ಕಾರನ್ನು ಸರಿಯಾಗಿ ಪಾರ್ಕ್​ ಮಾಡು ಅಂದಿದ್ದಕ್ಕೆ ಈ ರೀತಿನಾ ಮಾಡೋದು? ಪೆಟ್ರೋಲ್ ಬಂಕ್​ನ ಭಯಾನಕ ದೃಶ್ಯ ವೈರಲ್​... Petrol Pump

ಕಾರನ್ನು ಸರಿಯಾಗಿ ಪಾರ್ಕ್​ ಮಾಡು ಅಂದಿದ್ದಕ್ಕೆ ಈ ರೀತಿನಾ ಮಾಡೋದು? ಪೆಟ್ರೋಲ್ ಬಂಕ್​ನ ಭಯಾನಕ ದೃಶ್ಯ ವೈರಲ್​... Petrol Pump
ಕಾರನ್ನು ಸರಿಯಾಗಿ ಪಾರ್ಕ್​ ಮಾಡು ಅಂದಿದ್ದಕ್ಕೆ ಈ ರೀತಿನಾ ಮಾಡೋದು? ಪೆಟ್ರೋಲ್ ಬಂಕ್​ನ ಭಯಾನಕ ದೃಶ್ಯ ವೈರಲ್​... Petrol Pump
Published on: 

