ತಮಿಳುನಾಡು ರಾಜಕಾರಣದಲ್ಲಿ ಮತ್ತೊಂದು ಟ್ವಿಸ್ಟ್​: ಡಿಎಂಕೆ ಮೈತ್ರಿಕೂಟಕ್ಕೆ ಎಂಡಿಎಂಕೆ ಗುಡ್‌ಬೈ?; ಸಿಎಂ ವಿಜಯ್ ಸರ್ಕಾರಕ್ಕೆ ವೈಕೋ ಬೆಂಬಲ ಸಾಧ್ಯತೆ! Vaiko meets CM Vijay

ತಮಿಳುನಾಡು ರಾಜಕಾರಣದಲ್ಲಿ ಮತ್ತೊಂದು ಟ್ವಿಸ್ಟ್​: ಡಿಎಂಕೆ ಮೈತ್ರಿಕೂಟಕ್ಕೆ ಎಂಡಿಎಂಕೆ ಗುಡ್‌ಬೈ?; ಸಿಎಂ ವಿಜಯ್ ಸರ್ಕಾರಕ್ಕೆ ವೈಕೋ ಬೆಂಬಲ ಸಾಧ್ಯತೆ!
ತಮಿಳುನಾಡು ರಾಜಕಾರಣದಲ್ಲಿ ಮತ್ತೊಂದು ಟ್ವಿಸ್ಟ್​: ಡಿಎಂಕೆ ಮೈತ್ರಿಕೂಟಕ್ಕೆ ಎಂಡಿಎಂಕೆ ಗುಡ್‌ಬೈ?; ಸಿಎಂ ವಿಜಯ್ ಸರ್ಕಾರಕ್ಕೆ ವೈಕೋ ಬೆಂಬಲ ಸಾಧ್ಯತೆ!
Published on
ಚೆನ್ನೈ: ನಟ ಸಿ. ಜೋಸೆಫ್ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಪಕ್ಷವು ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದ ಬೆನ್ನಲ್ಲೇ, ರಾಜ್ಯದ ರಾಜಕೀಯ ಸಮೀಕರಣಗಳು ದಿನಕ್ಕೊಂದು ತಿರುವು ಪಡೆಯುತ್ತಿವೆ. ಈಗ ಸ್ಟಾಲಿನ್ ನೇತೃತ್ವದ ಡಿಎಂಕೆ ಒಕ್ಕೂಟಕ್ಕೆ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ವೈಕೋ ನೇತೃತ್ವದ ಮರುಮಲರ್ಚಿ ದ್ರಾವಿಡ ಮುನ್ನೇತ್ರ ಕಳಗಂ(Vaiko meets Vijay) ಪಕ್ಷವು ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಪರ ಮೈತ್ರಿಕೂಟದಿಂದ (SPA) ಅಧಿಕೃತವಾಗಿ ಹೊರಬಂದು, ಮುಖ್ಯಮಂತ್ರಿ ವಿಜಯ್ ಅವರ ಟಿವಿಕೆ ಸರ್ಕಾರಕ್ಕೆ ಬೆಂಬಲ ನೀಡಲು ಸಜ್ಜಾಗಿದೆ ಎಂದು ರಾಜಕೀಯ ವಲಯದಲ್ಲಿ ಬಲವಾದ ಚರ್ಚೆಗಳು ಆರಂಭವಾಗಿವೆ.
ಜೂನ್ 27 ರಂದು ನಡೆಯಲಿರುವ ಎಂಡಿಎಂಕೆ ಪಕ್ಷದ ಸಾಮಾನ್ಯ ಮಂಡಳಿ ಸಭೆಯಲ್ಲಿ ಈ ಬಗ್ಗೆ ಅಧಿಕೃತ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ. ಈಗಾಗಲೇ ಕಾಂಗ್ರೆಸ್, ವಿಸಿಕೆ, ಐಯುಎಂಎಲ್ (IUML) ಸೇರಿದಂತೆ ಡಿಎಂಕೆಯ ಬಹುತೇಕ ಹಳೆಯ ಮಿತ್ರಪಕ್ಷಗಳು ವಿಜಯ್ ಸರ್ಕಾರದಲ್ಲಿ ಭಾಗಿಯಾಗಿವೆ ಅಥವಾ ಹೊರಗಿನಿಂದ ಬೆಂಬಲ ಘೋಷಿಸಿವೆ. ಈಗ ಎಂಡಿಎಂಕೆ ಸರದಿ ಬಂದಿದೆ.

