ಭಾರತ ಮಾತ್ರವಲ್ಲ, ನೇಪಾಳ ಕೂಡ ಭಾರತದ ಭೂಭಾಗವನ್ನು ಅತಿಕ್ರಮಿಸಿದೆ: ನೇಪಾಳ ಪ್ರಧಾನಿ ಬಾಲೆನ್ ಶಾ ಹೇಳಿಕೆ! | Encroached

Encroached
Encroached
Published on
ಕಾಠ್ಮಂಡು: ಭಾರತ ಮತ್ತು ನೇಪಾಳ ನಡುವಿನ ಗಡಿ ವಿವಾದ ಮತ್ತೆ ಮುಂಚೂಣಿಗೆ ಬಂದಿದೆ. ಈ ಬಾರಿ ನೇಪಾಳದ ಯುವ ಪ್ರಧಾನಿ ಬಾಲೇಂದ್ರ 'ಬಾಲೆನ್' ಶಾ ಅವರು ಸಂಸತ್ತಿನಲ್ಲಿ ನೀಡಿರುವ ವಿವಾದಾತ್ಮಕ ಹೇಳಿಕೆಯೊಂದು ಅವರ ಸ್ವದೇಶದಲ್ಲೇ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. "ಭಾರತ ಮಾತ್ರವಲ್ಲ, ನೇಪಾಳ ಕೂಡ ಭಾರತದ ಭೂಭಾಗವನ್ನು(Encroached) ಅತಿಕ್ರಮಿಸಿದೆ" ಎಂದು ಪ್ರಧಾನಿ ಶಾ ಹೇಳಿರುವುದು ನೇಪಾಳ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ.
ನೇಪಾಳದ ಅತ್ಯಂತ ಕಿರಿಯ ಪ್ರಧಾನಿಯಾಗಿ ಇತ್ತೀಚೆಗಷ್ಟೇ ಅಧಿಕಾರ ವಹಿಸಿಕೊಂಡ 35 ವರ್ಷದ ಬಾಲೆನ್ ಶಾ, ಮೊದಲ ಬಾರಿಗೆ ಸಂಸತ್ತನ್ನು ಉದ್ದೇಶಿಸಿ ಮಾತನಾಡುವಾಗ ಈ ಹೇಳಿಕೆ ನೀಡಿದ್ದಾರೆ.

ಪ್ರಧಾನಿ ಬಾಲೆನ್ ಶಾ ಸಂಸತ್ತಿನಲ್ಲಿ ಹೇಳಿದ್ದೇನು?

ಲಿಪುಲೇಖ್, ಲಿಂಪಿಯಾಧುರಾ ಮತ್ತು ಕಾಲಾಪಾನಿ ಗಡಿ ವಿವಾದದ ಕುರಿತು ಮಾತನಾಡಿದ ಪ್ರಧಾನಿ, "ನಾನು ಪ್ರಧಾನಿಯಾದ ಬಳಿಕವಷ್ಟೇ ನನಗೊಂದು ಆಘಾತಕಾರಿ ಸತ್ಯ ತಿಳಿಯಿತು. ಭಾರತವು ನೇಪಾಳದ ಭೂಮಿಯನ್ನು ಅತಿಕ್ರಮಿಸಿದೆ ಎಂದು ನಾವು ಭಾವಿಸಿದ್ದೇವೆ. ಆದರೆ, ನೇಪಾಳ ಕೂಡ ಭಾರತದ ಭೂಭಾಗವನ್ನು ಹಲವು ಕಡೆಗಳಲ್ಲಿ ಅತಿಕ್ರಮಣ ಮಾಡಿದೆ. ಈಗ ಉಭಯ ದೇಶಗಳು ಸ್ನೇಹಿತರಂತೆ ಕುಳಿತು, ಇತಿಹಾಸಕಾರರು ಮತ್ತು ತಜ್ಞರ ನೆರವು ಪಡೆದು ಈ ಗಡಿ ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕು" ಎಂದಿದ್ದಾರೆ. ಅಲ್ಲದೆ ಈ ಕುರಿತು ಬ್ರಿಟನ್ ಮತ್ತು ಚೀನಾ ಸರ್ಕಾರದೊಂದಿಗೂ ಮಾತುಕತೆ ನಡೆಸಿರುವುದಾಗಿ ಅವರು ತಿಳಿಸಿದ್ದಾರೆ.

ಡ್ಯಾಮೇಜ್ ಕಂಟ್ರೋಲ್‌ಗೆ ಇಳಿದ ನೇಪಾಳ ವಿದೇಶಾಂಗ ಇಲಾಖೆ!

