹಿ ಮಾಡಿದ್ದು ನಾವಲ್ಲ’ ಎಂದಿದ್ದಾರೆ. ಪರಿಣಾಮ, ಗೋವಿಂದಚಂದ್ರ ಅವರ ನಾಮಪತ್ರ ತಿರಸ್ಕೃತಗೊಂಡಿದೆ.
‘ಇದು ಒಬ್ಬ ಅಭ್ಯರ್ಥಿಯ ವ್ಯಥೆಯಲ್ಲ. ಈ ಬಾರಿ ಹಿಂದೂಗಳು ಸಂಸತ್ ಪ್ರವೇಶಿಸಬಾರದು ಎಂದು ರಾಜಕೀಯ ಪಕ್ಷಗಳು ಹೀಗೆ ಮಾಡುತ್ತಿವೆ. ಹಿಂದೂಗಳು ಸಂಸತ್ ಪ್ರವೇಶಿಸುವುದನ್ನು ಇಲ್ಲಿನ ಮೂಲಭೂತವಾದಿ ಮುಸ್ಲಿಮರು ಸಹಿಸುವುದಿಲ್ಲ’ ಎಂದು ಆರೋಪಿಸಿರುವ ಗೋವಿಂದಚಂದ್ರ, ಚುನಾವಣಾ ಆಯೋಗವೂ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಯಾವ ಪಕ್ಷ ಅಧಿಕಾರದಲ್ಲಿ ಇರುತ್ತದೆಯೋ, ಅದರ ಒತ್ತಡದಂತೆ ಆಯೋಗ ಕಾರ್ಯನಿರ್ವಹಿಸುತ್ತದೆ ಎಂದಿದ್ದಾರೆ.
ಮಾಧ್ಯಮಗಳ ಜತೆ ಮಾತನಾಡಿ ಬಾಂಗ್ಲಾದಲ್ಲಿ ಹಿಂದೂಗಳು ಎದುರಿಸುತ್ತಿರುವ ಬವಣೆಯನ್ನು ವಿವರಿಸಿರುವ ಅವರು, ಮೊದಲಿನಿಂದಲೂ ಇಲ್ಲಿನ ರಾಜಕೀಯ ಪಕ್ಷಗಳು ಹಿಂದೂಗಳನ್ನು ಕಡೆಗಣಿಸಿಕೊಂಡೇ ಬಂದಿವೆ. ಈ ಬಾರಿಯಂತೂ ಸ್ಥಿತಿ ಮತ್ತಷ್ಟು ಹದಗೆಟ್ಟಿದೆ. ಹಿಂದೂಗಳು ಗೆದ್ದು ಬಂದರೆ, ಸಂಸತ್​ನಲ್ಲಿ ಹಿಂದೂಗಳ ರಕ್ಷಣೆಯ ಬಗ್ಗೆ, ಅವರ ಹಕ್ಕುಗಳ ಬಗ್ಗೆ ದನಿ ಎತ್ತುತ್ತಾರೆ. ಅದನ್ನು ತಡೆಯುವ ಉದ್ದೇಶದಿಂದಲೇ ಹೀಗೆ ಮಾಡಲಾಗುತ್ತಿದೆ ಎಂದು ವಿವರಿಸಿದ್ದಾರೆ. ಅಲ್ಲದೆ, ಹಿಂದೂ ನಾಯಕ ತಾಪೇಶ್ ಹಲ್ದಾರ್ ಕೂಡ ನಾಮಪತ್ರ ಸಲ್ಲಿಸಿದ್ದರು. ಆದರೆ, ಅವರು ನಾಮಪತ್ರ ಹಿಂಪಡೆಯಲು ನಿರಾಕರಿಸಿದ್ದರಿಂದ, ಅವರನ್ನು ಬಂಧಿಸಲಾಗಿದೆ. ಇನ್ನೆರಡು ಕ್ಷೇತ್ರಗಳಲ್ಲಿ ಹಿಂದೂ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸುತ್ತಿದ್ದಂತೆ, ಅವರಿಗೆ ಬೆದರಿಕೆ ಒಡ್ಡಲಾಗಿದೆ.
ಏಕಪಕ್ಷೀಯ ಚುನಾವಣೆ?