ಉದಯಸೂರ್ಯ ಚಿಹ್ನೆಯೇ ಮುಳುವಾಯ್ತು!: ಶಾಸಕರ ರಾಜೀನಾಮೆ ಅನಿವಾರ್ಯ?

ಇತರ ಪಕ್ಷಗಳಂತೆ ಎಂಡಿಎಂಕೆಗೆ ತಕ್ಷಣವೇ ವಿಜಯ್ ಸರ್ಕಾರಕ್ಕೆ ಬಹಿರಂಗ ಬೆಂಬಲ ಘೋಷಿಸಲು ಒಂದು ತಾಂತ್ರಿಕ ಅಡ್ಡಿಯಿದೆ. ಕಳೆದ ಏಪ್ರಿಲ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎಂಡಿಎಂಕೆಯ ಇಬ್ಬರು ಶಾಸಕರು ಡಿಎಂಕೆ ಪಕ್ಷದ ಉದಯಸೂರ್ಯ ಚಿಹ್ನೆಯಡಿಯಲ್ಲೇ ಸ್ಪರ್ಧಿಸಿ ಗೆದ್ದಿದ್ದರು. ಪಕ್ಷಾಂತರ ನಿಷೇಧ ಕಾಯ್ದೆಯ ತೂಗುಗತ್ತಿ ಇರುವುದರಿಂದ, ಅವರು ನೇರವಾಗಿ ಟಿವಿಕೆ ಸರ್ಕಾರವನ್ನು ಬೆಂಬಲಿಸಲು ಸಾಧ್ಯವಿಲ್ಲ.
ಹೀಗಾಗಿ, ಡಿಎಂಕೆ ಮೈತ್ರಿಯಿಂದ ಹೊರಬರಲು ಇರುವ ಏಕೈಕ ದಾರಿ ಎಂದರೆ ಈ ಇಬ್ಬರು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು. ನಂತರ ನಡೆಯುವ ಉಪಚುನಾವಣೆಯಲ್ಲಿ ಸ್ವಂತ ಬಲದ ಮೇಲೆ ಸ್ಪರ್ಧಿಸಿ ಗೆದ್ದು, ವಿಜಯ್ ಸರ್ಕಾರಕ್ಕೆ ಕೈಜೋಡಿಸುವುದು ಪಕ್ಷದ ನಾಯಕರ ಯೋಚನೆಯಾಗಿದೆ. ಎಂಡಿಎಂಕೆ ಮುಖ್ಯಸ್ಥ ವೈಕೋ ಮತ್ತು ಅವರ ಪುತ್ರ, ತಿರುಚಿರಾಪಳ್ಳಿ ಸಂಸದ ದುರೈ ವೈಕೋ ಅವರು ಡಿಎಂಕೆ ಚಿಹ್ನೆಯಡಿ ಸ್ಪರ್ಧಿಸಿದ್ದನ್ನು ಈಗಾಗಲೇ ಸಾರ್ವಜನಿಕವಾಗಿಯೇ ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ವೈಕೋ-ಸಿಎಂ ವಿಜಯ್ ಭೇಟಿ: ಕುತೂಹಲ ಮೂಡಿಸಿದ 45 ನಿಮಿಷಗಳ ಚರ್ಚೆ

ಕಳೆದ ಒಂದು ವಾರದಿಂದ ನಡೆದಿರುವ ರಾಜಕೀಯ ಚಟುವಟಿಕೆಗಳು ಈ ಮೈತ್ರಿ ಬದಲಾವಣೆಯ ಮುನ್ಸೂಚನೆಯನ್ನು ನೀಡುತ್ತಿವೆ. ಕಳೆದ ಮಂಗಳವಾರ ಟಿವಿಕೆ ಸರ್ಕಾರದ ಲೋಕೋಪಯೋಗಿ ಸಚಿವ ಆಧವ್ ಅರ್ಜುನ ಅವರು ವೈಕೋ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲೇ, ಬುಧವಾರ ಸ್ವತಃ ವೈಕೋ ಅವರು ಸೆಕ್ರೆಟರಿಯೇಟ್‌ನಲ್ಲಿ ಮುಖ್ಯಮಂತ್ರಿ ವಿಜಯ್ ಅವರನ್ನು ಭೇಟಿಯಾಗಿ 45 ನಿಮಿಷಗಳ ಕಾಲ ಸುದೀರ್ಘ ಚರ್ಚೆ ನಡೆಸಿದ್ದಾರೆ. ಈ ಭೇಟಿಯನ್ನು ವೈಕೋ ಅವರು ಕೇವಲ ಸೌಜನ್ಯದ ಭೇಟಿ ಎಂದು ಕರೆದಿದ್ದರೂ, ಅಲ್ಲಿ ತಮಿಳುನಾಡಿನ ಭವಿಷ್ಯದ ರಾಜಕೀಯ ಮೈತ್ರಿಯ ಕುರಿತೇ ಚರ್ಚೆಯಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.

