ಅಖಿಲೇಶ್​ಗೆ ಮತ್ತೊಂದು ಶಾಕ್: ಮುಖ್ಯ ಸಚೇತಕ ಸ್ಥಾನಕ್ಕೆ ಕಮಲ್ ಅಖ್ತರ್ ರಾಜೀನಾಮೆ; ಎಸ್​ಪಿ ಪಕ್ಷದಲ್ಲಿನ ಬಿರುಕು ಬಹಿರಂಗ! Kamal Akhtar

ಅಖಿಲೇಶ್​ಗೆ ಮತ್ತೊಂದು ಶಾಕ್: ಮುಖ್ಯ ಸಚೇತಕ ಸ್ಥಾನಕ್ಕೆ ಕಮಲ್ ಅಖ್ತರ್ ರಾಜೀನಾಮೆ; ಎಸ್​ಪಿ ಪಕ್ಷದಲ್ಲಿನ ಬಿರುಕು ಬಹಿರಂಗ!
ಅಖಿಲೇಶ್​ಗೆ ಮತ್ತೊಂದು ಶಾಕ್: ಮುಖ್ಯ ಸಚೇತಕ ಸ್ಥಾನಕ್ಕೆ ಕಮಲ್ ಅಖ್ತರ್ ರಾಜೀನಾಮೆ; ಎಸ್​ಪಿ ಪಕ್ಷದಲ್ಲಿನ ಬಿರುಕು ಬಹಿರಂಗ!
Published on
ಲಕ್ನೋ: ಉತ್ತರ ಪ್ರದೇಶದ ರಾಜಕಾರಣದಲ್ಲಿ ಮತ್ತೊಂದು ಮಹತ್ವದ ರಾಜಕೀಯ ಬೆಳವಣಿಗೆಯಾಗಿದ್ದು, ಸಮಾಜವಾದಿ ಪಕ್ಷದ (SP) ಹಿರಿಯ ಶಾಸಕ ಕಮಲ್ ಅಖ್ತರ್(Kamal Akhtar) ಅವರು ಉತ್ತರ ಪ್ರದೇಶ ವಿಧಾನಸಭೆಯ ಪಕ್ಷದ ಮುಖ್ಯ ಸಚೇತಕ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಈ ಬೆಳವಣಿಗೆಯಿಂದಾಗಿ ಎಸ್‌ಪಿ ಶಾಸಕಾಂಗ ಪಕ್ಷದ ನಾಯಕತ್ವದಲ್ಲಿ ಮತ್ತೊಮ್ಮೆ ಬದಲಾವಣೆ ಪರ್ವ ಆರಂಭವಾದಂತಾಗಿದೆ.
ಮೊರಾದಾಬಾದ್ ಜಿಲ್ಲೆಯ ಕಾಂತ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಕಮಲ್ ಅಖ್ತರ್, ಸಮಾಜವಾದಿ ಪಕ್ಷದ ಸಂಸದರಾದ ರುಚಿ ವೀರಾ ಅವರೊಂದಿಗೆ ಉಂಟಾದ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ. ಇತ್ತೀಚೆಗಷ್ಟೇ ಇವರಿಬ್ಬರ ನಡುವಿನ ಮನಸ್ತಾಪವನ್ನು ಶಮನಗೊಳಿಸಲು ಪಕ್ಷದ ವರಿಷ್ಠರು ಲಕ್ನೋದಲ್ಲಿ ತುರ್ತು ಸಭೆಯೊಂದನ್ನು ಕರೆದಿದ್ದರು. ಆದರೆ, ಈ ಸಭೆಯ ಬೆನ್ನಲ್ಲೇ ಅಖ್ತರ್ ರಾಜೀನಾಮೆ ನೀಡಿರುವುದು ಪಕ್ಷದ ಆಂತರಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಅಖಿಲೇಶ್ ಯಾದವ್ ನಿರ್ಧಾರಕ್ಕೆ ಬದ್ಧ ಎಂದ ಅಖ್ತರ್

ರಾಜೀನಾಮೆ ಬೆನ್ನಲ್ಲೇ ಎಸ್‌ಪಿಗೆ ಬಿಗ್ ಶಾಕ್ ಎದುರಾಗಬಹುದು ಎಂಬ ವದಂತಿಗಳು ಹರಡಿದ್ದವು. ಆದರೆ ಇದಕ್ಕೆ ತೆರೆ ಎಳೆದಿರುವ ಕಮಲ್ ಅಖ್ತರ್, ತಾವು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಆದೇಶಕ್ಕೆ ಸದಾ ಬದ್ಧರಾಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅಖ್ತರ್, ನಾವು ಯಾವಾಗಲೂ ಗೌರವಾನ್ವಿತ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಅಖಿಲೇಶ್ ಯಾದವ್ ಅವರಿಂದ ಬರುವ ಆದೇಶಗಳನ್ನು ಶಿರಸಾವಹಿಸಿ ಪಾಲಿಸಿದ್ದೇವೆ. ಭವಿಷ್ಯದಲ್ಲೂ ಅವರು ನೀಡುವ ಯಾವುದೇ ಜವಾಬ್ದಾರಿ ಅಥವಾ ಆದೇಶಗಳನ್ನು ನಾನು ಸದಾ ಪಾಲಿಸುತ್ತೇನೆ ಎಂದು ಬರೆಯುವ ಮೂಲಕ ಪಕ್ಷ ನಿಷ್ಠೆಯನ್ನು ಪ್ರಕಟಿಸಿದ್ದಾರೆ.

ಹಳೇ ನೆನಪು ತಂದ ರಾಜೀನಾಮೆ: ಎಸ್‌ಪಿಗೆ ಆತಂಕ!

