ಬಲವಂತದ ದುಡಿಮೆಯ ಉತ್ಪನ್ನಗಳ ಆಮದು ನಿಷೇಧ; ವಿದೇಶಿ ವ್ಯಾಪಾರ ನೀತಿಗೆ ಮಹತ್ವದ ತಿದ್ದುಪಡಿ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ವಿದೇಶಿ ವ್ಯಾಪಾರ ನೀತಿಗೆ ಮಹತ್ವದ ತಿದ್ದುಪಡಿ
  • ಅಮೆರಿಕದಿಂದ ಸುಂಕ ಇಳಿಕೆ ಸಾಧ್ಯತೆ

ನವದೆಹಲಿ: ಬಲವಂತದ ದುಡಿಮೆಯ ಕಾರ್ವಿುಕ ಪದ್ಧತಿ (ಫೋರ್ಸ್ಡ್ ಲೇಬರ್) ಬಳಸಿ ಉತ್ಪಾದಿಸಿದ ಸರಕುಗಳ ಆಮದನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಭಾರತ ಸೇರಿದಂತೆ 60 ದೇಶಗಳಲ್ಲಿನ ಕಡ್ಡಾಯ ಕಾರ್ವಿುಕ ಪದ್ಧತಿಯ ಕುರಿತು ಅಮೆರಿಕ ತನಿಖೆ ನಡೆಸುತ್ತಿರುವ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. 

ಕೇಂದ್ರ ಸರ್ಕಾರ ತನ್ನ ‘ವಿದೇಶಿ ವ್ಯಾಪಾರ ನೀತಿ 2023’ಕ್ಕೆ ತಿದ್ದುಪಡಿ ತಂದಿದ್ದು, ಜುಲೈ 13ರ ಗೆಜೆಟ್ ಅಧಿಸೂಚನೆಯಲ್ಲಿ ಈ ಹೊಸ ನಿಯಮವನ್ನು ಸೇರಿಸಿದೆ. ಈ ನಿಯಮ ಅಧಿಕೃತವಾಗಿ ಪ್ರಕಟಗೊಂಡ 30 ದಿನಗಳ ನಂತರ ಜಾರಿಗೆ ಬರಲಿದೆ. ಈ ಹೊಸ ತಿದ್ದುಪಡಿ ತಕ್ಷಣವೇ ಯಾವುದೇ ದೇಶ ಅಥವಾ ಉತ್ಪನ್ನದ ಮೇಲೆ ನೇರ ನಿಷೇಧ ಹೇರಿಲ್ಲ. ಬದಲಿಗೆ, ಭವಿಷ್ಯದಲ್ಲಿ ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯ ನಡೆಸುವ ತನಿಖೆ ಅಥವಾ ಲಭ್ಯವಾಗುವ ಪುರಾವೆಗಳ ಆಧಾರದ ಮೇಲೆ ನಿರ್ದಿಷ್ಟ ಸರಕುಗಳ ಆಮದನ್ನು ನಿಷೇಧಿಸಲು ಸರ್ಕಾರಕ್ಕೆ ಇದು ಅಧಿಕಾರ ನೀಡುತ್ತದೆ. 

ಅಂತಾರಾಷ್ಟ್ರೀಯ ಕಾರ್ವಿುಕ ಸಂಸ್ಥೆಯ 1930ರ ಸಮಾವೇಶದ ನಿಯಮಾವಳಿಗಳ ಅನ್ವಯ ಬಲವಂತದ ದುಡಿಮೆ ಪದ್ಧತಿಗೆ ಇಲ್ಲಿ ವ್ಯಾಖ್ಯಾನ ನೀಡಲಾಗಿದೆ. ಇಂತಹ ಉತ್ಪನ್ನಗಳ ಆಮದು ತಡೆಯದ ಕಾರಣಕ್ಕೆ ಭಾರತ ಸೇರಿದಂತೆ 54 ದೇಶಗಳ ಮೇಲೆ ಶೇ. 12.5ರಷ್ಟು ಹೆಚ್ಚುವರಿ ಸುಂಕ ವಿಧಿಸಲು ಅಮೆರಿಕ ಇತ್ತೀಚೆಗೆ ಪ್ರಸ್ತಾಪಿಸಿದೆ. ಆದರೆ, ಈಗಾಗಲೇ ಇಂತಹ ನಿಷೇಧಾತ್ಮಕ ಕ್ರಮ ಕೈಗೊಂಡಿರುವ ಕೆನಡಾ, ಐರೋಪ್ಯ ಒಕ್ಕೂಟ, ಪಾಕಿಸ್ತಾನ ಸೇರಿದಂತೆ 6 ದೇಶಗಳಿಗೆ ಶೇ. 10ರಷ್ಟು ಸುಂಕ ಪ್ರಸ್ತಾಪಿಸಲಾಗಿದೆ. ಪ್ರಸ್ತುತ ಭಾರತ-ಅಮೆರಿಕ ನಡುವೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮಾತುಕತೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net