ಭಾರತದ ವಿರುದ್ಧ ನಾಲಿಗೆ ಹರಿಬಿಟ್ಟ ಬಾಂಗ್ಲಾ ನಾಯಕ: ತೀಕ್ಷ್ಣ ಪ್ರತಿಕ್ರಿಯೆ ಕೊಟ್ಟ ಅಸ್ಸಾಂ CM ಹಿಮಂತ ಬಿಸ್ವಾ!

Assam CM Himanta Biswa
Assam CM Himanta Biswa
Published on
ನವದೆಹಲಿ: ಈಶಾನ್ಯ ಭಾರತದಿಂದ 7 ರಾಜ್ಯಗಳನ್ನು "ಕತ್ತರಿಸುವುದಾಗಿ" ಬಾಂಗ್ಲಾದೇಶದ ನ್ಯಾಷನಲ್ ಸಿಟಿಜನ್ ಪಾರ್ಟಿ (NCP) ನಾಯಕ ಹಸ್ನತ್ ಅಬ್ದುಲ್ಲಾ ಹೇಳಿಕೆಗೆ ಇದೀಗ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಬಾಂಗ್ಲಾದೇಶದಲ್ಲಿ ಕಳೆದ ಒಂದು ವರ್ಷದಿಂದ ಈಶಾನ್ಯ ಭಾರತವನ್ನು ಬೇರ್ಪಡಿಸಿ ಬಾಂಗ್ಲಾದೇಶಕ್ಕೆ ವಿಲೀನಗೊಳಿಸುವಂತಹ ಚರ್ಚೆಗಳು ನಡೆಯುತ್ತಿವೆ. ಇದು ಸಂಪೂರ್ಣ ತಪ್ಪು ಮತ್ತು ಅಪಾಯಕಾರಿ ಎಂದಿದ್ದಾರೆ.
ಭಾರತವು ಪರಮಾಣು ಶಕ್ತಿ ಹೊಂದಿದ ದೇಶ ಮತ್ತು ವಿಶ್ವದ ನಾಲ್ಕನೇ ದೊಡ್ಡ ಆರ್ಥಿಕತೆ. ಬಾಂಗ್ಲಾದೇಶ ಇಂತಹ ಯೋಚನೆ ಮಾಡುವುದು ಸಹ ತಪ್ಪು. ಭಾರತದ ಈಶಾನ್ಯ ಭಾಗವನ್ನು ಅಸ್ಥಿರಗೊಳಿಸಲು ಯಾರಾದರೂ ಪ್ರಯತ್ನಿಸಿದರೆ ಭಾರತ ಸುಮ್ಮನಿರುವುದಿಲ್ಲ ಎಂದು ಕಿಡಿಕಾರಿದ್ದಾರೆ.

ಬಾಂಗ್ಲಾ ನಾಯಕ ಹೇಳಿದ್ದೇನು..?

ಭಾರತದ ಈಶಾನ್ಯ ರಾಜ್ಯಗಳಾದ ಸೆವೆನ್ ಸಿಸ್ಟರ್ಸ್ (ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ತ್ರಿಪುರಾ) ಅನ್ನು ಭಾರತದಿಂದ "ಕತ್ತರಿಸುವುದಾಗಿ" ಬಾಂಗ್ಲಾದೇಶದ ನ್ಯಾಷನಲ್ ಸಿಟಿಜನ್ ಪಾರ್ಟಿ (NCP) ನಾಯಕ ಹಸ್ನತ್ ಅಬ್ದುಲ್ಲಾ ಹೇಳಿಕೆ ನೀಡಿದ್ದಾರೆ.
ಸೋಮವಾರ (ಡಿಸೆಂಬರ್ 15) ಢಾಕಾದ ಸೆಂಟ್ರಲ್ ಶಹೀದ್ ಮಿನಾರ್‌ನಲ್ಲಿ ನಡೆದ ಸಮಾವೇಶದಲ್ಲಿ ಅಬ್ದುಲ್ಲಾ ನಾಲಿಗೆ ಹರಿಬಿಟ್ಟಿದ್ದಾರೆ. "ನಾವು ಭಾರತ-ವಿರೋಧಿ ಮತ್ತು ವಿಭಜನವಾದಿ ಶಕ್ತಿಗಳಿಗೆ ಆಶ್ರಯ ನೀಡಿ, ಭಾರತದ ಸೆವೆನ್ ಸಿಸ್ಟರ್ಸ್ ಅನ್ನು ಕತ್ತರಿಸಿ ಬಿಡುತ್ತೇವೆ." ಸಭೆಯಲ್ಲಿ ಕೆಲವರು ಚಪ್ಪಾಳೆ ತಟ್ಟಿದ್ದಾರೆ. ಈ ಹೇಳಿಕೆಯು ಬಾಂಗ್ಲಾದೇಶದಲ್ಲಿ ಭಾರತದ ವಿರುದ್ಧದ ಆಂತರಿಕ ರಾಜಕೀಯ ಒತ್ತಡದಿಂದ ಬಂದಿದ್ದು, ಭಾರತವು ಬಾಂಗ್ಲಾದೇಶವನ್ನು ಅಸ್ಥಿರಗೊಳಿಸುತ್ತಿದೆ ಎಂಬ ಆರೋಪದೊಂದಿಗೆ ಸಂಬಂಧಿಸಿದೆ. ಆದರೆ, ಇದು ಭಾರತದ ಈಶಾನ್ಯ ಭಾಗದ ಸುರಕ್ಷತೆಗೆ ಸಂಬಂಧಿಸಿದ ಗಂಭೀರ ವಿಷಯವಾಗಿದೆ, ಏಕೆಂದರೆ ಈ ಏಳು ರಾಜ್ಯಗಳಲ್ಲಿ ನಾಲ್ಕು (ಅಸ್ಸಾಂ, ಮೇಘಾಲಯ, ತ್ರಿಪುರಾ, ಮಿಜೋರಾಂ) ಬಾಂಗ್ಲಾದೇಶದೊಂದಿಗೆ ಗಡಿ ಹಂಚಿಕೊಂಡಿವೆ.
ಈ ಘಟನೆಯು ಭಾರತ-ಬಾಂಗ್ಲಾದೇಶ ಸಂಬಂಧಗಳಲ್ಲಿ ಉದ್ವಿಗ್ನತೆ ಹೆಚ್ಚಿಸಿದ್ದು, ಶೇಖ್ ಹಸೀನಾ ಅವರ ಅಧಿಕಾರಾವಧಿಯ ನಂತರದಿಂದಲೂ ಇಂತಹ ಹೇಳಿಕೆಗಳು ಹೆಚ್ಚಾಗಿವೆ. ಆದರೆ ಇದು ರಾಜಕೀಯ ಉದ್ದೇಶದಿಂದ ಕೂಡಿದ್ದು, ವಾಸ್ತವಿಕ ಧಕ್ಕೆಯಾಗುವ ಸಾಧ್ಯತೆ ಕಡಿಮೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net