ಕದ್ದು ಪರಾರಿಯಾಗುವ ಕಾಲದಲ್ಲಿ ಹುಡುಕಿ ಪ್ರಯಾಣಿಕನಿಗೆ ದುಬಾರಿ ಫೋನ್​ ಹಿಂತಿರುಗಿಸಿದ ಆಟೋ ಚಾಲಕ! ​

ಫೋನ್​ ಹಿಂತಿರುಗಿಸಿದ ಚಾಲಕ
ಫೋನ್​ ಹಿಂತಿರುಗಿಸಿದ ಚಾಲಕ
Published on

ಪ್ರಮುಖ ಮುಖ್ಯಾಂಶಗಳು

  • ಕಳೆದುಹೋದ ಫೋನ್​ ಹಿಂತಿರುಗಿಸಿದ ಆಟೋ ಚಾಲಕ
  • ಚಾಲಕನ ಒಳ್ಳೆತನಕ್ಕೆ ನೆಟ್ಟಿಗರು ಫಿದಾ
ಆಂಧ್ರಪ್ರದೇಶ: ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಜೇಬಿನಲ್ಲಿ ಏನೆಲ್ಲ ಇಟ್ಟುಕೊಳ್ಳುತ್ತಾರೋ ಬಿಡ್ತಾರೋ! ಆದರೆ, ಒಂದು ಸ್ಮಾರ್ಟ್‌ಫೋನ್​ಗೆ ಮಾತ್ರ ಜಾಗ ಇದ್ದೇ ಇರುತ್ತದೆ. ಕೆಲವರು ದುಬಾರಿ ಫೋನ್​ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲರ ಕಣ್ಣಿಗೆ ಬೀಳುವಂತೆ ಕೊಂಡೊಯ್ಯುತ್ತಾರೆ. ಇದು ಕೆಲವೊಮ್ಮೆ ಅಲ್ಲ ಹಲವೊಮ್ಮೆ ಕಳ್ಳತನಕ್ಕೆ ದಾರಿ ಮಾಡಿಕೊಡುತ್ತದೆ. ಒಂದಷ್ಟು ಮಂದಿ ಬಲವಂತವಾಗಿ ಕಸಿದುಕೊಂಡರೆ, ಇನ್ನೂ ಕೆಲವರು ತಾವು ಪ್ರಯಾಣಿಸುವ ಅಥವಾ ತಂಗಿದ್ದ ಜಾಗದಲ್ಲಿ ಮೊಬೈಲ್​ ಬಿಟ್ಟುಹೋಗುವ ಮುಖೇನ ಕಳೆದುಕೊಳ್ಳುವ ನಿದರ್ಶನಗಳು ಹಲವು.
ಪ್ರಯಾಣಿಸುವ ಆಟೋ, ಕ್ಯಾಬ್​ ಅಥವಾ ಬಸ್​ನಲ್ಲಿ ದುಬಾರಿ ಫೋನ್​ಗಳನ್ನು ಕಳೆದುಕೊಂಡರೆ ಮತ್ತೆ ಸಿಗುವುದುಂಟೇ? ಸಿಗುತ್ತದೆ. ಆದರೆ, ಬಹಳ ಕಡಿಮೆ! ಇಂತಹ ಫೋನ್​ಗಳು ಸಿಕ್ಕರೆ ಅದನ್ನು ವಾಪಾಸ್​ ಹಿಂತಿರುಗಿಸುವ ಜನರು ಅಪರೂಪದಲ್ಲೇ ಅಪರೂಪ. ಇಲ್ಲೊಬ್ಬ ಆಟೋ ಚಾಲಕ, ತನ್ನ ಗ್ರಾಹಕ ಆಟೋದಲ್ಲೇ ಬಿಟ್ಟು ಹೋದ ದುಬಾರಿ ಬೆಲೆಯ ಐಫೋನ್​ ಅನ್ನು ವಾಪಾಸ್​ ಅವರಿಗೆ ತಲುಪಿಸುವ ಮೂಲಕ ಎಲ್ಲರ ಮನಸ್ಸು ಗೆದ್ದಿದ್ದಾರೆ.
ನೂರರಲ್ಲಿ ಒಬ್ಬರು ಅಥವಾ ಕೋಟಿಗೊಬ್ಬರು ಈ ರೀತಿಯ ಹೃದಯವಂತಿಕೆ ಹೊಂದಿದ್ದಾರೆ. ಅವರಲ್ಲಿ ಆಂಧ್ರದ ಆಟೋ ಚಾಲಕ ಸ್ವಾಮಿ ಕೂಡ ಒಬ್ಬರು. ಸೀನು (ಶ್ರೀನಿವಾಸ್ ಫಿಟ್‌ನೆಸ್) ಎಂಬ ಸೋಷಿಯಲ್ ಮೀಡಿಯಾ ಬಳಕೆದಾರರು ಹಂಚಿಕೊಂಡಿರುವ ಪೋಸ್ಟ್​ನಲ್ಲಿ, "ನನ್ನ ಹೆಂಡತಿ ತನ್ನ ಐಫೋನ್ ಕಳೆದುಕೊಂಡಳು. ನಾವು ಅವಳಿಗೆ 10ಕ್ಕೂ ಹೆಚ್ಚು ಬಾರಿ ಕಾಲ್​ ಮಾಡಿದೆವು. ಯಾರೋ ಒಮ್ಮೆ ಕರೆ ಮಾಡಿ ಹಿಂದಿಯಲ್ಲಿ ಮಾತನಾಡಿದ್ರು. ಆ ನಂತರ ಫೋನ್​ಸ್ವಿಚ್ ಆಫ್ ಆಯಿತು. ನನ್ನ ಹೆಂಡತಿಗೆ ತನ್ನ ಐಕ್ಲೌಡ್ ಪಾಸ್‌ವರ್ಡ್ ನೆನಪಿಲ್ಲದ ಕಾರಣ ಫೈಂಡ್ ಮೈ ಫೋನ್ ಅನ್ನು ಟ್ರಾಕ್​ ಮಾಡಲು ನಮ್ಮಿಂದ ಸಾಧ್ಯವಾಗಲಿಲ್ಲ" ಎಂದರು.
ಮತ್ತೊಂದು ಪೋಸ್ಟ್​ನಲ್ಲಿ, "ನನ್ನ ಹೆಂಡತಿಯ ಐಫೋನ್ ಕಡೆಗೂ ಸಿಕ್ಕಿತು. ಆಂಧ್ರಪ್ರದೇಶದಲ್ಲಿ ಪತ್ನಿಯ ಕಳೆದುಹೋದ ಐಫೋನ್ ಅನ್ನು ಆಟೋ ಚಾಲಕರೊಬ್ಬರು ಹಿಂತಿರುಗಿಸಿದರು. ಚಾಲಕ ಸ್ವಾಮಿ ಅವರಿಗೆ ನಮ್ಮ ಥ್ಯಾಂಕ್ಯೂ. ನಮ್ಮ ಮನೆಗೆ ಬಂದು ದುಬಾರಿ ಮೌಲ್ಯದ ಐಫೋನ್ ಹಿಂತಿರುಗಿಸಿದ ಅವರಿಗೆ ಹೃದಯಪೂರ್ವಕ ಧನ್ಯವಾದಗಳು" ಎಂದು ಸೀನು ಹೇಳಿದ್ದಾರೆ. ಈ ಪೋಸ್ಟ್​ಗೆ ಹಲವರು ಲೈಕ್​ ಮಾಡಿದ್ದು, ಇನ್ನೂ ಕೆಲವರು ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net