ಚೈನೀಸ್ ಅಲ್ಲ, ಇಂಡಿಯನ್ ಎನ್ನಿ!: ದೇಶವಾಸಿಗಳ ಪ್ರೀತಿಗೆ ಧನ್ಯವಾದ ತಿಳಿಸಿದ ಅರುಣಾಚಲದ ಮುದ್ದು ಪೋರಿ Arunachal girl

Arunachal girl ಚಿತ್ರ Instagram
Arunachal girl ಚಿತ್ರ Instagram
Published on

ಅರುಣಾಚಲ ಪ್ರದೇಶ: ಇಟಾನಗರದ ಕರ್ಗಾ ಟಿಂಕಲ್ ಗೊಂಗೊ ಎಂಬ ಸಣ್ಣ ಬಾಲಕಿ ತನ್ನ ಮುದ್ದು ಮಾತುಗಳಿಂದ ಹಾಗೂ ದಿಟ್ಟತನದಿಂದ ಸೋಷಿಯಲ್ ಮೀಡಿಯಾದಲ್ಲಿ (

Arunachal girl)

ಎಲ್ಲರ ಗಮನ ಸೆಳೆದಿದ್ದಾಳೆ.

ಏನಿದು ಘಟನೆ?

ಇತ್ತೀಚಿಗೆ ಪುಟ್ಟ ಮಗುವನ್ನು ವ್ಯಕ್ತಿಯೊಬ್ಬರು ನೀನು ಚೈನೀಸ್ ಅಲ್ಲವೇ? ಎಂದು ಕೇಳಿದ್ದರು. ಅದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಆಕೆ, ನನ್ನನ್ನು ಚೈನೀಸ್ ಅನ್ನಬೇಡಿ, ಇಂಡಿಯನ್ ಎನ್ನಿ ಎಂದು ಉತ್ತರಿಸಿದ್ದಳು. ಮುಖಚರ್ಯೆಯ ಆಧಾರದ ಮೇಲೆ ಈಶಾನ್ಯ ಭಾರತದ ಜನರನ್ನು ಚೈನೀಸ್ ಎಂದು ಕರೆಯುವ ವರ್ಣಭೇದ ನೀತಿ ಮತ್ತು ಪೂರ್ವಾಗ್ರಹಗಳ ವಿರುದ್ಧ ಆಕೆ ವ್ಯಕ್ತಪಡಿಸಿದ್ದ ಸಿಟ್ಟು ಹಾಗೂ ಬೇಸರದ ವೀಡಿಯೋ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು.

ನೆಟ್ಟಿಗರ ಪ್ರೀತಿಗೆ ಕೃತಜ್ಞತೆ ಸಲ್ಲಿಸಿದ ಕರ್ಗಾ

ಆದಾಗ್ಯೂ, ತನ್ನ ವೈರಲ್​ ಆದ ವೀಡಿಯೋಗೆ ಹರಿದುಬಂದ ಅಪಾರ ಪ್ರೀತಿಯನ್ನು ಕಂಡು ಕರ್ಗಾ ಟಿಂಕಲ್​ ಗೊಂಗೊ ಇದೀಗ ಮತ್ತೊಂದು ಹೊಸ ವಿಡಿಯೋ ಮೂಲಕ ನೆಟ್ಟಿಗರಿಗೆ ಧನ್ಯವಾದ ಅರ್ಪಿಸಿದ್ದಾಳೆ. ಈ ಹೊಸ ವಿಡಿಯೋದಲ್ಲಿ ಬಾಲಕಿ ತೀವ್ರ ಸಂತೋಷದಿಂದ, ಈಗ ನಾನು ಪಕ್ಕಾ ಇಂಡಿಯನ್ ಆಗಿಬಿಟ್ಟಿದ್ದೇನೆ (ಅಭಿ ಹಮ್ ಇಂಡಿಯಾ ಹೋಗಯಾ) ಎಂದು ಹೇಳಿದ್ದಾಳೆ.

'ಇಂಡಿಯಾಸ್ ಬೇಬಿ' ಎಂದ ನೆಟ್ಟಿಗರು

ವೀಡಿಯೋದಲ್ಲಿ ಬಾಲಕಿಯ ತಾಯಿ ಮಾತನಾಡಿ, "ಈಗ ನಿನ್ನನ್ನು ಎಲ್ಲರೂ ಇಂಡಿಯಾಸ್ ಬೇಬಿ (ಭಾರತದ ಮಗು) ಎಂದು ಕರೆಯುತ್ತಿದ್ದಾರೆ ಎಂದು ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ಬಾಲಕಿ ಕ್ಯಾಮೆರಾ ನೋಡುತ್ತಾ ಎಲ್ಲರಿಗೂ ತುಂಬಾ ಧನ್ಯವಾದಗಳು ಎಂದು ಕೃತಜ್ಞತೆ ಸಲ್ಲಿಸಿದ್ದಾಳೆ.

