ಅಯೋಧ್ಯೆ ರಾಮಮಂದಿರ ಹುಂಡಿ ಲೂಟಿ! 8 ಆರೋಪಿಗಳಿಗೆ 3 ದಿನ ನ್ಯಾಯಾಂಗ ಬಂಧನ; ಟ್ರಸ್ಟ್‌ನ ಸದಸ್ಯರು ರಾಜೀನಾಮೆ

ಅಯೋಧ್ಯೆ ರಾಮ ಮಂದಿರ ಹುಂಡಿ ಲೂಟಿ ಪ್ರಕರಣ
ಅಯೋಧ್ಯೆ ರಾಮ ಮಂದಿರ ಹುಂಡಿ ಲೂಟಿ ಪ್ರಕರಣ
Published on

ಪ್ರಮುಖ ಮುಖ್ಯಾಂಶಗಳು

  • ಅಯೋಧ್ಯೆ ರಾಮಮಂದಿರ ದೇಣಿಗೆ ದುರ್ಬಳಕೆ
  • ಲೂಟಿ ಹೊಡೆದ 8 ಆರೋಪಿಗಳಿಗೆ ನ್ಯಾಯಾಂಗ ಬಂಧನ
  • ಟ್ರಸ್ಟ್​ನ ಪ್ರಧಾನ ಕಾರ್ಯದರ್ಶಿ ಚಂಪತ್, ಟ್ರಸ್ಟಿ ಅನಿಲ್​​ ರಾಜೀನಾಮೆ
ಅಯೋಧ್ಯೆ: ರಾಮಮಂದಿರ ದೇಣಿಗೆ ದುರ್ಬಳಕೆ ಪ್ರಕರಣದಲ್ಲಿ 8 ಆರೋಪಿಗಳಿಗೆ ಫರಿದಾಬಾದ್​ ನ್ಯಾಯಾಲಯ​ ಮೂರು ದಿನಗಳ ನ್ಯಾಯಾಂಗ ಬಂಧನ ವಿಧಿಸಿದ್ದು, ಪ್ರಕರಣ ಬೆನ್ನಲ್ಲೇ ಟ್ರಸ್ಟ್​ನ​ ಪ್ರಧಾನ ಕಾರ್ಯದರ್ಶಿ ಚಂಪತ್ ಮತ್ತು ಟ್ರಸ್ಟಿ ಅನಿಲ್ ತಮ್ಮ ಸ್ಥಾನಗಳಿಗೆ​ ದಿಢೀರ್​​ ರಾಜೀನಾಮೆ ನೀಡಿದ್ದಾರೆ.
ಈ ಹಗರಣದ ಕುರಿತು ರಚಿಸಲಾದ ವಿಶೇಷ ತನಿಖಾ ತಂಡದ (ಎಸ್‌ಐಟಿ) ಪ್ರಾಥಮಿಕ ವರದಿಯು ದೇಣಿಗೆ ನಿರ್ವಹಣೆ ಮತ್ತು ಮೇಲ್ವಿಚಾರಣೆಯಲ್ಲಿ ಗಂಭೀರ ಲೋಪಗಳನ್ನು ಬಟಾಬಯಲು ಮಾಡಿದ ಬೆನ್ನಲ್ಲೇ ಟ್ರಸ್ಟ್‌ನ ಪ್ರಮುಖ ಸದಸ್ಯರಾದ ಚಂಪತ್ ರಾಯ್ ಮತ್ತು ಅನಿಲ್ ಮಿಶ್ರಾ ತಮ್ಮ ಹುದ್ದೆಗಳಿಗೆ ರಾಜೀನಾಮೆ ಘೋಷಿಸಿರುವುದು ಸದ್ಯ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ.
ಸಿಎಂ ಯೋಗಿ ಆದಿತ್ಯನಾಥ್​ ಆದೇಶದ ಮೇರೆಗೆ ತನಿಖೆ ಚುರುಕುಗೊಂಡಿದ್ದು, ಆರೋಪಿಗಳ ಬಂಧನದಿಂದ ಒತ್ತಡ ಹೆಚ್ಚಿದ ಹಿನ್ನೆಲೆಯಲ್ಲಿ ಸದಸ್ಯರು ತಮ್ಮ ಹುದ್ದೆಯಿಂದ ತಕ್ಷಣವೇ ಕೆಳಗಿಳಿದಿರುವುದು ಸ್ಪಷ್ಟವಾಗಿದೆ. ಈ ಸಂಪೂರ್ಣ ಪ್ರಕರಣದಲ್ಲಿ ಎಸ್‌ಐಟಿಯ ಶಿಫಾರಸ್ಸಿನಂತೆ ಈಗಾಗಲೇ ಮೊದಲ ಎಫ್‌ಐಆರ್ ದಾಖಲಾಗಿದ್ದು, ಮಾಜಿ ಟ್ರಸ್ಟಿ ಕಾಮೇಶ್ವರ ಚೌಪಾಲ್ ಅವರ ಸಾವಿನ ನಂತರ ಸೆಪ್ಟೆಂಬರ್ 2025ರಲ್ಲಿ ಈ ಮಂಡಳಿಗೆ ಬಂದ ಹೊಸ ಟ್ರಸ್ಟ್ ಸದಸ್ಯ ಕೃಷ್ಣ ಮೋಹನ್ ಅವರು ಅಧಿಕೃತವಾಗಿ ದೂರನ್ನು ಸಲ್ಲಿಸಿದರು.

