

ವಿಧಾನಸಭೆ ನಿರ್ಮಾಣದ ವಿರುದ್ಧ ಕಿಡಿಕಾರಿದ ಸಂಸದೆ ಕನಿಮೋಳಿ.
ಅಮೆರಿಕ ಅಧ್ಯಕ್ಷರಾಗಲು ಜ್ಯೋತಿಷಿ ಬಳಿ ಕೇಳಿ ಪ್ರಸ್ತಾವನೆ ಮುಂದಿಟ್ಟಿರಬೇಕು.
ಸಿಎಂ ವಿಜಯ್ ವಿರುದ್ಧ ವಾಗ್ದಾಳಿ ನಡೆಸಿದ ಡಿಎಂಕೆ ಸಂಸದೆ ಕನಿಮೋಳಿ.
ತಮಿಳುನಾಡಿನ ಸರ್ಕಾರ ವಿಜಯ್ ಅವರ ವೈಯಕ್ತಿಕ ಜ್ಯೋತಿಷಿ ರಿಕ್ಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರನ್ನು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯ ಅಧಿಕಾರಿಯಾಗಿ ನೇಮಕ ಮಾಡಿಕೊಂಡ ಬೆನ್ನಲ್ಲೇ ಸಾಕಷ್ಟು ಟೀಕೆಗಳು ವ್ಯಕ್ತವಾಗಿತ್ತು. ನಂತರ ಸಚಿವಾಲಯ ಹೊರಡಿಸಿದ್ದ ಆದೇಶವನ್ನು ವಾಪಸ್ ಪಡೆದುಕೊಂಡಿತ್ತು, ಸದ್ಯ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಡಿಎಂಕೆ ಕಾರ್ಯಕ್ರಮವೊಂದರಲ್ಲಿ ಸಂಸದೆ ಕನಿಮೋಳಿ ಕರುಣಾನಿಧಿ ಸಿಎಂ ವಿಜಯ್ ವಿರುದ್ಧ ಲೇವಡಿ ಮಾಡಿದ್ದಾರೆ.
ಡಿಎಂಕೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಡಿಎಂಕೆ ಸಂಸದೆ ಕನಿಮೋಳಿ, ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿಜಯ್ ಅವರ ಪ್ರಸ್ತಾವಿತ ಹೊಸ ಸೆಕ್ರೆಟರಿಯೇಟ್ ಯೋಜನೆ ಹಾಗೂ ಅವರ ಜ್ಯೋತಿಷಿ ರಿಕ್ಕಿ ರಾಧನ್ ಪಂಡಿತ್ ವೆಟ್ರಿವಲ್ ಅವರ ಮೇಲಿನ ನಂಬಿಕೆಯನ್ನು ಅವರು ಕಟುವಾಗಿ ಗೇಲಿ ಮಾಡಿದ್ದಾರೆ.
ಸಿಎಂ ವಿಜಯ್ ಅವರು 1200 ಕೋಟಿ ವೆಚ್ಚದ ಹೊಸ ವಿಧಾನಸಭೆ ಹಾಗೂ ಸಂಯೋಜಿತ ಸಚಿವಾಲಯ ಸಂಕೀರ್ಣವನ್ನು ನಿರ್ಮಾಣ ಮಾಡುವ ಬೃಹತ್ ಪ್ರಸ್ತಾಪವನ್ನು ಸೆ.3ರಂದು ಉಲ್ಲೇಖಿಸಿದ್ದರು. ಈ ಬಗ್ಗೆ ಮಾತನಾಡಿ ಕನಿಮೋಳಿ ಅವರು, 'ಜ್ಯೋತಿಷಿ ಹೇಳಿದರೋ ಅಥವಾ ಬೇರೆ ಏನೋ, ಇವರು ಹೊಸ ವಿಧಾನಸಭೆಯನ್ನು ನಿರ್ಮಿಸಲು ಹೊರಟಿದ್ದಾರೆ' ಎಂದು ಲೇವಡಿ ಮಾಡಿದರು.
