_1777570089760.webp?w=480&auto=format%2Ccompress&fit=max)
_1777570089760.webp?w=480&auto=format%2Ccompress&fit=max)
ಇಂದಿನ ಜಗತ್ತಿನಲ್ಲಿ ಯುದ್ಧಗಳು ಕೇವಲ ಮದ್ದುಗುಂಡುಗಳಿಂದ ನಡೆಯುತ್ತಿಲ್ಲ, ಅವುಗಳ ಹಿಂದೆ ಅಡಗಿರುವ ಅದೃಶ್ಯ ಖನಿಜಗಳ ಮೂಲಕ ನಿಯಂತ್ರಿಸಲ್ಪಡುತ್ತಿವೆ. ‘ಆಂಟಿಮನಿ’ ಎಂಬ ಅರೆಲೋಹ ಇಂದು ಜಾಗತಿಕ ರಾಜಕಾರಣದ ಕೇಂದ್ರಬಿಂದುವಾಗಿದೆ. ಕ್ಷಿಪಣಿಗಳಿಂದ ಹಿಡಿದು ಸ್ಮಾರ್ಟ್ಫೋನ್ಗಳವರೆಗೆ ಬಹಳಷ್ಟು ವಸ್ತುಗಳ ತಯಾರಿಕೆಗೆ ಅನಿವಾರ್ಯವಾಗಿರುವ ಈ ಲೋಹದ ಮೇಲೆ ಚೀನಾ ಹೊಂದಿರುವ ಏಕಸ್ವಾಮ್ಯವು ಅಮೆರಿಕ ಸೇರಿದಂತೆ ಬಲಿಷ್ಠ ರಾಷ್ಟ್ರಗಳನ್ನು ಆತಂಕಕ್ಕೆ ತಳ್ಳಿದೆ.
ರಫ್ತು ನಿರ್ಬಂಧದ ಮೂಲಕ ಚೀನಾ ನಡೆಸುತ್ತಿರುವ ಈ ‘ಮಿನರಲ್ ವಾರ್’, ತಾಂತ್ರಿಕ ಪಾರುಪತ್ಯ ಮತ್ತು ರಕ್ಷಣಾ ಸನ್ನದ್ಧತೆಯ ಮೇಲೆ ಬೀರಲಿರುವ ಗಂಭೀರ ಪರಿಣಾಮಗಳೇನು? ಪೂರೈಕೆ ಸರಪಳಿಯ ಈ ಸಂಕಷ್ಟ ಭಾರತದ ಸ್ವಾವಲಂಬನೆಯ ಹಾದಿಗೆ ಎಚ್ಚರಿಕೆಯ ಗಂಟೆಯೇ? ಈ ಕುರಿತಾದ ಸಮಗ್ರ ನೋಟ ಇಲ್ಲಿದೆ.
ಆಂಟಿಮನಿ ಎಂಬುದು ವಿಶಿಷ್ಟವಾದ ರಾಸಾಯನಿಕ ಮೂಲಧಾತು. ಇದು ನೋಡಲು ಲೋಹದಂತೆ ಕಂಡರೂ, ಲೋಹ ಮತ್ತು ಅಲೋಹಗಳೆರಡರ ಗುಣಲಕ್ಷಣಗಳನ್ನು ಹೊಂದಿರುವುದರಿಂದ ಇದನ್ನು ‘ಅರೆಲೋಹ’ ಎಂದು ಕರೆಯಲಾಗುತ್ತದೆ. ಬೆಳ್ಳಿಯಂತೆ ಹೊಳೆಯುವ, ಸುಲಭವಾಗಿ ಪುಡಿ ಮಾಡಬಹುದಾದ ನೀಲಿ-ಬಿಳಿ ಬಣ್ಣದ ಘನವಸ್ತು ಈ ಆಂಟಿಮನಿ. ಇದು ಶಾಖ ಮತ್ತು ವಿದ್ಯುತ್ನ ಅಲ್ಪವಾಹಕ, ಒಂದು ವಿಷಕಾರಿ ಧಾತು. ಇದನ್ನು ನೇರ ವಾಗಿ ರ್ಸ³ಸುವುದು ಅಥವಾ ಇದರ ಧೂಳನ್ನು ಸೇವಿಸುವುದು ಆರೋಗ್ಯಕ್ಕೆ ಹಾನಿಕಾರಕ. ಆದ್ದರಿಂದ ಕೈಗಾರಿಕೆಗಳಲ್ಲಿ ಇದನ್ನು ಬಳಸುವಾಗ ಕಟ್ಟುನಿಟ್ಟಾದ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗುತ್ತದೆ.
