ಅನುರಾಗ್ ದೋಭಾಲ್ vs ಅತುಲ್ ದೋಭಾಲ್ : ಅವನು ಸಾವಿನ ನಾಟಕವಾಡಿದ್ದಾನೆ; ದಿ ಯುಕೆ ರೈಡರ್​ ಮಾಡಿದ ಆರೋಪಕ್ಕೆ ಕಲಾಂ ಇಂಕ್ ಖಡಕ್​ ತಿರುಗೇಟು | Anurag Dobhal vs Atul Dobhal

ಅನುರಾಗ್ ದೋಭಾಲ್, ಅತುಲ್ ದೋಭಾಲ್
ಅನುರಾಗ್ ದೋಭಾಲ್, ಅತುಲ್ ದೋಭಾಲ್
Published on

ಪ್ರಮುಖ ಮುಖ್ಯಾಂಶಗಳು

  • ಮನೆಯವರ ಮೇಲೆ ಯೂಟ್ಯೂಬರ್ ಅನುರಾಗ್ ದೋಭಾಲ್ ಆರೋಪ
  • ಅವನು ಆತ್ಮಹತ್ಯೆಯ ನಾಟಕವಾಡಿದ್ದಾನೆ : ಅತುಲ್ ದೋಭಾಲ್
  • ನಮ್ಮ ಕುಟುಂಬದವರನ್ನು ಸಾಯಿಸುವುದಾಗಿ ಬೆದರಿಕೆ ಬರುತ್ತಿದೆ; ಅತುಲ್ ದೋಭಾಲ್ ತಿರುಗೇಟು
ನವದೆಹಲಿ: ಸೋಶಿಯಲ್​ ಮೀಡಿಯಾ ಸ್ಟಾರ್​, ದಿ ಯುಕೆ ರೈಡರ್​ ಖ್ಯಾತಿಯ (The UK07 Rider) ಯೂಟ್ಯೂಬರ್ ಅನುರಾಗ್ ದೋಭಾಲ್ (Anurag Dobhal) ಮತ್ತು ಅವರ ಕುಟುಂಬದ ನಡುವಿನ ಜಗಳ ಇದೀಗ ಬೀದಿಗೆ ಬಂದಿದೆ.
ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇಯಲ್ಲಿ ನಡೆದ ಭೀಕರ ಕಾರು ಅಪಘಾತದ ನಂತರ ಅನುರಾಗ್ ಆಸ್ಪತ್ರೆ ಸೇರಿದ್ದಾರೆ. ಆದರೆ, ಈ ಅಪಘಾತಕ್ಕೂ ಮುನ್ನ ಅವರು ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ತಮ್ಮ ಕುಟುಂಬದ ವಿರುದ್ಧ ಮಾಡಿದ್ದ ಗಂಭೀರ ಆರೋಪಗಳು ಈಗ ದೊಡ್ಡ ವಿವಾದದ ಕಿಡಿ ಹೊತ್ತಿಸಿವೆ. ಈ ಎಲ್ಲಾ ಆರೋಪಗಳಿಗೆ ಇದೀಗ ಅನುರಾಗ್ (Anurag Dobhal vs Atul Dobhal) ಅವರ ಸಹೋದರ ಅತುಲ್ ದೋಭಾಲ್ (Atul Dobhal) ಅಲಿಯಾಸ್ ಕಲಾಂ ಇಂಕ್ ವಿಡಿಯೋ ಮೂಲಕ ಉತ್ತರಿಸಿದ್ದಾರೆ.

