

ನವದೆಹಲಿ: ಪ್ರಧಾನಿ ಮೋದಿ ಅಲ್ಲ, ಅವರಪ್ಪನೂ ಹೋಗ್ತಾನೆ ಎಂಬ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಯನ್ನು ಖಂಡಿಸಿರುವ ಕೇಂದ್ರ ಸಚಿವ ರಾಜನಾಥ್ ಸಿಂಗ್, ಇದು ಭಾರತಕ್ಕೆ ಮಾಡಿದ ಅವಮಾನ ಮತ್ತು ರಾಜಕೀಯದ ಘನತೆಯ ಮೇಲಿನ ದಾಳಿ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಸೋಮವಾರ(ಅ. 26) ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಇದು ಕೇವಲ ಒಬ್ಬ ವ್ಯಕ್ತಿ ಅಥವಾ ಕುಟುಂಬಕ್ಕೆ ಮಾಡಿದ ಅವಮಾನವಲ್ಲ, ಬದಲಾಗಿ ಭಾರತಕ್ಕೇ ಮಾಡಿದ ಅವಮಾನ. ಇದು ರಾಜಕೀಯದ ಘನತೆಯ ಮೇಲಿನ ದಾಳಿಯೂ ಆಗಿದೆ. ಪ್ರಜಾಪ್ರಭುತ್ವದಲ್ಲಿ, ನಿಮ್ಮ ವಿರೋಧವನ್ನು ದಾಖಲಿಸಬಹುದು. ನೀತಿಗಳನ್ನು ಪ್ರಶ್ನಿಸಬಹುದು ಮತ್ತು ಸರ್ಕಾರವನ್ನು ಟೀಕಿಸಬಹುದು. ಆದರೆ ದಯವಿಟ್ಟು ವೈಯಕ್ತಿಕ ಸಭ್ಯತೆಯ ಮಿತಿಗಳನ್ನು ದಾಟಬೇಡಿ ಎಂದಿದ್ದಾರೆ.
ಪ್ರಧಾನಿ ಮೋದಿಯವರು ಇಂತಹ ಹೇಳಿಕೆಗಳಿಂದ ಪ್ರಭಾವಿತರಾಗಲು ಸಾಧ್ಯವಿಲ್ಲ. ಮತ್ತು ಜನರ ಸೇವೆ ಮಾಡುವ ಅವರ ಸಂಕಲ್ಪ ದುರ್ಬಲಗೊಳ್ಳುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಸಾರ್ವಜನಿಕರು ಎಲ್ಲವನ್ನೂ ಗಮನಿಸುತ್ತಾರೆ. ಮತ್ತು ಸಮಯ ಬಂದಾಗ ಸೂಕ್ತ ಉತ್ತರ ನೀಡುತ್ತಾರೆ ಎಂಬುದನ್ನು ಕಾಂಗ್ರೆಸ್ ನೆನಪಿನಲ್ಲಿಡಬೇಕು ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ, ಕಾಂಗ್ರೆಸ್ನವರು ತಮ್ಮ ತಪ್ಪನ್ನು ಒಪ್ಪಿಕೊಂಡು ವಿಷಾದ ವ್ಯಕ್ತಪಡಿಸುವ ಬದಲು, ಖರ್ಗೆಯವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ಮೂಲಕ ಜನರ ಭಾವನೆಗಳಿಗೆ ಮತ್ತಷ್ಟು ನೋವುಂಟು ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಾಟ್ನಾದಲ್ಲಿ ಭಾನುವಾರ ಬಿಹಾರದ ಮೊದಲ ಸಿಎಂ ಕೃಷ್ಣ ಸಿಂಗ್ ಅವರ 139ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಲ್ಲಿಕಾರ್ಜುನ ಖರ್ಗೆಯವರು, ಭಾಷಣ ಮಾಡುತ್ತಿದ್ದ ವೇಳೆ, ಸಭಿಕರೊಬ್ಬರು ದಂಗೆ ಏಳದ ಹೊರತು ಮೋದಿ ಹೋಗಲ್ಲ ಎಂದು ಕೂಗಿದರು. ಇದಕ್ಕೆ ಸಿಟ್ಟಿನಿಂದ ಪ್ರತಿಕ್ರಿಯೆ ನೀಡಿದ್ದ ಖರ್ಗೆಯವರು, ಪ್ರಧಾನಿ ಮೋದಿ ಅಲ್ಲ, ಅವರಪ್ಪನೂ ಹೋಗ್ತಾನೆ ಎಂದಿದ್ದರು. ಇದು ಈಗ ರಾಜಕೀಯ ವಿವಾದವಾಗಿ ಮಾರ್ಪಟ್ಟಿದೆ (ಏಜೆನ್ಸೀಸ್).