Assam Cabinet | 6 ಸಮುದಾಯಗಳಿಗೆ ಎಸ್‌ಟಿ ಸ್ಥಾನಮಾನ ನೀಡುವ ವರದಿಗೆ ಅಸ್ಸಾಂ ಸಂಪುಟ ಅಸ್ತು; ಕೇಂದ್ರದ ಅಂಗಳಕ್ಕೆ ಚೆಂಡು

Assam Cabinet |  ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ
Assam Cabinet | ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ
Published on
ದಿಸ್ಪೂರ್​​: ಮುಂದಿನ ವರ್ಷದ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ಆರಂಭಿಸಿರುವ ಆಡಳಿತರೂಢ ಬಿಜೆಪಿ, ಮಹತ್ವದ ಹೆಜ್ಜೆಯನ್ನೊಂದು ಇಟ್ಟಿದ್ದು, ಸರ್ಕಾರ ರಾಜ್ಯದ ಆರು ಸಮುದಾಯಗಳಿಗೆ ಪರಿಶಿಷ್ಟ ಪಂಗಡ (ಎಸ್‌ಟಿ) ಸ್ಥಾನಮಾನವನ್ನು ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡುವ ಸಚಿವರ ಗುಂಪಿನ ವರದಿಯನ್ನು ಅನುಮೋದಿಸಿದೆ. 
ಈ ಸಮುದಾಯಗಳು ತಮ್ಮ ಅನೇಕ ವರ್ಷಗಳ ಬೇಡಿಕೆಯನ್ನು ಈಡೇರಿಸುವಂತೆ ಪ್ರತಿಭಟನೆ ನಡೆಸುತ್ತಿರುವ ಮಧ್ಯೆ ಸ್ಥಳೀಯ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದ್ದು, ಇದಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದೇ ಆದಲ್ಲಿ, ಅಸ್ಸಾಂ ಬುಡಕಟ್ಟು ರಾಜ್ಯವಾಗಲಿದೆ.
ಪರಿಶಿಷ್ಟ ಪಂಗಡದ ಸ್ಥಿತಿಗತಿ ಕುರಿತ ಸಚಿವರ ಗುಂಪಿನ ವರದಿಗೆ ಅನುಮೋದನೆ
ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅಧ್ಯಕ್ಷತೆಯಲ್ಲಿ ನಿನ್ನೆ ಸಂಜೆ ಲೋಕ ಸೇವಾ ಭವನದಲ್ಲಿ ನಡೆದ ಅಸ್ಸಾಂ ಸಚಿವ ಸಂಪುಟ ಸಭೆಯಲ್ಲಿ ಹಲವಾರು ಪ್ರಮುಖ ನಿರ್ಧಾರಗಳನ್ನು ಅನುಮೋದಿಸಲಾಗಿದೆ ಎಂದು ತಿಳಿದುಬಂದಿದೆ.
ಆರು ಪ್ರಮುಖ ಸಮುದಾಯಗಳಾದ ತೈ ಅಹೋಮ್, ಚುಟಿಯಾ, ಮೊರಾನ್, ಮೊಟೊಕ್, ಕೋಚ್-ರಾಜ್‌ಬೊಂಗ್ಶಿ ಮತ್ತು ಟೀ ಬುಡಕಟ್ಟುಗಳು (ಆದಿವಾಸಿಗಳು) ಗೆ ಎಸ್‌ಟಿ ಸ್ಥಾನಮಾನ ನೀಡುವ ಕುರಿತು ಜಿಒಎಂ ವರದಿಯನ್ನು ಅಂಗೀಕರಿಸುವುದು ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿದೆ. ಶಿಕ್ಷಣ ಸಚಿವ ಡಾ. ರಾನೋಜ್ ಪೆಗು, ಸಚಿವರಾದ ಪಿಜುಶ್ ಹಜಾರಿಕಾ ಮತ್ತು ಕೇಶಬ್ ಮಹಾಂತ ಇದರ ಸದಸ್ಯರಾಗಿದ್ದರು.
ಈ ವರದಿಯನ್ನು ಅಸ್ಸಾಂ ವಿಧಾನಸಭೆಯಲ್ಲಿ ಮಂಡಿಸಿ, ಆ ಬಳಿಕ ಗೃಹ ಸಚಿವಾಲಯಕ್ಕೆ ಕಳುಹಿಸಲಾಗುವುದು ಎಂದು ಮುಖ್ಯಮಂತ್ರಿ ಹಿಂಮತ್​ ಬಿಸ್ವಾ ಶರ್ಮಾ ತಿಳಿಸಿದ್ದು, ಈ ವರದಿ ನಮ್ಮೆಲ್ಲರ ಆಕಾಂಕ್ಷೆಗಳನ್ನು ಈಡೇರಿಸುವ ವಿಶ್ವಾಸವಿದೆ, ಬುಡಕಟ್ಟು ವ್ಯವಹಾರಗಳ ಇಲಾಖೆಯು ವರದಿಯನ್ನು ಗುರುವಾರ (ನವೆಂಬರ್ 27) ವಿಧಾನಸಭೆಗೆ ಕಳುಹಿಸಲಿದೆ ಎಂದು ಸಿಎಂ ಶರ್ಮಾ ತಿಳಿಸಿದ್ದಾರೆ.
ಈ ವರದಿಯನ್ನು ಸ್ಪೀಕರ್ ಅವರು ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಲು ಅವಕಾಶ ನೀಡಲಿದ್ದು, ಅದನ್ನು ಯಾವಾಗ ಮಂಡಿಸಬೇಕು ಎನ್ನುವುದು ಸ್ಪೀಕರ್ ವಿವೇಚನೆಗೆ ಬಿಟ್ಟಿದ್ದು, ಅಂತಿಮವಾಗಿ ಅವರೇ ಈ ಕುರಿತಾಗಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.

