

ಕಾಸರಗೋಡು: ಶಬರಿಮಲೆ ದೇವಾಲಯದಲ್ಲಿ ಕಳೆದ ತೀರ್ಥಯಾತ್ರೆ ಅವಧಿಯಲ್ಲಿ 8.8 ಲಕ್ಷ ರೂ. ಮೊತ್ತದ ಅರವಣ ಮತ್ತು ಅಪ್ಪ ಪ್ರಸಾದ ನಾಪತ್ತೆ ಆಗಿರುವ ಬಗ್ಗೆ ಶಬರಿಮಲೆ ವಿಶೇಷ ಆಯುಕ್ತ ಆರ್.ಜಯಕೃಷ್ಣನ್ ತಮ್ಮ ವರದಿಯಲ್ಲಿ ತಿಳಿಸಿದ್ದಾರೆ. ಶಬರಿಮಲೆ ದೇಗುಲದ ಕೆಲವು ಸಿಬ್ಬಂದಿ ಈ ಅಕ್ರಮದಲ್ಲಿ ಶಾಮೀಲಾಗಿರುವ ಶಂಕೆಯನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತಾದ ಸಮಗ್ರ ವರದಿಯನ್ನು ಶಬರಿಮಲೆಯ ವಿಶೇಷ ಆಯುಕ್ತರು ಈಗಾಗಲೇ ರಾಜ್ಯ ಹೈಕೋರ್ಟ್ಗೆ ಸಲ್ಲಿಸಿದ್ದಾರೆ.
ಅರವಣ ಪಾಯಸ ದಾಸ್ತಾನು ಮತ್ತು ವಿತರಣೆ ಕುರಿತಾದ ದಾಖಲೆಪತ್ರ ಪರಿಶೀಲನೆ ಸಂದರ್ಭ ಇವೆರಡರ ಮಧ್ಯೆ ಹೊಂದಾಣಿಕೆ ಆಗದಿರುವುದು ಲೋಕಲ್ ಫಂಡ್ ಆಡಿಟ್ ವರದಿಯಲ್ಲಿ ನಮೂದಿಸಲಾಗಿದೆ. ಪ್ರಸಾದ ವಿತರಿಸಿ ಲಭಿಸಬೇಕಾದ ಒಟ್ಟು ಹಣಕ್ಕಿಂತ ಕಡಿಮೆ ಮೊತ್ತವನ್ನು ಸಂಬಂಧಪಟ್ಟ ಪತ್ರಗಳಲ್ಲಿ ನಮೂದಿಸಲಾಗಿದೆ. ನಾಪತ್ತೆಯಾಗಿದೆ ಎನ್ನಲಾದ ಅರವಣ ಮತ್ತು ಅಪ್ಪ ಪ್ರಸಾದ ಉಪಯೋಗ ಶೂನ್ಯವಾಗಿರುವುದಾಗಿ ದಾಖಲುಪತ್ರ ತಯಾರಿಸಿರುವುದನ್ನೂ ಮುಜರಾಯಿ ಮಂಡಳಿಯ ವಿಜಿಲೆನ್ಸ್ ವಿಭಾಗ ನಡೆಸಿದ ತನಿಖೆಯಲ್ಲಿ ಪತ್ತೆಹಚ್ಚಲಾಗಿದೆ.
ಪ್ರತಿವರ್ಷ ನವೆಂಬರ್ ಮಾಸದ ಸಂಕ್ರಮಣ ಕಾಲಾವಧಿಗೆ ಮಂಡಲ-ಮಕರಜ್ಯೋತಿ ಸೇರಿದಂತೆ ಶಬರಿಮಲೆ ಯಾತ್ರೆ ಸಮಯ ಆರಂಭಗೊಳ್ಳುತ್ತದೆ. ಇದಕ್ಕಾಗಿ ಲಕ್ಷಾಂತರ ಡಬ್ಬ ಅರವಣ ಪಾಯಸ ಮತ್ತು ಅಪ್ಪ ತಯಾರಿಕೆಯನ್ನು ಸೆಪ್ಟೆಂಬರ್ ತಿಂಗಳಲ್ಲೇ ಆರಂಭಿಸಲಾಗುತ್ತದೆ. ಈ ರೀತಿ ತಯಾರಿಸಲಾಗುವ ಅರವಣ ಮತ್ತು ಅಪ್ಪ ಪ್ರಸಾದ ಕೆಲವು ತಿಂಗಳ ಕಾಲ ದಾಸ್ತಾನಿಟ್ಟರೂ ಅದು ಹಾಳಾಗದೇ ಉಳಿದುಕೊಳ್ಳುತ್ತಿದ್ದು, ಈ ಮಧ್ಯೆ ಅಷ್ಟೊಂದು ಪ್ರಮಾಣದ ಅಪ್ಪ-ಅರವಣ ಪ್ರಸಾದ ಉಪಯೋಗ ಶೂನ್ಯವಾಗಲು ಕಾರಣವೇನೆಂಬುದು ಸಂಶಯಕ್ಕೆ ಎಡೆಮಾಡಿದೆ.
ಇಂತಹ ಅವ್ಯವಹಾರ ಮರುಕಳಿಸದಿರಲು ಅಗತ್ಯದ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ವಿಐಪಿಗಳಿಗೆ ನೀಡುವ ಪ್ರಸಾದಗಳ ಲೆಕ್ಕಾಚಾರಗಳನ್ನು ಕಡ್ಡಾಯವಾಗಿ ಸಂಬಂಧಪಟ್ಟ ದಾಖಲುಪತ್ರಗಳಲ್ಲಿ ನೋಂದಾಯಿಸಬೇಕೆಂದೂ ವಿಶೇಷ ಆಯುಕ್ತರು ತಯಾರಿಸಿದ ವರದಿಯಲ್ಲಿ ತಿಳಿಸಲಾಗಿದೆ.