ಕಿಟಕಿ ಗಾಜು ಇಳಿಸು ಎಂದು ಧಮ್ಕಿ: ನಟಿ ನಿಮಿಷಾ ನಾಯರ್ ಮೇಲೆ ನಡುರಸ್ತೆಯಲ್ಲಿ ಹಲ್ಲೆಗೆ ಯತ್ನ! | Nimisha Nair

Nimisha Nair
Nimisha Nair
Published on
ಮುಂಬೈ: ದೇಶದ ಆರ್ಥಿಕ ರಾಜಧಾನಿ, ಎಂದಿಗೂ ಮಲಗದ ನಗರಿ ಎಂದೇ ಖ್ಯಾತಿಯಾಗಿರುವ ಮುಂಬೈನಲ್ಲಿ ಮಹಿಳಾ ಸುರಕ್ಷತೆ ಮತ್ತೆ ಪ್ರಶ್ನಾರ್ಹವಾಗಿದೆ. ಖ್ಯಾತ ನಟಿ ನಿಮಿಷಾ ನಾಯರ್(Nimisha Nair ) ಅವರು ಇತ್ತೀಚೆಗೆ ತಮಗೆ ಎದುರಾದ ಭೀಕರ ಅನುಭವವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಮುಂಬೈ ಪೊಲೀಸರ ಕಾರ್ಯವೈಖರಿ ಮತ್ತು ಸಾರ್ವಜನಿಕ ಸುರಕ್ಷತೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆಯ ವಿವರಗಳ ಪ್ರಕಾರ, ನಿಮಿಷಾ ನಾಯರ್ ಅವರು ಮುಂಜಾನೆ ಸುಮಾರು 4:50ರ ಸುಮಾರಿಗೆ ಉಬರ್ ಕ್ಯಾಬ್‌ನಲ್ಲಿ ಪ್ರಯಾಣಿಸುತ್ತಿದ್ದರು. ಬಾಂದ್ರಾ ಪೂರ್ವದ ಖೇರ್ವಾಡಿ ಫ್ಲೈಓವರ್ ಬಳಿ ಈ ಘಟನೆ ಸಂಭವಿಸಿದೆ. ನಿಮಿಷಾ ಅವರ ಕ್ಯಾಬ್ ಚಾಲಕ ಸ್ಕೂಟರ್‌ನಲ್ಲಿದ್ದ ಇಬ್ಬರು ವ್ಯಕ್ತಿಗಳನ್ನು ಓವರ್‌ಟೇಕ್ ಮಾಡಿದ್ದೇ ಈ ಗಲಾಟೆಗೆ ಕಾರಣವಾಯಿತು.
ಕೇವಲ ಓವರ್‌ಟೇಕ್ ಮಾಡಿದ್ದನ್ನೇ ದೊಡ್ಡ ಅಪರಾಧ ಎಂಬಂತೆ ಭಾವಿಸಿದ ಆ ಇಬ್ಬರು ವ್ಯಕ್ತಿಗಳು, ಮದ್ಯದ ಅಮಲಿನಲ್ಲಿದ್ದಂತೆ ಕಂಡುಬಂದರು. ಅವರು ಕ್ಯಾಬ್ ಅನ್ನು ಬೆನ್ನಟ್ಟಿ, ಹೈವೇ ಮಧ್ಯದಲ್ಲೇ ಸ್ಕೂಟರ್ ಅಡ್ಡಗಟ್ಟಿ ವಾಹನವನ್ನು ನಿಲ್ಲಿಸುವಂತೆ ಒತ್ತಾಯಿಸಿದರು.