ಪ್ರಧಾನಿ ಹೇಳಿಕೆ ದೇಶಾದ್ಯಂತ ವಿವಾದ ಸೃಷ್ಟಿಸುತ್ತಿದ್ದಂತೆ ಎಚ್ಚೆತ್ತ ನೇಪಾಳ ವಿದೇಶಾಂಗ ಸಚಿವಾಲಯವು ಗಡಿಬಿಡಿಯಲ್ಲಿ ಸ್ಪಷ್ಟನೆ ನೀಡಿದೆ. ಪ್ರಧಾನಿಯವರು 'ಅತಿಕ್ರಮಣ' ಎಂದು ಉಲ್ಲೇಖಿಸಿದ್ದು ಅಧಿಕೃತ ಗಡಿಯನ್ನಲ್ಲ, ಬದಲಿಗೆ ಗಡಿ ಭಾಗದ 'ನೋ-ಮ್ಯಾನ್ಸ್ ಲ್ಯಾಂಡ್' (ದಸಗಜಾ ಪ್ರದೇಶ) ನಲ್ಲಿ ಉಭಯ ದೇಶಗಳ ಗಡಿ ಗ್ರಾಮಗಳ ಜನರು ಪರಸ್ಪರ ಭೂಮಿ ಬಳಸಿ ಕೃಷಿ ಮಾಡುತ್ತಿರುವುದನ್ನು ಎಂದು ಸಮಜಾಯಿಷಿ ನೀಡಿದೆ. ಗಡಿ ಕಂಬಗಳು ನಾಪತ್ತೆಯಾಗಿರುವುದರಿಂದ ಈ ಗೊಂದಲ ಉಂಟಾಗಿದೆಯೇ ಹೊರತು ನೇಪಾಳ ಅಧಿಕೃತವಾಗಿ ಭಾರತದ ಭೂಮಿಯನ್ನು ಆಕ್ರಮಿಸಿಲ್ಲ ಎಂದು ಇಲಾಖೆ ಹೇಳಿದೆ.

ಸ್ವಪಕ್ಷ ಹಾಗೂ ವಿರೋಧ ಪಕ್ಷಗಳಿಂದ ತೀವ್ರ ವಿರೋಧ!

ಪ್ರಧಾನಿ ಬಾಲೆನ್ ಶಾ ಅವರ ಈ ಬೇಜವಾಬ್ದಾರಿ ಹೇಳಿಕೆಗೆ ನೇಪಾಳದ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ನೇಪಾಳಿ ಕಾಂಗ್ರೆಸ್‌ನ ಬಾಸನಾ ಥಾಪಾ ಮತ್ತು ಕಮ್ಯುನಿಸ್ಟ್ ಪಕ್ಷದ ರಮೇಶ್ ಮಲ್ಲಾ ಸೇರಿದಂತೆ ಹಲವು ನಾಯಕರು, ಪ್ರಧಾನಿ ಹೇಳಿಕೆಯನ್ನು ಸಂಸತ್ತಿನ ದಾಖಲೆಗಳಿಂದ ತೆಗೆದುಹಾಕಬೇಕು ಇಲ್ಲವೇ ಅವರು ಸಾಕ್ಷಿ ಒದಗಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಮಾಜಿ ವಿದೇಶಾಂಗ ಸಚಿವ ಪ್ರದೀಪ್ ಗ್ಯಾವಾಲಿ ಅವರು ಪ್ರಧಾನಿ ದೇಶದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ಗಡಿ ತಜ್ಞ ಬುದ್ಧಿನಾರಾಯಣ್ ಶ್ರೇಷ್ಠ ಹಾಗೂ ಮಾಜಿ ರಾಯಭಾರಿಗಳಾದ ನೀಲಂಬರ ಆಚಾರ್ಯ ಮತ್ತು ದೀಪ್ ಕುಮಾರ್ ಉಪಾಧ್ಯಾಯ ಅವರು ಪ್ರಧಾನಿ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ. "ನೇಪಾಳ ಎಂದಿಗೂ ಭಾರತದ ಭೂಮಿಯನ್ನು ಆಕ್ರಮಿಸಿಲ್ಲ. ಭಾರತ ಸರ್ಕಾರ ಕೂಡ ಈವರೆಗೆ ಇಂತಹ ಯಾವುದೇ ಆರೋಪವನ್ನು ಅಧಿಕೃತವಾಗಿ ಮಾಡಿಲ್ಲ. ಪ್ರಧಾನಿಯವರಿಗೆ ಗಡಿ ವಿಷಯದ ಬಗ್ಗೆ ಸರಿಯಾದ ಮಾಹಿತಿ ಇಲ್ಲ" ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೈಲಾಶ್ ಮಾನಸಸರೋವರ ರಸ್ತೆ ವಿವಾದದ ಹಿನ್ನೆಲೆ

ಕಳೆದ ಕೆಲವು ವಾರಗಳ ಹಿಂದಷ್ಟೇ ಲಿಪುಲೇಖ್ ಮೂಲಕ ಭಾರತ ಕೈಲಾಶ್ ಮಾನಸಸರೋವರ ಯಾತ್ರೆಗೆ ರಸ್ತೆ ನಿರ್ಮಿಸಿದ್ದನ್ನು ನೇಪಾಳ ಅಧಿಕೃತವಾಗಿ ವಿರೋಧಿಸಿತ್ತು. 1816 ರ ಸುಗೌಲಿ ಒಪ್ಪಂದದ ಪ್ರಕಾರ ಲಿಪುಲೇಖ್, ಲಿಂಪಿಯಾಧುರಾ ಮತ್ತು ಕಾಲಾಪಾನಿ ತನಗೆ ಸೇರಿದ್ದು ಎಂದು ನೇಪಾಳ ವಾದಿಸುತ್ತಿದೆ. ಆದರೆ ಭಾರತವು ಇದನ್ನು ನೇಪಾಳದ "ಕೃತಕ ನಕ್ಷೆ ವಿಸ್ತರಣೆ" ಎಂದು ತಳ್ಳಿಹಾಕಿದೆ. ಈ ಹಳೇ ವಿವಾದದ ನಡುವೆಯೇ ಈಗ ಸ್ವತಃ ನೇಪಾಳ ಪ್ರಧಾನಿಯೇ ಇಂತಹ ಹೇಳಿಕೆ ನೀಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ,(ಏಜೆನ್ಸೀಸ್​ ).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net