ನಿತಿನ್ ಗಡ್ಕರಿ-ಸಂಸದೆ ಪ್ರಿಯಾಂಕಾ ಭೇಟಿ...! ರಾಹುಲ್​ ಬಗ್ಗೆ ಕೇಂದ್ರ ಸಚಿವರು ಹೇಳಿದ್ದೇನು..? | Priyanka Gandhi

ನಿತಿನ್ ಗಡ್ಕರಿ-ಸಂಸದೆ ಪ್ರಿಯಾಂಕಾ ಭೇಟಿ..
ನಿತಿನ್ ಗಡ್ಕರಿ-ಸಂಸದೆ ಪ್ರಿಯಾಂಕಾ ಭೇಟಿ..
Published on
ತಿರುವನಂತಪುರಂ: ಕೇರಳದ ಮೂಲಕ ಹಾದು ಹೋಗುವ ಆರು ರಸ್ತೆ ಯೋಜನೆಗಳ ಕುರಿತಾಗಿ ಮನವಿ ಸಲ್ಲಿಸಲು ವಯನಾಡ್​ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಗಡ್ಕರಿ ಆಡಿದ ಮಾತಿಗೆ ಅಲ್ಲಿದ್ದವರೆಲ್ಲಾ ನಗೆಗಡಲಲ್ಲಿ ತೇಲಿದ್ದಾರೆ ಎಂದು ವರದಿಯಾಗಿದೆ.
ಸಂಸದೆ ಪ್ರಿಯಾಂಕಾ ಗಾಂಧಿ ಪ್ರಸ್ತಾಪಿಸಿದ ಕೆಲ ಯೋಜನೆಗಳು ಕೇರಳ ರಾಜ್ಯ ಸರ್ಕಾರದ ಅಧೀನದಲ್ಲಿರುವುದರಿಂದ, ಕೇಂದ್ರವು ಅವುಗಳನ್ನು ಬಗೆಹರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದು, ಉಳಿದವುಗಳನ್ನು ಪರಿಶೀಲಿಸುವುದಾಗಿ ತಿಳಿಸಿದ್ದಾರೆ.
ಇತ್ತೀಚೆಗೆ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ತಮ್ಮ ಕ್ಷೇತ್ರವಾದ ರಾಯ್ ಬರೇಲಿಯ ಕೆಲವು ರಸ್ತೆಗಳ ಬಗ್ಗೆ ತಮ್ಮನ್ನು ಭೇಟಿಯಾದರು ಎಂದು ಗಡ್ಕರಿ ಹೇಳಿದ್ದು, ನಾನು ನಿಮ್ಮ ಸಹೋದರನ ಸಮಸ್ಯೆಗಳನ್ನು ಪರಿಹರಿಸಿ, ನಿಮ್ಮ ಕ್ಷೇತ್ರದ ಬಗ್ಗೆ ವಿಚಾರಿಸದಿದ್ದರೆ ನೀವು ದೂರು ನೀಡುತ್ತೀರಿ ಎಂದಾಗ, ಪ್ರಿಯಾಂಕಾ ಗಾಂಧಿ ಸೇರಿದಂತೆ ಕೋಣೆಯಲ್ಲಿದ್ದ ಇತರರು ನಗೆಗಡಲಲ್ಲಿ ತೇಲಿದರು. ಕೇರಳದ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಪ್ರಿಯಾಂಕಾ, ರಾಜ್ಯ ಸರ್ಕಾರದ ಅಧಿನದಲ್ಲಿ ಬರುವ ಯೋಜನೆಗಳನ್ನು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಕೈಗೆತ್ತಿಕೊಳ್ಳಲಾಗುವುದು ಎಂದು ಕೇಂದ್ರ ಸಚಿವರಿಗೆ ತಿಳಿಸಿದರು.

ರಾಹುಲ್..ಪ್ರಿಯಾಂಕಾ ಮುನಿಸು..?

ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ನಡುವೆ ಎಲ್ಲವೂ ಸರಿ ಇಲ್ಲ ಎಂದು ಕೇಂದ್ರ ಸಚಿವ ರವನೀತ್ ಸಿಂಗ್ ಬಿಟ್ಟು ಹೇಳಿಕೊಂಡಿದ್ದರು. ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಬಿಟ್ಟು, ಸದನದಲ್ಲಿ ಪ್ರಿಯಾಂಕಾ ಗಾಂಧಿ ಮತ್ತು ತಮ್ಮ ಭಾಷಣಗಳ ನಡುವಿನ ಹೋಲಿಕೆಯಿಂದ ಅಸಮಾಧಾನಗೊಂಡಿದ್ದ ರಾಹುಲ್​ ಸಂಸತ್ತಿನ ಚಳಿಗಾಲದ ಅಧಿವೇಶನದ ಮಧ್ಯದಲ್ಲೇ ಜರ್ಮನಿಗೆ ತೆರಳಿದ್ದಾರೆ ಎಂದು ಆರೋಪಿಸಿದರು.
ಇಬ್ಬರು ಗಾಂಧಿಗಳು ಜಗಳವಾಡುತ್ತಿದ್ದಾರೆ. ಜನರು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರ ಭಾಷಣಗಳನ್ನು ಸದನದಲ್ಲಿ ಹೋಲಿಸಿದ್ದಾರೆಂದು ನನಗೆ ತಿಳಿದು ಬಂದಿದೆ. ಇದು ರಾಹುಲ್​​ರನ್ನು ಅಸಮಾಧಾನಗೊಳಿಸಿದ್ದು, ಆದ್ದರಿಂದಲೇ ಅವರು ಕುಟುಂಬ ಮತ್ತು ಪಕ್ಷದ ಕೆಲ ನಾಯಕರೊಂದಿಗೆ ಜಗಳವಾಡಿ ವಿದೇಶಕ್ಕೆ ತೆರಳಿದ್ದಾರೆ ಎಂದರು. ಸಚಿವ ಬಿಟ್ಟು ಅವರ ಈ ಹೇಳಿಕೆಗಳಿಗೆ ಕಾಂಗ್ರೆಸ್ ಪಕ್ಷದ ಯಾವ ನಾಯಕರು ಕೂಡ ಪ್ರತಿಕ್ರಿಯೆ ನೀಡಿಲ್ಲ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net