ಬಂಗಾಳ ರಣಕಣದಲ್ಲಿ ಬಾಂಬ್, ರಕ್ತಪಾತ; ಮೊದಲ ಹಂತದ ಮತದಾನದ ವೇಳೆ ಭುಗಿಲೆದ್ದ ಭೀಕರ ಹಿಂಸಾಚಾರದ ವರದಿ ಇಲ್ಲಿದೆ! | West Bengal Election

West Bengal Election | ಮೊದಲ ಹಂತದ ಮತದಾನದ ವೇಳೆ ಭುಗಿಲೆದ್ದ ಭೀಕರ ಹಿಂಸಾಚಾರದ ವರದಿ ಇಲ್ಲಿದೆ!
West Bengal Election | ಮೊದಲ ಹಂತದ ಮತದಾನದ ವೇಳೆ ಭುಗಿಲೆದ್ದ ಭೀಕರ ಹಿಂಸಾಚಾರದ ವರದಿ ಇಲ್ಲಿದೆ!
Published on
West Bengal Election: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನದ ಆರಂಭಿಕ ಗಂಟೆಗಳಲ್ಲೇ ರಾಜ್ಯದ ವಿವಿಧೆಡೆ ವ್ಯಾಪಕ ಹಿಂಸಾಚಾರ, ಘರ್ಷಣೆ, ಕಚ್ಚಾ ಬಾಂಬ್ ದಾಳಿ ಮತ್ತು ಮತದಾರರಿಗೆ ಬೆದರಿಕೆ ಹಾಕಿದ ಘಟನೆಗಳು ವರದಿಯಾಗಿವೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಚುನಾವಣಾ ಆಯೋಗವು ತಕ್ಷಣ ಮಧ್ಯಪ್ರವೇಶಿಸಿದ್ದು, ಉದ್ವಿಗ್ನ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳು ಸುವ್ಯವಸ್ಥೆ ಕಾಪಾಡಲು ಬಲಪ್ರಯೋಗ ನಡೆಸಬೇಕಾಯಿತು.

ಮುರ್ಷಿದಾಬಾದ್: ಹುಮಾಯುನ್ ಕಬೀರ್ ಮೇಲೆ ಪ್ರತಿಭಟನೆ ಮತ್ತು ದಾಳಿ

ಮುರ್ಷಿದಾಬಾದ್‌ನ ನೌಡಾದಲ್ಲಿ ಆಮ್ ಜನತಾ ಉನ್ನಯನ್ ಪಕ್ಷದ (ಎಜೆಯುಪಿ) ಮುಖ್ಯಸ್ಥ ಹುಮಾಯೂನ್ ಕಬೀರ್ ಬೂತ್ ಭೇಟಿ ನೀಡಿದ್ದಾಗ ಟಿಎಂಸಿ ಬೆಂಬಲಿಗರಿಂದ ತೀವ್ರ ಪ್ರತಿಭಟನೆ ಎದುರಿಸಬೇಕಾಯಿತು. ಟಿಎಂಸಿಯಿಂದ ಅಮಾನತುಗೊಂಡ ನಂತರ ಸ್ವಂತ ಪಕ್ಷ ಸ್ಥಾಪಿಸಿರುವ ಕಬೀರ್ ವಿರುದ್ಧ ಬಿಜೆಪಿ ಏಜೆಂಟ್ ಮತ್ತು ಗೋ ಬ್ಯಾಕ್​ ಎಂಬ ಘೋಷಣೆಗಳನ್ನು ಕೂಗಲಾಯಿತು.
ಕಬೀರ್ ಧರಣಿ ನಡೆಸಿದಾಗ ಅವರ ವಾಹನದ ಮೇಲೆ ಕಲ್ಲು ತೂರಾಟ ಮತ್ತು ವಿಧ್ವಂಸಕ ಕೃತ್ಯಗಳು ನಡೆದವು. ಗುಂಪನ್ನು ಚದುರಿಸಲು ಕೇಂದ್ರ ಪಡೆಗಳು ಲಾಠಿ ಪ್ರಹಾರ ನಡೆಸಿದವು. ನನ್ನನ್ನು ಕೊಲ್ಲಲು ಸಂಚು ರೂಪಿಸಲಾಗಿದೆ, ಇಲ್ಲಿ ಬಹಿರಂಗ ಗೂಂಡಾಗಿರಿ ನಡೆಯುತ್ತಿದೆ ಎಂದು ಕಬೀರ್ ಆರೋಪಿಸಿದ್ದಾರೆ. ಇದಕ್ಕೂ ಮುನ್ನಾ ದಿನ ಜಿಲ್ಲೆಯಲ್ಲಿ ಕಚ್ಚಾ ಬಾಂಬ್ ಎಸೆದು ಮಹಿಳೆಯೊಬ್ಬರು ಗಾಯಗೊಂಡ ಘಟನೆಯೂ ನಡೆದಿದೆ.

