ತಮಿಳುನಾಡಿನ ವಿರುದ್ಧ ದ್ವೇಷ ರಾಜಕಾರಣ..ಮಧುರೈ ಸಾಮರಸ್ಯ ಹಾಳು ಮಾಡಲು ಎನ್‌ಡಿಎ ಸಂಚು ಹೂಡಿದೆ ಎಂದ ಸಿಎಂ ಸ್ಟಾಲಿನ್ | MK Stalin

MK Stalin | ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್
MK Stalin | ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್
Published on
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣಾ ಕದನ ಕಾವೇರುತ್ತಿದ್ದು, ಮಧುರೈನ ಬೃಹತ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ (MK Stalin), ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಪ್ರಾದೇಶಿಕ ಹೆಮ್ಮೆ ಮತ್ತು ಆರ್ಥಿಕ ಅನ್ಯಾಯದ ವಿಷಯಗಳನ್ನು ಪ್ರಸ್ತಾಪಿಸಿದ ಸ್ಟಾಲಿನ್​, ತಮಿಳುನಾಡು ಶಾಂತಿ ಮತ್ತು ಸಹೋದರತ್ವದ ನಾಡು, ಆದರೆ ಎನ್‌ಡಿಎ ಇಲ್ಲಿನ ಸಾಮರಸ್ಯವನ್ನು ಹಾಳುಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ವಿಭಜಕ ಆರ್ಯ ಮಾದರಿಯನ್ನು ಉತ್ತೇಜಿಸುತ್ತಿದೆ ಮತ್ತು ಮಧುರೈ ಅನ್ನು ಮಣಿಪುರವನ್ನಾಗಿ ಪರಿವರ್ತಿಸಲು ಸಂಚು ರೂಪಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿರುವ ಸ್ಟಾಲಿನ್​, ಇಂತಹ ಕೋಮು ಸಂಘರ್ಷದ ಪ್ರಯತ್ನಗಳನ್ನು ವಿಫಲಗೊಳಿಸುತ್ತಿರುವ ಮಧುರೈ ಜನರನ್ನು ಈ ಸಂದರ್ಭದಲ್ಲಿ ಶ್ಲಾಘಿಸಿದರು. ಹಣಕಾಸಿನ ಹಂಚಿಕೆ ವಿಷಯದಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯಲ್​ಗೆ ನೇರ ಸವಾಲು ಹಾಕಿದ ಸ್ಟಾಲಿನ್, ತಮಿಳುನಾಡು ಪಾವತಿಸುವ ತೆರಿಗೆ ಹಣ ಎಲ್ಲಿಗೆ ಹೋಗುತ್ತಿದೆ ಎಂದು ಪ್ರಶ್ನಿಸಿದರು. ಕೇಂದ್ರಕ್ಕೆ ನೀಡುವ ಪ್ರತಿ ರೂಪಾಯಿಗೆ ಪ್ರತಿಯಾಗಿ ಎಷ್ಟು ಹಣ ರಾಜ್ಯಕ್ಕೆ ಹಿಂತಿರುಗುತ್ತಿದೆ ಎಂಬುದನ್ನು ಬಹಿರಂಗಪಡಿಸಿ ಎಂದು ಪಾರದರ್ಶಕತೆಗೆ ಒತ್ತಾಯಿಸಿದರು.
ಬಿಜೆಪಿ ಆಡಳಿತವಿರುವ ರಾಜ್ಯಗಳಿಗೆ ನೀಡುವಷ್ಟೇ ಹಣವನ್ನು ತಮಿಳುನಾಡಿಗೂ ನೀಡಿದರೆ, ರಾಜ್ಯವು ತನ್ನೆಲ್ಲಾ ಸಾಲಗಳನ್ನು ಮರುಪಾವತಿಸಿ ಆರ್ಥಿಕ ಒತ್ತಡದಿಂದ ಮುಕ್ತವಾಗಬಹುದು ಎಂದಿರುವ ಸ್ಟಾಲಿನ್​, ದಿವಾಳಿಯಾಗುತ್ತಿರುವುದು ರಾಜ್ಯವಲ್ಲ ಅಲ್ಲ, ಕೇಂದ್ರದ ಎನ್‌ಡಿಎ ಸರ್ಕಾರ ಎಂದು ತಿರುಗೇಟು ನೀಡಿದರು. ರಾಜ್ಯದ ಪ್ರಮುಖ ಮೂಲಸೌಕರ್ಯ ಯೋಜನೆಗಳಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ, ಮಧುರೈ ಏಮ್ಸ್ (AIIMS) ಯೋಜನೆಗೆ ವಿಳಂಬ ನೀತಿ ಅನುಸರಿಸುತ್ತಿದೆ, 2015 ರಲ್ಲಿ ಘೋಷಣೆಯಾಗಿ 2019 ರಲ್ಲಿ ಅಡಿಪಾಯ ಹಾಕಿದರೂ, ಯೋಜನೆ ಇನ್ನೂ ಕಾಗದದ ಮೇಲೆಯೇ ಉಳಿದಿರುವುದು ರಾಜ್ಯದ ಮೇಲಿನ ದ್ವೇಷಕ್ಕೆ ಸಾಕ್ಷಿ ಎಂದರು.

ಬಿಜೆಪಿ ತಿರುಗೇಟು

ಸಿಎಂ ಎಂ ಕೆ ಸ್ಟಾಲಿನ್​ ಆರೋಪಕ್ಕೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ಸೇರಿದಂತೆ ಬಿಜೆಪಿ ನಾಯಕರು ತಿರುಗೇಟು ನೀಡಿದ್ದು, ಅನುದಾನ ಹಂಚಿಕೆಯು ಜನಸಂಖ್ಯೆ ಮತ್ತು ಹಣಕಾಸು ಆಯೋಗದ ಮಾನದಂಡಗಳ ಆಧಾರದ ಮೇಲೆ ನಡೆಯುತ್ತದೆಯೇ ಹೊರತು ರಾಜಕೀಯ ಕಾರಣಕ್ಕಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಗೆ ಏಪ್ರಿಲ್ 23 ರಂದು ಚುನಾವಣೆ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಹೊರಬೀಳಲಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net