KSRTC ಬಸ್​ ತಡೆದ ಕೇಸ್​: ದೇಶದ ಅತಿ ಕಿರಿಯ ಮೇಯರ್​ ಆರ್ಯಾ, ಕಿರಿಯ ಶಾಸಕ ಸಚಿನ್​ಗೆ ಶಾಕ್​!

ಮಾಜಿ ಮೇಯರ್ ಆರ್ಯ ರಾಜೇಂದ್ರನ್ ಮತ್ತು ಅವರ ಪತಿ ಮತ್ತು ಶಾಸಕ ಸಚಿನ್ ದೇವ್ ಹಾಗೂ ಕೆಎಸ್‌ಆರ್‌ಟಿಸಿ ( KSRTC ) ಚಾಲಕ ಯದು
ಮಾಜಿ ಮೇಯರ್ ಆರ್ಯ ರಾಜೇಂದ್ರನ್ ಮತ್ತು ಅವರ ಪತಿ ಮತ್ತು ಶಾಸಕ ಸಚಿನ್ ದೇವ್ ಹಾಗೂ ಕೆಎಸ್‌ಆರ್‌ಟಿಸಿ ( KSRTC ) ಚಾಲಕ ಯದು
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಮೇಯರ್ ಆರ್ಯ ರಾಜೇಂದ್ರನ್ ಮತ್ತು ಅವರ ಪತಿ ಮತ್ತು ಶಾಸಕ ಸಚಿನ್ ದೇವ್​ಗೆ ನೋಟಿಸ್
  • ಮಾಜಿ ಮೇಯರ್ ಆರ್ಯ ರಾಜೇಂದ್ರನ್ ದೇಶದ ಅತಿ ಕಿರಿಯ ಮೇಯರ್​ ಎಂಬ ಹೆಗ್ಗಳಿಕೆ ಹೊಂದಿದ್ದರೆ
  • ಪತಿ ಸಚಿನ್ ದೇವ್​​ ಕೇರಳದ ರಾಜ್ಯದ ಅತಿ ಕಿರಿಯ ಶಾಸಕನೆಂಬ ದಾಖಲೆ ಬರೆದಿದ್ದಾರೆ
  • ರಸ್ತೆ ಮಧ್ಯದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ಲಿಸಿದ ಘಟನೆಗೆ ಸಂಬಂಧಿಸಿದಂತೆ ನೋಟಿಸ್​ ಜಾರಿ
ತಿರುವನಂತಪುರ: ಇಲ್ಲಿನ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಮಾಜಿ ಮೇಯರ್ ಆರ್ಯ ರಾಜೇಂದ್ರನ್ ಮತ್ತು ಅವರ ಪತಿ ಮತ್ತು ಶಾಸಕ ಸಚಿನ್ ದೇವ್ ಅವರಿಗೆ ನೋಟಿಸ್ ಜಾರಿ ಮಾಡಿದೆ. ಕೆಎಸ್‌ಆರ್‌ಟಿಸಿ ( KSRTC ) ಚಾಲಕ ಯದು ಸಲ್ಲಿಸಿದ ದೂರಿನ ಮೇರೆಗೆ ನೋಟಿಸ್ ನೀಡಲಾಗಿದೆ.
ಅಂದಹಾಗೆ, ಮಾಜಿ ಮೇಯರ್ ಆರ್ಯ ರಾಜೇಂದ್ರನ್ ದೇಶದ ಅತಿ ಕಿರಿಯ ಮೇಯರ್​ ಎಂಬ ಹೆಗ್ಗಳಿಕೆ ಹೊಂದಿದ್ದರೆ, ಅವರ ಪತಿ ಸಚಿನ್​ ಕೇರಳದ ರಾಜ್ಯದ ಅತಿ ಕಿರಿಯ ಶಾಸಕನೆಂಬ ದಾಖಲೆ ಬರೆದಿದ್ದಾರೆ.

ನೋಟಿಸ್​ ಏಕೆ?

