ಮಮತಾಗೆ ಮತ್ತೊಂದು ಆಘಾತ: ಕೋಲ್ಕತ್ತಾ ಮೇಯರ್ ಸ್ಥಾನಕ್ಕೆ ಫಿರ್ಹಾದ್ ಹಕೀಮ್ ರಾಜೀನಾಮೆ! Firhad Hakim Resigns

ಮಮತಾಗೆ ಮತ್ತೊಂದು ಆಘಾತ: ಕೋಲ್ಕತ್ತಾ ಮೇಯರ್ ಸ್ಥಾನಕ್ಕೆ ಫಿರ್ಹಾದ್ ಹಕೀಮ್ ರಾಜೀನಾಮೆ!
ಮಮತಾಗೆ ಮತ್ತೊಂದು ಆಘಾತ: ಕೋಲ್ಕತ್ತಾ ಮೇಯರ್ ಸ್ಥಾನಕ್ಕೆ ಫಿರ್ಹಾದ್ ಹಕೀಮ್ ರಾಜೀನಾಮೆ!
Published on
ಕೋಲ್ಕತ್ತಾ: ವಿಧಾನಸಭಾ ಚುನಾವಣೆಯ ಸೋಲಿನಿಂದ ಕಂಗೆಟ್ಟಿರುವ ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ಈಗ ನಾಯಕತ್ವದ ಬಿಕ್ಕಟ್ಟು ತುತ್ತತುದಿಗೆ ತಲುಪಿದೆ. ಜೂನ್ 3 ರ ಬುಧವಾರದಂದು ಪಕ್ಷದ ಪ್ರಭಾವಿ ಮುಖಂಡ ಹಾಗೂ ಕೋಲ್ಕತ್ತಾ ಮಹಾನಗರ ಪಾಲಿಕೆಯ ಮೇಯರ್ ಫಿರ್ಹಾದ್ ಹಕೀಮ್(Firhad Hakim Resigns) ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿರುವುದು ಭಾರಿ ಸಂಚಲನ ಸೃಷ್ಟಿಸಿದೆ. ಪಕ್ಷದ ಸುಪ್ರೀಂ ಮಮತಾ ಬ್ಯಾನರ್ಜಿ ಅವರ ಒಪ್ಪಿಗೆ ಸಿಕ್ಕ ತಕ್ಷಣವೇ ಹಕೀಮ್ ತಮ್ಮ ರಾಜೀನಾಮೆ ಪತ್ರವನ್ನು ಸಿದ್ಧಪಡಿಸಿದ್ದಾರೆ ಎಂದು ರಾಜಕೀಯ ಮೂಲಗಳು ಖಚಿತಪಡಿಸಿವೆ.
ಪಕ್ಷದ 58 ಶಾಸಕರು ಮಮತಾ ಮತ್ತು ಅಭಿಷೇಕ್ ಬ್ಯಾನರ್ಜಿ ನಾಯಕತ್ವವನ್ನು ಬದಿಗೊತ್ತಿ, ಉಚ್ಚಾಟಿತ ನಾಯಕ ರಿತಾಬ್ರತ ಬ್ಯಾನರ್ಜಿ ಅವರನ್ನು ಅಧಿಕೃತವಾಗಿ ವಿಧಾನಸಭೆಯ ಪ್ರತಿಪಕ್ಷ ನಾಯಕನನ್ನಾಗಿ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಈ ಮಹತ್ತರ ಬೆಳವಣಿಗೆ ನಡೆದಿದೆ.

ಸಿಎಂ ಸುವೇಂದು ಸಭೆಯಲ್ಲಿ ಟಿಎಂಸಿ ನಾಯಕರು: ಬದಲಾಗುತ್ತಿದೆಯೇ ಸಮೀಕರಣ?