ಹೆಚ್ಚಿನ ಲೋಹಗಳು ದ್ರವ ಸ್ಥಿತಿಯಿಂದ ಘನ ಸ್ಥಿತಿಗೆ ಬಂದಾಗ ಕುಗ್ಗುತ್ತವೆ. ಆದರೆ ಆಂಟಿಮನಿಯು ತಣ್ಣಗಾದಾಗ ವಿಸ್ತರಿಸುತ್ತದೆ. ಈ ವಿಶಿಷ್ಟ ಗುಣದಿಂದಾಗಿ ಇದನ್ನು ಇತರ ಲೋಹಗಳೊಂದಿಗೆ ಬೆರೆಸಿದಾಗ ಅತ್ಯಂತ ನಿಖರವಾದ ಅಚ್ಚುಗಳನ್ನು ತಯಾರಿಸಲು ಸಾಧ್ಯವಾಗುತ್ತದೆ. ಸೀಸದ ಜೊತೆಗೆ ಆಂಟಿಮನಿಯನ್ನು ಬೆರೆಸಿದಾಗ, ಸೀಸದ ಗಡಸುತನ ಮತ್ತು ಬಲ ಗಣನೀಯವಾಗಿ ಹೆಚ್ಚಾಗುತ್ತದೆ. ಆಂಟಿಮನಿಯು ಪ್ರಕೃತಿಯಲ್ಲಿ ಶುದ್ಧ ರೂಪದಲ್ಲಿ ಸಿಗುವುದು ವಿರಳ. ಇದು ಹೆಚ್ಚಾಗಿ ‘ಸ್ಟಿಬ್ನೈಟ್’ ಎಂಬ ಅದಿರಿನ ರೂಪದಲ್ಲಿ ದೊರೆಯುತ್ತದೆ.
ರಕ್ಷಣಾ ವಲಯ: ಯುದ್ಧ ಟ್ಯಾಂಕ್ಗಳು, ಕ್ಷಿಪಣಿಗಳು ಮತ್ತು ಗುಂಡುಗಳ ತಯಾರಿಕೆಯಲ್ಲಿ ಇದು ಅನಿವಾರ್ಯ.
ಬೆಂಕಿ ನಿರೋಧಕಗಳು: ಬಟ್ಟೆಗಳು, ಆಟಿಕೆಗಳು ಮತ್ತು ಪ್ಲಾಸ್ಟಿಕ್ ವಸ್ತುಗಳು ಬೇಗನೆ ಬೆಂಕಿಗೆ ತುತ್ತಾಗದಂತೆ ತಡೆಯಲು ‘ಆಂಟಿಮನಿ ಟ್ರಯಾಕ್ಸೆ ೖಡ್’ ಬಳಸಲಾಗುತ್ತದೆ.
ಬ್ಯಾಟರಿಗಳು: ಸೀಸದ ಆಮ್ಲದ ಬ್ಯಾಟರಿಗಳಲ್ಲಿ (ಔಛಿಚಛಚ್ಚಜಿಛ ಚಿಚಠಿಠಿಛ್ಟಿಜಿಛಿಠ) ಪ್ಲೇಟ್ಗಳನ್ನು ಬಲಪಡಿಸಲು ಬಳಸಲಾಗುತ್ತದೆ.
ಮಿಶ್ರಲೋಹಗಳು: ಟೈಪ್ ಮೆಟಲ್ (ಮುದ್ರಣ ಅಕ್ಷರಗಳು) ಮತ್ತು ಕೇಬಲ್ ಶೀಥಿಂಗ್ಗಳಲ್ಲಿ ಇದನ್ನು ಬಳಸಲಾಗುತ್ತದೆ.