ಹಿನ್ನೆಲೆ ಏನು?

ಅರುಣಾಚಲ ಪ್ರದೇಶದ ಇಟಾನಗರದ ಕಾರ್ಗಾ ಟಿಂಕಲ್ ಗೊಂಗೊ ಎಂಬ ಈ ಪುಟ್ಟ ಪೋರಿ, "ನಮ್ಮನ್ನು ಕೇವಲ ಮುಖಚರ್ಯೆಯ ನೋಟದಿಂದ ಚೈನೀಸ್ ಎಂದು ಕರೆಯಬೇಡಿ. ಅದು ಮನಸ್ಸಿಗೆ ತುಂಬಾ ನೋವುಂಟುಮಾಡುತ್ತದೆ ಮತ್ತು ಕೋಪ ತರಿಸುತ್ತದೆ. ನಾವು ಭಾರತೀಯರು" ಎಂದು ಹೇಳುವ ಮೂಲಕ ತಾನು ಹಾಗೂ ತನ್ನ ಕುಟುಂಬ ಭಾರತೀಯರು ಎಂಬುದನ್ನು ಹೆಮ್ಮೆಯಿಂದ ವ್ಯಕ್ತಪಡಿಸಿದ್ದಾಳೆ. ಈಶಾನ್ಯ ಭಾರತದ ಜನರ ಮೇಲೆ ನಡೆಯುವ ಪೂರ್ವಾಗ್ರಹ ಪೀಡಿತ ವರ್ಣಭೇದದ ವಿರುದ್ಧ ಬಾಲಕಿ ಮಾತನಾಡಿದ್ದ ಈ ವೀಡಿಯೋ ವ್ಯಾಪಕವಾಗಿ ವೈರಲ್ ಆಗಿತ್ತು.

ಚೈನೀಸ್ ಎಂದ ವ್ಯಕ್ತಿಗೆ ಮುಲಾಜಿಲ್ಲದ ಕೌಂಟರ್

ಬಾಲಕಿಯ ತಾಯಿ ಐಸ್‌ಕ್ರೀಂ ಖರೀದಿಸುವ ಸಂದರ್ಭದ ವೀಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಾಗ, ಅದನ್ನು ನೋಡಿದ ವ್ಯಕ್ತಿಯೊಬ್ಬರು ಆಕೆಯನ್ನು ಚೈನೀಸ್ ಮಗು ಎಂದು ಕರೆದಿದ್ದರು. ಈ ಕಾಮೆಂಟ್ ನೋಡಿ ತೀವ್ರ ಬೇಸರಗೊಂಡ ಬಾಲಕಿ, ನಾವು ಚೈನೀಸ್ ಅಲ್ಲ, ಇಂಡಿಯನ್ಸ್! ನಮ್ಮನ್ನು ಭಾರತೀಯರು ಎಂದೇ ಕರೆಯಿರಿ ಎಂದು ದಿಟ್ಟವಾಗಿ ಪ್ರತಿಕ್ರಿಯಿಸಿ ನೆಟ್ಟಿಗರ ಬಾಯಿ ಮುಚ್ಚಿಸಿದ್ದಳು.

ಜನ ಗಣ ಮನ ಹಾಡಿದ ಪುಟಾಣಿ

ಅಷ್ಟೇ ಅಲ್ಲದೆ, ವೀಡಿಯೋದಲ್ಲಿ ರಾಷ್ಟ್ರಗೀತೆ ‘ಜನ ಗಣ ಮನ’ ಹಾಡುವ ಮೂಲಕ ದೇಶದ ಮೇಲಿನ ತನ್ನ ಅಪಾರ ಪ್ರೀತಿಯನ್ನು ವ್ಯಕ್ತಪಡಿಸಿದ್ದಾಳೆ. ಈಕೆಯ ಆತ್ಮವಿಶ್ವಾಸ ಹಾಗೂ ಮುದ್ದಾದ ಮಾತುಗಳಿಗೆ ಫಿದಾ ಆಗಿರುವ ನೆಟ್ಟಿಗರು, ಮಾಧ್ಯಮಗಳು ಈಕೆಯನ್ನು ನೇರವಾಗಿ ಸಂದರ್ಶನ ಮಾಡಿ ಆಕೆಯ ವಿಚಾರಗಳನ್ನು ಸಮಾಜಕ್ಕೆ ತಲುಪಿಸಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ ಈ ಬಾಲಕಿಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net