ವಿಜಯ್ ಸರ್ಕಾರದ ಪರ ಬ್ಯಾಟ್ ಬೀಸಿದ ದುರೈ ವೈಕೋ!

ಇದೇ ವೇಳೆ, ರಾಜ್ಯದಲ್ಲಿ ಮಹಿಳೆಯರ ಮೇಲಿನ ಅಪರಾಧಗಳ ಕುರಿತು ವಿಪಕ್ಷಗಳು ವಿಜಯ್ ಸರ್ಕಾರದ ವಿರುದ್ಧ ಮಾಡುತ್ತಿರುವ ಟೀಕೆಗಳನ್ನು ದುರೈ ವೈಕೋ ತೀವ್ರವಾಗಿ ಖಂಡಿಸಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ವಿಪಕ್ಷಗಳು ಸುಳ್ಳು ಕಥೆ ಕಟ್ಟುತ್ತಿವೆ. ಹಿಂದಿನ ಡಿಎಂಕೆ ಸರ್ಕಾರದ ಅವಧಿಯಲ್ಲೂ ಇಂತಹ ಘಟನೆಗಳು ನಡೆದಿದ್ದವು, ಪ್ರಸ್ತುತ ಸರ್ಕಾರ ಅಪರಾಧಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ ಎಂದು ಹೇಳುವ ಮೂಲಕ ದುರೈ ವೈಕೋ ಅವರು ಪರೋಕ್ಷವಾಗಿ ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿ, ಟಿವಿಕೆ ಸರ್ಕಾರವನ್ನು ಸಮರ್ಥಿಸಿಕೊಂಡಿದ್ದಾರೆ.

ತಮಿಳುನಾಡಿಗೆ ಮತ್ತೆ 8 ಕ್ಷೇತ್ರಗಳ ಉಪಚುನಾವಣೆ ಭೀತಿ?

ಒಂದು ವೇಳೆ ಎಂಡಿಎಂಕೆಯ ಇಬ್ಬರು ಶಾಸಕರು ರಾಜೀನಾಮೆ ನೀಡಿದರೆ, ತಮಿಳುನಾಡು ವಿಧಾನಸಭೆಯಲ್ಲಿ ತೆರವಾಗುವ ಒಟ್ಟು ಸ್ಥಾನಗಳ ಸಂಖ್ಯೆ 8 ಕ್ಕೆ ಏರಲಿದೆ. ಮುಖ್ಯಮಂತ್ರಿ ವಿಜಯ್ ಅವರು ರಾಜೀನಾಮೆ ನೀಡಿರುವ ತಿರುಚಿರಾಪಳ್ಳಿ (ಪೂರ್ವ) ಕ್ಷೇತ್ರವೂ ಸೇರಿದಂತೆ ಈಗಾಗಲೇ 6 ಸ್ಥಾನಗಳು ಖಾಲಿ ಇವೆ. ಈ ಎಲ್ಲಾ ಕ್ಷೇತ್ರಗಳಿಗೆ ಒಟ್ಟಿಗೆ ಉಪಚುನಾವಣೆ ಎದುರಾಗಲಿದ್ದು, ಇದು ಮುಂಬರುವ ದಿನಗಳಲ್ಲಿ ತಮಿಳುನಾಡು ರಾಜಕೀಯ ದಿಕ್ಸೂಚಿಯನ್ನು ಬದಲಾಯಿಸುವುದರಲ್ಲಿ ಸಂಶಯವಿಲ್ಲ. ಒಟ್ಟಿನಲ್ಲಿ, ಸ್ಟಾಲಿನ್ ನೇತೃತ್ವದ ಡಿಎಂಕೆ ಈಗ ಸಂಪೂರ್ಣವಾಗಿ ಒಂಟಿಯಾಗುತ್ತಿದ್ದು, ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಹೊಸ ಶಕ್ತಿಯಾಗಿ ಹೊರಹೊಮ್ಮುತ್ತಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net