ಸೆಮಿಕಂಡಕ್ಟರ್ಗಳು: ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಡಯೋಡ್ಗಳು ಮತ್ತು ಇನ್ಪಾ›ರೆಡ್ ಡಿಟೆಕ್ಟರ್ಗಳ ತಯಾರಿಕೆಯಲ್ಲಿ ಇದರ ಬಳಕೆ ಇದೆ.
ಕಾಸ್ಮೆಟಿಕ್ಸ್: ಪುರಾತನ ಕಾಲದಲ್ಲಿ ಆಂಟಿಮನಿ ಸಲ್ಪೈಡ್ ಅನ್ನು ಕಣ್ಣಿಗೆ ಹಚ್ಚುವ ‘ಕಾಡಿಗೆ’ಯಾಗಿ ಬಳಸಲಾಗುತ್ತಿತ್ತು. ಆದರೆ, ಈಗಿನ ಕಾಲದಲ್ಲಿ ಇದರ ವಿಷಕಾರಿ ಅಂಶದ ಬಗ್ಗೆ ಎಚ್ಚರಿಕೆ ವಹಿಸಲಾಗುತ್ತದೆ.
ತಂತ್ರಜ್ಞಾನ: ನೈಟ್ ವಿಷನ್ ಕನ್ನಡಕಗಳು, ಇನ್ಪಾ›ರೆಡ್ ಸೆನ್ಸರ್ಗಳು ಮತ್ತು ರಾಡಾರ್ಗಳಲ್ಲಿ ಇದು ಅತ್ಯಗತ್ಯ.
ಜಗತ್ತಿನ ಆಂಟಿಮನಿ ಮಾರುಕಟ್ಟೆಯಲ್ಲಿ ಚೀನಾ ಶೇಕಡ 45ರಿಂದ 50ಕ್ಕಿಂತ ಹೆಚ್ಚು ಉತ್ಪಾದನೆಯನ್ನು ನಿಯಂತ್ರಿಸುತ್ತದೆ. ಈ ಏಕಸ್ವಾಮ್ಯಕ್ಕೆ ಪ್ರಮುಖ ಕಾರಣಗಳು ಹೀಗಿವೆ. ಸಮೃದ್ಧ ನೈಸರ್ಗಿಕ ಸಂಪನ್ಮೂಲ: ಚೀನಾದಲ್ಲಿ ಜಗತ್ತಿನ ಅತಿ ದೊಡ್ಡ ಆಂಟಿಮನಿ ನಿಕ್ಷೇಪಗಳಿವೆ. ವಿಶೇಷವಾಗಿ ಚೀನಾದ ಹುನಾನ್ ಪ್ರಾಂತ್ಯವು ವಿಶ್ವದ ಆಂಟಿಮನಿ ರಾಜಧಾನಿ ಎಂದೇ ಕರೆಯಲ್ಪಡುತ್ತದೆ. ಹುನಾನ್ ಪ್ರಾಂತ್ಯವು ವಿಶ್ವದ ಒಟ್ಟು ಆಂಟಿಮನಿ ಉತ್ಪಾದನೆಯಲ್ಲಿ ಅಗ್ರಸ್ಥಾನದಲ್ಲಿ ಇರುವುದರಿಂದ ಹೀಗೆ ಕರೆಯಲಾಗುತ್ತದೆ. ವಿಶೇಷವಾಗಿ ಅಲ್ಲಿನ ಕ್ಸಿಕುವಾಂಗ್ಶಾನ್ ಗಣಿಯು ಈ ಹೆಗ್ಗಳಿಕೆಗೆ ಪ್ರಮುಖ ಕಾರಣ. ಕ್ಸಿಕುವಾಂಗ್ಶಾನ್ ಗಣಿಯನ್ನು 1897ರಲ್ಲಿ ಪತ್ತೆ ಹಚ್ಚಲಾಯಿತು.