ಪ್ರಮುಖ ಮುಖ್ಯಾಂಶಗಳು

  • ಕಾರನ್ನು ಸರಿಯಾಗಿ ಪಾರ್ಕ್ ಮಾಡಲು ಹೇಳಿದ್ದಕ್ಕೆ ಪೆಟ್ರೋಲ್ ಬಂಕ್ ಸಿಬ್ಬಂದಿ ಮೇಲೆಯೇ ಕಾರು ಹಾಯಿಸಿದ ಚಾಲಕ
  • ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿ ಮದ್ಯದ ನಶೆಯಲ್ಲಿ ಮೂವರ ಮೇಲೆ ಕಾರು ನುಗ್ಗಿಸಿದ ಕಿರಾತಕ
  • ಪರಾರಿಯಾಗುವ ಭರದಲ್ಲಿ ಪೆಟ್ರೋಲ್ ಬಂಕ್​​​ನಲ್ಲಿದ್ದ ಎರಡು ಡೀಸೆಲ್ ವಿತರಣಾ ಯಂತ್ರಗಳಿಗೆ ಭಾರಿ ಹಾನಿ
  • ಪ್ರಕರಣ ದಾಖಲಿಸಿಕೊಂಡು ಮುಖ್ಯ ಆರೋಪಿ ದೀಪುವನ್ನು ಬಂಧಿಸಿ ಕಾರು ವಶಪಡಿಸಿಕೊಂಡ ಪೊಲೀಸರು
ಲಖನೌ: ಕಾರನ್ನು ಸರಿಯಾಗಿ ಪಾರ್ಕ್​ ಮಾಡುವಂತೆ ಹೇಳಿದ್ದಕ್ಕೆ ಆಕ್ರೋಶಗೊಂಡ ಯುವಕನೊಬ್ಬ ಪೆಟ್ರೋಲ್ ಬಂಕ್ ( Petrol Pump ) ನೌಕರ ಹಾಗೂ ಗ್ರಾಹಕರ ಮೇಲೆ ಕಾರು ನುಗ್ಗಿಸಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ.
ಗಾಜಿಯಾಬಾದ್‌ನ ಕೊತ್ವಾಲಿ ಪ್ರದೇಶದ ಜಿ.ಟಿ. ರಸ್ತೆಯಲ್ಲಿರುವ ಸಿಲ್ವರ್ ಸಿಟಿ ಬಳಿಯ ಪೆಟ್ರೋಲ್ ಬಂಕ್‌ನಲ್ಲಿ ಭಾನುವಾರ ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಪೆಟ್ರೋಲ್​ ಬಂಕ್‌ಗೆ ಮದ್ಯೆದ ನಶೆಯಲ್ಲಿ ಆಗಮಿಸಿದ ಯುವಕರ ಗುಂಪೊಂದು ಈ ದುಷ್ಕೃತ್ಯ ಎಸಗಿದೆ ಎಂದು ತಿಳಿದುಬಂದಿದೆ.
ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಪೆಟ್ರೋಲ್ ಬಂಕ್ ನೌಕರನಾದ ಮನೋಜ್ ಕುಮಾರ್, ಕಾರಿನ ಚಾಲಕನಿಗೆ ವಾಹನವನ್ನು ಸರಿಯಾಗಿ ಇಂಧನ ವಿತರಣೆ ಮಾಡವ ಯಂತ್ರದ​ ಕಡೆಗೆ ತಿರುಗಿಸಿ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ಆದರೆ, ಈ ಕ್ಷಲಕ ಮಾತಿಗೆ ವಿಪರೀತ ಕೋಪಗೊಂಡ 'ದೀಪು' ಎಂಬಾತ ಕಾರನ್ನು ವೇಗವಾಗಿ ತಿರುಗಿಸಿಕೊಂಡು ಬಂದು ಏಕಾಏಕಿ ನೌಕರ ಮನೋಜ್ ಹಾಗೂ ಅಲ್ಲಿ ನಿಂತಿದ್ದ ಇಬ್ಬರು ಗ್ರಾಹಕರತ್ತ ನುಗ್ಗಿಸಿದ್ದಾನೆ. ಈ ಭೀಕರ ಅಪಘಾತದ ದೃಶ್ಯಗಳು ಪೆಟ್ರೋಲ್ ಬಂಕ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಅತಿವೇಗವಾಗಿ ಬಂದ ಕಾರು, ಡಿಕ್ಕಿ ಹೊಡೆದ ರಭಸಕ್ಕೆ ವ್ಯಕ್ತಿಯೊಬ್ಬರು ಸುಮಾರು ಐದು ಅಡಿ ಎತ್ತರಕ್ಕೆ ಗಾಳಿಯಲ್ಲಿ ಹಾರಿ ಬಿದ್ದಿದ್ದಾರೆ ಹಾಗೂ ಪೆಟ್ರೋಲ್ ಬಂಕ್ ನೌಕರ ಮನೋಜ್ ಅವರ ಮೇಲೆಯೇ ಕಾರು ಹರಿದು ಹೋಗಿದೆ. ಈ ದುರ್ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಮೂವರನ್ನು ತಕ್ಷಣವೇ ಹತ್ತಿರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನೌಕರ ಮನೋಜ್ ಅವರ ಸ್ಥಿತಿ ಗಂಭೀರವಾಗಿರುವ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಪಿಲ್ಖುವಾದ ಜಿ.ಎಸ್. ಮೆಡಿಕಲ್ ಕಾಲೇಜಿಗೆ ರವಾನಿಸಲಾಗಿದೆ. ಮೂವರೂ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಡಿಕ್ಕಿ ಹೊಡೆದು ಸುಮ್ಮನಾಗದ ಆರೋಪಿ ಚಾಲಕ, ಅಲ್ಲಿಂದ ಪರಾರಿಯಾಗುವ ಭರದಲ್ಲಿ ಪೆಟ್ರೋಲ್ ಬಂಕ್‌ನಲ್ಲಿದ್ದ ಎರಡು ಡೀಸೆಲ್ ವಿತರಣಾ ಯಂತ್ರಗಳಿಗೂ ತೀವ್ರ ಹಾನಿ ಉಂಟುಮಾಡಿದ್ದಾನೆ. ಘಟನೆಯ ತೀವ್ರತೆಯನ್ನು ಪರಿಗಣಿಸಿ ಪೆಟ್ರೋಲ್ ಬಂಕ್ ವ್ಯವಸ್ಥಾಪಕ ಅನುರಾಗ್ ಚೌಧರಿ ಅವರು ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಮುಖ್ಯ ಆರೋಪಿ ದೀಪುವನ್ನು ಸೋಮವಾರ ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಘಟನೆಯ ಕುರಿತು ಮಾತನಾಡಿರುವ ಎಸಿಪಿ ಕೊತ್ವಾಲಿ ಉಪಾಸನಾ ಪಾಂಡೆ, ಅಜಾಗರೂಕತೆಯಿಂದ ವಾಹನ ಚಾಲನೆ ಮಾಡುವುದು, ಇತರರ ಜೀವ ಹಾಗೂ ಸುರಕ್ಷತೆಗೆ ಅಪಾಯಂಟು ಮಾಡುವುದು ಮತ್ತು ಉದ್ದೇಶಪೂರ್ವಕವಾಗಿ ಆಸ್ತಿಪಾಸ್ತಿಗಳಿಗೆ ಹಾನಿ ಎಸಗಿದ ಆರೋಪದಡಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 281, 125(a) ಹಾಗೂ 324(4) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ, (ಏಜೆನ್ಸೀಸ್​).