ಕಮಲ್ ಅಖ್ತರ್ ಅವರಿಗಿಂತ ಮುಂಚೆ ಎಸ್‌ಪಿ ಶಾಸಕಾಂಗ ಪಕ್ಷದ ಮುಖ್ಯ ಸಚೇತಕರಾಗಿದ್ದವರು ಮನೋಜ್ ಪಾಂಡೆ. ಅವರು ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷದ ವಿರುದ್ಧವೇ ಅಡ್ಡ ಮತದಾನ ಮಾಡಿ ಭಿನ್ನಮತ ಎದ್ದಿದ್ದರು. ಆ ನಂತರ ಸಮಾಜವಾದಿ ಪಕ್ಷವನ್ನು ತೊರೆದು ಬಿಜೆಪಿ ಸೇರಿದ್ದರು. ಸದ್ಯ ಮನೋಜ್ ಪಾಂಡೆ ಉತ್ತರ ಪ್ರದೇಶದ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಮಲ್ ಅಖ್ತರ್ ಅವರ ರಾಜೀನಾಮೆಯೂ ಸಮಾಜವಾದಿ ಪಕ್ಷದಲ್ಲಿ ಮತ್ತೊಂದು ಬಿಕ್ಕಟ್ಟು ಸೃಷ್ಟಿಸುತ್ತದೆಯೇ ಎಂಬ ಆತಂಕ ಮೂಡಿಸಿದೆ.

ಯಾರು ಈ ಕಮಲ್ ಅಖ್ತರ್?

ಕಮಲ್ ಅಖ್ತರ್ ಉತ್ತರ ಪ್ರದೇಶ ರಾಜಕಾರಣದಲ್ಲಿ ಮತ್ತು ಸಮಾಜವಾದಿ ಪಕ್ಷದಲ್ಲಿ ಸುದೀರ್ಘ ಇತಿಹಾಸ ಹೊಂದಿರುವ ಹಿರಿಯ ಹಾಗೂ ಪ್ರಭಾವಿ ನಾಯಕ. ದೆಹಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರ ಮತ್ತು ಕಾನೂನು ಪದವಿ ಪಡೆದಿರುವ ಇವರು, ವಿದ್ಯಾರ್ಥಿ ದೆಸೆಯಿಂದಲೇ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.
ರಾಜ್ಯಸಭಾ ಸದಸ್ಯತ್ವ: ಕಮಲ್ ಅಖ್ತರ್ ಅವರು 2004 ರಿಂದ 2010 ರವರೆಗೆ ಉತ್ತರ ಪ್ರದೇಶವನ್ನು ಪ್ರತಿನಿಧಿಸಿ ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಸಂಸತ್ತಿನಲ್ಲಿ ಹಲವು ಪ್ರಮುಖ ಚರ್ಚೆಗಳಲ್ಲಿ ಭಾಗವಹಿಸಿ ಗಮನ ಸೆಳೆದಿದ್ದರು.
ಕ್ಯಾಬಿನೆಟ್ ಸಚಿವ ಸ್ಥಾನ: 2012 ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಹಸನ್‌ಪುರ ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಅಖಿಲೇಶ್ ಯಾದವ್ ನೇತೃತ್ವದ ಸರ್ಕಾರದಲ್ಲಿ ಪಂಚಾಯತ್ ರಾಜ್ ಸಚಿವರಾಗಿ ಮತ್ತು ನಂತರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕ್ಯಾಬಿನೆಟ್ ಸಚಿವರಾಗಿ ಪ್ರಮುಖ ಜವಾಬ್ದಾರಿ ನಿಭಾಯಿಸಿದ್ದರು.
ಮರಳಿ ವಿಧಾನಸಭೆಗೆ: 2017 ರ ಚುನಾವಣೆಯಲ್ಲಿ ಇವರು ಪರಾಭವಗೊಂಡರಾದರೂ, ಧೃತಿಗೆಡದೆ ಸಂಘಟನೆ ನಡೆಸಿ 2022 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮೊರಾದಾಬಾದ್‌ನ ಕಾಂತ್ ಕ್ಷೇತ್ರದಿಂದ ಸ್ಪರ್ಧಿಸಿ ಭರ್ಜರಿ ಜಯ ಸಾಧಿಸುವ ಮೂಲಕ ಮತ್ತೆ ವಿಧಾನಸಭೆ ಪ್ರವೇಶಿಸಿದರು.
ಇವರ ಪತ್ನಿ ಹುಮೇರಾ ಅಖ್ತರ್ ಕೂಡ ರಾಜಕೀಯದಲ್ಲಿ ಸಕ್ರಿಯರಾಗಿದ್ದು, 16ನೇ ಲೋಕಸಭಾ ಚುನಾವಣೆಯಲ್ಲಿ ಅಮ್ರೋಹಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಆ ಚುನಾವಣೆಯಲ್ಲಿ ಬಿಜೆಪಿಯ ಕನ್ವರ್ ಸಿಂಗ್ ತನ್ವರ್ ವಿರುದ್ಧ ಸೋಲು ಕಂಡಿದ್ದರು.
ಉತ್ತರ ಪ್ರದೇಶದಲ್ಲಿ ಮುಂಬರುವ ದಿನಗಳಲ್ಲಿ ಹಲವು ರಾಜಕೀಯ ಸಮೀಕರಣಗಳು ಬದಲಾಗುವ ಮುನ್ಸೂಚನೆ ಸಿಗುತ್ತಿದ್ದು, ಕಮಲ್ ಅಖ್ತರ್ ಅವರ ಮುಂದಿನ ನಡೆ ಮತ್ತು ಸಮಾಜವಾದಿ ಪಕ್ಷದ ವರಿಷ್ಠರು ಇವರ ಅಸಮಾಧಾನವನ್ನು ಹೇಗೆ ತಣ್ಣಗಾಗಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net