ಅಂದಿನಿಂದ ಇಂದಿನವರೆಗೆ ಇದು ವಿಶ್ವದ ಆಂಟಿಮನಿ ಮಾರುಕಟ್ಟೆಯಲ್ಲಿ ಏಕಸ್ವಾಮ್ಯವನ್ನು ಕಾಯ್ದುಕೊಂಡಿದೆ. ಇಲ್ಲಿನ ಉತ್ಪಾದನೆಯು ಜಾಗತಿಕ ರಕ್ಷಣಾ ವಲಯ, ಎಲೆಕ್ಟ್ರಾನಿಕ್ಸ್ ಮತ್ತು ಅಗ್ನಿಶಾಮಕ ಉಪಕರಣಗಳ ತಯಾರಿಕೆಯ ಮೇಲೆ ನೇರ ಪ್ರಭಾವ ಬೀರುತ್ತದೆ. ಸದ್ಯದ ಜಾಗತಿಕ ರಾಜಕೀಯ ಪರಿಸ್ಥಿತಿಯಲ್ಲಿ, ಸೆಮಿಕಂಡಕ್ಟರ್ ಮತ್ತು ಹಸಿರು ಇಂಧನ ತಂತ್ರಜ್ಞಾನಕ್ಕೆ ಆಂಟಿಮನಿ ಅತ್ಯಗತ್ಯವಾದ್ದರಿಂದ, ಹುನಾನ್ ಪ್ರಾಂತ್ಯದ ಈ ನಿಕ್ಷೇಪಗಳ ಮಹತ್ವ ಇನ್ನಷ್ಟು ಹೆಚ್ಚಾಗಿದೆ. ಇಲ್ಲಿ ಸಿಗುವ ಸ್ಟಿಬ್ನೈಟ್ ಅದಿರು ಗುಣಮಟ್ಟದ್ದಾಗಿದೆ.
ಈ ಅದಿರಿನಲ್ಲಿ ಆಂಟಿಮನಿಯ ಸಾಂದ್ರತೆ ಹೆಚ್ಚಿರುವುದರಿಂದ, ಇದನ್ನು ಹೊರತೆಗೆಯುವುದು ಮತ್ತು ಶುದ್ಧೀಕರಿಸುವುದು ಇತರ ಕಡೆಗಳಿಗಿಂತ ಹೆಚ್ಚು ಲಾಭದಾಯಕ ಮತ್ತು ಸುಲಭ. ಹುನಾನ್ನಲ್ಲಿ ಗಣಿಗಾರಿಕೆ ಮಾತ್ರವಲ್ಲದೆ, ಅದಿರನ್ನು ಸಂಸ್ಕರಿಸುವ ಮತ್ತು ಅದರಿಂದ ಉಪ ಉತ್ಪನ್ನಗಳನ್ನು ತಯಾರಿಸುವ ಬೃಹತ್ ಕಾರ್ಖಾನೆಗಳು ಒಂದೇ ಕಡೆ ಕೇಂದ್ರೀಕೃತವಾಗಿವೆ. ಇದರಿಂದಾಗಿ ಚೀನಾ ಜಾಗತಿಕ ಮಾರುಕಟ್ಟೆಯಲ್ಲಿ ಆಂಟಿಮನಿಯ ಬೆಲೆ ಮತ್ತು ಪೂರೈಕೆಯನ್ನು ನಿಯಂತ್ರಿಸುವ ಸಾಮರ್ಥ್ಯ ಹೊಂದಿದೆ.
ಅದಿರು ತೆಗೆಯುವುದು ಮಾತ್ರವಲ್ಲದೆ, ಅದನ್ನು ಶುದ್ಧೀಕರಿಸಿ ಲೋಹವನ್ನಾಗಿ ಪರಿವರ್ತಿಸುವ ತಂತ್ರಜ್ಞಾನ ಮತ್ತು ಕಾರ್ಖಾನೆ ಗಳು ಚೀನಾದಲ್ಲಿ ಅತ್ಯಾಧುನಿಕ ವಾಗಿವೆ. ಉಳಿದ ದೇಶಗಳು ಅದಿರನ್ನು ತೆಗೆದರೂ, ಸಂಸ್ಕರಣೆಗಾಗಿ ಚೀನಾವನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ಕಡಿಮೆ ಕೂಲಿ ಮತ್ತು ಸಡಿಲವಾದ ಪರಿಸರ ನಿಯಮಗಳಿಂದಾಗಿ ಚೀನಾ ಕಡಿಮೆ ಬೆಲೆಗೆ ಆಂಟಿಮನಿ ಪೂರೈಕೆ ಮಾಡುತ್ತದೆ. ಇದರಿಂದಾಗಿ ಇತರ ದೇಶಗಳ ಗಣಿಗಳು ಸ್ಪರ್ಧಿಸಲಾರದೆ ಮುಚ್ಚಲ್ಪಟ್ಟಿವೆ.
