ಆಂಧ್ರದಲ್ಲಿ ಮತ್ತೊಂದು ರಾಜಕೀಯ ಪಕ್ಷ ಉದಯ; ಮಾಜಿ ಸಿಎಂ ಜಗನ್ ಬೆಂಬಲಿಗ ವಿಜಯಸಾಯಿ ರೆಡ್ಡಿ ನೇತೃತ್ವದಲ್ಲಿ ಹೊಸ ಪಕ್ಷ ಸ್ಥಾಪನೆ | Andhra Pradesh

ಆಂಧ್ರಪ್ರದೇಶ ರಾಜಕೀಯದಲ್ಲಿ ಮತ್ತೊಂದು ಪ್ರಮುಖ ಬೆಳವಣಿಗೆ ನಡೆದಿದ್ದು, ಹಿಂದೆ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಬೆಂಬಲಿಗರಾಗಿದ್ದ ಮಾಜಿ ಸಂಸದ ವಿಜಯಸಾಯಿ ರೆಡ್ಡಿ, ಇಂದು(ನ. 11) ಹೊಸ ಪಕ್ಷ ಸ್ಥಾಪನೆ ಮಾಡಿದ್ದು, ಅದರ ಹೆಸರು, ನೀತಿಯನ್ನು ಘೋಷಣೆ ಮಾಡಿದ್ದಾರೆ.
ಆಂಧ್ರದಲ್ಲಿ ಮತ್ತೊಂದು ರಾಜಕೀಯ ಪಕ್ಷ ಉದಯ; ಮಾಜಿ ಸಿಎಂ ಜಗನ್ ಬೆಂಬಲಿಗ ವಿಜಯಸಾಯಿ ರೆಡ್ಡಿ ನೇತೃತ್ವದಲ್ಲಿ ಹೊಸ ಪಕ್ಷ ಸ್ಥಾಪನೆ | Andhra Pradesh
Published on: 

ಅಮರಾವತಿ: ಆಂಧ್ರಪ್ರದೇಶ ರಾಜಕೀಯದಲ್ಲಿ ಮತ್ತೊಂದು ಪ್ರಮುಖ ಬೆಳವಣಿಗೆ ನಡೆದಿದ್ದು, ಹಿಂದೆ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಬೆಂಬಲಿಗರಾಗಿದ್ದ ಮಾಜಿ ಸಂಸದ ವಿಜಯಸಾಯಿ ರೆಡ್ಡಿ, ಇಂದು(ನ. 11) ಹೊಸ ಪಕ್ಷ ಸ್ಥಾಪನೆ ಮಾಡಿದ್ದು, ಅದರ ಹೆಸರು, ನೀತಿಯನ್ನು ಘೋಷಣೆ ಮಾಡಿದ್ದಾರೆ.

ವಿಜಯವಾಡದ ಎನ್ ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು, ತಮ್ಮ ಹೊಸ ಪಕ್ಷದ ಹೆಸರನ್ನು 'ಪರಿವರ್ತನಾ ರಾಜನೀತಿ ಪಕ್ಷ' (ಪಿಆರ್‌ಪಿ) ಎಂದು ಘೋಷಿಸಿದ್ದಾರೆ. 'ದೇಶಕ್ಕಾಗಿ.. ಧರ್ಮಕ್ಕಾಗಿ' ಎಂಬ ಟ್ಯಾಗ್‌ಲೈನ್ ನೀಡಿದ್ದು, ಕೇಸರಿ ಮತ್ತು ಬಿಳಿ ಬಣ್ಣಗಳೊಂದಿಗೆ ಮಧ್ಯದಲ್ಲಿ ಧರ್ಮ ಚಕ್ರ ಚಿಹ್ನೆಯೊಂದಿಗೆ ವಿನ್ಯಾಸಗೊಳಿಸಲಾದ ಪಕ್ಷದ ಧ್ವಜವನ್ನು ಅನಾವರಣಗೊಳಿಸಿದ್ದಾರೆ.