ಅಷ್ಟಕ್ಕೂ ಚುನಾವಣೆ ನಿಷ್ಪಕ್ಷಪಾತವಾಗಿ ನಡೆಯಲಿದೆಯೇ ಎಂಬ ಬಗ್ಗೆ ದಟ್ಟ ಅನುಮಾನಗಳು ಮೂಡಿವೆ. ಅಲ್ಲದೆ, ಚುನಾವಣೆಯ ಎರಡು ತಿಂಗಳು ಮುಂಚೆಯೇ ಅಂದರೆ 2025ರ ಡಿಸೆಂಬರ್​ನಿಂದಲೇ ಬಾಂಗ್ಲಾದೇಶದಲ್ಲಿ ಹಿಂಸಾಚಾರ, ಅಶಾಂತಿ ತಾರಕಕ್ಕೆ ಏರಿದೆ. ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದೌರ್ಜನ್ಯ ಮುಂದುವರಿದಿದೆ. ಕಳೆದ ಮೂರು ವಾರಗಳಲ್ಲೇ ಆರು ಹಿಂದೂಗಳ ಭೀಕರ ಹತ್ಯೆ ಮಾಡಲಾಗಿದೆ. ಓರ್ವ ಹಿಂದೂ ವಿಧವೆಯ ಮೇಲೆ ಅತ್ಯಾಚಾರ ನಡೆಸಲಾಗಿದೆ. ಹಿಂದೂಗಳ ವ್ಯಾಪಾರ ಕೇಂದ್ರಗಳ ಮೇಲೆ, ಮಂದಿರಗಳ ಮೇಲೆ ದಾಳಿ ಮಾಡಲಾಗಿದೆ. ಹಿಂದೂಗಳು ಮನೆ ಬಿಟ್ಟು ಆಚೆ ಬರಲು ಆತಂಕ ಪಡುವ ಸ್ಥಿತಿ ಇದ್ದು, ಪ್ರಾಣಭಯದಲ್ಲೇ ಬದುಕುತ್ತಿದ್ದಾರೆ.
ಅವಾಮಿ ಲೀಗ್ ಸ್ಪರ್ಧಿಸುವಂತಿಲ್ಲ: ಚುನಾವಣೆ ಎಂದರೆ ರಾಜಕೀಯ ಜಿದ್ದಾಜಿದ್ದಿ ಸಹಜ. ಆದರೆ, ಈ ಬಾರಿ ಬಾಂಗ್ಲಾದೇಶದಲ್ಲಿ ಈ ಸ್ಪರ್ಧೆಯೇ ಇಲ್ಲದೆ ಏಕಪಕ್ಷೀಯ ಚುನಾವಣೆ ನಡೆಯಲಿದೆ. ಏಕೆಂದರೆ, ಶೇಖ್ ಹಸೀನಾ ನೇತೃತ್ವದ ಬಾಂಗ್ಲಾದೇಶ ಅವಾಮಿ ಲೀಗ್ ಪಕ್ಷದ ನೋಂದಣಿಯನ್ನೇ ಚುನಾವಣಾ ಆಯೋಗ 2025ರ ಮೇನಲ್ಲಿ ಅಮಾನತ್ತು ಮಾಡಿದೆ. ಹೀಗಾಗಿ, ಈ ಚುನಾವಣೆಯಲ್ಲಿ ಅವಾಮಿ ಲೀಗ್ ಸ್ಪರ್ಧಿಸುವಂತಿಲ್ಲ.