ಈ ಭಾಗದ ಭೂಗರ್ಭವು ಲಕ್ಷಾಂತರ ವರ್ಷಗಳ ಹಿಂದೆ ಜ್ವಾಲಾಮುಖಿ ಚಟುವಟಿಕೆ ಮತ್ತು ಟೆಕ್ಟಾನಿಕ್ ಬದಲಾವಣೆಗಳಿಗೆ ಒಳಗಾದಾಗ, ಭೂಮಿಯ ಆಳದಲ್ಲಿದ್ದ ಲೋಹದ ಅಂಶಗಳು ಮೇಲ್ಪದರಕ್ಕೆ ಬಂದು ಶೇಖರಣೆಗೊಂಡವು. ಈ ಭೌಗೋಳಿಕ ಪ್ರಕ್ರಿಯೆಯೇ ಹುನಾನ್ ಅನ್ನು ಖನಿಜಗಳ ಖಜಾನೆಯನ್ನಾಗಿ ಮಾಡಿದೆ.
ವಿಶ್ವದ ಒಟ್ಟು ಆಂಟಿಮನಿ ಉತ್ಪಾದನೆಯ ಸುಮಾರು 48%ರಿಂದ 50% ಚೀನಾದಲ್ಲೇ ನಡೆಯುತ್ತದೆ. ರಷ್ಯಾ ಮತ್ತು ತಜಕಿಸ್ತಾನ ಇತರ ಪ್ರಮುಖ ಉತ್ಪಾದಕ ದೇಶಗಳಾಗಿದ್ದರೂ, ಅಲ್ಲಿನ ರಾಜಕೀಯ ಪರಿಸ್ಥಿತಿಯಿಂದಾಗಿ ಅಮೆರಿಕ ಅಥವಾ ಭಾರತಕ್ಕೆ ಸುಲಭವಾಗಿ ಪೂರೈಕೆ ಸಿಗುವುದು ಕಷ್ಟ.
ಚೀನಾದ ಈ ಏಕಸ್ವಾಮ್ಯವು ಅಮೆರಿಕ ಮತ್ತು ಭಾರತದಂತಹ ಹಲವು ರಾಷ್ಟ್ರಗಳಿಗೆ ಕೇವಲ ಆರ್ಥಿಕ ಸಮಸ್ಯೆಯಲ್ಲ, ಇದು ರಾಷ್ಟ್ರೀಯ ಭದ್ರತೆಯ ವಿಚಾರವಾಗಿದೆ. ಚೀನಾ 2024ರ ಆಗಸ್ಟ್ನಿಂದ ಜಾರಿಗೆ ಬರುವಂತೆ ಆಂಟಿಮನಿ ರಫ್ತಿನ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಹೇರಿರುವುದು ಜಾಗತಿಕ ಮಟ್ಟದಲ್ಲಿ ಆತಂಕಕ್ಕೆ ಕಾರಣವಾಗಿದೆ. ಆಂಟಿಮನಿ ಇಲ್ಲದೆ ಆಧುನಿಕ ಯುದ್ಧೋಪಕರಣಗಳ ತಯಾರಿಕೆ ಅಸಾಧ್ಯ ಎನ್ನುವಂತಿದೆ. ಬುಲೆಟ್ಗಳು, ಕ್ಷಿಪಣಿಗಳು ಮತ್ತು ಯುದ್ಧನೌಕೆಗಳ ತಯಾರಿಕೆಯಲ್ಲಿ ಇದನ್ನು ಬಳಸಲಾಗುತ್ತದೆ. ಚೀನಾ ರಫ್ತು ನಿಲ್ಲಿಸಿರುವುದರಿಂದ, ಅಮೆರಿಕದಂತಹ ದೇಶಗಳ ರಕ್ಷಣಾ ಸಾಮರ್ಥ್ಯಕ್ಕೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದೆ. ಇಂದಿನ ‘ಚಿಪ್ ವಾರ್’ ಅಥವಾ ಸೆಮಿಕಂಡಕ್ಟರ್ ಯುದ್ಧದಲ್ಲಿ ಆಂಟಿಮನಿ ಪ್ರಮುಖ ಪಾತ್ರ ವಹಿಸುತ್ತದೆ.
