ಖುಲಾಸೆ ಬೆನ್ನಲ್ಲೇ ಹನುಮಂತನ ಮೊರೆ ಹೋದ ಕೇಜ್ರಿವಾಲ್; ಮಾಜಿ ಸಿಎಂ ಬಿಡುಗಡೆಯ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ! | Arvind Kejriwal

Arvind Kejriwal |  ಮಾಜಿ ಸಿಎಂ ಅರವಿಂದ ಕೇಜ್ರಿವಾಲ್​
Arvind Kejriwal | ಮಾಜಿ ಸಿಎಂ ಅರವಿಂದ ಕೇಜ್ರಿವಾಲ್​
Published on
ದೆಹಲಿ: ಅಬಕಾರಿ ನೀತಿ ಪ್ರಕರಣದಲ್ಲಿ ನ್ಯಾಯಾಲಯದಿಂದ ಖುಲಾಸೆಗೊಂಡಿರುವ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್​ (Arvind Kejriwal), ಮರುದಿನವೇ, (ಫೆಬ್ರವರಿ 28) ಕನ್ನಾಟ್ ಪ್ಲೇಸ್‌ನಲ್ಲಿರುವ ಪ್ರಸಿದ್ಧ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಸುಮಾರು ಎರಡು ವರ್ಷಗಳ ಕಾಲ ನಡೆದ ಕಾನೂನು ಹೋರಾಟದ ಬಳಿಕ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ರೌಸ್ ಅವೆನ್ಯೂ ನ್ಯಾಯಾಲಯವು ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾರನ್ನು ಶುಕ್ರವಾರ ಬಿಡುಗಡೆ ಮಾಡಿತ್ತು.
ನ್ಯಾಯಾಲಯದಲ್ಲಿ ಸಿಕ್ಕ ಜಯದ ಹಿನ್ನಲೆಯಲ್ಲಿ ದೇವರಿಗೆ ಕೃತಜ್ಞತೆ ಸಲ್ಲಿಸಲು ಕೇಜ್ರಿವಾಲ್ ಮನೀಶ್ ಸಿಸೋಡಿಯಾ, ಸಂಜಯ್ ಸಿಂಗ್ ಮತ್ತು ದುರ್ಗೇಶ್ ಪಾಠಕ್​​​ರೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿದರು. ನ್ಯಾಯಾಲಾಯದ ಈ ತೀರ್ಪಿನ ಕುರಿತಂತೆ ಸಂಜಯ್ ಸಿಂಗ್ ಪತ್ನಿ ಪ್ರತಿಕ್ರಿಯೆ ನೀಡಿದ್ದು, ಇದು ಎಎಪಿಗೆ ದೊಡ್ಡ ದಿನ ಎಂದು ಕರೆದರು. ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಕೇಜ್ರಿವಾಲ್, ಬಿಜೆಪಿ 10 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದರೆ ರಾಜಕೀಯವನ್ನು ತೊರೆಯುವುದಾಗಿ ಪ್ರತಿಜ್ಞೆ ಮಾಡಿ, ದೆಹಲಿಯಲ್ಲಿ ಹೊಸ ಚುನಾವಣೆಗಳನ್ನು ಕರೆಯುವಂತೆ ಪ್ರಧಾನಿ ಮೋದಿಗೆ ಸವಾಲು ಹಾಕಿದರು.

ಸತ್ಯಮೇವ ಜಯತೆ..

ನ್ಯಾಯಾಲಯದ ತೀರ್ಪಿಗೆ ಭಾವನಾತ್ಮಕವಾಗಿ ಪ್ರತಿಕ್ರಿಯೆ ನೀಡಿದ ಕೇಜ್ರಿವಾಲ್, ಸತ್ಯ ಯಾವಾಗಲೂ ಗೆಲ್ಲುತ್ತದೆ, ನಮಗೆ ನ್ಯಾಯ ಒದಗಿಸಿದ ನ್ಯಾಯಾಧೀಶರಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಬಿಜೆಪಿಗೆ ಅಧಿಕಾರ ಬೇಕಾಗಿದ್ದರೆ ನಮ್ಮನ್ನು ಜೈಲಿಗೆ ಕಳುಹಿಸುವ ಬದಲು, ಜನರ ವಿಶ್ವಾಸ ಗಳಿಸಬೇಕಿತ್ತು ಎಂದು ಹೇಳಿದರು.
ಈ ಪ್ರಕರಣವನ್ನು ಸ್ವತಂತ್ರ ಭಾರತದ ಅತಿದೊಡ್ಡ ರಾಜಕೀಯ ಪಿತೂರಿ ಎಂದು ಕರೆದ ದೆಹಲಿ ಮಾಜಿ ಸಿಎಂ, ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷವನ್ನು (ಎಎಪಿ) ಅಧಿಕಾರದಿಂದ ಕಿತ್ತೊಗೆಯಲು ಬಿಜೆಪಿ ರೂಪಿಸಿದ ಸುಳ್ಳು ಪ್ರಕರಣ ಇದು, ಅಧಿಕಾರಕ್ಕಾಗಿ ಯಾರು ಕೂಡ ದೇಶ ಮತ್ತು ಸಂವಿಧಾನದೊಂದಿಗೆ ಆಟವಾಡಬಾರದು ಎಂದರು.