ಅಸನ್ಸೋಲ್: ಬಿಜೆಪಿ ಶಾಸಕಿ ಅಗ್ನಿಮಿತ್ರ ಪಾಲ್ ಕಾರಿನ ಮೇಲೆ ದಾಳಿ

ಅಸನ್ಸೋಲ್‌ನಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕಿ ಅಗ್ನಿಮಿತ್ರ ಪಾಲ್ ಮತಗಟ್ಟೆಗಳಿಗೆ ಭೇಟಿ ನೀಡುತ್ತಿದ್ದಾಗ ರಹಮತ್‌ನಗರದಲ್ಲಿ ಅವರ ವಾಹನದ ಮೇಲೆ ದೊಡ್ಡ ಬಂಡೆಯನ್ನು ಎಸೆದು ದಾಳಿ ಮಾಡಲಾಗಿದೆ. ದಾಳಿಯಿಂದಾಗಿ ಅವರ ಕಾರಿನ ಹಿಂಭಾಗದ ಗಾಜುಗಳು ಪುಡಿಯಾಗಿದ್ದು, ಆಪ್ತ ಸಹಾಯಕ ಮತ್ತು ಭದ್ರತಾ ಸಿಬ್ಬಂದಿಗೆ ಗಾಯಗಳಾಗಿವೆ. ಘಟನೆಯ ಬಳಿಕ ಹೆಲ್ಮೆಟ್ ಧರಿಸಿ ಕಾಣಿಸಿಕೊಂಡ ಪಾಲ್, ಈ ರೀತಿಯ ದೌರ್ಜನ್ಯಗಳನ್ನು ಸಹಿಸಲು ಸಾಧ್ಯವಿಲ್ಲ, ಭದ್ರತಾ ಲೋಪದ ಬಗ್ಗೆ ತನಿಖೆಯಾಗಲಿ ಎಂದು ಒತ್ತಾಯಿಸಿದರು.

ದಿನಜ್‌ಪುರ: ಬಿಜೆಪಿ ಅಭ್ಯರ್ಥಿ ಸುವೇಂದು ಶೇಖರ್ ಬೆನ್ನಟ್ಟಿ ಹಲ್ಲೆ

ದಕ್ಷಿಣ ದಿನಾಜ್‌ಪುರ ಜಿಲ್ಲೆಯ ಕುಮಾರ್‌ಗಂಜ್‌ನಲ್ಲಿ ಬಿಜೆಪಿ ಅಭ್ಯರ್ಥಿ ಸುವೇಂದು ಶೇಖರ್ ಮೇಲೆ ನಡೆದ ಹಲ್ಲೆಯ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಹೊಲಗಳ ಮೂಲಕ ಓಡುತ್ತಿದ್ದ ಶೇಖರ್ ಅವರನ್ನು ಗುಂಪೊಂದು ಬೆನ್ನಟ್ಟಿ ತಡೆದು ಹಲ್ಲೆ ನಡೆಸಿದೆ. ಈ ವೇಳೆ ಪೊಲೀಸರ ಸಮ್ಮುಖದಲ್ಲೇ ನನ್ನನ್ನು ಥಳಿಸಿ ವಾಹನ ಧ್ವಂಸಗೊಳಿಸಲಾಗಿದೆ ಎಂದು ಶೇಖರ್ ಆರೋಪಿಸಿದ್ದಾರೆ. ಆದರೆ, ಸರ್ಕಾರ್ ಮತಗಟ್ಟೆ ಬಳಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿದ್ದರು ಎಂದು ಟಿಎಂಸಿ ಪ್ರತಿಪಾದಿಸಿದೆ.

ಕೂಚ್ ಬೆಹಾರ್‌ನಲ್ಲಿ ಘೋಷಣೆಗಳ ವಾಗ್ಯುದ್ಧ

ಕೂಚ್ ಬೆಹಾರ್‌ನ ಮಠಭಂಗದಲ್ಲಿ ಬಿಜೆಪಿ ಮಾಜಿ ಸಚಿವ ನಿಶಿತ್ ಪ್ರಾಮಾಣಿಕ್ ಮತ್ತು ಟಿಎಂಸಿಯ ಸಬ್ಲು ಬರ್ಮನ್ ಬೆಂಬಲಿಗರ ನಡುವೆ ಉದ್ವಿಗ್ನತೆ ಉಂಟಾಯಿತು. ಮತಗಟ್ಟೆಗಳ ಬಳಿ ಜೈ ಶ್ರೀ ರಾಮ್ ಮತ್ತು ಜಾಯ್ ಬಾಂಗ್ಲಾ ಘೋಷಣೆಗಳು ಮೊಳಗಿದವು. ಮತದಾರರನ್ನು ಬೆದರಿಸುತ್ತಿರುವ ಬಗ್ಗೆ ಇಬ್ಬರು ನಾಯಕರು ಪರಸ್ಪರ ಆರೋಪಗಳನ್ನು ಮಾಡಿಕೊಂಡರು. ಭದ್ರತಾ ಪಡೆಗಳು ಮಧ್ಯಪ್ರವೇಶಿಸಿ ಉಭಯ ನಾಯಕರನ್ನು ಆ ಪ್ರದೇಶದಿಂದ ಕಳುಹಿಸುವ ಮೂಲಕ ದೊಡ್ಡ ಘರ್ಷಣೆಯನ್ನು ತಪ್ಪಿಸಿದವು.
ರಾಜ್ಯದಲ್ಲಿ ನಡೆದ ಈ ಎಲ್ಲಾ ಹಿಂಸಾಚಾರದ ಘಟನೆಗಳ ಕುರಿತು ಚುನಾವಣಾ ಆಯೋಗವು ಅಧಿಕಾರಿಗಳಿಂದ ವಿವರವಾದ ವರದಿಗಳನ್ನು ಕೇಳಿದೆ. ಆಡಳಿತಾರೂಢ ಟಿಎಂಸಿ ಮತ್ತು ಪೈಪೋಟಿ ನೀಡುತ್ತಿರುವ ಬಿಜೆಪಿ ನಡುವಿನ ಈ ಜಿದ್ದಾಜಿದ್ದಿನ ಕದನದಲ್ಲಿ ಎರಡನೇ ಹಂತದ ಮತದಾನವು ಏಪ್ರಿಲ್ 29 ರಂದು ನಡೆಯಲಿದ್ದು, ಮೇ 4 ರಂದು ಫಲಿತಾಂಶ ಹೊರಬೀಳಲಿದೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net