ಚೀನಾವು ಅಮೆರಿಕಕ್ಕೆ ಆಂಟಿಮನಿ ಮತ್ತು ಗ್ಯಾಲಿಯಂನಂತಹ ಖನಿಜಗಳನ್ನು ನಿಷೇಧಿಸುವ ಮೂಲಕ, ಅಮೆರಿಕದ ಹೈ-ಟೆಟ್ ಉದ್ಯಮಕ್ಕೆ ಸೆಡ್ಡು ಹೊಡೆಯುತ್ತಿದೆ. ಚೀನಾವು ಆಂಟಿಮನಿಯನ್ನು ‘ರಾಜತಾಂತ್ರಿಕ ಅಸ್ತ್ರ’ವನ್ನಾಗಿ ಬಳಸುತ್ತಿರುವುದು ಜಾಗತಿಕ ಆತಂಕಕ್ಕೆ ಮೂಲ ಕಾರಣ. ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿಗಳು ಮತ್ತು ಸೌರಶಕ್ತಿ ಫಲಕಗಳ ತಯಾರಿಕೆಯಲ್ಲಿ ಆಂಟಿಮನಿ ಬಳಕೆಯಾಗುತ್ತದೆ. ಭಾರತವು ಸುಸ್ಥಿರ ಇಂಧನದತ್ತ ಮುನ್ನಡೆಯುತ್ತಿರುವ ಈ ಸಮಯದಲ್ಲಿ, ಚೀನಾದ ಮೇಲಿನ ಅವಲಂಬನೆ ಭಾರತದ ‘ಹಸಿರು ಇಂಧನ’ ಗುರಿಗಳಿಗೆ ಅಡ್ಡಿಯಾಗಬಹುದು.
ಭಾರತವು ತನ್ನ ಅಗತ್ಯದ ಬಹುಪಾಲು ಆಂಟಿಮನಿ ಮತ್ತು ಇತರ ‘ಕ್ರಿಟಿಕಲ್ ಮಿನರಲ್ಸ್’ಗಾಗಿ ಚೀನಾವನ್ನೇ ಅವಲಂಬಿಸಿದೆ. ಚೀನಾ ಆಂಟಿಮನಿ ರಫ್ತು ನಿಲ್ಲಿಸಿರುವುದರಿಂದ ಭಾರತದ ಪ್ರಮುಖ ಉದ್ಯಮವಾದ ವಾಹನ ತಯಾರಿಕೆಗೆ ಹೊಡೆತ ಬೀಳಬಹುದು. ಆದ್ದರಿಂದಲೇ, ಭಾರತ ಸರ್ಕಾರವು ಇತ್ತೀಚೆಗೆ ತನ್ನದೇ ಆದ ‘ಕ್ರಿಟಿಕಲ್ ಮಿನರಲ್ ಮಿಷನ್’ ಆರಂಭಿಸಿದೆ. ದೇಶದೊಳಗೆ ಇಂತಹ ಖನಿಜಗಳನ್ನು ಪತ್ತೆಹಚ್ಚಲು ಮತ್ತು ಆಸ್ಟ್ರೇಲಿಯಾ, ಆಫ್ರಿಕಾದ ದೇಶಗಳೊಂದಿಗೆ ಗಣಿಗಾರಿಕೆ ಒಪ್ಪಂದ ಮಾಡಿಕೊಳ್ಳಲು ಮುಂದಾಗಿದೆ.
