ವಿಶ್ವಸಂಸ್ಥೆಯಲ್ಲಿ ಭಾರತದ ಶಕ್ತಿ ಪ್ರದರ್ಶನ: ಭದ್ರತಾ ಮಂಡಳಿಯ ಖಾಯಂ ಸ್ಥಾನದ ನಿಲುವಿಗೆ ರಷ್ಯಾ ಮತ್ತು ಮಾರಿಷಸ್ ಬೆಂಬಲ! | UNSC

UNSC: ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರು ನ್ಯೂಯಾರ್ಕ್‌ನಲ್ಲಿ ನಡೆದ 81ನೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಶನಿವಾರ ಮಾತನಾಡುತ್ತಾ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವ ನೀಡುವ ಕುರಿತು ಗಟ್ಟಿ ಧ್ವನಿ ಎತ್ತಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಭಾರತದ ಶಕ್ತಿ ಪ್ರದರ್ಶನ: ಭದ್ರತಾ ಮಂಡಳಿಯ ಖಾಯಂ ಸ್ಥಾನದ ನಿಲುವಿಗೆ ರಷ್ಯಾ ಮತ್ತು ಮಾರಿಷಸ್ ಬೆಂಬಲ! | UNSC
Published on: 

UNSC: ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರು ನ್ಯೂಯಾರ್ಕ್‌ನಲ್ಲಿ ನಡೆದ 81ನೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಶನಿವಾರ ಮಾತನಾಡುತ್ತಾ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವ ನೀಡುವ ಕುರಿತು ಗಟ್ಟಿ ಧ್ವನಿ ಎತ್ತಿದ್ದಾರೆ.

ಈ ದೊಡ್ಡ ಮಟ್ಟದ ಬೆಂಬಲವು ಜಾಗತಿಕ ಆಡಳಿತ ಸುಧಾರಣೆಯ ಕುರಿತು ರಷ್ಯಾದ ಅಧಿಕೃತ ನೀತಿಯನ್ನು ಒತ್ತಿಹೇಳುತ್ತದೆ. ಅಲ್ಲದೆ, ವಿಶ್ವಸಂಸ್ಥೆಯ ಅತ್ಯುನ್ನತ ಭದ್ರತಾ ಮಂಡಳಿಯಲ್ಲಿ ಪಾಶ್ಚಿಮಾತ್ಯ ಪ್ರಭಾವ ವಿಸ್ತರಿಸುವುದಕ್ಕೆ ಬಲವಾದ ತಡೆ ಒಡ್ಡುತ್ತಾ, ಗ್ಲೋಬಲ್ ಸೌತ್ (ದಕ್ಷಿಣ ಜಾಗತಿಕ ರಾಷ್ಟ್ರಗಳ) ಪರವಾಗಿ ಧ್ವನಿ ಎತ್ತುವ ಬ್ರಿಕ್ಸ್ ಘೋಷಣೆಗಳೊಂದಿಗೆ ಜೊತೆಯಾಗಿ ನಿಲ್ಲುತ್ತದೆ.

ಗ್ಲೋಬಲ್ ಸೌತ್‌ ದೇಶಗಳಿಗೆ ಹೆಚ್ಚಿನ ಸೀಟು ಹಂಚಿಕೆಯಾಗಬೇಕು ಎಂದು ವಾದಿಸಿದ ಲಾವ್ರೊವ್, ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕದ ಪ್ರಾತಿನಿಧ್ಯವನ್ನು ವಿಸ್ತರಿಸುವುದನ್ನು ನಾವು ಬೆಂಬಲಿಸುತ್ತೇವೆ. ಖಾಯಂ ಸ್ಥಾನಕ್ಕಾಗಿ ಬ್ರೆಜಿಲ್ ಮತ್ತು ಭಾರತದ ಸ್ಪರ್ಧೆಯನ್ನು ನಾವು ಬೆಂಬಲಿಸುತ್ತೇವೆ ಎಂದು ಹೇಳಿದರು. ಭಾಷಣದಲ್ಲಿ, ಪಾಶ್ಚಿಮಾತ್ಯ ದೇಶಗಳಿಗೆ ಹೆಚ್ಚುವರಿ ಸ್ಥಾನಗಳನ್ನು ನೀಡುವುದರ ವಿರುದ್ಧ ಎಚ್ಚರಿಕೆ ನೀಡಿದ ಅವರು, ಜರ್ಮನಿ ಮತ್ತು ಜಪಾನ್‌ ದೇಶಗಳನ್ನು ನಿರ್ದಿಷ್ಟವಾಗಿ ಹೆಸರಿಸಿ, ಆ ದೇಶಗಳು ಸೈನಿಕೀಕರಣ ಮತ್ತು ಪ್ರತೀಕಾರದ ಹಾದಿಯಲ್ಲಿವೆ ಎಂದರು.