ಕೋಲ್ಕತ್ತಾ ಮೇಯರ್ ಫಿರ್ಹಾದ್ ಹಕೀಮ್ ಅವರ ಈ ದಿಢೀರ್ ನಿರ್ಧಾರದ ಹಿಂದೆ ದೊಡ್ಡದೊಂದು ರಾಜಕೀಯ ರಹಸ್ಯ ಅಡಗಿದೆ. ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ನಬನ್ನ ರಾಜ್ಯ ಸಚಿವಾಲಯದಲ್ಲಿ ನಡೆದ ಆಡಳಿತಾತ್ಮಕ ಪರಾಮರ್ಶನಾ ಸಭೆಯಲ್ಲಿ ಫಿರ್ಹಾದ್ ಹಕೀಮ್ ಪಾಲ್ಗೊಂಡಿದ್ದರು. ಮಮತಾ ಬ್ಯಾನರ್ಜಿ ಅವರ ಕಟ್ಟಾ ಬೆಂಬಲಿಗ ಎಂದೇ ಗುರುತಿಸಿಕೊಂಡಿದ್ದ ಹಕೀಮ್, ಬಿಜೆಪಿ ಸರ್ಕಾರದ ಅಧಿಕೃತ ಸಭೆಯಲ್ಲಿ ಕಾಣಿಸಿಕೊಂಡಿರುವುದು ಟಿಎಂಸಿ ವಲಯದಲ್ಲಿ ಸಂಶಯದ ಬಿರುಗಾಳಿ ಎಬ್ಬಿಸಿತ್ತು.
ಫಿರ್ಹಾದ್ ಹಕೀಮ್ ಮಾತ್ರವಲ್ಲದೆ, ಟಿಎಂಸಿ ಶಾಸಕರಾದ ನಯನಾ ಬಂದೋಪಾಧ್ಯಾಯ, ಅಶೋಕ್ ದೇಬ್ ಮತ್ತು ಹಿರಿಯ ನಾಯಕ ಕುನಾಲ್ ಘೋಷ್ ಕೂಡ ಮುಖ್ಯಮಂತ್ರಿ ಸುವೇಂದು ಅವರ ಸಭೆಗೆ ಹಾಜರಾಗಿದ್ದರು. ಇತ್ತ ಮಮತಾ ಬ್ಯಾನರ್ಜಿ ಅವರು ಕೋಲ್ಕತ್ತಾದ ಕೇಂದ್ರ ಭಾಗದಲ್ಲಿ ನಡೆಸುತ್ತಿದ್ದ ಧರ್ನಾ ಸತ್ಯಾಗ್ರಹಕ್ಕೆ ಹಾಜರಾಗದ ಈ ನಾಯಕರು, ಸರ್ಕಾರದ ಸಭೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವುದು ಪಕ್ಷದೊಳಗಿನ ಭಿನ್ನಾಭಿಪ್ರಾಯ ಬೀದಿಗೆ ಬರುವಂತೆ ಮಾಡಿದೆ.