ರಸ್ತೆ ಮಧ್ಯದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ಲಿಸಿದ ಘಟನೆಯಲ್ಲಿ ಆರ್ಯ ಮತ್ತು ಸಚಿನ್ ಅವರನ್ನು ಆರೋಪಪಟ್ಟಿಯಿಂದ ಹೊರಗಿಟ್ಟಿದರ ವಿರುದ್ಧ ಚಾಲಕ ಯದು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಪ್ರತಿಕ್ರಿಯೆಯಾಗಿ ನ್ಯಾಯಾಲಯ ಈ ನೋಟಿಸ್ ನೀಡಿದೆ. ಕೇರಳ ಪೊಲೀಸರು, ಮಾಜಿ ಮೇಯರ್ ಸಹೋದರ ಅರವಿಂದ್ ಅವರನ್ನು ಮಾತ್ರ ಆರೋಪಿಯನ್ನಾಗಿ ಹೆಸರಿಸಿ ಆರೋಪಪಟ್ಟಿ ಸಲ್ಲಿಸಿದ್ದರು. ಇದನ್ನು ರದ್ದುಗೊಳಿಸಬೇಕೆಂದು ಯದು ಒತ್ತಾಯಿಸಿದ್ದಾರೆ. ಅಲ್ಲದೆ, ತಮ್ಮೊಂದಿಗಿದ್ದ ಕಂಡಕ್ಟರ್ ಅನ್ನು ಆರೋಪಿಯನ್ನಾಗಿ ಮಾಡಬೇಕೆಂದು ಕೂಡ ಒತ್ತಾಯಿಸುತ್ತಿದ್ದಾರೆ.

ಏನಿದು ಪ್ರಕರಣ?

2024, ಏಪ್ರಿಲ್ 27ರಂದು ಆರ್ಯ ರಾಜೇಂದ್ರನ್​ ದಂಪತಿ ತಮ್ಮ ಖಾಸಗಿ ವಾಹನದ ಮೂಲಕ ಕೆಸ್​ಆರ್​ಟಿಸಿ ಬಸ್​ ಓವರ್​ಟೇಕ್​ ಮಾಡುವಾಗ ಚಾಲಕ ಯಧು ಕೆಟ್ಟದಾಗಿ ಸನ್ನೆ ಮಾಡುವ ಮೂಲಕ ಅಸಭ್ಯವಾಗಿ ವರ್ತಿಸಿದ ಎಂದು ಆರೋಪ ಮಾಡಿದರು. ಇದೇ ವಿಚಾರಕ್ಕೆ ಸ್ಥಳದಲ್ಲಿ ವಾಗ್ವಾದ ಸಹ ನಡೆಯಿತು. ಈ ಘಟನೆಯ ಬಗ್ಗೆ ಮಾತನಾಡಿದ ಮೇಯರ್​ ಆರ್ಯ, ಇದು ಬಸ್​ ಅನ್ನು ಓವರ್​ಟೇಕ್​ ಮಾಡುವ ವಿಚಾರ ಮಾತ್ರವಲ್ಲ, ಮಹಿಳೆಯರ ಕಡೆಗೆ ಬಸ್​ ಚಾಲಕನೊಬ್ಬ ಅಸಭ್ಯವಾಗಿ ವರ್ತಿಸಿದ್ದನ್ನು ಸಹಿಸಲು ಸಾಧ್ಯವಿಲ್ಲ ಎಂದಿದ್ದರು. ನನ್ನ ಸೋದರ ಸಂಬಂಧಿಯ ಮದುವೆ ಇತ್ತು. ಸಮಾರಂಭ ಮುಗಿಸಿ ಕುಟುಂಬ ಸಮೇತ ಮನೆಗೆ ಮರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಕೆಎಸ್‌ಆರ್‌ಟಿಸಿ ಬಸ್ ನಮ್ಮ ಕಾರಿಗೆ ಡಿಕ್ಕಿ ಹೊಡೆದಿದೆ. ಆದರೆ ನಾವು ಅದನ್ನು ನಿರ್ಲಕ್ಷಿಸಿದ್ದೇವೆ. ಆದರೆ ಚಾಲಕ ನಮಗೆ ದಾರಿ ನೀಡಲು ನಿರಾಕರಿಸಿದನು. ಕೊನೆಗೆ ನಾವು ಆತನನ್ನು