ಚುನಾವಣೆ ಮುನ್ನವೇ ಅಶಾಂತಿ

ಶೇಖ್ ಹಸೀನಾ ನೇತೃತ್ವದ ಬಾಂಗ್ಲಾದೇಶ ಅವಾಮಿ ಲೀಗ್ (ಬಿಎಎಲ್) 2024ರ ಜನವರಿಯಲ್ಲಿ ನಡೆದ ಸಂಸತ್ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಗಳಿಸಿತ್ತು. ಈ ಮೂಲಕ ಶೇಖ್ ಹಸೀನಾ ನಾಲ್ಕನೇ ಬಾರಿ ಪ್ರಧಾನಿ ಹುದ್ದೆ ಏರಿದ್ದರು. ಆದರೆ, 2024ರ ಜುಲೈನಲ್ಲಿ ಆರಂಭವಾದ ವಿದ್ಯಾರ್ಥಿಗಳ ಪ್ರತಿಭಟನೆ ದೇಶಾದ್ಯಂತ ವ್ಯಾಪಿಸಿ ಆಗಸ್ಟ್​ನಲ್ಲಿ ಹಿಂಸಾಚಾರದ ರೂಪ ತಳೆಯಿತು. ದೇಶ ತೊರೆಯದಿದ್ದರೆ ರಾಜಕೀಯ ವಿರೋಧಿಗಳು ಹತ್ಯೆ ಮಾಡಿಬಿಡುತ್ತಾರೆ ಎಂಬ ಆತಂಕದಿಂದ 2024ರ ಆಗಸ್ಟ್ 5ರಂದು ಶೇಖ್ ಹಸೀನಾ ಬಾಂಗ್ಲಾದೇಶ ತೊರೆದು ಭಾರತದಲ್ಲಿ ರಾಜಕೀಯ ಆಶ್ರಯ ಪಡೆದುಕೊಂಡರು. ಅವರು ದೇಶ ತೊರೆದ ಮೂರನೇ ದಿನಕ್ಕೆ ಅಂದರೆ ಆ.8ರಂದು ಅರ್ಥಶಾಸ್ತ್ರಜ್ಞ ಮೊಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ರಚನೆಯಾಯಿತು. ‘ಆರು ತಿಂಗಳಲ್ಲೇ ಸಾರ್ವತ್ರಿಕ ಚುನಾವಣೆ ನಡೆಸಲಾಗುವುದು’ ಎಂದು ಯೂನಸ್ ಆಶ್ವಾಸನೆ ನೀಡುತ್ತಲೇ ಬಂದರು. ಆದರೆ, ಪದೇಪದೆ ಈ ಗಡುವನ್ನು ವಿಸ್ತರಿಸಲಾಯಿತು. ಕೊನೆಗೂ, ಮಧ್ಯಂತರ ಸರ್ಕಾರ ರಚನೆಯಾದ 18 ತಿಂಗಳ ನಂತರ ಬಾಂಗ್ಲಾದೇಶದಲ್ಲಿ ಚುನಾವಣೆ ನಡೆಯಲಿದೆ. ಫೆಬ್ರವರಿ 16ರ ಮುಹೂರ್ತ ನಿಗದಿಯಾಗಿದ್ದು, ಚುನಾವಣಾ ಆಯೋಗ ಸರ್ವ ಸಿದ್ಧತೆ ನಡೆಸುತ್ತಿದೆ. 350 ಸದಸ್ಯಬಲದ ಸಂಸತ್ತಿನಲ್ಲಿ 50 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.

ಯೂನಸ್ ಮುಂದಿನ ದಾರಿ ಏನು?

ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನಸ್ ಅವರ ಮುಂದಿನ ದಾರಿ ಏನಿರಲಿದೆ ಎಂಬುದರ ಬಗ್ಗೆ ಈಗ ಕುತೂಹಲ ಮೂಡಿದೆ. ಕಳೆದ ಹದಿನೆಂಟು ತಿಂಗಳುಗಳಿಂದ ಅಧಿಕಾರದ ಸವಿ ಕಂಡಿರುವ ಅರ್ಥಶಾಸ್ತ್ರಜ್ಞ ಮೊಹಮ್ಮದ್ ಯೂನಸ್ ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರ ಘಟನೆಗಳನ್ನೇ ನಿಮಿತ್ತವಾಗಿಟ್ಟುಕೊಂಡು ಚುನಾವಣೆ ಮುಂದೂಡಬಹುದು ಎಂಬ ಅಭಿಪ್ರಾಯ ವ್ಯಾಪಕ ಪ್ರಮಾಣದಲ್ಲಿ ಕೇಳಿಬರುತ್ತಿದೆ. ಚುನಾವಣೆಯನ್ನು ಮುಂದೂಡಿದಷ್ಟು ತಮ್ಮ ತಂತ್ರಗಾರಿಕೆ ಮತ್ತು ಕಾರ್ಯನೀತಿಯನ್ನು ಯೂನಸ್ ಅನುಷ್ಠಾನಗೊಳಿಸಬಹುದು ಎಂಬ ವಿಶ್ಲೇಷಣೆ ಕೇಳಿಬಂದಿದೆ. ಇದಕ್ಕೆ ತದ್ವಿರುದ್ಧವಾದ ಅಭಿಪ್ರಾಯವೂ ಇದೆ. ಮೊಹಮ್ಮದ್ ಯೂನಸ್ ವಿದ್ಯಾರ್ಥಿ ಸಂಘಟನೆಗಳಿಂದ ತೀವ್ರ ಒತ್ತಡವನ್ನು ಎದುರಿಸುತ್ತಿದ್ದಾರೆ. ಹಿಂಸಾಚಾರ ನಿಯಂತ್ರಿಸಲು ವಿಫಲವಾಗಿದ್ದಾರೆ. ಹಿಂದೂಗಳ ಮೇಲೆ ನಡೆಯುತ್ತಿರುವ ನಿರಂತರ ದಾಳಿಯಿಂದ ಜಾಗತಿಕ ಮಟ್ಟದಲ್ಲಿ ಬಾಂಗ್ಲಾದೇಶದ ವರ್ಚಸ್ಸು ಕುಂದಿದೆ. ಜತೆಗೆ, ಅಮೆರಿಕ, ಚೀನಾದ ಹಸ್ತಕ್ಷೇಪ ತಲೆನೋವು ತಂದಿದೆ. ಹೀಗಾಗಿ, ಒಮ್ಮೆ ಚುನಾ ವಣೆ ನಡೆಸಿ, ಗೆದ್ದವರ ಕೈಗೆ ಅಧಿಕಾರ ಹಸ್ತಾಂತರಿಸಿ, ಲಂಡನ್​ಗೆ ಮರಳ ಬಹುದು ಎಂಬ ತರ್ಕ ಯೂನಸ್ ಅವರದ್ದು.