"ಕಿಟಕಿ ಇಳಿಸು, ಹೊರಗೆ ಬಾ" – ಪುಂಡರ ಬೆದರಿಕೆ

ನಿಮಿಷಾ ಅವರು ಹಂಚಿಕೊಂಡಿರುವ ವಿಡಿಯೋ ಮತ್ತು ಪೋಸ್ಟ್‌ನಲ್ಲಿ ಘಟನೆಯ ಭೀಕರತೆ ಎದ್ದು ಕಾಣುತ್ತದೆ."ಆ ಇಬ್ಬರು ಪುಂಡರು ನನ್ನ ಚಾಲಕನಿಗೆ ಪಾಠ ಕಲಿಸಲು ನಿರ್ಧರಿಸಿದ್ದರು. ವೇಗವಾಗಿ ವಾಹನ ಚಲಿಸುವ ಹೈವೇ ಮಧ್ಯದಲ್ಲೇ ಸ್ಕೂಟರ್ ನಿಲ್ಲಿಸಿ ನಮ್ಮ ದಾರಿಯನ್ನು ತಡೆದರು. ಚಾಲಕನಿಗೆ ಅತ್ಯಂತ ಕೆಟ್ಟ ಭಾಷೆಯಲ್ಲಿ ನಿಂದಿಸುತ್ತಾ, ಕಾರಿನ ಬಾಗಿಲುಗಳನ್ನು ಬಲವಂತವಾಗಿ ಎಳೆಯಲು ಪ್ರಯತ್ನಿಸಿದರು. ನನ್ನ ಬಳಿ ಬಂದು ಕಿಟಕಿ ಗಾಜನ್ನು ಕೆಳಗಿಳಿಸುವಂತೆ ಕೂಗಾಡಿದರು," ಎಂದು ನಿಮಿಷಾ ವಿವರಿಸಿದ್ದಾರೆ.
ಅದೃಷ್ಟವಶಾತ್, ಸುರಕ್ಷತೆಯ ದೃಷ್ಟಿಯಿಂದ ನಿಮಿಷಾ ಮತ್ತು ಚಾಲಕ ಬಾಗಿಲು ತೆರೆಯಲಿಲ್ಲ ಅಥವಾ ಗಾಜನ್ನು ಇಳಿಸಲಿಲ್ಲ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಗಮನಿಸಿದ ನಟಿ, ಕೂಡಲೇ ತನ್ನ ಫೋನ್ ತೆಗೆದು ವಿಡಿಯೋ ಮಾಡಲು ಪ್ರಾರಂಭಿಸಿದರು. ತಾವು ಮಾಡುತ್ತಿರುವ ಕೃತ್ಯ ಕ್ಯಾಮೆರಾದಲ್ಲಿ ಸೆರೆಯಾಗುತ್ತಿದೆ ಎಂದು ತಿಳಿಯುತ್ತಿದ್ದಂತೆ, ಆ ಪುಂಡರು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಮತ್ತೆ ಮರುಕಳಿಸಿದ ಕಹಿ ಘಟನೆ

ವಿಪರ್ಯಾಸವೆಂದರೆ, ನಿಮಿಷಾ ಅವರಿಗೆ ಇಂತಹ ಅನುಭವವಾಗುತ್ತಿರುವುದು ಇದೇ ಮೊದಲೇನಲ್ಲ. ಇದೇ ವರ್ಷದ ಆರಂಭದಲ್ಲಿ ದಕ್ಷಿಣ ಮುಂಬೈನ ಕುಲಾಬಾ ಪ್ರದೇಶದಲ್ಲೂ ಇಂತಹದ್ದೇ ಘಟನೆ ನಡೆದಿತ್ತು. ಆ ಸಮಯದಲ್ಲಿ ಅವರು ಧೈರ್ಯವಾಗಿ ಎಫ್‌ಐಆರ್ (FIR) ದಾಖಲಿಸಿದ್ದರು. ಆದರೆ, ಕಾನೂನು ಹೋರಾಟದ ಹಾದಿ ಅಷ್ಟು ಸುಲಭವಲ್ಲ ಎಂಬುದು ಅವರ ಮಾತಿನಿಂದ ಸ್ಪಷ್ಟವಾಗುತ್ತದೆ.
"ಹಿಂದಿನ ಘಟನೆಯ ಬಗ್ಗೆ ದೂರು ನೀಡಿದ ನಂತರ ನಾನು ಎದುರಿಸುತ್ತಿರುವ ಸವಾಲುಗಳು ಅಷ್ಟಿಷ್ಟಲ್ಲ. ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿರುವುದು ವ್ಯವಸ್ಥೆಯ ವೈಫಲ್ಯವನ್ನು ತೋರಿಸುತ್ತದೆ," ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net