ಬಳಿಕ ಮಾತನಾಡಿರುವ ವಿಜಯಸಾಯಿ ರೆಡ್ಡಿ, ವಿಜಯವಾಡದ ದುರ್ಗಮ್ಮ ದೇವಿಯನ್ನು ಸಾಕ್ಷಿಯಾಗಿಟ್ಟುಕೊಂಡು, ಹೊಸ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸುತ್ತಿರುವುದಾಗಿ ಹೇಳಿದ್ದಾರೆ. ಆಂಧ್ರ ಪ್ರದೇಶದ ಭವಿಷ್ಯವು ಯಾವುದೇ ಒಬ್ಬ ನಾಯಕನ ಕೈಯಲ್ಲಿಲ್ಲ. ಬದಲಾವಣೆ ಜನರಿಂದ ಮಾತ್ರ ಸಾಧ್ಯ. ಒಳ್ಳೆಯದನ್ನು ಮಾಡುವವರನ್ನು ಮೆಚ್ಚಬೇಕು. ತಪ್ಪು ಮಾಡುವವರನ್ನು ಪುರಾವೆಗಳೊಂದಿಗೆ ಪ್ರಶ್ನಿಸಬೇಕು. ಪ್ರಶ್ನಿಸುವುದು ಜನರ ಹಕ್ಕು ಎಂದಿದ್ದಾರೆ.

ಇದೇ ವೇಳೆ ವೈಎಸ್ಆರ್ಸಿಪಿ ಮುಖ್ಯಸ್ಥ ವೈಎಸ್ ಜಗನ್ ಮೋಹನ್ ರೆಡ್ಡಿ ಅವರಿಗೆ ಒಂದು ಪ್ರಮುಖ ಸಲಹೆಯನ್ನು ನೀಡಿರುವ ಅವರು, ಕಳೆದ ಚುನಾವಣೆಯಲ್ಲಿ ಜಗನ್ 151 ಸ್ಥಾನಗಳಿಂದ 11 ಸ್ಥಾನಗಳಿಗೆ ಏಕೆ ಕುಸಿದರು ಎಂಬುದರ ಕುರಿತು ಯೋಚಿಸಬೇಕು ಎಂದು ಹೇಳಿದ್ದಾರೆ.

ಚಂದ್ರಬಾಬು ಮತ್ತು ಜಗನ್ ಮೋಹನ್ ರೆಡ್ಡಿ ಅವರಿಗೆ ನಾಯಕತ್ವದ ಗುಣಗಳ ಕೊರತೆ ಇದೆ. ಎರಡೂ ಕುಟುಂಬಗಳು ಆಂಧ್ರಪ್ರದೇಶ ರಾಜ್ಯವನ್ನು ಆಳಬೇಕೇ? ನಾನು ಮುಖ್ಯಮಂತ್ರಿಯಾಗಲು ಬಯಸುವುದಿಲ್ಲ. ಆನುವಂಶಿಕ ರಾಜಕೀಯಕ್ಕೆ ಕಡಿವಾಣ ಹಾಕುತ್ತಿದ್ದೇನೆ. 2029 ರಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದಿದ್ದಾರೆ.

ವೃತ್ತಿಯಲ್ಲಿ ಚಾರ್ಟೆಡ್​ ಅಕೌಂಟೆಂಟ್ ಆಗಿರುವ ವಿಜಯಸಾಯಿ ರೆಡ್ಡಿಯವರು ಕೆಲವು ದಶಕಗಳಿಂದ ವೈ.ಎಸ್​.ರಾಜಶೇಖರ್ ರೆಡ್ಡಿ ಕುಟುಂಬದ ಬೆಂಬಲಿಗರಾಗಿದ್ದರು. ಕುಟುಂಬದ ವ್ಯವಹಾರಗಳ ಲೆಕ್ಕಪತ್ರಗಳನ್ನು ನೋಡಿಕೊಳ್ಳುತ್ತಿದ್ದರು. ಬಳಿಕ ಜಗನ್ ಮೋಹನ್ ರೆಡ್ಡಿ ಕಾಂಗ್ರೆಸ್ ಬಿಟ್ಟು ವೈಎಸ್​ಆರ್​ಸಿಪಿ ಸ್ಥಾಪನೆ ಮಾಡಿದ ಬಳಿಕ ಪಕ್ಷದಲ್ಲಿ ಎರಡನೇ ಸ್ಥಾನದ ನಾಯಕರಾಗಿದ್ದರು. ರಾಜ್ಯಸಭಾ ಸದಸ್ಯರಾಗಿದ್ದರು, 2024ರಲ್ಲಿ ವೈಎಸ್​ಆರ್​​ಸಿಪಿ ಸೋತ ಬಳಿಕ ಪಕ್ಷದಿಂದ ಹೊರ ಬಂದಿದ್ದರು (ಏಜೆನ್ಸೀಸ್).