ಸುಮ್ಮನೆ ಬಿಡುವ ಮಾತಿಲ್ಲ

ಅಯೋಧ್ಯೆ ರಾಮಮಂದಿರ ದೇಣಿಗೆ ದುರ್ಬಳಕೆ ಪ್ರಕರಣ ದೇಶಾದ್ಯಂತ ಭಾರೀ ಸಂಚಲನ ಮೂಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಿಡಿಗೇಡಿಗಳ ವಿರುದ್ಧ ಖಾರವಾಗಿ ಪ್ರತಿಕ್ರಿಯಿಸಿದ್ದು, ಭಕ್ತರ ನಂಬಿಕೆ ಮತ್ತು ಸನಾತನ ಧರ್ಮದ ಮೌಲ್ಯಗಳ ಜೊತೆ ಆಟವಾಡಿದರೆ, ಯಾರನ್ನೂ ಸುಮ್ಮನೆ ಬಿಡುವ ಮಾತಿಲ್ಲ. ಜನರ ನಂಬಿಕೆಗಳನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುವವರ ವಿರುದ್ಧ ನಮ್ಮ ಸರ್ಕಾರ ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸುತ್ತದೆ ಎಂದು ಒತ್ತಿ ಹೇಳಿದರು.

ಹಿಡನ್​ ಕ್ಯಾಮರಾಗಳಿಂದ ಕಳ್ಳ ಕೆಲಸ ಪತ್ತೆ

ಟ್ರಸ್ಟ್ ಅಧಿಕಾರಿಗಳು ದೇವಾಲಯದ ದೇಣಿಗೆ ಎಣಿಕೆ ಕೊಠಡಿಯೊಳಗೆ ರಹಸ್ಯ ಕ್ಯಾಮರಾಗಳನ್ನು ಅಳವಡಿಸಿದ ಬಳಿಕ ಈ ಲೂಟಿಯ ಜಾಲ ಬಯಲಾಗಿದೆ. ಹಿಡನ್​ ಕ್ಯಾಮರಾ ಕಣ್ಗಾವಲಿನಲ್ಲಿ ಉದ್ಯೋಗಿಗಳು ದೇಣಿಗೆ ಬಾಕ್ಸ್​ಗಳಿಂದ ನಗದು ಮತ್ತು ಆಭರಣಗಳನ್ನು ಅಧಿಕೃತವಾಗಿ ಪಟ್ಟಿಗೆ ಸೇರಿಸುವ ಮೊದಲು ಹೇಗೆ ದರೋಡೆ ಮಾಡುತ್ತಿದ್ದರು ಎಂಬುದು ಸ್ಪಷ್ಟವಾಗಿ ಗೊತ್ತಾಗಿದೆ. ಈ ಸಾಕ್ಷ್ಯಗಳಿಂದಲೇ ಹುಂಡಿ ಕಳ್ಳತನ ಪ್ರಕರಣದಲ್ಲಿ ಒಟ್ಟು 8 ಆರೋಪಿಗಳನ್ನು ಖಾಕಿ ಅರೆಸ್ಟ್ ಮಾಡಿದೆ.
ದೇವಸ್ಥಾನದ ದೇಣಿಗೆ ದುರ್ಬಳಕೆ ಆರೋಪದ ಬಗ್ಗೆ ತನಿಖೆ ಕೈಗೊಂಡಿರುವ ಎಸ್‌ಐಟಿ ಪ್ರಾಥಮಿಕ ವರದಿ ಸಲ್ಲಿಸುತ್ತಿದ್ದಂತೆಯೇ ಸರ್ಕಾರ ಮಿಂಚಿನ ವೇಗದಲ್ಲಿ ಕ್ರಮ ಕೈಗೊಳ್ಳಲು ಆರಂಭಿಸಿತು. ಈ ಪ್ರಕರಣದಲ್ಲಿ ಎಫ್‌ಐಆರ್‌ನಲ್ಲಿ ದಾಖಲಾಗಿರುವ ಎಂಟು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಟ್ರಸ್ಟಿ ಕೃಷ್ಣ ಮೋಹನ್ ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳ ವಿರುದ್ಧ ಕಳ್ಳತನ, ನಂಬಿಕೆ ದ್ರೋಹ, ಪಿತೂರಿ ಮತ್ತು ಭ್ರಷ್ಟಾಚಾರದಂತಹ ಪ್ರಮುಖ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.

ಇವರೇ ಆ 8 ಆರೋಪಿಗಳು

ಎಂಟು ಆರೋಪಿಗಳಾದ ಅವಿನಾಶ್ ಶುಕ್ಲಾ, ಅನುಕಲ್ಪ್ ಮಿಶ್ರಾ, ಲವಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ, ರಾಮಶಂಕರ್ ಮಿಶ್ರಾ, ಸುಭಾಷ್ ಶ್ರೀವಾಸ್ತವ ಮತ್ತು ರಾಮ್ ಶಂಕರ್ ಯಾದವ್ ಅಲಿಯಾಸ್ ಟಿನ್ನು ಸದ್ಯ ಜೈಲು ಕಂಬಿ ಎಣಿಸುತ್ತಿದ್ದಾರೆ. ಈ ಬೆಳವಣಿಗೆಯ ಮಧ್ಯೆಯೇ ಟ್ರಸ್ಟ್ ಸದಸ್ಯರು ರಾಜೀನಾಮೆ ಕೊಟ್ಟಿರುವುದು ಪ್ರಕರಣದ ಆಳತೆಯ ಬಗ್ಗೆ ಅನುಮಾನ ಹುಟ್ಟಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net