ಚೀನಾದ ಮೇಲಿನ ಅವಲಂಬನೆ ಯನ್ನು ಕಡಿಮೆ ಮಾಡಲು ಮತ್ತು ಆಂಟಿಮನಿಯಂತಹ ನಿರ್ಣಾಯಕ ಖನಿಜಗಳಲ್ಲಿ ಸ್ವಾವಲಂಬಿಯಾಗಲು ಭಾರತವು ಈಗಾಗಲೇ ಜಾಗತಿಕ ಮಟ್ಟದಲ್ಲಿ ಹಲವಾರು ಪ್ರಮುಖ ರಾಷ್ಟ್ರಗಳೊಂದಿಗೆ ಕೈಜೋಡಿಸಿದೆ. ಭಾರತದ ‘ಖನಿಜ ವಿದೇಶ ಇಂಡಿಯಾ ಲಿಮಿಟೆಡ್’ (ಕೆಎಬಿಐಎಲ್) ಸಂಸ್ಥೆಯು ಈ ನಿಟ್ಟಿನಲ್ಲಿ ಮುಂಚೂಣಿಯಲ್ಲಿದೆ. ಅಲ್ಲದೆ, ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ‘ಕ್ರಿಟಿಕಲ್ ಮಿನರಲ್ಸ್ ಇನ್ವೆಸ್ಟ್ಮೆಂಟ್ ಪಾರ್ಟ್ನರ್ಶಿಪ್’ ಏರ್ಪಟ್ಟಿದೆ. ಲಿಥಿಯಂ ಮತ್ತು ಕೋಬಾಲ್ಟ್ ಜೊತೆಗೆ ಆಂಟಿಮನಿ ನಿಕ್ಷೇಪಗಳ ಪತ್ತೆ ಮತ್ತು ಗಣಿಗಾರಿಕೆಯಲ್ಲಿ ಆಸ್ಟ್ರೇಲಿಯಾದ ತಂತ್ರಜ್ಞಾನ ಭಾರತಕ್ಕೆ ನೆರವಾಗಲಿದೆ.
ದಕ್ಷಿಣ ಅಮೆರಿಕದ ಅರ್ಜೆಂಟೀನಾ ಮತ್ತು ಚಿಲಿ ದೇಶಗಳು ‘ಖನಿಜಗಳ ಸ್ವರ್ಣ ತ್ರಿಕೋನ’ ಎಂದು ಕರೆಸಿಕೊಳ್ಳುತ್ತವೆ. ಅರ್ಜೆಂಟೀನಾದಿಂದ ಈಗಾಗಲೇ ಭಾರತವು ಐದು ಲಿಥಿಯಂ ಬ್ಲಾಕ್ಗಳನ್ನು ಖರೀದಿಸಿದೆ. ಇದೇ ಮಾದರಿಯಲ್ಲಿ ಆಂಟಿಮನಿ ನಿಕ್ಷೇಪಗಳಿಗೂ ಒಪ್ಪಂದ ವಿಸ್ತರಿಸುವ ಸಾಧ್ಯತೆ ಇದೆ. ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ ದೇಶಗಳು ಸೇರಿ ಸಪ್ಲೈ ಚೈನ್ ರೆಸಿಲಿಯನ್ಸ್ ಅಡಿಯಲ್ಲಿ ಖನಿಜಗಳ ಪೂರೈಕೆಗೆ ಪರಸ್ಪರ ಸಹಕರಿಸುತ್ತಿವೆ. ಮಾತ್ರವಲ್ಲ, ಭಾರತ ಮತ್ತು ಕೆನಡಾ ದೇಶಗಳು ಶಕ್ತಿ ಮತ್ತು ನಿರ್ಣಾಯಕ ಖನಿಜಗಳ ಕ್ಷೇತ್ರದಲ್ಲಿ ಹೂಡಿಕೆಯನ್ನು ಹೆಚ್ಚಿಸಲು ಮಾತುಕತೆ ನಡೆಸಿವೆ. ಯುರೇನಿಯಂ ಮತ್ತು ಇತರ ರಕ್ಷಣಾ ಸಂಬಂಧಿ ಖನಿಜಗಳಿಗೆ ಕೆನಡಾ ನಂಬಿಕಸ್ತ ಪಾಲುದಾರನಾಗಬಲ್ಲದು.