ನಾವು ಅವಳಿಗೆ ಅಡುಗೆಮನೆಗೆ ನಿರ್ಬಂಧಿಸಿಲ್ಲ

ಅನುರಾಗ್ ಅವರ ಪತ್ನಿ ರಿತಿಕಾ ಅವರಿಗೆ ಅಡುಗೆಮನೆ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು ಎಂಬ ಆರೋಪಕ್ಕೆ ಉತ್ತರಿಸಿದ ಕಲಾಂ ಇಂಕ್, ಅದು ಸತ್ಯವಲ್ಲ. ನಮ್ಮ ಕುಟುಂಬದಲ್ಲಿ ಮರಣ ಸಂಭವಿಸಿದ್ದರಿಂದ, ಸಂಪ್ರದಾಯದ ಪ್ರಕಾರ ಆ ಸಮಯದಲ್ಲಿ ಅಡುಗೆ ಮಾಡಬಾರದಿತ್ತು. ಇದೇ ಕಾರಣಕ್ಕೆ ಅಡುಗೆ ಮಾಡದಂತೆ ಕೇಳಲಾಗಿತ್ತು, ಅದನ್ನು ಅಪಾರ್ಥ ಮಾಡಿಕೊಳ್ಳಲಾಗಿದೆ. ರಿತಿಕಾ ಸಾಕಷ್ಟು ಬಾರಿ ನಮ್ಮ ಮನೆಯಲ್ಲಿ ಅಡುಗೆ ಮಾಡಿದ್ದಾರೆ, ಎಂದು ಸ್ಪಷ್ಟನೆ ನೀಡಿದ್ದಾರೆ.
ಆಡಿಯೊ ಎಡಿಟ್ ಮಾಡಿದ್ದಾನೆ
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಆಡಿಯೊ ಕ್ಲಿಪ್ ಬಗ್ಗೆ ಮಾತನಾಡಿದ ಅವರು, ಅನುರಾಗ್ ಆ ಆಡಿಯೊವನ್ನು ಎಡಿಟ್ ಮಾಡಿದ್ದಾನೆ. ಅಲ್ಲಿ ಪೋಷಕರು ಪ್ರತಿಕ್ರಿಯಿಸುವುದು ಮಾತ್ರ ಕೇಳಿಸುತ್ತದೆ, ಆದರೆ ಅದಕ್ಕೂ ಮೊದಲು ಪೋಷಕರೊಂದಿಗೆ ಅನುರಾಗ್​ ಹೇಗೆ ಮಾತನಾಡಿದ್ದ ಎನ್ನುವುದು ಕೇಳಿಸುವುದೇ ಇಲ್ಲ ಎಂದು ವಾದಿಸಿದ್ದಾರೆ.
ಅಲ್ಲದೆ, ನಾನು ಮನಾಲಿಗೆ ಹೋಗಿ ಅನುರಾಗ್‌ಗೆ ಬೆದರಿಕೆ ಹಾಕಿದ್ದೇನೆ ಎಂಬ ಆರೋಪವನ್ನೂ ಅವರು ಸಾರಾಸಗಟಾಗಿ ತಳ್ಳಿಹಾಕಿದ್ದು, ನನ್ನ ಜಿಪಿಎಸ್ ದಾಖಲೆಗಳನ್ನು ಬೇಕಾದರೆ ಪರಿಶೀಲಿಸಿ, ನಾನು ಮನಾಲಿಗೆ ಹೋಗಿಲ್ಲ, ಎಂದಿದ್ದಾರೆ.
ಆತ್ಮಹತ್ಯೆ ಯತ್ನ ನಾಟಕವೇ?
ಲೈವ್‌ನಲ್ಲೇ ಆತ್ಮಹತ್ಯೆಗೆ ಪ್ರಯತ್ನಿಸಿದ ಅನುರಾಗ್ ಅವರ ವರ್ತನೆಯನ್ನು ಕಲಾಂ ಇಂಕ್ ತೀವ್ರವಾಗಿ ಟೀಕಿಸಿದ್ದಾರೆ. ಅನುರಾಗ್ ಖಿನ್ನತೆಯಿಂದ ನರಳುತ್ತಿದ್ದರೆ, ಅವನ ಪಿಆರ್​ ಟೀಮ್ ಹೇಗೆ ಸಕ್ರಿಯವಾಗಿತ್ತು? ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ಇಂತಹ ಕೆಲಸ ಮಾಡಿದರೆ ಜನ ಸಹಾನುಭೂತಿ ತೋರಿಸುತ್ತಾರೆ ಎಂದು, ಸುಳ್ಳನ್ನು ಸತ್ಯವನ್ನಾಗಿ ಮಾಡಬಹುದು ಎಂಬ ಆಲೋಚನೆ ಇದ್ದರೂ ಇರಬಹುದು ಎಂದು ಅನುರಾಗ್​ ಸಾವಿನ ನಾಟಕವಾಡಿದ ಬಗ್ಗೆ ತಮ್ಮ ಅನುಮಾನವನ್ನು ಹೊರಹಾಕಿದ್ದಾರೆ.
ನನ್ನನ್ನು ಜೀವಂತವಾಗಿ ಸುಡುತ್ತೇವೆಂದು ಬೆದರಿಕೆ ಹಾಕುತ್ತಿದ್ದಾರೆ!
ಅನುರಾಗ್ ಅವರ ಲೈವ್ ವಿಡಿಯೋದ ನಂತರ ತಮ್ಮ ಕುಟುಂಬಕ್ಕೆ ಕೊಲೆ ಬೆದರಿಕೆಗಳು ಬಂದಿರುವುದನ್ನು ಕಲಾಂ ಇಂಕ್ ಬಹಿರಂಗಪಡಿಸಿದ್ದಾರೆ. ಎಂಟು ಮಿಲಿಯನ್ ಫಾಲೋವರ್ಸ್ ಇಟ್ಟುಕೊಂಡು ನೀನು ನನ್ನ ಕುಟುಂಬದ ಹೆಸರನ್ನು ಹಾಳು ಮಾಡಿದ್ದೀರಿ. ನೀನು ಲೈವ್ ನಂತರ ನಮ್ಮ ಮನೆಯ ಮುಂದೆ ಜನ ಸೇರಿದ್ದಾರೆ, ನಮ್ಮನ್ನು ಜೀವಂತವಾಗಿ ಸುಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಇದು ಎಷ್ಟು ಸರಿ? ಎಂದು ಅವರು ಪ್ರಶ್ನಿಸಿದ್ದಾರೆ.

