ಎಡಪ್ಪಾಡಿ ಪಳನಿಸ್ವಾಮಿಗೆ ಮತ್ತೆ ಶಾಕ್; ಪಕ್ಷಕ್ಕೆ ರಾಜೀನಾಮೆ ನೀಡಿ ಟಿವಿಕೆ ಸೇರಿದ ಮೂವರು ಎಐಎಡಿಎಂಕೆ ಶಾಸಕರು | AIADMK MLAs

ಮಾಜಿ ಸಿಎಂ ಎಡಪ್ಪಾಡಿ ಪಳನಿಸ್ವಾಮಿ
ಮಾಜಿ ಸಿಎಂ ಎಡಪ್ಪಾಡಿ ಪಳನಿಸ್ವಾಮಿ
Published on
ಚೆನ್ನೈ: ತಮಿಳುನಾಡು ಚುನಾವಣೆಯಲ್ಲಿ ಸೋಲಿನ ಬಳಿಕ ಇಬ್ಬಾಗದ ಹೊಸ್ತಿಲಿನಲ್ಲಿದ್ದ ಪ್ರಮುಖ ವಿರೋಧ ಪಕ್ಷ ಎಐಎಡಿಎಂಕೆ(AIADMK MLAs) ಮತ್ತು ಅದರ ಮುಖ್ಯಸ್ಥ ಎಡಪ್ಪಾಡಿ ಪಳನಿಸ್ವಾಮಿಗೆ ಮತ್ತೆ ಹಿನ್ನಡೆಯಾಗಿದ್ದು, ಇಂದು(ಮೇ 25) ಮೂವರು ಶಾಸಕರು ಪಕ್ಷಕ್ಕೆ ರಾಜೀನಾಮೆ ನೀಡಿ ಸಿಎಂ ವಿಜಯ್ ನೇತೃತ್ವದ ಟಿವಿಕೆ ಸೇರ್ಪಡೆಗೊಂಡಿದ್ದಾರೆ.
ಮಧುರಾಂತಕಂ ಕ್ಷೇತ್ರದ ಶಾಸಕರ ಮರಗತಮ್ ಕುಮಾರವೇಲ್, ಪೆರುಂಡುರೈ ಕ್ಷೇತ್ರದ ಜಯಕುಮಾರ್ ಹಾಗೂ ಧಾರಾಪುರಂನಿಂದ ಗೆದ್ದ ಸತ್ಯಭಾಮ ಅವರು ವಿಧಾನಸಭೆ ಸ್ಪೀಕರ್ ಜೆಸಿಡಿ ಪ್ರಭಾಕರ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದು, ಸ್ಪೀಕರ್ ಅವುಗಳನ್ನು ಅಂಗೀಕರಿಸಿದ್ದಾರೆ ಎನ್ನಲಾಗಿದೆ.
ಪಕ್ಷದ ಹಿರಿಯ ನಾಯಕ ಸಿವಿ ಷಣ್ಮುಗಂ ನೇತೃತ್ವದ 25 ಎಐಎಡಿಎಂಕೆ ಶಾಸಕರು ವಿಜಯ್ ಅವರ ಟಿವಿಕೆ ಸರ್ಕಾರಕ್ಕೆ ಬೆಂಬಲ ನೀಡಿದ ಎರಡು ವಾರಗಳ ನಂತರ ಈ ಬೆಳವಣಿಗೆ ನಡೆದಿದೆ. ರಾಜೀನಾಮೆ ನೀಡಿದ ಮೂವರು ಶಾಸಕರು ಬಂಡಾಯ ಬಣದಲ್ಲಿದ್ದರು. ರಾಜೀನಾಮೆ ಸಲ್ಲಿಸಿದ ಕೂಡಲೇ ಶಾಸಕರು ಟಿವಿಕೆ ಸಚಿವ ಆಧವ್ ಅರ್ಜುನ ಅವರನ್ನು ಅವರ ಕೊಠಡಿಯಲ್ಲಿ ಭೇಟಿಯಾದರು.
ಮೇ 13ರಂದು ನಡೆದ ವಿಧಾನಸಭೆಯಲ್ಲಿನ ಬಹುಮತ ಪರೀಕ್ಷೆಯ ಸಮಯದಲ್ಲಿ ಪಕ್ಷದ ವಿಪ್ ಅನ್ನು ಧಿಕ್ಕರಿಸಿ ಟಿವಿಕೆ ಸರ್ಕಾರವನ್ನು ಬೆಂಬಲಿಸಿ ಮತ ಚಲಾಯಿಸಿದ 25 ಶಾಸಕರಲ್ಲಿ ಈ ಮೂವರು ಶಾಸಕರು ಸೇರಿದ್ದಾರೆ. ಏತನ್ಮಧ್ಯೆ ಷಣ್ಮುಗಂ-ವೇಲುಮಣಿ ಬಣದೊಂದಿಗೆ ಗುರುತಿಸಿಕೊಂಡಿದ್ದ ಐವರು ಶಾಸಕರು ಮರಳಿ ಈಪಿಎಸ್ ಬಣಕ್ಕೆ ಮರಳಿದ್ದಾರೆ.
ಮೂವರು ಶಾಸಕರ ರಾಜೀನಾಮೆ ಮತ್ತು ಐದು ಶಾಸಕರು ಈಪಿಎಸ್​ ಬಣಕ್ಕೆ ಮರಳುವುದರೊಂದಿಗೆ ಬಂಡಾಯ ಬಣದ ಬಲವು ಈಗ 25 ರಿಂದ 17 ಕ್ಕೆ ಇಳಿದಿದೆ. ಇನ್ನೂ ಶುಕ್ರವಾರ ಮಾತನಾಡಿದ್ದ ಎಸ್​ಪಿ ವೇಲುಮಣಿ, ಪಕ್ಷವನ್ನು ವಿಭಜಿಸುವ ಯಾವುದೇ ಉದ್ದೇಶ ನಮಗಿಲ್ಲ. ಎಡಪ್ಪಾಡಿ ಪಳನಿಸ್ವಾಮಿಯೇ ನಮ್ಮ ನಾಯಕರು. ಹೊಸದಾಗಿ ರಚನೆಯಾದ ಸರ್ಕಾರದಲ್ಲಿ ಯಾವುದೇ ಸಚಿವ ಸ್ಥಾನ ಕೇಳಿಲ್ಲ ಎಂದು ಹೇಳಿದ್ದರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net