ಬಂಡಾಯ ಬಣದ ತೀವ್ರ ಜಿದ್ದಾಜಿದ್ದಿ

ಮತ್ತೊಂದೆಡೆ, ಉಚ್ಚಾಟಿತ ಶಾಸಕ ರಿತಾಬ್ರತ ಬ್ಯಾನರ್ಜಿ ಮತ್ತು ಸಂದೀಪನ್ ಸಹಾ ನೇತೃತ್ವದ 58 ಬಂಡಾಯ ಶಾಸಕರ ಗುಂಪು ಸ್ಪೀಕರ್ ರತೀಂದ್ರ ಬೋಸ್ ಅವರಿಗೆ ಪತ್ರ ನೀಡಿ ವಿಧಾನಸಭೆಯಲ್ಲಿ ತಮಗೇ ಅಧಿಕೃತ ಮಾನ್ಯತೆ ಬೇಕೆಂದು ಪಟ್ಟು ಹಿಡಿದಿದೆ. ಜಾವೇದ್ ಖಾನ್, ಸಂದೀಪನ್ ಸಹಾ ಮತ್ತು ಶಿಯುಲಿ ಸಹಾ ಅವರನ್ನು ಉಪನಾಯಕರನ್ನಾಗಿ ಹಾಗೂ ಅಖ್ರುಜ್ಜಮಾನ್ ಅವರನ್ನು ಚೀಫ್ ವಿಪ್ ಎಂದು ಬಂಡಾಯಗಾರರು ಘೋಷಿಸಿಕೊಂಡಿದ್ದಾರೆ. ವಿಶೇಷವೆಂದರೆ ಬಂಡಾಯ ಬಣದ ಪ್ರಮುಖ ನಾಯಕರೂ ಸಹ ಸಿಎಂ ಸುವೇಂದು ಅವರ ಆಡಳಿತಾತ್ಮಕ ಸಭೆಯಲ್ಲಿ ಭಾಗವಹಿಸಿದ್ದರು.
ಕೆಲ ದಿನಗಳ ಹಿಂದಷ್ಟೇ ಹಿರಿಯ ಟಿಎಂಸಿ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ಮತ್ತು ಆರು ಶಾಸಕರು ಕಲ್ಯಾಣಿಯಲ್ಲಿ ನಡೆದ ಸಿಎಂ ಸುವೇಂದು ಅವರ ಮತ್ತೊಂದು ಸಭೆಗೆ ಹಾಜರಾಗಿದ್ದರು. ಈ ಸರಣಿ ಬೆಳವಣಿಗೆಗಳು ತೃಣಮೂಲ ಕಾಂಗ್ರೆಸ್‌ನ ನಾಯಕರು ಸಾಮೂಹಿಕವಾಗಿ ಬಿಜೆಪಿಯತ್ತ ಮುಖ ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಟಿಎಂಸಿ ಭವಿಷ್ಯದ ಮೇಲೆ ತೂಗುಗತ್ತಿ

ಬಿಜೆಪಿ ನೇತೃತ್ವದ ನೂತನ ಸರ್ಕಾರವು ಈ ಸಭೆಗಳನ್ನು ಕೇವಲ ಆಡಳಿತಾತ್ಮಕ ಪ್ರಕ್ರಿಯೆ ಎಂದು ಕರೆದಿದ್ದರೂ, ಟಿಎಂಸಿ ನಾಯಕತ್ವದ ದೌರ್ಬಲ್ಯ ಇಲ್ಲಿ ಎದ್ದು ಕಾಣುತ್ತಿದೆ. ಪಕ್ಷದ ನಾಯಕ ಕುನಾಲ್ ಘೋಷ್ ಈ ಬಗ್ಗೆ ಪ್ರತಿಕ್ರಿಯಿಸಿ, ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಚುನಾವಣೆ ನಂತರದ ಹಿಂಸಾಚಾರ ನಡೆಯುತ್ತಿರುವಾಗ ಸರ್ಕಾರದ ಸಭೆಗಳಿಗೆ ಹೋಗಬೇಕೇ ಬೇಡವೇ ಎಂಬ ಗೊಂದಲ ನಮ್ಮಲ್ಲಿದೆ. ಆದರೆ ಆಡಳಿತಾತ್ಮಕ ಸಭೆಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸಲು ಸಾಧ್ಯವಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದರು.
ಒಟ್ಟಾರೆಯಾಗಿ, ಸಾಂಸ್ಥಿಕ ಸಮಿತಿಗಳನ್ನು ಮಮತಾ ರದ್ದುಗೊಳಿಸಿದ ಬೆನ್ನಲ್ಲೇ ಕೋಲ್ಕತ್ತಾ ಮೇಯರ್ ಫಿರ್ಹಾದ್ ಹಕೀಮ್ ಅವರ ರಾಜೀನಾಮೆ ನಡೆ, ತೃಣಮೂಲ ಕಾಂಗ್ರೆಸ್ ಪಕ್ಷದ ಅಸ್ತಿತ್ವಕ್ಕೆ ಎದುರಾಗಿರುವ ಅತಿ ದೊಡ್ಡ ಆಪತ್ತಾಗಿದೆ. ಮುಂಬರುವ ದಿನಗಳಲ್ಲಿ ಬಂಗಾಳದ ಪ್ರಮುಖ ವಿರೋಧ ಪಕ್ಷದ ಸ್ಥಾನ ಯಾರ ಪಾಲಾಗಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net