'ಸಿಎಂ ವಿಜಯ್ ಅವರ ಮನೆಯಿಂದ ಕೇವಲ 100 ಮೀಟರ್ ದೂರದಲ್ಲಿ ಪಟ್ಟಿನಪಕ್ಕಂನಲ್ಲಿ ವಿಧಾನಸಭೆ ಕಟ್ಟಲು ನಿರ್ಧರಿಸಿದ್ದರ ಹಿಂದೆ ಜ್ಯೋತಿಷ್ಯ ಕಾರಣ ಇರಬಹುದು. ಅವರ ಜ್ಯೋತಿಷಿ ರಿಕ್ಕಿ ರಾಧನ್ ಪಂಡಿತ್, ಸಮುದ್ರದ ಹತ್ತಿರ ಸಚಿವಾಲಯ ಕಟ್ಟಿದರೆ ವಿಜಯ್‌ಗೆ ರಾಜಯೋಗ, ಅಮೆರಿಕ ಅಧ್ಯಕ್ಷರಾಗುವ ಯೋಗ, ಪ್ರಧಾನಿಯಾಗುವ ಯೋಗ ಕೂಡ ಇದೆ ಅಂತ ಹೇಳಿರಬಹುದು. ಹೀಗಾಗಿ ಅಲ್ಲಿ ವಿಧಾನಸಭೆ ನಿರ್ಮಿಸಲು ಹೊರಟಿದ್ದಾರೆ' ಎಂದು ವ್ಯಂಗ್ಯವಾಡಿದರು.
ಅವರ ಹೊಸ ಯೋಜನೆಯಿಂದಾಗಿ ರಾಜಕೀಯವಾಗಿ ಮಾತ್ರ ಅಲ್ಲದೇ ಪಟ್ಟಿನಪಕ್ಕಂ ಮತ್ತು ಸುತ್ತಮುತ್ತಲಿನ ಮೀನುಗಾರರು ಭಾರಿ ಸಮಸ್ಯೆ ಎದುರಿಸುವ ಸಾಧ್ಯತೆ ಇದೆ. ಏಕೆಂದರೆ, ಪಟ್ಟಣಪಕಂನ ತಮಿಳುನಾಡು ವಸತಿ ಮಂಡಳಿ ಜಾಗದಲ್ಲಿ ಪ್ರಸ್ತಾವನೆಯಾಗಿದೆ. ಈ ಜಾಗದಲ್ಲಿ ಇಂದು 1500 ಕ್ಕೂ ಹೆಚ್ಚು ಕುಟುಂಬ ದೋಣಿ ನಿಲ್ಲಿಸಿ, ಒಣಗಿಸುವುದು ಹಾಗೂ ಮೀನು ಸಾಕಣೆ ಮಾಡಿಕೊಂಡು ತಮ್ಮ ಜೀವನಕ್ಕೆ ಆದಾಯವನ್ನು ಕಂಡುಕೊಳ್ಳುತ್ತಿದ್ದಾರೆ ಎಂದರು.
ಮುಂದುವರೆದು, ಸಿಎಂ ಪ್ರಸ್ತಾವನೆಯಿಂದಾಗಿ ಮೀನುಗಾರರ ಬದುಕು ಬೀದಿಗೆ ಬರಲಿದೆ. ಆರ್ಥಿಕ ವಿಚಾರದಲ್ಲಿ ಜನರು ಸಮಸ್ಯೆಯನ್ನು ಎದುರಿಸುತ್ತಾರೆ. ಜೊತೆಗೆ ಈ ಯೋಜನೆ ಜಾರಿಯಾದರೆ ಬೃಹತ್ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದರು.
ಈ ಹಿಂದೆ ಮೇ 10ರಂದು ಅಧಿಕಾರ ವಹಿಸಿಕೊಂಡ ನಂತರ ವಿಜಯ್ ಅವರು ತಮ್ಮ ಜ್ಯೋತಿಷಿ ಪಂಡಿತ್ ವೆಟ್ರಿವಲ್ ಅವರನ್ನು ಮೇ 12ರಂದು ವಿಶೇಷ ಕರ್ತವ್ಯಾಧಿಕಾರಿಯಾಗಿ ನೇಮಕ ಮಾಡಿಕೊಂಡಿದ್ದರು, ಈ ಬಗ್ಗೆ ಡಿಎಂಕೆ, ವಿಪಕ್ಷಗಳಾದ VCK, CPI(M) ಮತ್ತು CPI ತೀವ್ರ ವಿರೋಧ ವ್ಯಕ್ತಪಡಿಸಿತ್ತು.ಕೊನೆಗೆ ಆ ನೇಮಕಾತಿಯನ್ನು ರದ್ದುಗೊಳಿಸಲಾಗಿತ್ತು, (ಏಜೆನ್ಸೀಸ್).