ಹಿಂದಿಕ್ಕಿ, ಓವರ್​ಟೇಕ್​ ಮಾಡುವಾಗ ಚಾಲಕ ಅಶ್ಲೀಲ ಸನ್ನೆಗಳನ್ನು ಮಾಡುವುದನ್ನು ನಾನು ಮತ್ತು ನನ್ನ ಅತ್ತಿಗೆ ಗಮನಿಸಿದೆವು. ಬಳಿಕ ಚಾಲಕನನ್ನು ಪಾಳಯಂ ಸಫಲ್ಯಂ ಕಾಂಪ್ಲೆಕ್ಸ್‌ನ ಮುಂದೆ ತಡೆದು ನಿಲ್ಲಿಸಿದೆವು ಎಂದು ಆರ್ಯ ತಿಳಿಸಿದರು. ಈ ವೇಳೆ ಚಾಲಕನ ಪ್ರತಿಕ್ರಿಯೆ ದಿಗಿಲು ಹುಟ್ಟಿಸುವಂತಿತ್ತು. ಚಾಲಕ ನನ್ನ ಹಾಗೂ ನನ್ನ ಸಹೋದರನೊಂದಿಗೆ ಅಸಭ್ಯವಾಗಿ ಮಾತನಾಡಿದ್ದಾರೆ. ಅವರ ಅಶಿಸ್ತಿನ ವರ್ತನೆಯನ್ನು ಸಾಕ್ಷಿಗಳ ಮೂಲಕ ರುಜುವಾತುಪಡಿಸಬಹುದು. ಹೆಚ್ಚಿನ ದುರ್ನಡತೆಯನ್ನು ಗಮನಿಸಿದ ನಂತರ ನಾನು ಸಾರಿಗೆ ಸಚಿವ ಕೆ.ಬಿ.ಗಣೇಶ್ ಕುಮಾರ್ ಅವರನ್ನು ಸಂಪರ್ಕಿಸಿದೆ. ಜಾಗೃತ ದಳ ಮತ್ತು ಕಂಟೋನ್ಮೆಂಟ್ ಪೊಲೀಸರು ಸ್ಥಳಕ್ಕೆ ಬಂದರು. ಅಧಿಕಾರಿಗಳು ಮಧ್ಯಪ್ರವೇಶಿಸಿದ ನಂತರ ಚಾಲಕ ಕ್ಷಮೆಯಾಚಿಸಿದರೂ, ನಾನು ಅದನ್ನು ಸ್ವೀಕರಿಸಲು ನಿರಾಕರಿಸಿದೆ. ಇದು ನನ್ನ ಬಗ್ಗೆ ಮಾತ್ರವಲ್ಲ, ಮಹಿಳೆಯರು ಅನುಭವಿಸುವ ಅವಮಾನಕ್ಕೆ ಸಂಬಂಧಿಸಿದ್ದಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಚಾಲಕ ಯಧು, ಘಟನೆಯ ಬಗ್ಗೆ ತಮ್ಮ ಹೇಳಿಕೆಯನ್ನು ನೀಡಿದರು. ಮೇಯರ್ ಮತ್ತು ಅವರ ಸಹಚರರು ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಪ್ರತಿಪಾದಿಸಿದರು. ಯಧು ಪ್ರಕಾರ, ಮೇಯರ್ ವಾಹನವು ಪ್ಲಾಮೂಡ್ ಮತ್ತು ಪಿಎಂಜಿ ನಡುವಿನ ಏಕಮುಖ ರಸ್ತೆಯಲ್ಲಿ ಎಡಭಾಗದಿಂದ ಬಸ್ ಅನ್ನು ಹಿಂದಿಕ್ಕಲು ಪ್ರಯತ್ನಿಸಿತು. ತಿರುವನಂತಪುರಂ ಮೇಯರ್ ಮತ್ತು ಎಂಎಲ್ಎ ಎಂಬುದು ಗೊತ್ತಿಲ್ಲದೆ ನಾನು ಅವರೊಂದಿಗೆ ವಾಗ್ವಾದ ನಡೆಸಿದ್ದೇನೆ. ತ್ರಿಶೂರ್-ಆಲಪ್ಪುಳ-ತಿರುವನಂತಪುರ ಮಾರ್ಗದ ಬಸ್ ಇದಾಗಿದೆ. ನಾನು ಈಗಾಗಲೇ ಎರಡು ವಾಹನಗಳಿಗೆ ಓವರ್‌ಟೇಕ್ ಮಾಡಲು ಅವಕಾಶ ನೀಡಿದ್ದೆ. ಮೇಯರ್ ಕಾರು ಮೂರನೆಯದು. ಪ್ಲಾಮೂಡ್ ಮತ್ತು ಪಿಎಂಜಿ ನಡುವಿನ ಏಕಮುಖ ಮಾರ್ಗದಲ್ಲಿ ಕಾರನ್ನು ಓವರ್‌ಟೇಕ್ ಮಾಡಲು ಅವಕಾಶವಿರಲಿಲ್ಲ. ಹೀಗಿದ್ದರೂ, ಕಾರು ಬಸ್ಸಿನ ಮುಂದೆ ನಿಂತಿತು. ನಾನು ಅವರ ಅಗೌರವದ ವರ್ತನೆಗೆ ಪ್ರತಿಕ್ರಿಯಿಸಲಿಲ್ಲ. ಅಲ್ಲಿಯವರೆಗೆ ಅವರು ಯಾರೆಂಬುದು ಸಹ ನನಗೆ ತಿಳಿದಿರಲಿಲ್ಲ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ನನ್ನ ತಪ್ಪು ಕಂಡು ಬಂದರೆ ಕ್ರಮ ಕೈಗೊಳ್ಳಬಹುದು ಎಂದು ಯಧು ಹೇಳಿದ್ದರು.
ಆರ್ಯ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡರು. ಆದರೆ, ಕೆಎಸ್‌ಆರ್‌ಟಿಸಿ ಬಸ್‌ಗೆ ಅಡ್ಡಲಾಗಿ ತನ್ನ ಕಾರನ್ನು ನಿಲ್ಲಿಸಿ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಯದು ಪೊಲೀಸರಿಗೆ ದೂರು ನೀಡಿದರು, ಆದರೆ, ಆರಂಭಿಕ ಹಂತದಲ್ಲಿ ಯಾವುದೇ ಪ್ರಕರಣ ದಾಖಲಾಗಲಿಲ್ಲ. ನಂತರ, ಯದು ನ್ಯಾಯಾಲಯದ ಮೆಟ್ಟಿಲೇರಿದರು. ನ್ಯಾಯಾಲಯದ ಸೂಚನೆಯಂತೆ, ಕಂಟೋನ್ಮೆಂಟ್ ಪೊಲೀಸರು ಪ್ರಕರಣ ದಾಖಲಿಸಿದರು.
ಅಪರಾಧ ಎಸಗಲು ಬಸ್‌ಗೆ ಅಕ್ರಮವಾಗಿ ಪ್ರವೇಶಿಸುವುದು, ಅದನ್ನು ಕಾನೂನುಬಾಹಿರವಾಗಿ ನಿಲ್ಲಿಸುವುದು, ಅಶ್ಲೀಲ ಭಾಷೆ ಬಳಸುವುದು ಮತ್ತು ಸಾಕ್ಷ್ಯಗಳನ್ನು ನಾಶಪಡಿಸುವುದು ಸೇರಿದಂತೆ ಆರೋಪಗಳನ್ನು ಮೇಯರ್ ವಿರುದ್ಧ ಹೊರಿಸಬೇಕೆಂದು ಯದು ಒತ್ತಾಯಿಸಿದ್ದರು. ಆದಾಗ್ಯೂ, ಆರೋಪಪಟ್ಟಿಯಲ್ಲಿ ಆರ್ಯ, ಆಕೆಯ ಪತಿ ಮತ್ತು ಆರ್ಯ ಅವರ ಸಂಬಂಧಿಗೆ ವಿನಾಯಿತಿ ನೀಡಲಾಗಿದೆ ಎಂದು ಯದು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಯಲ ಆರ್ಯಾ ಮತ್ತು ಸಚಿನ್​ಗೆ ನೋಟಿಸ್​ ಜಾರಿ ಮಾಡಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net