ಮದುವೆ ಮನೆಯಲ್ಲಿ ಘೋರ ದುರಂತ: ರಸಗುಲ್ಲಾ ಗಂಟಲಲ್ಲಿ ಸಿಲುಕಿ ವ್ಯಕ್ತಿ ಸಾವು! | Rasgulla

Rasgulla
Rasgulla
Published on
ಜಂಶೆಡ್‌ಪುರ (ಜಾರ್ಖಂಡ್): ಮದುವೆ ಮನೆಯ ಸಡಗರ ಕ್ಷಣಾರ್ಧದಲ್ಲಿ ಮೌನಕ್ಕೆ ಶರಣಾದ ಘಟನೆಯೊಂದು ಜಾರ್ಖಂಡ್‌ನ ಜಂಶೆಡ್‌ಪುರದಲ್ಲಿ ಸೋಮವಾರ ನಡೆದಿದೆ. ರಸಗುಲ್ಲಾ(Rasgulla) ಸೇವಿಸುವಾಗ ಅದು ಗಂಟಲಿನಲ್ಲಿ ಸಿಲುಕಿದ ಪರಿಣಾಮ 41 ವರ್ಷದ ವ್ಯಕ್ತಿಯೊಬ್ಬರು ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಮಲಿಯಾಂತ ಗ್ರಾಮದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಲಲಿತ್ ಸಿಂಗ್ ಎಂಬುವವರು ಪಾಲ್ಗೊಂಡಿದ್ದರು. ಭೋಜನದ ಸಮಯದಲ್ಲಿ ರಸಗುಲ್ಲಾ ಸವಿಯುತ್ತಿದ್ದಾಗ, ಅದು ಅಚಾನಕ್ಕಾಗಿ ಅವರ ಶ್ವಾಸನಾಳದಲ್ಲಿ ಸಿಲುಕಿಕೊಂಡಿದೆ. ಇದರಿಂದಾಗಿ ಅವರು ತೀವ್ರ ಉಸಿರಾಟದ ಸಮಸ್ಯೆಯನ್ನು ಎದುರಿಸಿದರು. ಸುತ್ತಲಿದ್ದವರು ತಕ್ಷಣವೇ ಸಿಹಿಯನ್ನು ಹೊರತೆಗೆಯಲು ಪ್ರಯತ್ನಿಸಿದರಾದರೂ ಅದು ಸಾಧ್ಯವಾಗಲಿಲ್ಲ. ಕೂಡಲೇ ಅವರನ್ನು ಎಂಜಿಎಂ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಅವರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.

ವೈದ್ಯರ ಮಾಹಿತಿ

ವೈದ್ಯರ ಪ್ರಕಾರ, ರಸಗೊಲ್ಲಾ ಶ್ವಾಸನಾಳವನ್ನು ಸಂಪೂರ್ಣವಾಗಿ ಮುಚ್ಚಿದ್ದರಿಂದ ದೇಹಕ್ಕೆ ಆಮ್ಲಜನಕದ ಪೂರೈಕೆ ಸ್ಥಗಿತಗೊಂಡಿತ್ತು. ಕೆಲವೇ ನಿಮಿಷಗಳಲ್ಲಿ ಮಿದುಳಿಗೆ ಆಮ್ಲಜನಕ ತಲುಪದ ಕಾರಣ ಸಾವು ಸಂಭವಿಸಿದೆ ಎಂದು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಸಿಂಗ್ ಅವರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ಈ ಘಟನೆಯು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ಆಹಾರ ಸೇವಿಸುವಾಗ ಅದರಲ್ಲೂ ವಿಶೇಷವಾಗಿ ಸಿಹಿ ಪದಾರ್ಥಗಳನ್ನು ತಿನ್ನುವಾಗ ಎಚ್ಚರಿಕೆ ವಹಿಸುವುದು ಎಷ್ಟು ಮುಖ್ಯ ಎಂಬುದನ್ನು ನೆನಪಿಸಿದೆ,(ಏಜೆನ್ಸೀಸ್​). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net