ಕೇಜ್ರಿವಾಲ್ ಟೀಮ್‌ಗೆ ಕೊನೆಗೂ ಸಿಕ್ಕಿತು 'ಕ್ಲೀನ್ ಚೀಟ್'.. ಸಿಬಿಐ ವಾದವನ್ನೇ ತಲೆಕೆಳಗೆ ಮಾಡಿದ ನ್ಯಾಯಾಧೀಶರು!; ಕಣ್ಣೀರಿಟ್ಟ ಮಾಜಿ ಸಿಎಂ | Arvind Kejriwal Case
Arvind Kejriwal Case | ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಆರೋಪಗಳಿಂದ ಮುಕ್ತರಾಗಿದ್ದಾರೆ.
Published on:
Copied
Follow Us
ದೆಹಲಿ: ಬಹುಚರ್ಚಿತ ಮದ್ಯ ನೀತಿ ಹಗರಣದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಹೊತ್ತಿದ್ದ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal Case), ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ ಒಟ್ಟು 21 ಜನರನ್ನು ದೆಹಲಿ ನ್ಯಾಯಾಲಯ ಇಂದು ದೋಷಮುಕ್ತಗೊಳಿಸಿದೆ.
ಅಬಕಾರಿ ನೀತಿಯನ್ನು ರೂಪಿಸುವಲ್ಲಿ ಯಾವುದೇ ಒಳಸಂಚು ಅಥವಾ ಕ್ರಿಮಿನಲ್ ಉದ್ದೇಶವಿಲ್ಲ, ಭ್ರಷ್ಟಾಚಾರಕ್ಕೆ ಪೂರಕವಾದ ಸಾಕ್ಷ್ಯಗಳಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದ್ದು, ಈ ತೀರ್ಪಿನಿಂದಾಗಿ ಕೇಂದ್ರ ತನಿಖಾ ದಳಕ್ಕೆ (CBI) ಭಾರಿ ಮುಖಭಂಗವಾದಂತಾಗಿದೆ.
ಶುಕ್ರವಾರ (ಫೆಬ್ರವರಿ 27) ತೀರ್ಪು ಪ್ರಕಟಿಸಿದ ದೆಹಲಿ ವಿಶೇಷ ನ್ಯಾಯಾಲಯವು, ಸಿಬಿಐ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಆರೋಪಿಗಳ ವಿರುದ್ಧ ಭ್ರಷ್ಟಾಚಾರ ಸಾಬೀತುಪಡಿಸಲು ಅಗತ್ಯವಿರುವ ಭದ್ರವಾದ ಸಾಕ್ಷ್ಯಗಳ ಕೊರತೆಯಿದೆ ಎಂದು ಅಭಿಪ್ರಾಯಪಟ್ಟಿದೆ. ಹಣದ ವರ್ಗಾವಣೆ ಅಥವಾ ಕಿಕ್‌ಬ್ಯಾಕ್ ಪಡೆದಿದ್ದಾರೆ ಎನ್ನಲು ಯಾವುದೇ ನೇರ ಪುರಾವೆಗಳಿಲ್ಲ. ಕೇವಲ ಊಹಾಪೋಹಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ನಡೆಸಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.
ಆಪ್ ಪಾಳಯದಲ್ಲಿ ಯುದ್ಧ ಗೆದ್ದ ಸಂಭ್ರಮ
ಕಳೆದ ಎರಡು ವರ್ಷಗಳಿಂದ ಈ ಪ್ರಕರಣವು ಇಡೀ ದೇಶದ ಗಮನ ಸೆಳೆದಿತ್ತು. ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಅನೇಕ ತಿಂಗಳುಗಳ ಕಾಲ ಜೈಲು ವಾಸವನ್ನೂ ಅನುಭವಿಸಿದ್ದರು. ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ರಾಜಕೀಯ ದ್ವೇಷ ಸಾಧಿಸುತ್ತಿದೆ ಎಂಬ ಆಮ್ ಆದ್ಮಿ ಪಾರ್ಟಿಯ ಆರೋಪಕ್ಕೆ ಈ ತೀರ್ಪು ಆನೆಬಲ ನೀಡಿದಂತಾಗಿದ್ದು, ಆಪ್ ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.
ಕೇಜ್ರಿವಾಲ್ ಹೇಳಿದ್ದೇನು..?
ನ್ಯಾಯಾಲಯದ ತೀರ್ಪಿಗೆ ಭಾವನಾತ್ಮಕವಾಗಿ ಪ್ರತಿಕ್ರಿಯೆ ನೀಡಿದ ಕೇಜ್ರಿವಾಲ್, ಸತ್ಯ ಯಾವಾಗಲೂ ಗೆಲ್ಲುತ್ತದೆ, ನಮಗೆ ನ್ಯಾಯ ಒದಗಿಸಿದ ನ್ಯಾಯಾಧೀಶರಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಬಿಜೆಪಿಗೆ ಅಧಿಕಾರ ಬೇಕಾಗಿದ್ದರೆ ನಮ್ಮನ್ನು ಜೈಲಿಗೆ ಕಳುಹಿಸುವ ಬದಲು, ಜನರ ವಿಶ್ವಾಸ ಗಳಿಸಬೇಕಿತ್ತು ಎಂದು ಹೇಳಿದರು.