ನನ್ನ ತಪ್ಪಿದ್ದರೆ ಜೈಲಿಗೆ ಹೋಗುತ್ತೇನೆ

ತಮ್ಮ ಕುಟುಂಬದ ವಿರುದ್ಧ ದಾಖಲಾದ ಕೌಟುಂಬಿಕ ಹಿಂಸೆ, ವರದಕ್ಷಿಣೆ ಮತ್ತು ಜಾತಿ ನಿಂದನೆ ಪ್ರಕರಣಗಳನ್ನು ಪ್ರಸ್ತಾಪಿಸಿದ ಕಲಾಂ ಇಂಕ್, ಅದಕ್ಕೆ ಪುರಾವೆಗಳಿದ್ದರೆ ತೋರಿಸಿ. ಆ ಪ್ರಕರಣಗಳನ್ನು ಆಮೇಲೆ ಹಿಂಪಡೆಯಲಾಗಿದ್ದು, ರಿತಿಕಾ ಕ್ಷಮೆಯೂ ಕೇಳಿದ್ದರು. ನಮ್ಮ ಕುಟುಂಬದ ಬಗ್ಗೆ ಮಾಡಲಾದ ಎಲ್ಲಾ ಆರೋಪಗಳ ಬಗ್ಗೆ ಸಮಗ್ರ ತನಿಖೆಯಾಗಲಿ. ನಾನು ತಪ್ಪು ಮಾಡಿದ್ದರೆ ನನ್ನನ್ನು ಜೈಲಿಗೆ ಹಾಕಿ, ಆದರೆ ಪೋಷಕರ ಹೆಸರನ್ನು ಹಾಳು ಮಾಡಬೇಡ, ಎಂದು ಭಾವುಕರಾಗಿ ಮನವಿ ಮಾಡಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net