ಬಿಎನ್​ಪಿ ಪಕ್ಷದ ಅಲೆ

ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿಯ (ಬಿಎನ್​ಪಿ) ಮುಖ್ಯಸ್ಥೆ ಖಾಲಿದಾ ಜಿಯಾ ದೀರ್ಘಕಾಲದ ಅನಾರೋಗ್ಯದಿಂದ ಕಳೆದ ವಾರ (ಡಿಸೆಂಬರ್ 30) ಅಸುನೀಗಿದ್ದಾರೆ. ಖಾಲಿದಾ ಜಿಯಾ ಪುತ್ರ ತಾರಿಕ್ ರಹಮಾನ್ ಬಿಎನ್​ಪಿ ಪಕ್ಷವನ್ನು ಮುನ್ನಡೆಸಲಿದ್ದಾರೆ. ಲಂಡನ್​ನಲ್ಲಿ ನೆಲೆಸಿದ್ದ ತಾರಿಕ್ ರಹಮಾನ್ 17 ವರ್ಷಗಳ ದೀರ್ಘಾವಧಿಯ ಬಳಿಕ ಡಿಸೆಂಬರ್ 25ರಂದು ಬಾಂಗ್ಲಾದೇಶಕ್ಕೆ ಮರಳಿದ್ದಾರೆ. ಅಂದು ವಿಮಾನ ನಿಲ್ದಾಣದಲ್ಲಿ ಅವರ ಸ್ವಾಗತಕ್ಕಾಗಿ ಬಿಎನ್​ಪಿಯ ಒಂದು ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಸೇರಿದ್ದರು. ರೋಡ್ ಶೋ ನಡೆಸಿ ಬಳಿಕ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದ ತಾರಿಕ್ ರಹಮಾನ್, ‘ಬಾಂಗ್ಲಾದೇಶ ಮುಸ್ಲಿಂ, ಹಿಂದೂ, ಕ್ರೖೆಸ್ತ ಸೇರಿದಂತೆ ಎಲ್ಲರಿಗೂ ಸೇರಿದೆ’ ಎಂದು ಹೇಳುವ ಮೂಲಕ ‘ಸೆಕ್ಯುಲರ್’ ಸಂದೇಶ ಸಾರಲು ಯತ್ನಿಸಿದ್ದರು. ಢಾಕಾ-17 ಹಾಗೂ ಬೊಗುರಾ-6 ಕ್ಷೇತ್ರದಿಂದ ತಾರಿಕ್ ರಹಮಾನ್ ಡಿಸೆಂಬರ್ 29ರಂದು ನಾಮಪತ್ರ ಸಲ್ಲಿಸಿದ್ದಾರೆ. ಬೊಗುರಾ-6 ಕ್ಷೇತ್ರವು ರಹಮಾನ್ ತಾಯಿ ಖಾಲಿದಾ ಜಿಯಾರದ್ದಾಗಿದೆ. ಬಾಂಗ್ಲಾದೇಶದ ಮಾಧ್ಯಮ ವರದಿಗಳ ಪ್ರಕಾರ, ಬಿಎನ್​ಪಿಯಿಂದ ತಾರಿಕ್ ರಹಮಾನ್ ಪ್ರಧಾನಮಂತ್ರಿ ಅಭ್ಯರ್ಥಿ ಆಗಲಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net