ಇದನ್ನೂ ಓದಿ:ಭಯೋತ್ಪಾದನೆಗೆ ಮುಂದಾದ್ರೆ ತಕ್ಕ ಪರಿಣಾಮ ಕಟ್ಟಿಟ್ಟ ಬುತ್ತಿ: ಯುಎನ್‌ನಲ್ಲಿ ಪಾಕಿ ಪ್ರಧಾನಿಯ ಬೆವರಿಳಿಸಿದ ಭಾರತೀಯ ನಿಯೋಗದ ಪ್ರಥಮ ಕಾರ್ಯದರ್ಶಿ | Petal Gahlot

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆಯಲ್ಲಿ ಪಾಶ್ಚಿಮಾತ್ಯ ದೇಶಗಳಿಗೆ, ವಿಶೇಷವಾಗಿ ಜರ್ಮನಿ ಮತ್ತು ಜಪಾನ್‌ಗೆ ಯಾವುದೇ ಹೆಚ್ಚುವರಿ ಸ್ಥಾನಗಳನ್ನು ನೀಡಬಾರದು. ಏಕೆಂದರೆ ಅವು ಈಗ ಸೈನಿಕೀಕರಣ ಮತ್ತು ಪ್ರತೀಕಾರದ ಹಾದಿಯಲ್ಲಿವೆ ಎಂದು ಲಾವ್ರೊವ್ ಹೇಳಿದರು. ಆದಾಗ್ಯೂ, ಭದ್ರತಾ ಮಂಡಳಿಯ ಯಾವುದೇ ಆಧುನೀಕರಣವು ಪ್ರಸ್ತುತ ಇರುವ ಖಾಯಂ ಸದಸ್ಯರ ಮೂಲ ಅಧಿಕಾರಗಳು ಅಥವಾ ಹಕ್ಕುಗಳನ್ನು ಕುಗ್ಗಿಸಬಾರದು ಎಂದು ಲಾವ್ರೊವ್ ಆಗ್ರಹಿಸಿದ್ದಾರೆ.

ಭಾರತದ ಪರವಾಗಿ ರಷ್ಯಾ ಮಾತ್ರವಲ್ಲದೆ, ಮಾರಿಷಸ್‌ನ ವಿದೇಶಾಂಗ ಸಚಿವ ಧನಂಜಯ್ ರಾಮ್‌ಫುಲ್ ಕೂಡ ತಮ್ಮ ಭಾಷಣದಲ್ಲಿ UNSC ಖಾಯಂ ಸ್ಥಾನಕ್ಕಾಗಿ ಭಾರತದ ಹಕ್ಕನ್ನು ಬಹಿರಂಗವಾಗಿಯೇ ಬೆಂಬಲಿಸಿದರು. ಕೌನ್ಸಿಲ್ ಸುಧಾರಣೆಯ ಕುರಿತು ಜಿ-4 (G4) ಮತ್ತು ಎಲ್69 (L69) ಒಕ್ಕೂಟಗಳ ನಿಲುವನ್ನು ನಾವು ಬೆಂಬಲಿಸುತ್ತೇವೆ. ಜಾಗತಿಕ ವ್ಯವಹಾರಗಳಲ್ಲಿ ಭಾರತದ ರಚನಾತ್ಮಕ ಪಾತ್ರಕ್ಕೆ ಅನುಗುಣವಾಗಿ, ಖಾಯಂ ಸ್ಥಾನಕ್ಕಾಗಿ ಅದರ ಸ್ಪರ್ಧೆಗೆ ನಮ್ಮ ಬೆಂಬಲವನ್ನು ಪುನರುಚ್ಚರಿಸುತ್ತೇವೆ ಎಂದು ರಾಮ್‌ಫುಲ್ ಹೇಳಿದರು.

ಖಾಯಂ ಸದಸ್ಯತ್ವಕ್ಕೆ ಏನೆಲ್ಲಾ ಬೇಕು...?

ಯುಎನ್​ಎಸ್​ಸಿ ಪ್ರಸ್ತುತ ಒಟ್ಟು 15 ಸದಸ್ಯರನ್ನು ಹೊಂದಿದೆ. ಇದರಲ್ಲಿ ವೀಟೋ ಅಧಿಕಾರ ಹೊಂದಿರುವ 5 ಖಾಯಂ ಸದಸ್ಯ ದೇಶಗಳು (ಚೀನಾ, ಫ್ರಾನ್ಸ್, ರಷ್ಯಾ, ಯುಕೆ ಮತ್ತು ಯುಎಸ್) ಹಾಗೂ ಎರಡು ವರ್ಷಗಳ ಅವಧಿಗೆ ಆಯ್ಕೆಯಾಗುವ 10 ಖಾಯಂ-ಅಲ್ಲದ ಸದಸ್ಯ ದೇಶಗಳು ಸೇರಿವೆ. ವಿಶ್ವಸಂಸ್ಥೆಯ ಚಾರ್ಟರ್ ಅನ್ನು ತಿದ್ದುಪಡಿ ಮಾಡಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತದ ಮತ ಮತ್ತು ಸದಸ್ಯ ರಾಷ್ಟ್ರಗಳ ಮೂರನೇ ಎರಡರಷ್ಟು ಅಧಿಕೃತ ಅನುಮೋದನೆ ಅಗತ್ಯವಿದೆ. ಇದರಲ್ಲಿ ಐದೂ ಖಾಯಂ ಸದಸ್ಯ ರಾಷ್ಟ್ರಗಳ ಸಮ್ಮತಿ ಕಡ್ಡಾಯವಾಗಿದೆ.

ಭಾರತದ ನಿಲುವಿಗೆ ರಷ್ಯಾ ಸ್ಪಷ್ಟ ಬೆಂಬಲವನ್ನು ಮುಂದುವರಿಸಿದ್ದರೂ, ಅಧಿಕೃತ ಸುಧಾರಣೆಗಳು ಇನ್ನೂ ಸ್ಥಗಿತಗೊಂಡಿವೆ. ಇತರ ಖಾಯಂ ಸದಸ್ಯರು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ ಮತ್ತು ರಷ್ಯಾದ ನಿಕಟ ಕಾರ್ಯತಂತ್ರದ ಪಾಲುದಾರ ದೇಶವಾದ ಚೀನಾ, ಭಾರತವನ್ನು ಸೇರ್ಪಡೆಗೊಳಿಸುವುದನ್ನು ತೀವ್ರವಾಗಿ ವಿರೋಧಿಸುತ್ತಿದೆ(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net