ಈ ಪ್ರಕರಣವನ್ನು ಸ್ವತಂತ್ರ ಭಾರತದ ಅತಿದೊಡ್ಡ ರಾಜಕೀಯ ಪಿತೂರಿ ಎಂದು ಕರೆದ ದೆಹಲಿ ಮಾಜಿ ಸಿಎಂ, ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷವನ್ನು (ಎಎಪಿ) ಅಧಿಕಾರದಿಂದ ಕಿತ್ತೊಗೆಯಲು ಬಿಜೆಪಿ ರೂಪಿಸಿದ ಸುಳ್ಳು ಪ್ರಕರಣ ಇದು, ಅಧಿಕಾರಕ್ಕಾಗಿ ಯಾರು ಕೂಡ ದೇಶ ಮತ್ತು ಸಂವಿಧಾನದೊಂದಿಗೆ ಆಟವಾಡಬಾರದು ಎಂದರು.
ಪ್ರಕರಣದ ಹಿನ್ನೆಲೆ
2021-22ರ ದೆಹಲಿ ಮದ್ಯ ನೀತಿಯಲ್ಲಿ ಅಕ್ರಮ ಎಸಗಲಾಗಿದೆ, ಖಾಸಗಿ ಮದ್ಯ ಮಾರಾಟಗಾರರಿಗೆ ಅನುಕೂಲ ಮಾಡಿಕೊಟ್ಟು ಪ್ರತಿಯಾಗಿ ಹಣ ಪಡೆಯಲಾಗಿದೆ ಎಂದು ಸಿಬಿಐ ದೂರು ದಾಖಲಿಸಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ (ED) ಕೂಡ ತನಿಖೆ ನಡೆಸಿ ಕೇಜ್ರಿವಾಲ್ರನ್ನು ಬಂಧಿಸಿದಾಗ ಅವರು ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಸದ್ಯ ನ್ಯಾಯಾಲಯ ಅವರನ್ನು ಖುಲಾಸೆಗೊಳಿಸಿರುವುದು ರಾಜಕೀಯ ಪುನರಾರಂಭಕ್ಕೆ ವೇದಿಕೆ ಕಲ್ಪಿಸಿಕೊಟ್ಟಿದೆ.
ಆಗಿನ ಅಬಕಾರಿ ಸಚಿವರಾಗಿದ್ದ ಮನೀಶ್ ಸಿಸೋಡಿಯಾರನ್ನು ಈ ಹಗರಣದ ಪ್ರಮುಖ ಆರೊಪಿಯಾಗಿಸಲಾಗಿತ್ತು, 2023 ರಲ್ಲಿ ಅವರನ್ನು ಸಿಬಿಐ ಬಂಧಿಸಿತು. ಸುಮಾರು 17 ತಿಂಗಳ ಬಳಿಕ ಅವರಿಗೆ ಜಾಮೀನು ಲಭಿಸಿತು.
ಅರವಿಂದ್ ಕೇಜ್ರಿವಾಲ್ರನ್ನು ಕೂಡ ಸಿಬಿಐ ಪ್ರಮುಖ ಸಂಚುಕೋರ ಎಂದು ಆರೋಪಿಸಿತ್ತು, 2024 ರ ಮಾರ್ಚ್ನಲ್ಲಿ ಈ ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅವರನ್ನು ಬಂಧಿಸಲಾಯಿತು ಮತ್ತು ಅದೇ ವರ್ಷ ಸೆಪ್ಟೆಂಬರ್ನಲ್ಲಿ ಜಾಮೀನಿನ ಮೂಲಕ ಹೊರಬಂದರು.
ಮದ್ಯ ಹಗರಣ ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿಯ ಚುನಾವಣಾ ಪ್ರಚಾರಕ್ಕೆ ಪ್ರಮುಖ ಅಸ್ತ್ರವಾಗಿ ಮಾರ್ಪಟ್ಟಿತು, ಆಪ್ ಇಮೇಜ್‌ಗೆ ಕುಸಿಯಲು ಇದೇ ಪ್ರಮುಖ ಕಾರವಾಯಿತು ಎಂದು ಅನೇಕ ರಾಜ್ಯಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಕಳೆದ ವರ್ಷ ಫೆಬ್ರವರಿಯಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಬಹುಮತಗಳಿಸಿ ಅಧಿಕಾರಕ್ಕೆ ಬಂದಿತು(ಏಜೆನ್ಸೀಸ್).