ಅತ್ಯಾಧುನಿಕ ಪರಂಪರೆ ವಸ್ತುಸಂಗ್ರಹಾಲಯಕ್ಕೆ ಭೂ ವರ್ಗಾವಣೆ

ಖಾನಪಾರದ ರೇಶೋಮ್ ನಗರದಲ್ಲಿರುವ ಸರ್ಕಾರಿ ಮುಗಾ ಫಾರ್ಮ್‌ನಿಂದ ಕೈಮಗ್ಗ, ಜವಳಿ ಮತ್ತು ರೇಷ್ಮೆ ಇಲಾಖೆಯ ಮೂರು ಬಿಘಾ ಭೂಮಿಯನ್ನು ಮಾರ್ಪಾಡು ಮಾಡಿ ಸಾಂಸ್ಕೃತಿಕ ವ್ಯವಹಾರಗಳ ಇಲಾಖೆಗೆ ವರ್ಗಾಯಿಸಲು ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಅಸ್ಸಾಂನ ಶ್ರೀಮಂತ ಜವಳಿ ಪರಂಪರೆಯನ್ನು ಸಂರಕ್ಷಿಸಲು ಮತ್ತು ಪ್ರದರ್ಶಿಸಲು ಮೀಸಲಾಗಿರುವ ಆಧುನಿಕ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲು ಈ ಭೂಮಿಯನ್ನು ಬಳಸಲಾಗುವುದು. ಜೆಎಸ್‌ಡಬ್ಲ್ಯೂ ಐ & ಪಿ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್‌ನ ನೆರವಿನೊಂದಿಗೆ ಅಭಿವೃದ್ಧಿಪಡಿಸಲಿರುವ ಈ ವಸ್ತುಸಂಗ್ರಹಾಲಯವು ಲಂಡನ್‌ನ ಬ್ರಿಟಿಷ್ ವಸ್ತುಸಂಗ್ರಹಾಲಯದಿಂದ ಸಾಲದ ಮೇಲೆ ತರಲಾಗುತ್ತಿರುವ ಐತಿಹಾಸಿಕ ವೃಂದಾವಣಿ ವಸ್ತ್ರವನ್ನು ಒಳಗೊಂಡಿದೆ ಎಂದು ಮೂಲಗಳು ತಿಳಿಸಿವೆ(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net