ನ್ಯಾಯಾಲಯದ ತೀರ್ಪು...

ಶುಕ್ರವಾರ (ಫೆಬ್ರವರಿ 27) ತೀರ್ಪು ಪ್ರಕಟಿಸಿದ ದೆಹಲಿ ವಿಶೇಷ ನ್ಯಾಯಾಲಯವು, ಸಿಬಿಐ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಆರೋಪಿಗಳ ವಿರುದ್ಧ ಭ್ರಷ್ಟಾಚಾರ ಸಾಬೀತುಪಡಿಸಲು ಅಗತ್ಯವಿರುವ ಭದ್ರವಾದ ಸಾಕ್ಷ್ಯಗಳ ಕೊರತೆಯಿದೆ ಎಂದು ಅಭಿಪ್ರಾಯಪಟ್ಟಿದೆ. ಹಣದ ವರ್ಗಾವಣೆ ಅಥವಾ ಕಿಕ್‌ಬ್ಯಾಕ್ ಪಡೆದಿದ್ದಾರೆ ಎನ್ನಲು ಯಾವುದೇ ನೇರ ಪುರಾವೆಗಳಿಲ್ಲ. ಕೇವಲ ಊಹಾಪೋಹಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ನಡೆಸಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಕರಣದ ಹಿನ್ನೆಲೆ

2021-22ರ ದೆಹಲಿ ಮದ್ಯ ನೀತಿಯಲ್ಲಿ ಅಕ್ರಮ ಎಸಗಲಾಗಿದೆ, ಖಾಸಗಿ ಮದ್ಯ ಮಾರಾಟಗಾರರಿಗೆ ಅನುಕೂಲ ಮಾಡಿಕೊಟ್ಟು ಪ್ರತಿಯಾಗಿ ಹಣ ಪಡೆಯಲಾಗಿದೆ ಎಂದು ಸಿಬಿಐ ದೂರು ದಾಖಲಿಸಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ (ED) ಕೂಡ ತನಿಖೆ ನಡೆಸಿ ಕೇಜ್ರಿವಾಲ್​​ರನ್ನು ಬಂಧಿಸಿದಾಗ ಅವರು ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಸದ್ಯ ನ್ಯಾಯಾಲಯ ಅವರನ್ನು ಖುಲಾಸೆಗೊಳಿಸಿರುವುದು ರಾಜಕೀಯ ಪುನರಾರಂಭಕ್ಕೆ ವೇದಿಕೆ ಕಲ್ಪಿಸಿಕೊಟ್ಟಿದೆ.
ಆಗಿನ ಅಬಕಾರಿ ಸಚಿವರಾಗಿದ್ದ ಮನೀಶ್ ಸಿಸೋಡಿಯಾರನ್ನು ಈ ಹಗರಣದ ಪ್ರಮುಖ ಆರೊಪಿಯಾಗಿಸಲಾಗಿತ್ತು, 2023 ರಲ್ಲಿ ಅವರನ್ನು ಸಿಬಿಐ ಬಂಧಿಸಿತು. ಸುಮಾರು 17 ತಿಂಗಳ ಬಳಿಕ ಅವರಿಗೆ ಜಾಮೀನು ಲಭಿಸಿತು. ಕೇಜ್ರಿವಾಲ್​ರನ್ನು ಕೂಡ ಸಿಬಿಐ ಪ್ರಮುಖ ಸಂಚುಕೋರ ಎಂದು ಆರೋಪಿಸಿತ್ತು, 2024 ರ ಮಾರ್ಚ್​ನಲ್ಲಿ ಈ ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅವರನ್ನು ಬಂಧಿಸಲಾಯಿತು ಮತ್ತು ಅದೇ ವರ್ಷ ಸೆಪ್ಟೆಂಬರ್​ನಲ್ಲಿ ಜಾಮೀನಿನ ಮೂಲಕ ಹೊರಬಂದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net